ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ದೇಶ ಹಾಗೂ ವಿದೇಶಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು “ಬಿಜೆಪಿಯ ವೋಟ್ ಬ್ಯಾಂಕ್ ಭದ್ರಪಡಿಸಬಲ್ಲ ಬಹುಸಂಖ್ಯಾತ ರಾಜಕೀಯ ನಿರ್ಧಾರ”ವನ್ನು ಪ್ರಬಲವಾಗಿ ಸಮರ್ಥಿಸಿಕೊಳ್ಳುವ ದುಸ್ಸಾಹಸ ಮಾಡಿದ್ದಾರೆ. ಸಿಎಎ ಕೇಂದ್ರಿತ ಚರ್ಚೆಯು ಮತ ಧ್ರುವೀಕರಣ ರಾಜಕಾರಣದ ಭಾಗ ಹಾಗೂ ದೇಶವನ್ನು ಬಾಧಿಸುತ್ತಿರುವ ನಿರುದ್ಯೋಗ, ಆರ್ಥಿಕ ಕುಸಿತದಂಥ ಮಹತ್ವದ ಚರ್ಚೆಗಳಿಂದ ದೂರ ಸರಿಸುವ ಸ್ಪಷ್ಟ ಉದ್ದೇಶ ಹೊಂದಿದೆ ಎಂಬುದು ತುಮಕೂರಿನಲ್ಲಿ ಅವರು ಮಾಡಿದ 40 ನಿಮಿಷಗಳ ಸುದೀರ್ಘ ಭಾಷಣದಲ್ಲಿ ಸ್ಪಷ್ಟವಾಗಿದೆ.
ಮೊದಲಿಗೆ ಧಾರ್ಮಿಕ ಕಿರುಕುಳಕ್ಕೆ ಒಳಗಾದವರಿಗೆ ಪೌರತ್ವ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಭಾರತದಲ್ಲಿ ಯಾರೂ ಪ್ರಶ್ನಿಸುತ್ತಿಲ್ಲ. ಭಾರತದ ಸಂವಿಧಾನದಲ್ಲಿ ವ್ಯಕ್ತಿಯೊಬ್ಬನ ಧರ್ಮ, ಜಾತಿ ಆಧರಿಸಿ ಪೌರತ್ವ ನೀಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಸಂಪ್ರದಾಯವನ್ನು ಮುರಿದು ಆರು ಧರ್ಮಗಳ ಜನರಿಗೆ ಮಾತ್ರ ಪೌರತ್ವ ನೀಡುವ, ಉದ್ದೇಶಪೂರ್ವಕವಾಗಿ ಇಸ್ಲಾಂ ಹೊರಗಿಡುವ ಮೂಲಕ ವಿಭಜನಕಾರಿ ಕಾನೂನು ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ದೇಶದ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಚಿಂತಕರು, ಕಲಾವಿದರು, ನಾಗರಿಕರು ವಿರೋಧ ಮಾಡುತ್ತಿದ್ದಾರೆ. ಇದು ಗೊತ್ತಿದ್ದೂ ನರೇಂದ್ರ ಮೋದಿಯವರು ತಮ್ಮ ನೆಚ್ಚಿನ “ಪಾಕಿಸ್ತಾನ ಎಂಬ ರಾಜಕೀಯ ಗುರಾಣಿ” ಹಿಡಿದು ವಿರೋಧ ಪಕ್ಷಗಳು ಹಾಗೂ ಪ್ರತಿಭಟನಾಕಾರರ ಮೇಲೆ ಎರಗುವ ಮೂಲಕ ತನ್ನದೇ ದೇಶವಾಸಿಗಳ ವಿರುದ್ಧ ಸಮರ ಸಾರುವ ಹಾಗೂ ಬಹುಸಂಖ್ಯಾತರ ಮನಸೆಳೆಯಲು ಮುಂದಡಿ ಇಟ್ಟಿದ್ದಾರೆ.
