ಎಪ್ಪತ್ತರ ದಶಕ ಕನ್ನಡ ಚಿತ್ರರಂಗಕ್ಕೆ ಒಂದು ರೀತಿ ಹೊರಳುಹಾದಿ. ಸಾಂಪ್ರದಾಯಕ ಸಿನಿಮಾಗಳ ಶೈಲಿಯಲ್ಲಿ ಸಾಕಷ್ಟು ಪ್ರಯೋಗಗಳು ನಡೆದವು. ಮಾರುಕಟ್ಟೆ ವಿಸ್ತರಿಸುತ್ತಾ ಹೋದಂತೆ ತಮ್ಮ ಎಂದಿನ ಇಮೇಜು ಉಳಿಸಿಕೊಂಡೇ ಗೆಲುವು ಕಾಣಬೇಕಾದ ಸವಾಲು ನಾಯಕನಟರಿಗೆ ಎದುರಾಗಿತ್ತು. ಈ ಹಂತದಲ್ಲಿ ದೊಡ್ಡ ಯಶಸ್ಸು ಕಂಡ ನಿರ್ದೇಶಕರ ಸಾಲಿನಲ್ಲಿ ವಿಜಯ್ ಅವರ ಹೆಸರೂ ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ. ರಾಜಕುಮಾರ್, ವಿಷ್ಣುವರ್ಧನ್, ಅನಂತನಾಗ್, ಶಂಕರ್ನಾಗ್ ವೃತ್ತಿಬದುಕಿನ ಮಹತ್ವದ ಚಿತ್ರಗಳನ್ನು ನಿರ್ದೇಶಿಸಿದವರು ವಿಜಯ್. ಹಿಂದಿ, ತೆಲುಗು ಸಿನಿಮಾರಂಗದಲ್ಲೂ ಅವರ ಛಾಪು ಮೂಡಿದೆ.
ವಿಜಯ್ ನಿರ್ದೇಶನದ ಚೊಚ್ಚಲ ಕನ್ನಡ ಸಿನಿಮಾ ‘ರಂಗಮಹಲ್ ರಹಸ್ಯ’ (1970). ಶ್ರೀನಾಥ್ ಅಭಿನಯದ ಚಿತ್ರವಿದು. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಯಾದ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ ವಿಶಿಷ್ಠ ನಿರೂಪಣೆಯಿಂದಾಗಿ ಪ್ರೇಕ್ಷಕರನ್ನು ಸೆಳೆದಿತ್ತು. ವಿಜಯ್ ಅವರಲ್ಲೊಬ್ಬ ಅತ್ಯುತ್ತಮ ತಂತ್ರಜ್ಞ ಅಡಗಿದ್ದಾನೆ ಎಂದು ಸಿನಿಮಾರಂಗದ ಜನರು ಮಾತನಾಡಿಕೊಂಡರು. ‘ವಿಜಯ್ ಹೆಚ್ಚು ಮಾತಿನವರಲ್ಲ. ಕೆಲಸದ ವಿಚಾರದಲ್ಲಿ ಮಾತ್ರ ಎಂದೂ ರಾಜಿ ಮಾಡಕೊಳ್ಳದ ವ್ಯಕ್ತಿ. ಶಿಸ್ತು, ಬದ್ಧತೆಯಿಂದ ಸಿನಿಮಾ ಮಾಡುತ್ತಿದ್ದ ವಿಜಯ್ ಮತ್ತು ನಾನು ಐದು ದಶಕಗಳ ಸ್ನೇಹಿತರು’ ಎನ್ನುತ್ತಾರೆ ನಟ ಶ್ರೀನಾಥ್. ‘ರಂಗಮಹಲ್ ರಹಸ್ಯ’ ಚಿತ್ರದ ಯಶಸ್ಸಿನ ನಂತರ ಶ್ರೀನಾಥ್ಗೆ ಅವರು ‘ಮೊದಲ ರಾತ್ರಿ’ ಸಿನಿಮಾ ನಿರ್ದೇಶಿಸಿ ಮತ್ತೆ ಯಶಸ್ಸು ಕಂಡರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಡಾ ರಾಜಕುಮಾರ್ ಅವರ ವೃತ್ತಿಬದುಕಿನ ಮಹತ್ವದ ಸಿನಿಮಾಗಳನ್ನು ನಿರ್ದೇಶಿಸಿದವರು ವಿಜಯ್. ಗಂಧದ ಗುಡಿ, ಶ್ರೀನಿವಾಸ ಕಲ್ಯಾಣ, ಮಯೂರ, ನಾ ನಿನ್ನ ಮರೆಯಲಾರೆ, ಬಡವರ ಬಂಧು, ಸನಾದಿ ಅಪ್ಪಣ್ಣ, ಹುಲಿ ಹಾಲಿನ ಮೇವು, ಭಕ್ತ ಪ್ರಹ್ಲಾದ ಸಿನಿಮಾಗಳಲ್ಲದೆ ರಾಜ್ ಅತಿಥಿ ಪಾತ್ರಗಳಲ್ಲಿದ್ದ ‘ಶಿವ ಮೆಚ್ಚಿದ ಕಣ್ಣಪ್ಪ’ ಮತ್ತು ‘ಗಂಧದ ಗುಡಿ – 2’ ಚಿತ್ರಗಳ ನಿರ್ದೇಶಕರು ವಿಜಯ್. ಐತಿಹಾಸಿಕ, ಸಾಮಾಜಿಕ, ಮೆಲೋಡ್ರಾಮಾ, ಪೌರಾಣಿಕ ಹೀಗೆ ಭಿನ್ನ ಕಥಾವಸ್ತುವುಳ್ಳ ಈ ಎಲ್ಲಾ ಸಿನಿಮಾಗಳು ರಾಜ್ ಅವರ ವರ್ಚಸ್ಸನ್ನು ವೃದ್ಧಿಸಿದವು. ಇನ್ನು ಎಂಬತ್ತರ ದಶಕದಲ್ಲೂ ವಿಜಯ್ ಬೆಳ್ಳಿತೆರೆಯನ್ನು ಸಿಂಗರಿಸಿದರು. ಈ ದಶಕದಲ್ಲಿ ವಿಷ್ಣುವರ್ಧನ್, ಅನಂತನಾಗ್, ಶಂಕರನಾಗ್, ಶಿವರಾಜಕುಮಾರ್, ವಿನೋದ್ ಆಳ್ವಾ ಸೇರಿದಂತೆ ಹಲವರಿಗೆ ವಿಜಯ್ ನಿರ್ದೇಶನದ ಚಿತ್ರಗಳು ಹೆಸರು ತಂದುಕೊಟ್ಟವು.
“ವಿಜಯ್ ಪ್ರೇಕ್ಷಕರ ನಾಡಿಮಿಡಿತ ಚೆನ್ನಾಗಿ ಅರಿತಿದ್ದರು. ಹಾಗಾಗಿ ಅವರ ಸಿನಿಮಾಗಳು ಜನರನ್ನು ಮುಟ್ಟಿದವು. ನಿರ್ದೇಶಕ ಸಿದ್ದಲಿಂಗಯ್ಯ, ಫೈಟ್ ಮಾಸ್ಟರ್ ಶಿವಯ್ಯ ಮತ್ತು ವಿಜಯ್ ಆತ್ಮೀಯ ಸ್ನೇಹಿತರು. ಇವರೆಲ್ಲರೂ ನಿರ್ದೇಶಕ ವಿಠಲಾಚಾರ್ಯ ಅವರ ಗರಡಿಯಲ್ಲಿ ಪಳಗಿದವರು. ಸಿನಿಮಾದ ವಿವಿಧ ವಿಭಾಗಗಳಲ್ಲಿ ಪರಿಣತಿ ಇದ್ದ ವಿಜಯ್ ಚಿತ್ರೀಕರಣದ ಎಲ್ಲಾ ಹಂತಗಳನ್ನೂ ಸುಗಮವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದರು” ಎನ್ನುತ್ತಾರೆ ಹಿರಿಯ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ.
ಹಿರಿಯ ಸಿನಿಮಾ ಛಾಯಾಗ್ರಾಹಕ ಬಿ.ಎಸ್.ಬಸವರಾಜ್ ಅವರು ವಿಜಯ್ರ ಹಲವು ಸಿನಿಮಾಗಳಿಗೆ ಕಾರ್ಯನಿರ್ವಹಿಸಿದ್ದಾರೆ. “ಕಡಿಮೆ ಮಾತಿನ ವಿಜಯ್ ಸಂಕೋಚ ಸ್ವಭಾವದ ವ್ಯಕ್ತಿ. ಬಹುಶಃ ಇದೇ ಕಾರಣಕ್ಕೆ ಅವರು ಪ್ರಚಾರದಿಂದ ದೂರ ಉಳಿದರು ಎನಿಸುತ್ತದೆ. ಗಂಧದ ಗುಡಿ ಕ್ಲ್ಯೈಮ್ಯಾಕ್ಸ್ ವಿವಾದದ ಬಗ್ಗೆ ಅವರಿಗೆ ತೀವ್ರ ಅಸಮಾಧಾನವಿತ್ತು. ಆಕಸ್ಮಿಕ ಘಟನೆ ಬೇರೆ ಬೇರೆ ರೀತಿಯ ತಿರುವುಗಳನ್ನು ಪಡೆದಿದ್ದು ಅವರ ಮನಸ್ಸಿಗೆ ನೋವುಂಟು ಮಾಡಿತ್ತು” ಎನ್ನುತ್ತಾರೆ ಬಸವರಾಜ್.
