ಎರಡನೇ ಅವಧಿಗೆ ಆಯ್ಕೆಗೊಂಡಿರುವ ಮೋದಿ ಚುನಾವಣಾ ಸಂಧರ್ಭದಲ್ಲಿ ಆಶ್ವಾಸನೆ ನೀಡಿರುವಷ್ಟು ಕೆಲಸ ಮಾಡಿಲ್ಲ ಎಂದು ನಿವೃತ್ತ ನ್ಯಾಯಾಧೀಶ ವಿ ಗೋಪಾಲ ಗೌಡ ಅಭಿಪ್ರಾಯ ಪಟ್ಟಿದ್ದಾರೆ. ಮೋದಿ ಎರಡನೇ ಬಾರಿ ಅಧಿಕಾರಕ್ಕೇರಿ ಒಂದು ವರ್ಷ ಪೂರೈಸುವ ಹಿನ್ನಲೆಯಲ್ಲಿ “ಪ್ರತಿಧ್ವನಿ” ಯೊಂದಿಗೆ ವಿಶೇಷ ಸಂದರ್ಶನ ನೀಡಿರುವ ನಿವೃತ್ತ ನ್ಯಾಯಾಧೀಶ ಚುನಾವಣಾ ಸಂಧರ್ಭದಲ್ಲಿ ನೀಡಿರುವ ಆಶ್ವಾಸನೆಯನ್ನು ಪೂರೈಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದಿದ್ದಾರೆ.
2022ರ ವೇಳೆಗೆ 5 ಟ್ರಿಲಿಯನ್ ಆರ್ಥಿಕ ಯೋಜನೆಯನ್ನು ಘೋಷಿಸಿರುವ ಮೋದಿ ಸರ್ಕಾರ ಆ ನಿಟ್ಟಿನಲ್ಲಿ ಇದುವರೆಗೂ 4.5 ಶೇಕಡಾ ಅಷ್ಟೇ ಕೆಲಸ ಮಾಡಿದೆ. ಈ ಹೊತ್ತಿಗೆ ಕನಿಷ್ಟ 14 ಶೇಕಡವಾದರೂ ತಲುಪಬೇಕಿತ್ತು ಎಂದು ಅಭಿಪ್ರಾಯಿಸಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ರೈತರ ಆದಾಯ ದ್ವಿಗುಣಗೊಳಿಸುತ್ತೇವೆಂದು ಜನರನ್ನು ನಂಬಿಸಿದ ಮೋದಿ ಅಧಿಕಾರಕ್ಕೆ ಬಂದ ಅವಧಿಯಲ್ಲಿ ತನ್ನ ತಪ್ಪು ನಿರ್ಧಾರಗಲಿಂದ ರೈತರಿಗೆ 4 ಲಕ್ಷ ಕೋಟಿ ನಷ್ಟ ತಂದಿಟ್ಟಿದ್ದಾರೆ.
ಮೋದಿ ಅಧಿಕಾರಕ್ಕೆ ಬಂದ ಬಳಿಕ ಭಾರತದಲ್ಲಿ ಅಪೌಷ್ಟಿಕತೆ ಹಾಗೂ ಹಸಿವಿನಿಂದ ಬಳಲುವವರ ಸಂಖ್ಯೆ ಹೆಚ್ಚಳವಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಆಮದು ಡಿಪೆಂಡೆನ್ಸಿ 77 ಶೇಕಡಾ ಇದ್ದುದನ್ನು, ಕಲ್ಲಿದ್ದಲು ಹಾಗೂ ಇನ್ನಿತರ ಕಚ್ಚಾ ವಸ್ತು ಬಳಸಿ 63 ಶೇಕಡಾಕ್ಕೆ ಇಳಿಸುತ್ತೀವಿ ಎಂದಿದ್ದ ಮೋದಿ ಅಧಿಕಾರಕ್ಕೆ ಬಂದ ಬಳಿಕ ಪೆಟ್ರೋಲಿಯಂ ಡಿಪಂಡೆನ್ಸಿ 77 ರಿಂದ 88 ಶೇಕಡಕ್ಕೆ ಏರಿದೆ.
ನಾವು ಈಗ ಸುಮಾರು 70 ಸಾವಿರ ಕೋಟಿಯ ತರಕಾರಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ದೇಶೀಯ ಬೆಳೆಗಳಿಗೆ ಮಾರುಕಟ್ಟೆ ಮೌಲ್ಯ ಗಣನೀಯವಾಗಿ ಕಡಿಮೆಯಾಗಿದೆ. ಇದರ ವ್ಯತಿರಿಕ್ತ ಪರಿಣಾಮ ರೈತರ ಮೇಲೆ ಬೀರುತ್ತಿದೆ.
ಪೌರತ್ವ ಕಾಯ್ದೆ ಅಗತ್ಯವಿಲ್ಲದೆ ತಂದಿದ್ದಾರೆ. ಭಾರತದಲ್ಲಿ ಯಾರಿಗೆ ಪೌರತ್ವ ನೀಡಬೇಕೆಂದು ಭಾರತ ಸಂವಿಧಾನದ 5 ನೇ ಅನುಚ್ಛೇದದಿಂದ 10 ನೇ ಅನುಚ್ಛೇದದ ವರೆಗೆ ಸ್ಪಷ್ಟವಾಗಿ ಹೇಳಲಾಗಿದೆ. ಹೀಗಿದ್ದೂ ಪೌರತ್ವ ಕುರಿತಾದ ಕಾಯ್ದೆ ತಿದ್ದುಪಡಿ ಮಾಡುವ ಅವಶ್ಯಕತೆ ಇರಲಿಲ್ಲ. ಅಲ್ಲದೆ ಸರ್ವೋಚ್ಛ ನ್ಯಾಯಾಲಯ ಯಾವುದೇ ಕಾರಣಕ್ಕೂ ಧರ್ಮ, ಜಾತಿ ಆಧಾರಿತ ಬೇಧ ಮಾಡುವಂತಹ ಕಾನೂನು ತರಬೇಡಿ ಎಂದಿದೆ, ಅದಾಗ್ಯೂ ಸಿಎಎ ಕಾನೂನು ತರಲಾಗಿದೆ. ಇದು ಸಂವಿಧಾನ ವಿರೋಧಿ ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ವಿ ಗೋಪಾಲ ಗೌಡ ಹೇಳಿದ್ದಾರೆ.