ಹಿರಿಯ ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಪ್ರಕರಣ ಹಲವು ಕಾರಣಗಳಿಂದಾಗಿ ಸದ್ಯಕ್ಕೆ ನ್ಯಾಯಾಂಗ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಮುಖಾಮುಖಿಯ ಅಪರೂಪದ ಸಂದರ್ಭವಾಗಿ ಪರಿವರ್ತನೆಯಾಗಿದೆ.
ಪ್ರಶಾಂತ್ ಭೂಷಣ್ ಅವರು ಸಿಜೆಐ ಎಸ್ ಎ ಬೋಬ್ಡೆ ಅವರ ಐಷಾರಾಮಿ ಬೈಕ್ ಸವಾರಿ ಮತ್ತು ಕಳೆದ ಆರು ವರ್ಷಗಳ ವಿವಿಧ ಸಿಜೆಐಗಳ ಅವಧಿಯ ಕುರಿತು ಮಾಡಿದ ಎರಡು ಪ್ರತ್ಯೇಕ ಟ್ವೀಟ್ ಗಳ ಹಿನ್ನೆಲೆಯಲ್ಲಿ ಅವರ ವಿರುದ್ಧ ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾಗ ಕೇವಲ ದೇಶದ ಹಿರಿಯ ವಕೀಲರ ವಿರುದ್ಧದ ನ್ಯಾಯಾಂಗ ನಿಂದನೆಯ ಒಂದು ಗಂಭೀರ ಪ್ರಕರಣವಾಗಿದ್ದ, ಈ ಪ್ರಕರಣ ಇದೀಗ ಕಳೆದ ವಾರದ ತೀರ್ಪು ಮತ್ತು ಗುರುವಾರದ ವಿಚಾರಣೆಯ ವೇಳೆಯ ಕ್ಷಮಾಪಣೆ ಸಲಹೆಗೆ ಪ್ರಶಾಂತ್ ಭೂಷಣ್ ನೀಡಿದ ಪ್ರತಿಕ್ರಿಯೆಯ ಬಳಿಕ ದಿಢೀರನೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
ಅದರಲ್ಲೂ ನಿಮ್ಮ ಹೇಳಿಕೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು, ನಿಮ್ಮ ತಪ್ಪು ಒಪ್ಪಿಕೊಂಡು ಕ್ಷಮಾಪಣೆ ಕೇಳಿ, ನಿಮಗೆ ಶಿಕ್ಷೆ ವಿಧಿಸುವ ಉದ್ದೇಶವೇನೂ ನಮಗಿಲ್ಲ ಎಂಬ ವಿಚಾರಣಾ ಪೀಠದ ನ್ಯಾಯಮೂರ್ತಿಗಳ ಸಲಹೆಗೆ, ಭೂಷಣ್ ಅವರು ಗಾಂಧಿ ಹೇಳಿಕೆಯನ್ನು ಉಲ್ಲೇಖಿಸಿ “ನಾನು ಯಾವುದೇ ಕ್ಷಮಾಪಣೆ ಕೋರುವುದಿಲ್ಲ. ಔದಾರ್ಯಕ್ಕೂ ಮನವಿ ಮಾಡಲಾರೆ. ನಾನು ಇಲ್ಲೇ ಇದ್ದೇನೆ. ಹಾಗಾಗಿ ನನಗೆ ಒಬ್ಬ ಪ್ರಜೆಯ ಆದ್ಯ ಕರ್ತವ್ಯ ಎನಿಸಿದ್ದು, ನ್ಯಾಯಾಲಯದ ದೃಷ್ಟಿಯಲ್ಲಿ ಅಪರಾಧ ಎನಿಸಿದ್ದರೆ ಅದಕ್ಕೆ ಸಂಬಂಧಿಸಿದಂತೆ ಕಾನೂನು ರೀತ್ಯಾ ನನ್ನ ಮೇಲೆ ಪ್ರಯೋಗಿಸಬಹುದಾದ ಯಾವುದೇ ಶಿಕ್ಷೆಗೆ, ದಂಡನೆಗೆ ನನ್ನನ್ನು ನಾನು ಖುಷಿಯಿಂದಲೇ ಸಮರ್ಪಿಸಿಕೊಳ್ಳುತ್ತಿದ್ದೇನೆ” ಎಂದ ಕ್ಷಣವೇ ಇಡೀ ಪ್ರಕರಣಕ್ಕೆ ದೀಢೀರ್ ಐತಿಹಾಸಿಕ ಮಹತ್ವ ಬಂದಂತಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಭೂಷಣ್ ಅವರು ತಮ್ಮ ಹೇಳಿಕೆಯಲ್ಲಿ ತಮ್ಮ ಟ್ವೀಟ್ ತಪ್ಪಾಗಿ ಅರ್ಥೈಸಲಾಗಿದೆ. ದೇಶದ ಒಬ್ಬ ನಾಗರಿಕನಾಗಿ ಮತ್ತು ಸುದೀರ್ಘ ಕಾಲದ ವಕೀಲಿಕೆಯ ವೃತ್ತಿ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗದ ಘನತೆಯ ಮೇಲಿನ ಕಾಳಜಿಯಿಂದ ಮತ್ತು ಅದನ್ನು ರಕ್ಷಿಸಬೇಕಾದ ಕರ್ತವ್ಯ ಪ್ರಜ್ಞೆಯಿಂದಲೇ ನಾನು ಆ ಎರಡು ಟ್ವೀಟ್ ಮಾಡಿದ್ದೇ ವಿನಃ ಬೇರೇನಲ್ಲ. ಆದರೆ ನನಗೆ ಈ ಬೆಳವಣಿಗೆಯಿಂದ ನೋವಾಗಿದೆ. ಆದರೆ, ಶಿಕ್ಷೆಯ ಕಾರಣಕ್ಕಾಗಿ ಆದ ನೋವಲ್ಲ ಅದು. ಬದಲಾಗಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ ಕಾರಣಕ್ಕೆ ಆದ ನೋವು ಎಂದು ಸ್ಪಷ್ಟಪಡಿಸುವ ಮೂಲಕ, ತಾವು ಶಿಕ್ಷೆಗೆ ಅಥವಾ ನ್ಯಾಯಾಲಯದ ದಂಡನೆಗೆ ಹಿಂಜರಿಯುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಹೀಗೆ ಗಾಂಧಿಯ ಪ್ರಸಿದ್ಧ ಹೇಳಿಕೆಯ ಪ್ರಸ್ತಾಪ ಮತ್ತು ದೇಶದ ಪ್ರಜೆಯಾಗಿ ತನ್ನ ಆದ್ಯ ಕರ್ತವ್ಯದ ಸಣ್ಣ ಭಾಗವಾಗಿ ಆ ಟ್ವೀಟ್ ಮಾಡಿದ್ದು ಎಂದು ಹೇಳುವ ಮೂಲಕ ತಮ್ಮ ನಿಲುವಿಗೆ ಐತಿಹಾಸಿಕ ಮಹತ್ವ ತಾನೇತಾನಾಗಿ ಬರುವಂತೆ ಪ್ರಶಾಂತ್ ನಡೆದುಕೊಂಡಿದ್ದಾರೆ. ಅದೇ ಹೊತ್ತಿಗೆ ಪ್ರಶಾಂತ್ ಆ ಕ್ಷಣದ ನಿಲುವಿನ ಹಿನ್ನೆಲೆಯಲ್ಲಿರುವ ದಶಕಗಳ ಕಾಲದ ಅವರ ಜನಪರ ಹೋರಾಟ, ಬಡವರು, ದೀನರ ಪರ ಕಾನೂನು ಮತ್ತು ಬೀದಿ ಹೋರಾಟಗಳು ಮತ್ತು ಕದಡದ ಪ್ರಾಮಾಣಿಕತೆಗಳು ಕೂಡ ಇಡೀ ಪ್ರಕರಣವನ್ನು ದೇಶದ ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವಪರ ದನಿಗಳ ನಡುವಿನ ಒಂದು ಅಪರೂಪದ ಪ್ರಕರಣವನ್ನಾಗಿ ಮಾಡಿವೆ.
