ರಾಜ್ಯ ರಾಜಕಾರಣದಲ್ಲಿ ಕಳೆದ ಎರಡು ಮೂರು ದಿನಗಳಿಂದ ನಡೆಯುತ್ತಿರುವ ಬಿರುಸಿನ ಬೆಳವಣಿಗೆಗಳಿಗೆ ಬಹುಶಃ ನಾಳೆಯ ಸಂಪುಟ ಸಭೆ ಮತ್ತು ಆ ಬಳಿಕದ ಸಂಸದರೊಂದಿಗಿನ ಮುಖ್ಯಮಂತ್ರಿಗಳ ಸಮಾಲೋಚನೆಯ ಬಳಿಕ ಒಂದು ಸ್ಪಷ್ಟತೆ ಸಿಗಬಹುದು. ಆದರೆ, ಸದ್ಯಕ್ಕೆ ಬಿಜೆಪಿ ರಾಜ್ಯ ನಾಯಕರ ಪಾಲಿಗೆ ಸ್ಪಷ್ಟತೆ ಸಿಗದೇ, ದಿನದಿಂದ ದಿನಕ್ಕೆ ಗೋಜಲಾಗುತ್ತಲೇ ಸಾಗಿರುವ ವಿದ್ಯಮಾನವೆಂದರೆ; ರಮೇಶ್ ಜಾರಕಿ ಹೊಳಿ ಎಂಬ ಬೆಳಗಾವಿಯ ‘ಸಕ್ಕರೆ ಸಾಹುಕಾರ’ನ ರಾಜಕೀಯ ಪ್ರಭಾವ!
ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ಸಚಿವ ಸಂಪುಟದ ವಿಷಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಆ ಕುರಿತ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಯತ್ನಗಳಿಗೆ ಪಕ್ಷದ ಹೈಕಮಾಂಡಿನಿಂದ ಪದೇಪದೇ ತಣ್ಣೀರೆರಚುತ್ತಿರುವುದು ಬಿಜೆಪಿ ವಲಯವಷ್ಟೇ ಅಲ್ಲ; ಒಟ್ಟಾರೆ ರಾಜಕೀಯ ವಲಯದಲ್ಲಿ ಕೂಡ ಬಿಜೆಪಿಯ ರಾಜ್ಯ ಮತ್ತು ಕೇಂದ್ರ ನಾಯಕರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆ ಹುಟ್ಟುಹಾಕಿದೆ. ಪಕ್ಷದ ದೆಹಲಿಯ ವರಿಷ್ಠರು ಯಡಿಯೂರಪ್ಪ ಅವರ ಸರಣಿ ದೆಹಲಿ ಭೇಟಿಗಳ ಹೊರತಾಗಿಯೂ ಸಂಪುಟದ ಕುರಿತ ಅವರ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಪ್ರತಿ ಬಾರಿಯೂ ಮೂರ್ನಾಲ್ಕು ದಿನಗಳಲ್ಲಿ ಪಟ್ಟಿಗೆ ಅನುಮೋದನೆ ಸಿಗಲಿದೆ. ಹಸಿರು ನಿಶಾನೆ ದೊರೆಯಲಿದೆ ಎನ್ನುತ್ತಲೇ ತಿಂಗಳುಗಳು ಗತಿಸಿಹೋಗಿವೆ.
ಆ ಮೂಲಕ ಸಿಎಂ ಯಡಿಯೂರಪ್ಪ ವಿಷಯದಲ್ಲಿ ಬಿಜೆಪಿಯ ವರಿಷ್ಠರು ಹೆಚ್ಚು ಗಂಭೀರವಾಗಿಲ್ಲ; ಅವರನ್ನು ನಿರ್ಲಕ್ಷಿಸಲಾಗುತ್ತಿದೆ. ನಾಯಕತ್ವ ಬದಲಾವಣೆಗೆ ವರಿಷ್ಠರು ಯೋಚಿಸಿದ್ದಾರೆ ಎಂಬ ಚರ್ಚೆ, ವದಂತಿ ಮತ್ತು ಆತಂಕಕ್ಕೆ ಈ ಬೆಳವಣಿಗೆಗಳು ಕಾರಣವಾಗಿವೆ. ನಾಯಕತ್ವ ಬದಲಾವಣೆಯ ಬಿಸಿಬಿಸಿ ಚರ್ಚೆಗಳಿಗೆ ಇಂಬು ನೀಡಿದ್ದೇ ದೆಹಲಿಯ ಬೆಳವಣಿಗೆಗಳು. ಜೊತೆಗೆ ಹೈಕಮಾಂಡ್ ತನ್ನ ಆ ಬಗೆಯ ಉದಾಸೀನ ಧೋರಣೆಯ ಮೂಲಕ ಪಕ್ಷದ ಕೆಲವು ರಾಜ್ಯ ನಾಯಕರಿಗೂ ಯಡಿಯೂರಪ್ಪ ವಿರೋಧಿ ಚಟುವಟಿಕೆಗಳಿಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿದೆ. ಅಂತಹ ವರಸೆಗಳೇ ಇಂದು ಯಡಿಯೂರಪ್ಪ ಬಣ ಮತ್ತು ಅವರ ವಿರೋಧಿ ಬಣಗಳೆಂಬ ಎರಡು ಪ್ರತ್ಯೇಕ ಬಣಗಳ ಸೃಷ್ಟಿಗೆ ಮತ್ತು ಸಂಪುಟ ಕುರಿತ ಬಿರುಸಿನ ಬೆಳವಣಿಗೆಗಳಿಗೆ ಕಾರಣ ಎಂದೂ ಹೇಳಲಾಗುತ್ತಿದೆ.
