2002ರಲ್ಲಿ ನಡೆದ ಗೋದ್ರಾ ಹತ್ಯಾಕಾಂಡ ಕುರಿತಾದ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಗೋದ್ರಾ ಹತ್ಯಾಕಾಂಡದ ಸಮಯದಲ್ಲಿ ಸಾವನ್ನಪ್ಪಿದ್ದ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಅವರ ಅರ್ಜಿಯ ವಿಚಾರಣೆಯನ್ನು ಸುಪ್ರಿಂ ಕೋರ್ಟ್ ಏಪ್ರಿಲ್ 14ರಂದು ಕಾಯ್ದಿರಿಸಿದೆ.
ಗೋದ್ರಾ ಹತ್ಯಾಕಾಂಡ ಪ್ರಕರಣದಲ್ಲಿ ನರೇಂದ್ರ ಮೋದಿಯವರ ಕೈವಾಡ ಇಲ್ಲ ಹಾಗೂ ಅವರನ್ನು ದೋಷಿ ಎಂದು ನಿರೂಪಿಸಲು ಯಾವುದೇ ಆಧಾರಗಳಿಲ್ಲ ಎಂದು ಹತ್ಯಾಕಾಂಡ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ವಿಶೇಷ ತನಿಖಾ ದಳವು (ಎಸ್ಐಟಿ) 2012ರಲ್ಲಿ ಮೋದಿಯವರಿಗೆ ಕ್ಲೀನ್ ಚಿಟ್ ನೀಡಿತ್ತು.
ಒಂದು ವಿಷಯವನ್ನು ಪ್ರತೀ ಬಾರಿಯೂ ಮುಂದೂಡಲಾಗುವುದಿಲ್ಲ. ಒಂದಲ್ಲ ಒಂದು ದಿನ ಅದು ಚರ್ಚೆಗೆ ಬರಲೇ ಬೇಕು. ಒಂದು ದಿನಾಂಕವನ್ನು ನಿಗದಿ ಪಡಿಸಿ ಆ ದಿನ ಎಲ್ಲರೂ ಹಾಜರಿರುವಂತೆ ನೋಡಿಕೊಳ್ಳಿ, ಎಂದು ವಿಚಾರಣೆ ಕೈಗೆತ್ತಿಕೊಂಡ ಎ ಎಮ್ ಖಾನ್ವಿಲ್ಕರ್ ಹಾಗೂ ದಿನೇಶ್ ಮಹೇಶ್ವರಿ ಅವರನ್ನು ಒಳಗೊಂಡ ನ್ಯಾಯಪೀಠವು ಹೇಳಿದೆ. ಹೀಗಾಗಿ, ಏಪ್ರಿಲ್ 14ರಂದು ಈ ಕುರಿತಾದ ವಿಚಾರಣೆ ನಡೆಯಲಿದ್ದು, ನರೇಂದ್ರ ಮೋದಿಯವರ ಕುತ್ತಿಗೆಗೆ ಮತ್ತೊಮ್ಮೆ ಗೋದ್ರಾ ಕುಣಿಕೆ ಸುತ್ತಿಕೊಳ್ಳಲಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.
ವಿಶೇಷ ತನಿಖಾ ದಳವು ಮೋದಿಯವರಿಗೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಝಾಕಿಯಾ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಗುಜರಾತ್ ಹೈಕೋರ್ಟ್ ಅವರ ಅರ್ಜಿಯನ್ನು ಪುರಸ್ಕರಿಸದೇ, ಎಸ್ಐಟಿಯ ವರದಿಯನ್ನು ಪುನರ್ ಪರಿಶೀಲಿಸಲು ನಿರಾಕರಿಸಿತು. ಸುಪ್ರಿಂ ಕೋರ್ಟ್ ಮೆಟ್ಟಿಲೇರಿರುವ ಝಾಕಿಯಾ ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ. ಇವರ ವಾದದ ಪ್ರಕಾರ ಗೋದ್ರಾ ಹತ್ಯಾಕಾಂಡ ನಡೆದ ಹಿಂದೆ ದೊಡ್ಡ ಪಿತೂರಿಯಿದೆ. ಈ ಪಿತೂರಿಯನ್ನು ಬಯಲಿಗೆಳೆಯಲು ಹೆಚ್ಚಿನ ವಿಚಾರಣೆ ನಡೆಸಬೇಕು. ಇದಕ್ಕಾಗಿ ಸಂಬಂದಪಟ್ಟ ಎಲ್ಲರಿಗೂ ನೋಟಿಸ್ ಜಾರಿ ಮಾಡಬೇಕೆಂದು ಹೇಳಿದ್ದರು.