ಮತ್ತೊಂದು ಕಡೆ, ಭೂಷಣ್ ಅವರನ್ನು ತಪ್ಪಿತಸ್ಥರು ಎಂದು ಘೋಷಿಸಿದ ಸುಪ್ರೀಂಕೋರ್ಟಿನ ಪೀಠದ ಕಟು ಧೋರಣೆ ಕೂಡ ಸಾಕಷ್ಟು ಆತಂಕದ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಜೊತೆಗೆ ಗುರುವಾರ ಕೂಡ ಪೀಠ, ಭೂಷಣ್ ಅವರಿಗೆ ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ. ನೀರು ನೂರು ಒಳ್ಳೆಯ ಕೆಲಸ ಮಾಡಿದ್ದೀರಿ ಎಂದರೆ, ಅದರರ್ಥ ಹತ್ತು ತಪ್ಪುಗಳಿಗೆ ಅದು ರಹದಾರಿ ಎಂದೇನಲ್ಲ. ನಿಮ್ಮ ಸಾರ್ವಜನಿಕ ಹಿತಾಸಕ್ತಿ ಹೋರಾಟದ ಬಗ್ಗೆ ನಮಗೂ ಅರಿವಿದೆ. ಆದರೆ ನ್ಯಾಯಾಲಯದ ಘನತೆ ದೊಡ್ಡದು. ಆ ಹಿನ್ನೆಲೆಯಲ್ಲಿ ನೀವು ನಿಮ್ಮ ಹೇಳಿಕೆ ಪುನರ್ ಪರಿಶೀಲಿಸಿ, ಕ್ಷಮಾಪಣೆ ಕೇಳಿ ಎಂದು ಹೇಳಿದ್ದು, ಕೂಡ ಪ್ರಕರಣದ ಬೆಳವಣಿಗೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಕುತೂಹಲಕಾರಿ ಚರ್ಚೆಗಳಿಗೆ ಇಂಬು ನೀಡಿದೆ. ಅದರಲ್ಲೂ ಪ್ರಮುಖ ಪತ್ರಿಕೆಗಳ ವ್ಯಂಗ್ಯಚಿತ್ರಕಾರರಿಗೆ ಈ ಪ್ರಕರಣ ಸಾಕಷ್ಟು ಆಸಕ್ತಿಕರ ಸರಕು ಒದಗಿಸಿದ್ದು, ಕಳೆದ ಎರಡು ದಿನಗಳಿಂದ ಹತ್ತಾರು ಐತಿಹಾಸಿಕ ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ.
ಈ ನಡುವೆ, ಗುರುವಾರದ ವಿಚಾರಣೆ ವೇಳೆ ಹಾಜರಿದ್ದು ಕೇಂದ್ರ ಸರ್ಕಾರದ ಪ್ರತಿನಿಧಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ‘ಪ್ರಶಾಂತ್ ಭೂಷಣ್ ಅವರಿಗೆ ಶಿಕ್ಷೆ ವಿಧಿಸಬೇಡಿ. ಅವರು ಈಗಾಗಲೇ ಶಿಕ್ಷೆ ಅನುಭವಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಅವರು ಜನರಿಗಾಗಿ ಮಾಡಿರುವ ಒಳಿತು ದೊಡ್ಡದಿದೆ. ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯಾಧೀಶರೇ ನ್ಯಾಯಾಲಯ ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ ವಿಫಲವಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದ್ದು ಈ ಹಿಂದೆ ಅಧಿಕೃತವಾಗಿ ದಾಖಲಾಗಿದೆ’ ಎಂದು ಭೂಷಣ್ ಪರ ಪೀಠಕ್ಕೆ ಮನವಿ ಮಾಡಿದ್ದರು. ಬಿಜೆಪಿ ಸರ್ಕಾರದ ಪ್ರತಿನಿಧಿಯಾಗಿ ವೇಣುಗೋಪಾಲ್ ಅವರ ಈ ಕೋರಿಕೆ ಸಾಕಷ್ಟು ಕುತೂಹಲಕ್ಕೂ ಕಾರಣವಾಗಿತ್ತು. ಸರ್ಕಾರ ಈ ಪ್ರಕರಣದಲ್ಲಿ ಎದುರಾಗಿರುವ ಮುಜುಗರದಿಂದ ಪಾರಾಗಲೂ ಅಟಾರ್ನಿ ಜನರಲ್ ಮೂಲಕ ಈ ಪ್ರಯತ್ನ ಮಾಡಿದೆ ಎಂಬ ವಾದಗಳೂ ಕೇಳಿಬಂದಿದ್ದವು.
