ಬಂಗಾಳಕೊಲ್ಲಿಯಲ್ಲಿ ಭಾರೀ ಚಂಡಮಾರುತವೊಂದು ಭಾರತ ಹಾಗೂ ಬಾಂಗ್ಲಾದೇಶದ ತೀರ ಪ್ರದೇಶಗಳಿಗೆ ಬುಧವಾರ ರಾತ್ರಿ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರಾವಳಿ ಪ್ರದೇಶದ 5 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿ 220 ರಿಂದ 230 ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ʼಅಂಫಾನ್ʼ ಚಂಡಮಾರುತವು, 1999 ರಲ್ಲಿ ಒಡಿಸ್ಸಾ ತೀರ ಪ್ರದೇಶದಲ್ಲಿ ಅಪ್ಪಳಿಸಿದ ಚಂಡಮಾರುತದ ನಂತರ ಬಂಗಾಳ ಕೊಲ್ಲಿಯಲ್ಲಿ ಕಂಡು ಬರುವ ಭೀಕರವಾದ ಚಂಡಮಾರುತವಾಗಿರಲಿದೆ ಎಂದು ಭಾರತ ಹವಾಮಾನ ಇಲಾಖೆಯ ಮಹಾ ನಿರ್ದೇಶಕ ಮೃತ್ಯುಂಜಯ ಮೊಹಪಾತ್ರ ಹೇಳಿದ್ದಾರೆ. 1999 ರ ಚಂಡಮಾರುತವು ಒಡಿಸ್ಸಾದಲ್ಲಿ 10 ಸಾವಿರ ಮಂದಿಯನ್ನು ಬಲಿ ಪಡೆದಿತ್ತು.
ಗಾಳಿಯು ಗಂಟೆಗೆ 265 ಕಿ.ಮೀ ತನಕ ವೇಗ ಹೆಚ್ಚಳವಾಗುವ ಸಾಧ್ಯತೆ ಇದೆ. ಗಾಳಿಯ ಈ ವೇಗವು ಬೆಳೆಗಳು, ತೋಟಗಳು, ಮರಗಳು, ಮಣ್ಣಿನ ಮನೆಗಳು ಮತ್ತು ಸಂವಹನ ಮತ್ತು ವಿದ್ಯುತ್ ಕಂಬಗಳಿಗೆ ಹಾನಿಯಾಗುವಷ್ಟು ತೀವ್ರವಾಗಿರುತ್ತದೆ, ಜೊತೆಗೆ ರಸ್ತೆ ಸಂಚಾರ ಮತ್ತು ಅಗತ್ಯ ವಸ್ತುಗಳ ಸಾಗಣೆಗೆ ಅಡ್ಡಿಯಾಗುತ್ತದೆ. ದೊಡ್ಡ ದೊಡ್ಡ ಬೋಟುಗಳು ಹಾಗೂ ಹಡಗುಗಳು ತಮ್ಮ ಲಂಗರು ಪ್ರದೇಶದಲ್ಲಿ ಹಾಳಾಗುವ ಸಾಧ್ಯತೆಯಿದೆಯೆಂದು ಭಾರತದ ಹವಾಮಾನ ಕಛೇರಿ ಹೇಳಿಕೆ ನೀಡಿದೆ.
ಭಾರತ ಕಳೆದ ನಾಲ್ಕು ದಶಕಗಳಲ್ಲಿಯೇ ಮೊದಲ ಬಾರಿಗೆ ಪೂರ್ಣ ವರ್ಷದ ಆರ್ಥಿಕ ಕುಗ್ಗುವಿಕೆಯ ಕಡೆಗೆ ಸಾಗುತ್ತಿದೆ. ಎಪ್ರಿಲ್ ನಿಂದ ಬಾಂಗ್ಲಾದ ಜಿಡಿಪಿಯೂ ಕುಸಿಯುತ್ತಿದೆ. ಕರೋನಾ ಸಾಂಕ್ರಾಮಿಕ ಹಾಗೂ ಆರ್ಥಿಕ ಕುಸಿತಗಳ ದೊಡ್ಡ ಹೊಡೆತ ಬಿದ್ದಿರುವ ಬಾಂಗ್ಲಾ ಹಾಗೂ ಭಾರತಕ್ಕೆ ಚಂಡಮಾರುತವು ಭಾರೀ ದೊಡ್ಡ ನಷ್ಟ ತರಬಲ್ಲದೆಂದು ಊಹಿಸಲಾಗಿದೆ.
ಬಾಂಗ್ಲಾದೇಶವು ತನ್ನ ಕರಾವಳಿ ಪ್ರದೇಶದ 50 ಲಕ್ಷ ಜನರನ್ನು ಸ್ಥಳಾಂತರಿಸಲು 12,078 ತಾತ್ಕಾಲಿಕ ಶೆಲ್ಟರ್ ಗಳನ್ನು ನಿರ್ಮಿಸಿದೆ ಎಂದು ವಿಪತ್ತು ನಿರ್ವಹಣೆ ಮತ್ತು ಪರಿಹಾರ ಸಚಿವ ಎನಾಮುರ್ ರಹಮಾನ್ ಢಾಕಾದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಭಾರತದಲ್ಲಿ NDRF ನ 25 ತಂಡಗಳು ಈಗಾಗಲೇ ಸ್ಥಳದಲ್ಲಿ ಸನ್ನದ್ಧವಾಗಿದ್ದು, ಇತರೆ 12 ತಂಡಗಳನ್ನು ಪ್ರತ್ಯೇಕವಾಗಿ ಮೀಸಲಿರಿಸಲಾಗಿದೆ.
ಒಡಿಸ್ಸಾ, ಸೋಮವಾರ ಸಂಜೆಯಿಂದ ತನ್ನ ಕರಾವಳಿ ಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲು ಶುರು ಮಾಡಿದೆ. ಒಡಿಸ್ಸಾದಲ್ಲಿ 560 ಶಾಶ್ವತ ಚಂಡಮಾರುತ ಆಶ್ರಯಗಳಿವೆ, ಅಲ್ಲದೆ 7 ಸಾವಿರಕ್ಕಿಂತಲೂ ಹೆಚ್ಚಿನ ಸಾರ್ವಜನಿಕ ಕಟ್ಟಡಗಳನ್ನು ಜನರಿಗೆ ತಾತ್ಕಾಲಿಕವಾಗಿ ತಂಗಲು ಗುರುತಿಸಲಾಗಿದೆ ಎಂದು ಒಡಿಸ್ಸಾದ ವಿಶೇಷ ಪರಿಹಾರ ಕಮಿಷನರ್ ಪ್ರದೀಪ್ ಕುಮಾರ್ ಜೇನಾ ಹೇಳಿದ್ದಾರೆ.
ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಮೀನುಗಾರಿಕೆ ಕಾರ್ಯಾಚರಣೆಯನ್ನು ಮೇ 20 ರವರೆಗೆ ಸ್ಥಗಿತಗೊಳಿಸಬೇಕು ಎಂದು ಭಾರತ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.