ಧಾರ್ಮಿಕ, ಶೈಕ್ಷಣಿಕ, ಆಧ್ಯಾತ್ಮಿಕ ಹಾಗೂ ಭಾರತದ ಬಹುಸಂಸ್ಕೃತಿ ಪರಂಪರೆ ಪ್ರತಿನಿಧಿಸುವ ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ರೈತರಿಗೆ ವಿವಿಧ ಸವಲತ್ತು ವಿತರಣಾ ಸಮಾರಂಭವನ್ನು ರಾಜಕೀಯ ವೇದಿಕೆಯನ್ನಾಗಿಸಿದ ಮೋದಿಯವರು ಪಾಕಿಸ್ತಾನದಲ್ಲಿ ಧರ್ಮದ ಹೆಸರಿನಲ್ಲಿ ಅಲ್ಪಸಂಖ್ಯಾತರಿಗೆ ನೀಡುತ್ತಿರುವ ಕಿರುಕುಳಕ್ಕೆ ತಮ್ಮ ಮನಸು ಕದಡಿದೆ ಎಂದು ಅಲವತ್ತುಕೊಂಡಿದ್ದಾರೆ. ವಿದ್ಯಾರ್ಥಿಗಳ ಸಮ್ಮುಖದಲ್ಲಿನ ಮುಕ್ಕಾಲು ತಾಸು ಭಾಷಣದಲ್ಲಿ 20ಕ್ಕೂ ಹೆಚ್ಚು ಬಾರಿ ಪಾಕಿಸ್ತಾನದ ಹೆಸರು ತೆಗೆದಿರುವ ಮೋದಿಯವರು ಅಲ್ಲಿನ ದಲಿತರು ಹಾಗೂ ತುಳಿತಕ್ಕೆ ಒಳಗಾದವರಿಗೆ ಪೌರತ್ವ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನುವ ಮೂಲಕ ಸಿಎಎ ವಿರುದ್ದದ ಹೋರಾಟಗಾರರಲ್ಲಿ ಒಡಕು ಮೂಡಿಸುವ ಕುತಂತ್ರಕ್ಕೆ ಕೈಹಾಕಿದ್ದಾರೆ. ಅಲ್ಲದೇ, ವಿರೋಧ ಪಕ್ಷಗಳು ಹಾಗೂ ಸಿಎಎ ವಿರೋಧಿಗಳು ತಮ್ಮನ್ನು ಸಂವಿಧಾನ ವಿರೋಧಿ ಎಂದು ಬಿಂಬಿಸುತ್ತಿರುವುದಕ್ಕೆ ಪ್ರತಿಕ್ರಿಯಿಸುವ ಪ್ರಯತ್ನ ಮಾಡಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಅಗತ್ಯ. ಯುವಕರು ಸರ್ಕಾರವನ್ನು ಪ್ರಶ್ನಿಸಬೇಕು ಎನ್ನುವ ಮೂಲಕ “ಯುಗದ ರಾಜಕಾರಣಿ” ಎಂದು ಬಿಂಬಿಸಿಕೊಳ್ಳುವ ಮೋದಿಯವರು, ದೇಶಾದ್ಯಂತ ನಡೆಯುತ್ತಿರುವ ಐತಿಹಾಸಿಕ ಹೋರಾಟಗಳನ್ನು ಅಣಕಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಸಿಎಎ ವಿರೋಧಿ ಹೋರಾಟವನ್ನು ಬಲತ್ಕಾರದ ಮೂಲಕ ಹಲವು ಬಿಜೆಪಿ ಆಡಳಿತದ ರಾಜ್ಯಗಳು ಹತ್ತಿಕ್ಕುವ ಪ್ರಯತ್ನ ಮಾಡಿವೆ ಎಂಬುದಕ್ಕೆ ಅಲ್ಲಿ ಪ್ರಾಣ ಕಳೆದುಕೊಂಡವರು, ಸಾವಿರಾರು ಬಂಧಿತರು ಹಾಗೂ ಪೊಲೀಸರ ಅಟ್ಟಹಾಸಕ್ಕೆ ಒಳಗಾದ ಸಾಕಷ್ಟು ಮಂದಿ ಸಾಕ್ಷಿಯಾಗಿದ್ದಾರೆ. ಬಿಜೆಪಿ ಆಡಳಿತದ ಅಸ್ಸಾಂನಲ್ಲಿ ಅಸ್ಸಾಮಿಗಳು ಹಾಗೂ ಬಂಗಾಳಿ ಹಿಂದೂಗಳು ಪ್ರಬಲ ಹೋರಾಟ ಸಂಘಟಿಸಿದ್ದಾರೆ. ಇಲ್ಲಿಂದ ಆರಂಭವಾದ ಹೋರಾಟದ ಕಿಚ್ಚು ದೆಹಲಿಯ ಜಾಮಿಯಾ ವಿಶ್ವವಿದ್ಯಾಲಯದ ಮೂಲಕ ದೇಶದ ವಿವಿಧೆಡೆ ವ್ಯಾಪಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲಾರಂಭಿಸಿದೆ.
