ಫೆಬ್ರುವರಿ ಒಂದನೇ ತಾರೀಕು ಮಂಡನೆಯಾಗಲಿರುವ ಕೇಂದ್ರ ಬಜೆಟ್ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತಾ ಇವೆ. ಕೈಗಾರಿಕೆ, ಕೃಷಿ, ತಂತ್ರಜ್ಞಾನ, ಶಿಕ್ಷಣ ಹಾಗೂ ಇತರ ಕ್ಷೇತ್ರಗಳಿಗೆ ಎಷ್ಟು ಅನುದಾನ ಸಿಗಲಿದೆ ಎಂಬುದರ ಕುರಿತು ಅರ್ಥಶಾಸ್ತ್ರಜ್ಞರು ತಮ್ಮ ವಿಚಾರಗಳನ್ನು ಮಂಡಿಸುತ್ತಾ ಇದ್ದಾರೆ. ಇವೆಲ್ಲದರ ನಡುವೆ, ದೇಶದ ಸೈನಿಕರ ಹೆಸರು ಹೇಳಿ ಚುನಾವಣಾ ಸಮಯದಲ್ಲಿ ಓಟು ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆಯನ್ನು ರೂಢಿಸಿಕೊಂಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ, ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ಸಮಯದಲ್ಲಿ ಸೇನೆಯ ನೆನಪು ಮಾತ್ರ ಆಗುವುದಿಲ್ಲ.
ಕಳೆದ ಬಾರಿಯ ಬಜೆಟ್‌ನಲ್ಲಿ ವಾಯುಪಡೆಗಾಗಿ ಮೀಸಲಿಟ್ಟ ಮೊತ್ತಕ್ಕೂ ಹಾಗೂ ವಾಯುಪಡೆಗೆ ಲಭಿಸಿದ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮೀಸಲಿಟ್ಟ ಅನುದಾನದ ಕೇವಲ ಶೇಕಡಾ 38ರಷ್ಟು ಅನುದಾನ ಮಾತ್ರ ಏರ್‌ಫೋರ್ಸ್‌ಗೆ ದೊರೆತಿದೆ. ಔಾಯುಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ 1.03 ಲಕ್ಷ ಕೋಟಿಯನ್ನು ಮೀಸಲಿಡಲಾಗಿತ್ತು. ಆದರೆ, ಏರ್‌ಫೋರ್ಸ್‌ಗೆ ಲಭಿಸಿದ್ದು ಕೇವಲ 39,303 ಕೋಟಿ ರೂ. 2002ರಲ್ಲಿ 42 ಯುದ್ದ ವಿಮಾನಗಳ ತಂಡವನ್ನು ಹೊಂದಿದ್ದ ವಾಯುಪಡೆ ಬಳಿ ಈಗ ಉಳಿದುಕೊಂಡದ್ದು ಕೇವಲ 28. ಇನ್ನು ಹೊಸದಾಗಿ ಯುದ್ದ ವಿಮಾನಗಳನ್ನು ಎಚ್‌ಎಎಲ್‌ನಿಂದ ಬಹು ಬೇಗನೇ ಪಡೆಯುವ ಕುರಿತು ನಿರಿಕ್ಷೆ ಇಲ್ಲ ಎಂದು ಪಡೆಯ ಮುಖ್ಯಸ್ಥರು ಹೇಳುತ್ತಾರೆ.
ಇನ್ನು ವಿವಾದಿತ ರಫೇಲ್ ಡೀಲ್ ಸಂಪೂರ್ಣವಾದ ಬಳಿಕ ಫ್ರಾನ್ಸ್ ದೇಶವು ಒಪ್ಪಂದದ ಪ್ರಕಾರ 32 ಯುದ್ದ ವಿಮಾನಗಳನ್ನು ಪೂರೈಸಲು 2022ರ ತನಕ ಕಾಯಬೇಕು. ಇಲ್ಲಿಯೂ ಅನುದಾನದ ಕೊರತೆ ಬಹುಮುಖ್ಯವಾಗಿ ಕಾಡುತ್ತಿದೆ.