ಆದರೆ, ಈ ಎಲ್ಲಾ ಚರ್ಚೆಗಳ ನಡುವೆ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರ ಬಣದಲ್ಲಿ ಆತಂಕ ಹುಟ್ಟಿಸಿರುವ ಮತ್ತೊಂದು ಬೆಳವಣಿಗೆ, ರಮೇಶ್ ಜಾರಕಿಹೊಳಿಯವರೊಂದಿಗೆ ಪಕ್ಷದ ದೆಹಲಿ ವರಿಷ್ಠರು ಸಾಧಿಸಿರುವ ಸಂಪರ್ಕ.
ಇತ್ತೀಚೆಗೆ ಸಿಎಂ ಯಡಿಯೂರಪ್ಪ ಅವರು ಸಂಪುಟ ಪುನರ್ ರಚನೆಯ ಬೇಡಿಕೆಯೊಂದಿಗೆ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಮಾತುಕತೆ ನಡೆಸುವ ಮುಂಚೆಯೇ ದೆಹಲಿಗೆ ಭೇಟಿ ನೀಡಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದ ಬೆಳಗಾವಿಯ ಪ್ರಭಾವಿ ರಾಜಕಾರಣಿ ರಮೇಶ್ ಜಾರಕಿಹೊಳಿ, ಸಂಪುಟಕ್ಕೆ ಯಾರೆಲ್ಲಾ ಸೇರ್ಪಡೆಯಾಗಬೇಕು? ಯಾರನ್ನೆಲ್ಲಾ ಕೈಬಿಡಬೇಕು ಎಂಬ ಬಗ್ಗೆ ತಮ್ಮದೇ ಪಟ್ಟಿ ಕೊಟ್ಟಿದ್ದರು ಎನ್ನಲಾಗಿದೆ. ಆ ಭೇಟಿಗೆ ಮುಂಚೆ ಎರಡು ಮೂರು ಬಾರಿ ಬಿಜೆಪಿಯ ಸಚಿವಾಕಾಂಕ್ಷಿ ಶಾಸಕರ ಸಭೆಯನ್ನೂ ನಡೆಸಿದ್ದರು.