ಆದರೆ, ಗುರುವಾರ ಸಂಜೆ ಪ್ರಕರಣದ ವಿಚಾರಣೆ ಕುರಿತು ನ್ಯಾಯಾಲಯದ ವೆಬ್ ಸೈಟಿನಲ್ಲಿ ಹಾಕಲಾಗಿದ್ದ ಆದೇಶದಲ್ಲಿ ಅಟಾರ್ನಿ ಜನರಲ್ ಅವರು ಕಲಾಪದಲ್ಲಿ ಹಾಜರಿದ್ದ ಬಗ್ಗೆಯಾಗಲೀ, ಮಧ್ಯಪ್ರವೇಶಿಸಿ ಪೀಠಕ್ಕೆ ಕೋರಿಕೆ ಸಲ್ಲಿಸಿದ್ದ ಬಗ್ಗೆಯಾಗಲೀ ಯಾವುದೇ ಪ್ರಸ್ತಾಪವಾಗಿಲ್ಲ! ಇದು ಕುತೂಹಲ ಕೆರಳಿಸಿದ್ದು, ಸ್ವತಃ ನ್ಯಾಯಪೀಠ ಎರಡೆರಡು ಬಾರಿ ಅಟಾರ್ನಿ ಜನರಲ್ ಅವರಿಗೆ ಮಾತಿನ ನಡುವೆ ತಡೆದು, ಅವರು(ಭೂಷಣ್) ಕ್ಷಮೆಯಾಚಿಸಲಿ,.. ಇದು ಪ್ರಕರಣದ ಮೆರಿಟ್ ಪರಿಶೀಲಿಸುವ ಹಂತವಲ್ಲ ಎಂದು ಸೂಚಿಸಿತ್ತು. ಒಂದು ಹಂತದಲ್ಲಿ ಭೂಷಣ್ ಅವರಿಗೆ ತಮ್ಮ ಹೇಳಿಕೆ ಪುನರ್ ಪರಿಶೀಲನೆಗೆ, ಆತ್ಮಾವಲೋಕನಕ್ಕೆ ಕಾಲಾವಕಾಶ ನೀಡಬೇಕಿದೆಯಾ ಎಂದು ಪೀಠದ ನೇತೃತ್ವ ವಹಿಸಿದ್ದ ನ್ಯಾ. ಅರುಣ್ ಮಿಶ್ರಾ ಅವರೇ ಅಟಾರ್ನಿ ಜನರಲ್ ಅವರನ್ನು ಕೇಳಿದ್ದರು. ಆದಾಗ್ಯೂ ಆ ಬಗ್ಗೆ ಆದೇಶದಲ್ಲಿ ಪ್ರಸ್ತಾಪವಾಗಿಲ್ಲ ಎಂದು ಲೈವ್ ಲಾ.ಕಾಂ ವರದಿ ಹೇಳಿದೆ.
ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಷ್ಟ್ 5ರಂದು ಪ್ರಶಾಂತ್ ಭೂಷಣ್ ತಪ್ಪಿತಸ್ಥರು ಎಂದು ಪೀಠ ತೀರ್ಪು ನೀಡಿದ ದಿನದ ಆದೇಶದಲ್ಲಿ ಅಟಾರ್ನಿ ಜನರಲ್ ಅವರು ಹಾಜರಿದ್ದ ಬಗ್ಗೆ ಉಲ್ಲೇಖಿಸಲಾಗಿದೆ.