ಭೂ ಸೇನೆಯ ವಿಚಾರಕ್ಕೆ ಬಂದರೆ, ಕಳೆದ ಬಾರಿಯ ಬಜೆಟ್‌ನಲ್ಲಿ ಭೂ ಸೇನೆಯು ಕೇಳಿದ ಅನುದಾನಕ್ಕಿಂತ ಬಹಳಷ್ಟು ಕಡಿಮೆ ಅನುದಾನವನ್ನು ಇಲಾಖೆಯು ನೀಡಿದ್ದು, ಪಡೆಯ ಖರ್ಚು ವೆಚ್ಚಗಳನ್ನೂ ಸರಿದೂಗಿಸಲು ಸಾಧ್ಯವಾಗಿಲ್ಲ ಎಂದು ಸೇನೆಯ ಹೆರಿಯ ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ. ಸೇನೆಯ ಅಗತ್ಯತೆ ಹಾಗೂ ರಕ್ಷಣಾ ಇಲಾಖೆಯ ನೀತಿಗಳೂ ಒಂದಕ್ಕೊಂದು ತಾಳೆಯಾಗದೇ ಇರುವ ಕಾರಣ, ಈ ರೀತಿಯ ಸಮಸ್ಯೆ ಎದುರಾಗಿದೆ ಎಂದು ಅವರ ಅಭಿಪ್ರಾಯ. ಕಳೆದ ಬಾರಿಯ ಬಜೆಟ್‌ನಲ್ಲಿ ಭೂ ಸೇನೆಯು ತನ್ನ ಅಗತ್ಯತೆಗಳಿಗಾಗಿ 1.98ಲಕ್ಷ ಕೋಟಿ ರೂ.ಗಳ ಬೇಡಿಕೆಯನ್ನು ಇಟ್ಟಿತ್ತು. ಇದಕ್ಕಾಗಿ ಕಾರಣಗಳನ್ನೂ ನೀಡಿತ್ತು. ಆದರೆ, ಕೇಂದ್ರ ರಕ್ಷಣಾ ಇಲಾಖೆ ಬಿಡುಗಡೆ ಮಾಡಿದ್ದು 1.68ಲಕ್ಷ ಕೋಟಿ ರೂಗಳನ್ನು ಮಾತ್ರ. ಸೈನಿಕರ ವೇತನವನ್ನು ನೀಡಿದರೆ, ಉಳೀದ ಯಾವುದೇ ರೀತಿಯ ಕೆಲಸಗಳಿಗೂ ಸಮಪರ್ಕವಾಗಿ ಅನುದಾನ ಲಭಿಸದೇ ಇರುವುದು ನಿಜಕ್ಕೂ ಆತಂಕದ ಸಂಗತಿ.
ಪ್ರತೀ ಬಾರಿಯ ಬಜೆಟ್‌ನಲ್ಲಿ ಅತೀ ಕಡಿಮೆ ಅನುದಾನ ಪಡೆಯುತ್ತಿರುವುದು ನೌಕಾಪಡೆ. ಕಳೆದ ಬಾರಿಯ ಬಜೆಟ್‌ನಲ್ಲಿ ನೌಕಾಪಡೆಗೆ 64,307ಕೋಟಿ ರೂ. ಗಳನ್ನು ಮೀಸಲಿಡಲಾಗಿತ್ತು. ಆದರೆ, ಅದರಲ್ಲಿ ನೌಕಾಪಡೆಗೆ ದಕ್ಕಿದ್ದು 41,259ಕೋಟಿ ರೂ. ಮಾತ್ರ. ಇದರಿಂದಾಗಿ ನೌಕಾಪಡೆಯು ತನ್ನ ಖರ್ಚಿನಲ್ಲಿ ಕತ್ತರಿಯನ್ನು ಹಾಕಬೇಕಾಯಿತೇ ಹೊರತು, ಕೇಂದ್ರ ಸರ್ಕಾರ ಮಾತ್ರ ಈ ಕುರಿತಾಗಿ ತಲೆಹಾಕಲಿಲ್ಲ. 12 ಯುದ್ದ ನೌಕೆಗಳನ್ನು ನೌಕಾಪಡೆಗೆ ಸೇರಿಸಿಕೊಂಡು ಪಸೆಯ ಬಲವನ್ನು ವೃದ್ದಿಸಿಕೊಳ್ಳುವ ಯೋಜನೆಯಲ್ಲಿದ್ದ ನೌಕಾಡೆಯು, ಕೇವಲ 8 ಯುದ್ದ ನೌಕೆಗಳಿಗೆ ಸಮಾಧಾನ ಪಡಬೇಕಾಯಿತು. ನೌಕಾಪಡೆ ಈವರೆಗೆ ಸಹಿ ಮಾಡಿರುವ ಸ್ವಾಧೀನ ಒಪ್ಪಂದಗಳಿಗೆ ಪಾವತಿ ಮಾಡಲು ಬೇಕಾಗಿರುವ ಹಣವನ್ನು ಕೂಡ ಕೇಂದ್ರ ಸರ್ಕಾರ ನೀಡುವಲ್ಲಿ ವಿಫಲವಾಯಿತು.