ಆಂಧ್ರಪ್ರದೇಶದ ಕಾಡೇಪಲ್ಲಿ ಗುಡೆಮ್ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ (1936, ಜುಲೈ 15) ವಿಜಯ್ ಅವರಿಗೆ ಚಿಕ್ಕಂದಿನಲ್ಲಿ ಸಿನಿಮಾ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲ. 1955ರಲ್ಲಿ ಕೆಲಸ ಅರಸಿ ಮದರಾಸಿಗೆ ಹೊರಟ ಅವರಿಗೆ ನೆಲೆ ನಿಲ್ಲಲು ಒಂದು ಸೂರು ಬೇಕಿತ್ತು. ವಾಹಿನಿ ಸ್ಟುಡಿಯೋದಲ್ಲಿ ಸಂಕಲನ ಸಹಾಯಕನ ಕೆಲಸ ಸಿಕ್ಕಿತು. ಅಲ್ಲಿ ಮೂರು ವರ್ಷ ದುಡಿದರು. ನಂತರ ನಾಲ್ಕು ವರ್ಷಗಳ ಕಾಲ ಕನ್ನಡ ಮೂಲದ ಜನಪ್ರಿಯ ನಿರ್ದೇಶಕ ವಿಠಲಾಚಾರ್ಯ ಅವರಲ್ಲಿ ಕೆಲಸ ಮಾಡುವ ಅದೃಷ್ಟ ಅವರದಾಯ್ತು. ಇದು ಅವರ ಬದುಕಿನ ದೊಡ್ಡ ತಿರುವು. ವಿಠಲಾಚಾರ್ಯರ ಕನ್ನಡ, ತೆಲುಗು ಸಿನಿಮಾಗಳಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಾ ಅವರು ಸಿನಿಮಾ ತಂತ್ರಗಾರಿಕೆಯನ್ನು ಕರಗತಗೊಳಿಸಿಕೊಂಡರು. ಚಿನ್ನಪ್ಪದೇವರ್ ಮತ್ತು ಬಿ ನಾಗಿರೆಡ್ಡಿ ಅವರಲ್ಲೂ ಕೆಲಸ ಕಲಿತರು.
‘ಶ್ರೀಮತಿ’ ತೆಲುಗು ಚಿತ್ರದೊಂದಿಗೆ ಅವರು ಸ್ವತಂತ್ರ ನಿರ್ದೇಶಕರಾದರು. ಈ ಚಿತ್ರ ವಿಫಲವಾಯ್ತು. ಮುಂದೆ ‘ರಂಗಮಹಲ್ ರಹಸ್ಯ’ದೊಂದಿಗೆ ಕನ್ನಡಕ್ಕೆ ಬಂದ ಅವರು ಹಿಂತಿರುಗಿ ನೋಡಲೇ ಇಲ್ಲ. ಸಾಲು, ಸಾಲು ಯಶಸ್ವೀ ಚಿತ್ರಗಳೊಂದಿಗೆ ಕನ್ನಡದಲ್ಲಿ ಗಟ್ಟಿಯಾಗಿ ನೆಲೆನಿಂತರು. ಕನ್ನಡದ 37, ಹಿಂದಿಯ 16, ತೆಲುಗಿನ 12 ಚಿತ್ರಗಳನ್ನು ವಿಜಯ್ ನಿರ್ದೇಶಿಸಿದ್ದಾರೆ. ಕನ್ನಡದ ಮತ್ತೊಬ್ಬ ಸದಭಿರುಚಿ ನಿರ್ದೇಶಕ ವಿ.ಸೋಮಶೇಖರ್ ಅವರ ಜೊತೆಗೂಡಿ ಕೆಲವು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯ್ ಶುಕ್ರವಾರ (9 ಅಕ್ಟೋಬರ್ 2020)ರಂದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ ದಮಯಂತಿ ಹಾಗೂ ನಾಲ್ವರು ಮಕ್ಕಳನ್ನು ಅವರು ಅಗಲಿದ್ದಾರೆ. ಸಂಕೋಚ ಸ್ವಭಾವದಿಂದಾಗಿ ಪ್ರಚಾರದಿಂದ ದೂರವೇ ಉಳಿದ ವಿಜಯ್ ತಮ್ಮ ಅಪರೂಪದ ಸಿನಿಮಾಗಳ ಮೂಲಕ ಸದಾ ಕನ್ನಡಿಗರ ನೆನಪಿನಲ್ಲುಳಿಯಲಿದ್ದಾರೆ.