ಈ ಮೊದಲು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಅಟಾರ್ನಿ ಜನರಲ್ ಅವರಿಗೆ ನೋಟೀಸ್ ಜಾರಿಮಾಡಿ, ಈ ವಿಷಯದಲ್ಲಿ ತಮ್ಮ ನೆರವು ಅಗತ್ಯವಿದೆ ಎಂದು ಹೇಳಿತ್ತು. ಆದರೆ, ಪ್ರಕರಣದ ವಿಚಾರಣೆ ಹಂತದಲ್ಲಿ ಅವರನ್ನು ವಿಚಾರಣೆಗೆ ಕರೆಯಲಾಗಿರಲಿಲ್ಲ. ಹಾಗಾಗಿ, ಅಟಾರ್ನಿ ಜನರಲ್ ಅವರ ಅಭಿಪ್ರಾಯವನ್ನು ಕೇಳದೆಯೇ ಪ್ರಕರಣದ ತೀರ್ಪು ಪ್ರಕಟಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಗುರುವಾರ ಪ್ರಕರಣದ ವಿಚಾರಣೆಯ ಆರಂಭದಿಂದಲೂ ಹಿರಿಯ ವಕೀಲರಾದ ರಾಜೀವ್ ಧವನ್ ಮತ್ತು ಧುಷ್ಯಂತ ಧವೆ ಅವರುಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಟಾರ್ನಿ ಜನರಲ್ ಅವರು ತಮ್ಮ ಹೇಳಿಕೆ ದಾಖಲಿಸಲು ಕಾಯುತ್ತಿದ್ದಾರೆ. ಅವರ ಅಹವಾಲು ಕೇಳಿ ಎಂದು ಪೀಠಕ್ಕೆ ಪದೇಪದೆ ಮನವಿ ಮಾಡಿದ್ದರು.
ಆಗ ಅವರ ಕೋರಿಕೆಗೆ ಪ್ರತಿಕ್ರಿಯಿಸಿದ್ದ ನ್ಯಾ. ಮಿಶ್ರಾ ಅವರು, ಅವರಿಗೆ ನೊಟೀಸ್ ನೀಡಿದ ವಿಷಯ ನ್ಯಾಯಾಲಯದ ಗಮನದಲ್ಲಿದೆ. ಅದನ್ನು ಪ್ರತ್ಯೇಕವಾಗಿ ನೆನಪಿಸುವ ಅಗತ್ಯವಿಲ್ಲ ಎಂದೂ ಹೇಳಿದ್ದರು. ಆದಾಗ್ಯೂ ನ್ಯಾಯಾಲಯದ ಆದೇಶದಲ್ಲಿ ಅಟಾರ್ನಿ ಜನರಲ್ ಅವರ ಹಾಜರಿಯ ಕುರಿತಾಗಲೀ, ಭೂಷಣ್ ಅವರಿಗೆ ಶಿಕ್ಷೆ ವಿಧಿಸಬಾರದು ಎಂಬ ಅವರ ಕೋರಿಕೆಯ ವಿಷಯವಾಗಲೀ ಉಲ್ಲೇಖವಾಗಿಲ್ಲ!
ಈ ನಡುವೆ, ಸದ್ಯದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ, ಸಂವಿಧಾನಿಕ ಹಕ್ಕುಗಳಿಗೆ ಒದಗಿರುವ ಅಪಾಯ, ನ್ಯಾಯಾಂಗವೂ ಸೇರಿದಂತೆ ದೇಶದ ಉನ್ನತ ಸಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ ಮತ್ತು ಘನತೆಗೆ ಎದುರಾಗಿರುವ ಸವಾಲಿನ ಹಿನ್ನೆಲೆಯಲ್ಲಿ ಪ್ರಶಾಂತ್ ಭೂಷಣ್ ಅವರು ಜನಸಾಮಾನ್ಯರ ನಡುವೆ ಹೊಸ ಭರವಸೆಯಾಗಿ ಕಾಣತೊಡಗಿದ್ದಾರೆ. ದೇಶದ ಪ್ರಜಾಸತ್ತೆಯ ನೈಜ ಆಶಯದ ವಕ್ತಾರರಾಗಿ ಹೊರಹೊಮ್ಮಿದ್ದಾರೆ.