ಅಲ್ಲದೆ, ಇದೀಗ ಕಳೆದ ಒಂದು ವಾರದಲ್ಲಿ ಎರಡು ಬಾರಿ ಶಾಸಕರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿರುವ ಜಾರಕಿಹೊಳಿ, ಮತ್ತೆ ದೆಹಲಿಗೆ ಭೇಟಿ ನೀಡಿದ್ದು, ಸಂಪುಟಕ್ಕೆ ಸಿ ಪಿ ಯೋಗೀಶ್ವರ್ ತೆಗೆದುಕೊಳ್ಳುವ ಕುರಿತು ವರಿಷ್ಠರಿಗೆ ಮನವಿ ಮಾಡುವೆ ಎಂದಿದ್ದಾರೆ. ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಮತ್ತು ಕೋವಿಡ್ ನಿರ್ವಹಣೆಯ ವಿಷಯದಲ್ಲಿ ಮುಖ್ಯಮಂತ್ರಿಗಳೊಂದಿಗೆ ಅಸಮಾಧಾನ ಹೊಂದಿರುವ ಸಚಿವ ಶ್ರೀರಾಮುಲು, ಆಪರೇಷನ್ ಕಮಲದ ಮೂಲಕ ಹಿಂದಿನ ಕಾಂಗ್ರೆಸ್- ಜೆಡಿಎಸ್ ಸರ್ಕಾರವನ್ನು ಬೀಳಿಸಿ ಆ ಶಾಸಕರನ್ನು ಹೈಜಾಕ್ ಮಾಡಿ ಯಡಿಯೂರಪ್ಪ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಒಬ್ಬರಾಗಿದ್ದರೂ ಶಾಸಕರಲ್ಲ ಎಂಬ ಕಾರಣಕ್ಕೆ ಸಂಪುಟ ಸೇರುವ ಅವಕಾಶವಂಚಿತರಾಗಿರುವ ಸಿ ಪಿ ಯೋಗೀಶ್ವರ್, ಸಂಪುಟದಿಂದ ಕೈಬಿಡಬಹುದು ಎಂಬ ಆತಂಕದಲ್ಲಿರುವ ಶಶಿಕಲಾ ಜೊಲ್ಲೆ ಮತ್ತಿತರರು ಜಾರಕಿಹೊಳಿ ‘ಸಾಹುಕಾರರ’ ಬಳಿ ತಮ್ಮ ಅಹವಾಲು ತೋಡಿಕೊಂಡಿದ್ದಾರೆ. ಆ ಅಹವಾಲುಗಳೊಂದಿಗೆ ತಮಗೆ ಉಪಮುಖ್ಯಮಂತ್ರಿ ಸ್ಥಾನದಂತಹ ಮಾತುಕೊಟ್ಟು ಮರೆಯಲಾಗಿದೆ ಎಂಬ ವೈಯಕ್ತಿಕ ಬೇಡಿಕೆಯನ್ನೂ ಇಟ್ಟುಕೊಂಡು ಅವರು ದೆಹಲಿಗೆ ಹೋಗಿದ್ದಾರೆ. ವಾಸ್ತವವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರೇ ಜಾರಕಿಹೊಳಿ ಅವರನ್ನು ಮಾತುಕತೆಗೆ ಕರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಸ್ವತಃ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿಬೆಳೆಸಿದ ಸಿಎಂ ಯಡಿಯೂರಪ್ಪ ಸ್ವತಃ ತಮ್ಮ ಭೇಟಿಗೆ ಅವಕಾಶ ಕೋರಿ ದಿನಗಟ್ಟಲೆ ಕಾಯಬೇಕಾದ, ಭೇಟಿಯಾದರೂ ಅವರ ಬೇಡಿಕೆಗೆ ಸೊಪ್ಪು ಹಾಕದ ಪರಿಸ್ಥಿತಿ ಇದೆ. ಆ ಮೂಲಕ ಯಡಿಯೂರಪ್ಪ ಅವರ ದಶಕಗಳ ರಾಜಕಾರಣದ ವರ್ಚಸ್ಸು ಜರಿದುಹೋಗುತ್ತಿದೆ. ಪಕ್ಷದ ಇತರೆ ನಾಯಕರು ಮತ್ತು ಕಾರ್ಯಕರ್ತರ ಮುಂದೆ ಮುಜುಗರ ಎದುರಿಸುವ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಕುದಿಯುತ್ತಿದ್ದಾರೆ. ಇಂತಹ ಹೊತ್ತಲ್ಲಿ ಮೊನ್ನೆ ಮೊನ್ನೆ ಆಪರೇಷನ್ ಕಮಲದ ಮೂಲಕ ಪಕ್ಷಕ್ಕೆ ಬಂದ ನಾಯಕರನ್ನು ದೆಹಲಿಗೆ ಕರೆಸಿಕೊಂಡು ವರಿಷ್ಠರು ಮಾತುಕತೆ ನಡೆಸುವ ಮಟ್ಟಿಗೆ ಪಕ್ಷದ ವಿದ್ಯಮಾನಗಳು ಬದಲಾಗಿರುವುದು ಯಡಿಯೂರಪ್ಪ ಬೆಂಬಲಿಗರು ಮಾತ್ರವಲ್ಲ, ಅವರ ವಿರೋಧಿ ಬಣದ ಬಿಜೆಪಿ ನಾಯಕರ ಹುಬ್ಬೇರಿಸಿವೆ.