ಜಾತ್ಯತೀತ, ಧರ್ಮಾತೀತ ನಿಲುವುಗಳ ಮೂಲಕ ಜಗತ್ತಿನಲ್ಲಿ ವಿಶಿಷ್ಟ ಸ್ಥಾನಗಳಿಸಿರುವ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವನ್ನು ಧರ್ಮದ ಆಧಾರದಲ್ಲಿ ಜನ್ಮ ಪಡೆದ ಪಾಕಿಸ್ತಾನದಂಥಾಗಿಸಲು ನರೇಂದ್ರ ಮೋದಿಯವರ ಪಕ್ಷವು ದೋಷಪೂರಿತವಾದ ಸಿಎಎ ಮೂಲಕ ಮುಂದಡಿ ಇಟ್ಟಿದೆ ಎಂಬ ಪ್ರತಿಭಟನಾಕಾರರ ಆರೋಪಕ್ಕೆ ಬಿಜೆಪಿ ನಾಯಕತ್ವ ಉತ್ತರಿಸಿಲ್ಲ. ಅಸ್ಸಾಂ ಮುಖ್ಯಮಂತ್ರಿ ಹಾಗೂ ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಸೊರಬಾನಂದ ಸೋನಾವಾಲಾ ಅವರೇ ಕೇಂದ್ರದ ಪೌರತ್ವ ಕಾನೂನಿಗೆ ತಕರಾರು ತೆಗೆದಿದ್ದಾರೆ. ಬಿಜೆಪಿಯ ಹಲವು ನಾಯಕರು ಮೋದಿ-ಶಾ ಜೋಡಿಯ ನಿರ್ಧಾರವನ್ನು ಪ್ರಶ್ನಿಸಲಾರಂಭಿಸಿದ್ದಾರೆ. ಸಂಸತ್ತಿನಲ್ಲಿ ಸಿಎಎ ಪರ ಮತ ಚಲಾಯಿಸಿದ ಬಿಜೆಪಿಯ ಮಿತ್ರ ಪಕ್ಷವಾದ ಪಂಜಾಬಿನ ಅಕಾಲಿ ದಳ, ಬಿಹಾರದ ಜೆಡಿಯು, ತಮಿಳುನಾಡಿನ ಎಐಎಡಿಎಂಕೆ ಭಿನ್ನರಾಗ ತೆಗೆದಿವೆ.