ಇನ್ನು 2027ರ ವೇಳೆಗೆ 200 ಯುದ್ದ ನೌಕೆಗಳನ್ನು ಸೇವೆಗೆ ಸೇರಿಸಬೇಕೆಂಬ ಗುರಿಯನ್ನು ಹೊಂದಿದ್ದ ನೌಕಾಪಡೆ ಈಗ ಆ ಗುರಿಯನ್ನು 175ಕ್ಕೆ ಇಳಿಸಿದೆ. ಈವರೆಗೆ ಲಭ್ಯವಿರುವ ಸವಲತ್ತುಗಳನ್ನೇ ನೆಚ್ಚಿಕೊಂಡು ನೌಕಾದಳವು ಕಾರ್ಯ ನಿರ್ವಹಿಸಬೇಕಾದ ಅಗತ್ಯತೆ ಎದುರಾಗಿದೆ. ನಿಗದಿ ಪಡಿಸಿದ ಅನುದಾನಕ್ಕಿಂತಲೂ ಕಡಿಮೆ ಅನುದಾನ ಸಿಗುತ್ತಿರುವುದರಿಂದ ನೌಕಾದಳದ ಆಧುನಿಕರಣಕ್ಕೆ ಹೊಡೆತ ಬೀಳುತ್ತಿದೆ ಎಂಬ ಗಂಭೀರವಾದ ವಿಚಾರವನ್ನು ನೌಕಾದಳದ ಮುಖ್ಯಸ್ಥರು ಪಾರ್ಲಿಮೆಂಟ್‌ನ ರಕ್ಷಣಾ ಸ್ಥಾಯಿ ಸಮಿತಿಯ ಗಮನಕ್ಕೂ ತಂದಿದ್ದಾರೆ.
ಇಷ್ಟೆಲ್ಲಾ ನೋಡಿದರೆ, ನಿಜಕ್ಕೂ ಕೇಂದ್ರ ಸರ್ಕಾರ ಚುನಾವಣಾ ವಿಚಾರದಲ್ಲಿ ಸೈನಿಕರ ಹೆಸರಿನಲ್ಲಿ ಮತಗಳನ್ನು ಗಿಟ್ಟಿಸಿಕೊಳ್ಳುವ ಬದಲು, ಸೇನೆಯ ಮೂರು ವಿಭಾಗಗಳಿಗೂಅಗತ್ಯವಿರುವ ಅನುದಾನ ನೀಡಿದ್ದಲ್ಲಿ ಆಧುನಿಕ ಶಸ್ತ್ರಾಸ್ತ್ರ ಹಾಗೂ ಯದ್ದೋಪಕರಣಗಳ ಖರೀದಿಗೆ ಅನುಕೂಲವಾಗಲಿದೆ. ಇಲ್ಲವಾದಲ್ಲಿ ದೇಶದ ಭದ್ರತೆಯ ವಿಚಾರದಲ್ಲಿ ಆತಂಕ ಮನೆಮಾಡುವ ಸಂಭವವಿದೆ. ಭಾರತೀಯ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರು ಹಲವು ಬಾರಿ ಸರ್ಕಾರದ ಎದುರು ಈ ವಿಷಯವನ್ನು ಪ್ರಸ್ತಾಪಿಸಿದ್ದರೂ, ಸೇನೆಗೆ ಹೆಚ್ಚಿನ ಅನುದಾನ ನೀಡುವ ಕುರಿತು ಈವರೆಗೆ ಯಾವುದೇ ಮಾತುಕತೆಗಳು ನಡೆದಿಲ್ಲ. ಆದರೂ, ಈ ಬಾರಿಯಾದರೂ ಬಜೆಟ್‌ನಲ್ಲಿ ಸೇನೆಗೆ ಹೆಚ್ಚಿನ ಅನುದಾನ ದೊರೆಯುತ್ತದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಚುನಾವಣಾ ಸಮಯ ಹತ್ತಿರ ಬರುತ್ತಿದ್ದಂತೆ ಅಥವಾ ಯಾವುದಾದರೂ ಹೊಸ ಯೋಜನೆ ಜಾರಿಗೊಳಿಸಿ ಅದು ಹಳ್ಳ ಹಿಡಿಯುತ್ತಿದ್ದಂತೆ ದೇಶದ ಸೈನಿಕ ಹೆಸರಿನಲ್ಲಿ ಜನರ ಗಮನ ಬೇರೆಡೆ ಸೆಳೆಯುವ ಬಿಜೆಪಿಗೆ , ಸೇನೆಯ ಕಷ್ಟಗಳು ಕಣ್ಣಿಗೆ ಕಾಣುತ್ತವೆಯೋ ಎಂದು ಕಾದು ನೋಡಬೇಕಾಗಿದೆ.