ಕಳೆದ 7 ವರ್ಷಗಳಿಂದ ಭಾರತೀಯರು ಕಾತುರದಿಂದ ಕಾಯುತ್ತಿದ್ದ ಆ ಘಳಿಗೆ ಕೊನೆಗೂ ಸನ್ನಿಹಿತವಾಗಿದೆ. 2012 ಡಿಸೆಂಬರ್ 16ರಂದು ದೆಹಲಿಯ ರಸ್ತೆಯಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅಮಾನವೀಯವಾಗಿ ಅತ್ಯಾಚಾರ ಎಸಗಿ ಆಕೆಯ ಸಾವಿಗೆ ಕಾರಣರಾಗಿದ್ದ ಆರೋಪಿಗಳಿಗೆ ವಿಧಿಸಲಾಗಿದ್ದ ಗಲ್ಲುಶಿಕ್ಷೆಯನ್ನುಮಾರ್ಚ್ 3ಕ್ಕೆ ನೆರವೇರಿಸಲು ದೆಹಲಿ ಹೈಕೋರ್ಟ್ 4ನೇ ಬಾರಿಗೆ ಡೆತ್ ವಾರೆಂಟ್ ಹೊರಡಿಸಿದೆ. ಅಲ್ಲಿಗೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆತಂತಾಗಿದೆ.
ಡೆತ್ ವಾರೆಂಟ್ ಬಳಿಕ ನಾಲ್ವರೂ ಆರೋಪಿಗಳನ್ನು ನೇಣಿಗೆ ಏರಿಸುವುದು ಬಹುತೇಕ ಖಚಿತವಾಗಿದ್ದು, ನೇಣು ಕುಣಿಕೆಗಳನ್ನು ಸಿದ್ದಪಡಿಸುವಂತೆ ಬಿಹಾರದ ಬಕ್ಸರ್ ಜೈಲು ಸಿಬ್ಬಂದಿಗೆ ಈಗಾಗಲೇ ಸೂಚಿಸಲಾಗಿದೆ. ನಿರ್ಭಯಾ ಪ್ರಕರಣದ ಆರೋಪಿಗಳನ್ನು ಗಲ್ಲಿಗೆ ಏರಿಸಿದರೆ ಕಳೆದ 27 ವರ್ಷದಲ್ಲಿ ಗಲ್ಲಿಗೆ ಕೊರಳೊಡ್ಡುತ್ತಿರುವ 5ನೇ ವಿರಳಾತಿ ವಿರಳ ಪ್ರರಕಣ ಇದಾಗಲಿದೆ.
ಭಾರತದಲ್ಲಿ ಗಲ್ಲು ಶಿಕ್ಷೆ:
ಕ್ರಿಮಿನಲ್ ಅಪರಾಧಿಗಳನ್ನು ಶಿಕ್ಷಿಸುವ ಮತ್ತು ರಾಜಕೀಯ ವಿರೋಧಿಗಳನ್ನು ದಮನಿಸುವ ಸಲುವಾಗಿ ಬ್ರಿಟೀಷ್ ಆಡಳಿತ ಭಾರತದಲ್ಲಿ 1861ರಲ್ಲಿ ಗಲ್ಲು ಶಿಕ್ಷೆಯನ್ನು ಜಾರಿಗೆ ತರಲಾಗಿತ್ತು. ಸ್ವಾತಂತ್ರ್ಯಾ ನಂತರವೂ 1861 ಭಾರತೀಯ ದಂಡ ಸಂಹಿತೆಯನ್ನು ಉಳಿಸಿಕೊಳ್ಳಲಾಗಿದೆ. ಆದರೂ, ಭಾರತದಲ್ಲಿ ಈವರೆಗೆ ವಿರಳಾತಿ ವಿರಳ ಪ್ರಕರಣಗಳಲ್ಲಿ ಮಾತ್ರ ಮರಣ ದಂಡನೆಯನ್ನು ವಿಧಿಸಲಾಗುತ್ತಿದೆ.