ವಿಶೇಷ ತನಿಖಾ ದಳವು 2012ರಲ್ಲಿ ನರೇಂದ್ರ ಮೋದಿ ಸೇರಿದಂತೆ ಒಟ್ಟು 63 ಜನರಿಗೆ ಕ್ಲೀನ್ ಚಿಟ್ ನೀಡಿತ್ತು. ಗುಜರಾತ್ನ ಗುಲ್ಬರ್ಬ್ ಸೊಸೈಟಿಯಲ್ಲಿ ಫೆಬ್ರುವರಿ 28ರಂದು ನಡೆದ ಈ ಗಲಭೆಯಲ್ಲಿ 68 ಜನರು ಮೃತಪಟ್ಟಿದ್ದರು. ಅಂದು ಎಹ್ಸಾನ್ ಜಾಫ್ರಿಯವರ ಹತ್ಯೆಯೂ ನಡೆದಿತ್ತು. ಈ ಕುರಿತಾಗಿ ಅವರ ಪತ್ನಿ ದಾಖಲಿಸಿದ್ದ ಪ್ರಕರಣದ ವಿಚಾರಣೆ ಬರೋಬ್ಬರಿ ಹತ್ತು ವರ್ಷಗಳ ಕಾಲ ನಡೆಯಿತು. ತಮ್ಮ ದೂರಿನಲ್ಲಿ ನರೇಂದ್ರ ಮೋದಿ ಸೇರಿದಂತೆ ಇತರೆ 58 ವ್ಯಕ್ತಿಗಳು ತಮ್ಮ ಪತಿಯ ಕೊಲೆಗೆ ಕಾರಣ ಎಂದು ಝಾಕಿಯಾ ದೋಷಾರೋಪಣೆ ಮಾಡಿದ್ದರು. ಕೊನೆಗೆ ಎಸ್ಐಟಿ ತಂಡ ಗುಜರಾತ್ನ ಹಿರಿಯ ಅಧಿಕಾರಿಗಳು ಸೇರಿದಂತೆ 63 ಜನರನ್ನು ಕೇಸಿನಿಂದ ಖುಲಾಸೆ ಗೊಳಿಸಿತ್ತು. ಹಿರಿಯ ಅಧಿಕಾರಿಗಳ ವಿರುದ್ದ ಹಾಗೂ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ವಿರುದ್ದ ಅಪರಾಧ ಸಾಬೀತು ಪಡಿಸಲು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ವಿಫಲವಾಗಿತ್ತು.
ಈ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ಹೋರಾಟವನ್ನು ಕೈಬಿಡುವುದಿಲ್ಲ ಎಂಬ ಧೃಡ ನಿರ್ಧಾರ ಝಾಕಿಯಾ ಅವರು ತಳೆದ ಹಾಗಿದೆ. ತಮ್ಮ ಪತಿಯ ಕೊಲೆಗೆ ಪ್ರಧಾನಿ ನರೇಂದ್ರ ಮೋದಿ ನೇರ ಕಾರಣ ಎಂಬ ಆರೋಪವನ್ನು ಸಾಬೀತು ಪಡಿಸಲು ದೇಶದ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇನ್ನು ಈ ಪ್ರಕರಣ ಯಾವ ತಿರುವ ಪಡೆಯಲಿದೆ ಎಂಬುದು ಎಪ್ರಿಲ್ 14ರಂದು ನಡೆಯಲಿರುವ ವಿಚಾರಣೆಯ ನಂತರ ತಿಳಿದು ಬರಲಿದೆ.