ಸಿಎಎ ಬೆನ್ನಿಗೇ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಜಾರಿಗೊಳಿಸಲಾಗುವುದು ಎಂದು ಹೋದಲ್ಲಿ ಬಂದಲ್ಲಿ ಹೇಳುತ್ತಿದ್ದ ಮೋದಿಯ ಒಡನಾಡಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯೇ ಸುಳ್ಳು ಎನ್ನುವ ರೀತಿಯಲ್ಲಿ ಈಚೆಗೆ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಸ್ವತಃ ಮೋದಿಯವರೇ ಹೇಳಿದ್ದಾರೆ. ಈ ಮೂಲಕ ತಾವೇ ಎಣೆದ ಬಲೆಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಬಿಜೆಪಿಯ ಮಾತೃ ಸಂಸ್ಥೆಯಾದ ಆರ್ ಎಸ್ ಎಸ್ ಅಜೆಂಡಾ ಜಾರಿಗೊಳಿಸುವ ನಿಟ್ಟಿನಲ್ಲಿ ಎಡವಿ ಬಿದ್ದಿರುವ ಮೋದಿಯವರು ಎಂದಿನಂತೆ ತಮ್ಮ ಚುನಾವಣಾ ಪ್ರಚಾರ ಭಾಷಣದ ಅಸ್ತ್ರವಾದ “ಪಾಕಿಸ್ತಾನ”ದ ಮೊರೆ ಹೋಗಿದ್ದಾರೆ. ಪಾಕಿಸ್ತಾನದ ವಿಚಾರವನ್ನು ಮತ್ತೆಮತ್ತೆ ಎತ್ತಿದರೆ ಮತ ಧ್ರುವೀಕರಣ ಸಾಧ್ಯ ಎಂಬುದು ಮೋದಿಯವರು ನಂಬಿರುವ ಸತ್ಯ. ಅದೃಷ್ಟವಶಾತ್ “ಎಲ್ಲ ಕಾಲದಲ್ಲೂ ಎಲ್ಲರನ್ನೂ ದಿಕ್ಕು ತಪ್ಪಿಸುವುದು ಸಾಧ್ಯವಿಲ್ಲ” ಎಂಬುದನ್ನು ದೇಶಾದ್ಯಂತ ನಡೆಯುತ್ತಿರುವ ಹೋರಾಟಗಳು ಮೋದಿಯವರಿಗೆ ಮನವರಿಕೆ ಮಾಡಿಕೊಡಲೆತ್ನಿಸಿವೆ. ಆದರೂ ತಮ್ಮದೇ ಶೈಲಿಯ ರಾಜಕಾರಣಕ್ಕೆ ಮೋದಿಯವರು ಮೊರೆ ಹೋಗಿದ್ದಾರೆ. ಆದರೆ, ಇದರಲ್ಲಿ ಅವರಿಗೆ ಯಶಸ್ಸು ಎಷ್ಟರಮಟ್ಟಿಗೆ ದಕ್ಕಲಿದೆ ಎಂಬುದು 21ನೇ ಶತಮಾನದ ಮೂರನೇ ದಶಕದ ಭಾರತದ ರಾಜಕಾರಣದ ದಿಕ್ಕು ನಿರ್ಧಾರವಾಗಲಿದೆ.
ಇದೆಲ್ಲದರ ಮಧ್ಯೆ, ಕರ್ನಾಟಕದ ಪ್ರವಾಹಪೀಡಿತ ಪ್ರದೇಶ, ನೀರಾವರಿ ಯೋಜನೆ ಹಾಗೂ ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನಗಳ ಬಗ್ಗೆ ಒಂದು ಭರವಸೆಯ ಮಾತು ಮೋದಿಯವರಿಂದ ಹೊರಡಲಿಲ್ಲ. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. #GoBackModi ಹ್ಯಾಷ್ ಟ್ಯಾಗ್ ಮೂಲಕ ಸಾವಿರಾರು ಮಂದಿ ಮೋದಿಯವರಿಗೆ ಚುರುಕು ಮುಟ್ಟಿಸಿದ್ದಾರೆ. ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರೇ ಮೋದಿಯವರನ್ನು ವೇದಿಕೆಯಲ್ಲಿ ಎಚ್ಚರಿಸುವ ಯತ್ನ ಮಾಡಿದರೂ ಅವರು ಅದಕ್ಕೆ ಪ್ರಾಮುಖ್ಯತೆ ನೀಡಲಿಲ್ಲ. ಭಾರತ ಒಕ್ಕೂಟ ವ್ಯವಸ್ಥೆಗೆ ಒಳಪಟ್ಟಿದೆ. ಹೀಗಿರುವಾಗ ರಾಜ್ಯಗಳ ಹಿತಾಸಕ್ತಿ ಕಾಯುವುದು ಕೇಂದ್ರ ಸರ್ಕಾರದ ಕರ್ತವ್ಯ.