ಈ ನಡುವೆ ಜಾರಕಿಹೊಳಿ ದೆಹಲಿ ಭೇಟಿ ಮತ್ತು ವರಿಷ್ಠರೊಂದಿಗೆ ಅವರು ಸಾಧಿಸಿರುವ ಆಪ್ತತೆಗೆ ಕರ್ನಾಟಕದ ರಾಜಕಾರಣಕ್ಕಿಂತ ಮಹಾರಾಷ್ಟ್ರ ರಾಜಕಾರಣದ ಹಿನ್ನೆಲೆ ಇದೆ. ಅಲ್ಲಿನ ಎನ್ ಸಿಪಿ-ಶಿವಸೇನಾ- ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉರುಳಿಸಲು ಕರ್ನಾಟಕ ಮಾದರಿಯಲ್ಲೇ ಆಪರೇಷನ್ ನಡೆಸಲು ಅನೈತಿಕ ರಾಜಕಾರಣದ ಆಪರೇಷನ್ ತಜ್ಞ ಜಾರಕಿಹೊಳಿಯವರನ್ನು ವರಿಷ್ಠರು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಅವರ ಮುಂಬೈ ಸಂಪರ್ಕಗಳನ್ನು ಬಳಸಿಕೊಂಡು ಅಲ್ಲಿನ ಸರ್ಕಾರ ಉರುಳಿಸುವ ಸ್ಕೆಚ್ ಸಿದ್ಧವಾಗುತ್ತಿದೆ ಎಂಬ ಮಾತುಗಳೂ ಇವೆ.
ಅದೇನೇ ಇರಲಿ; ಸದ್ಯಕ್ಕಂತೂ ಜಾರಕಿಹೊಳಿ ಮತ್ತು ಬಿಜೆಪಿ ವರಿಷ್ಠರ ನಡುವೆ ನೇರ ಸಂಪರ್ಕದ ಮಟ್ಟಿನ ಆಪ್ತತೆ ಕುದುರಿದೆ. ಇದು ಸಹಜವಾಗೇ ಸದ್ಯಕ್ಕೆ ಸಿಎಂ ಯಡಿಯೂರಪ್ಪ ಅವರ ಆತಂಕಕ್ಕೆ ಕಾರಣವಾಗಿದ್ದರೆ, ಭವಿಷ್ಯದಲ್ಲಿ ರಾಜ್ಯ ರಾಜಕಾರಣದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಆ ಪಕ್ಷದ ಇತರ ನಾಯಕರ ಚಿಂತೆಗೂ ಕಾರಣವಾಗಿದೆ.
ಆದರೆ, ಜಾರಕಿಹೊಳಿ ರಾಜಕೀಯ ಬೆಳವಣಿಗೆಯನ್ನು ಬಲ್ಲವರಿಗೆ ಮತ್ತು ಕಳೆದ ವರ್ಷ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಬೆಳಗಾವಿಯ ಸಕ್ಕರೆ ಲಾಬಿಯ ಪ್ರಭಾವ ಬಲ್ಲವರಿಗೆ ಇದು ಹೊಸ ವಿದ್ಯಮಾನವೇನಲ್ಲ. ಕಳೆದ ಒಂದು ದಶಕದ ಹಿಂದೆ ಬಳ್ಳಾರಿಯ ಗಣಿ ಲಾಬಿ ರಾಜ್ಯ ರಾಜಕಾರಣವನ್ನು ನಿಯಂತ್ರಿಸುತ್ತಿತ್ತು. ಆ ಲಾಬಿಯ ಫಲವಾಗಿಯೇ ದಶಕದ ಹಿಂದೆ ಯಡಿಯೂರಪ್ಪ ನೇತೃತ್ವದಲ್ಲಿ ಮೊಟ್ಟಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರದ ಕುರ್ಚಿ ಏರಿತ್ತು. ಬಳಿಕ ಅದೇ ಯಡಿಯೂರಪ್ಪ ಆಡಳಿತದಲ್ಲಿ ಆ ಲಾಬಿ ನಡೆಸಿದ ರಾಜ್ಯದ ನೈಸರ್ಗಿಕ ಸಂಪತ್ತಿನ ಲೂಟಿ ಮತ್ತು ಕುರ್ಚಿ ಉಳಿಸಿಕೊಳ್ಳಲು ಯಡಿಯೂರಪ್ಪ ಮಾಡಿಕೊಂಡ ರಾಜಿ, ಅಂತಿಮವಾಗಿ ಅವರನ್ನೂ ಮತ್ತು ಗಣಿ ಲಾಬಿಯನ್ನೂ ಕುಸಿದು ಬೀಳುವಂತೆ ಮಾಡಿದ್ದವು. ಆ ಬಳಿಕ ಶುರುವಾಗಿದ್ದು ಬೆಳಗಾವಿಯ ಸಕ್ಕರೆ ಲಾಬಿಯ ರಾಜಕೀಯ ಆಟಗಳು.