ವಿವಿಧ ರಾಷ್ಟ್ರಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾದ ಜನರ ನೋವಿಗೆ ಮಿಡಿಯುವ ಮೋದಿ ಸರ್ಕಾರವು ನಮ್ಮದೇ ರಾಜ್ಯದ 22 ಜಿಲ್ಲೆಗಳ ಜನರು ಶತಮಾನದಲ್ಲಿ ಕಂಡೂಕೇಳರಿಯದ ಪ್ರವಾಹಕ್ಕೆ ಸಿಲುಕಿ ನಲುಗಿದರೂ ಅವರ ನೆರವಿಗೆ ನಿಲ್ಲಲಿಲ್ಲವೇಕೆ? ರಾಜ್ಯ ಸರ್ಕಾರ 38 ಸಾವಿರ ಕೋಟಿ ರುಪಾಯಿ ನಷ್ಟದ ಅಂದಾಜು ನೀಡಿದರೂ ಶೇ 10ರಷ್ಟು ಅನುದಾನದ ಬದಲಾಗಿ ಕೇವಲ 1,800 ಕೋಟಿ ರುಪಾಯಿ ನೀಡಿ ಸುಮ್ಮನಾಗಿದ್ದೇಕೆ? ಪ್ರವಾಹದಿಂದಾಗಿ ಕರ್ನಾಟಕದ 700 ಗ್ರಾಮಗಳು ಜಲಾವೃತವಾಗಿದ್ದು, 3 ಲಕ್ಷಕ್ಕೂ ಅಧಿಕ ಮನೆಗಳು ನೆಲಕ್ಕುರುಳಿವೆ ಎಂದು ಬಿಜೆಪಿಯ ರಾಜ್ಯ ಸರ್ಕಾರವೇ ಹೇಳುತ್ತಿದೆ. ಆದರೆ, ಸಿದ್ಧಗಂಗಾ ಮಠದಲ್ಲಿ ಮೋದಿಯವರ ಭಾಷಣ ಯಾವ ವಿಚಾರದ ಮೇಲಿತ್ತು? ಕೇಂದ್ರ ಸರ್ಕಾರದ ನೆರವಿಗೆ ಕಾದುಕುಳಿತಿರುವ ಕರ್ನಾಟಕದ ನೆಲದಲ್ಲಿ ಮೋದಿಯವರು ಪಾಕಿಸ್ತಾನದ ಬಗ್ಗೆ ಮಾತನಾಡುವ ಅಗತ್ಯವೇನಿತ್ತು?
ನಮ್ಮ ರಾಜ್ಯಕ್ಕೆ ನ್ಯಾಯಯೋಚಿತವಾಗಿ ದಕ್ಕಬೇಕಾದ ಅನುದಾನ ತರಬೇಕಾದ ಬಿಜೆಪಿಯ 25 ಶಾಸಕರು ಮೋದಿ-ಶಾ ಜೋಡಿಗೆ ತಮ್ಮ ಧ್ವನಿ ಅಡವಿಟ್ಟಿದ್ದಾರೆಯೇ? ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಬಂದರೆ ಅಭಿವೃದ್ಧಿ ವೇಗ ಹೆಚ್ಚಲಿದೆ ಎನ್ನುತ್ತಿದ್ದ ಮಹಾನುಭಾವರು ಎಲ್ಲಿ ಅಡಗಿದ್ದಾರೆ? ಆಡಳಿತಗಾರರ ವೈಫಲ್ಯ, ವಚನ ಭ್ರಷ್ಟತೆ, ಆದ್ಯತೆಗಳನ್ನು ನೆನಪಿಸಬೇಕಾದ ಮಾಧ್ಯಮಗಳು ಸರ್ಕಾರದ ಅಣತಿಯಂತೆ ಕುಣಿಯಿತ್ತಿರುವುದೇಕೆ? “ಮೋದಿ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡ ಹೊರಟಿದೆ. ಇದಕ್ಕೆ ಅಂಕುಶ ಹಾಕಬೇಕು ಎನ್ನುತ್ತಿರುವ ವಿರೋಧದ ಧ್ವನಿಗಳಲ್ಲಿ ತಪ್ಪು ಹುಡುಕುವಂಥದ್ದೇನಿದೆ”? ಭಿನ್ನ ಧ್ವನಿಗಳಿಗೆ ಕಿವಿಯಾಗುವುದು ಚುನಾಯಿತ ಸರ್ಕಾರಗಳ ಕರ್ತವ್ಯ. ಇದನ್ನು ಮೋದಿಯವರ ಸರ್ಕಾರ ಆಲಿಸಲು ಸಿದ್ಧವಿದೆಯೇ?