ಆ ಸಕ್ಕರೆ ಲಾಬಿಗೆ ಮೊದಲು ಬಲಿಯಾದದ್ದು ಈ ಹಿಂದಿನ ಸಮ್ಮಿಶ್ರ ಸರ್ಕಾರ. ಹಾಗೆ ನೋಡಿದರೆ, ಅದಕ್ಕೂ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಕೂಡ ಈ ಲಾಬಿ ಸಾಕಷ್ಟು ಆಟವಾಡಿತ್ತು. ಬೆಳಗಾವಿಯ ಪಿಎಲ್ ಡಿ ಬ್ಯಾಂಕ್ ಚುನಾವಣೆ ವಿಷಯದಲ್ಲಿ ಕಾಂಗ್ರೆಸ್ಸಿನ ಜಾರಕಿಹೊಳಿ ಬ್ರದರ್ಸ್ ಮತ್ತು ಡಿ ಕೆ ಶಿವಕುಮಾರ್ ಅವರ ಬೆಂಬಲಿಗರಾದ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಸಂಘರ್ಷ ಅಂತಿಮವಾಗಿ ಸಮ್ಮಿಶ್ರ ಸರ್ಕಾರವನ್ನೇ ಬಲಿತೆಗೆದುಕೊಂಡಿತ್ತು. ಆ ಮೂಲಕ ಸಕ್ಕರೆ ಲಾಬಿ ರಾಜ್ಯ ರಾಜಕಾರಣದಲ್ಲಿ ಹೊಂದಿರುವ ಪ್ರಭಾವ ಎಂತದ್ದು ಎಂಬುದು ಮೊಟ್ಟಮೊದಲ ಬಾರಿ ಜಗಜ್ಜಾಹೀರಾಗಿತ್ತು.
ಈಗಲೂ ನಡೆಯುತ್ತಿರುವುದು ಬಹುತೇಕ ಯಡಿಯೂರಪ್ಪ ಅವರ ಆಡಳಿತದ ಮೇಲೆ ಹಿಡಿತ ಸಾಧಿಸುವ ಬೆಳಗಾವಿ ಸಕ್ಕರೆ ಲಾಬಿ ಮತ್ತು ಅದಕ್ಕೆ ಅವಕಾಶ ನೀಡದ ಯಡಿಯೂರಪ್ಪ ಪಟ್ಟುಗಳ ನಡುವಿನ ಸಂಘರ್ಷವೇ. ಆ ಹಿನ್ನೆಲೆಯಲ್ಲಿಯೇ ಕಳೆದ ಕೆಲವು ತಿಂಗಳುಗಳಿಂದ ಶಾಸಕರ ನಿರಂತರ ಸಭೆಗಳು, ದೆಹಲಿ ಭೇಟಿ, ವರಿಷ್ಠರೊಂದಿಗೆ ಸಮಾಲೋಚನೆ ಮೂಲಕ ರಾಜ್ಯ ಬಿಜೆಪಿ ಮತ್ತು ಸರ್ಕಾರದಲ್ಲಿ ಸಿಎಂ ಯಡಿಯೂರಪ್ಪಗೆ ಪರ್ಯಾಯವಾಗಿ ಮತ್ತೊಂದು ಶಕ್ತಿಕೇಂದ್ರ ಸ್ಥಾಪನೆಯಾಗಿದೆ. ಆ ಪರ್ಯಾಯ ಶಕ್ತಿಕೇಂದ್ರದ ಸದ್ಯದ ನಾಯಕ ರಮೇಶ್ ಜಾರಕಿಹೊಳಿ! ಒಂದು ವೇಳೆ ಬರಲಿರುವ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಜಾರಕಿಹೊಳಿ ಆಪ್ತರೇ ಟಿಕೆಟ್ ಪಡೆದು ನಿಂತು ಗೆದ್ದುಬಿಟ್ಟರೆ, ರಾಜ್ಯ ಬಿಜೆಪಿಯ ಚಟುವಟಿಕೆಗಳ ಸಂಪೂರ್ಣ ಹಿಡಿತ ಸಕ್ಕರೆ ಲಾಬಿಯ ವಶವಾದರೂ ಅಚ್ಚರಿಯಿಲ್ಲ!
ಹಾಗಾಗಿ ಸದ್ಯಕ್ಕೆ ಸಿಎಂ ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಪಾಲಿಗೆ ‘ಸಕ್ಕರೆ’ಯೇ ಕಹಿಯಾಗುವ ಮತ್ತು ಆಪತ್ತು ತರುವ ಸಾಧ್ಯತೆ ಹೆಚ್ಚಿದೆ.