ಭಾರತೀಯ ಸಂವಿಧಾನದ 21ನೇ ವಿಧಿಯಲ್ಲಿ ಎಲ್ಲರಿಗೂ “ಬದುಕುವ ಹಕ್ಕ”ನ್ನು ನೀಡಲಾಗಿದೆ. ಇದು ಅಪರಾಧಿಗಳಿಗೂ ಅನ್ವಯಿಸುತ್ತದೆ. ಬದುಕುವ ಹಕ್ಕು ಮನುಷ್ಯನ ಘನತೆಗೆ ಸಂಬಂಧಪಟ್ಟಿದ್ದು, ಆತನ ಸಹಜ ಬದುಕಿನ ಕೊನೆಯ ಕ್ಷಣದವರೆಗೂ ಅನ್ವಯಿಸುತ್ತದೆ. ಹೀಗಾಗಿ ಭಾರತದಲ್ಲಿ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕು ಇದು ಸಂವಿಧಾನ ಬಾಹೀರವಾದದ್ದು ಎಂಬ ವಾದಕ್ಕೂ ದಶಕಗಳ ಇತಿಹಾಸ ಇದೆ.
ಆದರೆ, 1980ರಲ್ಲಿ ಪಂಜಾಬಿನ ಬಚನ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಮರಣದಂಡನೆಯನ್ನು ಅತ್ಯಂತ ವಿರಳಾತಿವಿರಳ ಪ್ರಕರಣಗಳಲ್ಲಿ ಮಾತ್ರ ನೀಡಬೇಕು ಎಂದು ಅಭಿಪ್ರಾಯಪಟ್ಟಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಅತ್ಯಂತ ಗಂಭೀರವಾದ ಪ್ರಕರಣಗಳಲ್ಲಿ ಮಾತ್ರ ಗಲ್ಲು ಶಿಕ್ಷೆ ವಿಧಿಸಲಾಗುತ್ತಿದೆ.
ಭಾರತದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದವರ ಸಂಖ್ಯೆ ಎಷ್ಟು?
ಭಾರತದಲ್ಲಿ ಗಲ್ಲು ಶಿಕ್ಷೆ ಅವಶ್ಯಕತೆ ಇದೆಯೇ? ಇಲ್ಲವೇ? ಎಂಬ ವಾದ-ವಿವಾದಗಳ ನಡುವೆಯೂ ಸ್ವಾತಂತ್ರ್ಯಾ ನಂತರ ಈವರೆಗೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳ ಸಂಖ್ಯೆ ಕೇವಲ 52 ಮಾತ್ರ.
ಪೀಪಲ್ಸ್ ಫಾರ್ ಸಿವಿಲ್ ಲಿಬರೇಶನ್ ನಡೆಸಿರುವ ಸಂಶೋಧನೆಯ ಪ್ರಕಾರ ದೇಶದಲ್ಲಿ 1953 ರಿಂದ 1963ರ ಅವಧಿಯಲ್ಲಿ 1422 ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. 2018ರ ಡಿಸೆಂಬರ್ ವರೆಗೆ ಸುಮಾರು 371 ಜನರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆ. ಆದರೆ, 1991ರಿಂದ ಈವರೆಗೆ ಕಳೆದ 27 ವರ್ಷದಲ್ಲಿ ಗಲ್ಲು ಶಿಕ್ಷೆಗೆ ಒಳಗಾದವರ ಸಂಖ್ಯೆ ಮಾತ್ರ ಕೇವಲ 4.
2004ರಲ್ಲಿ ಅತ್ಯಾಚಾರ ಆಪರಾಧಿ ಧನಂಜಯ ಚಟರ್ಜಿ, 2012ರಲ್ಲಿ ಉಗ್ರ ಮಹಮ್ಮದ್ ಅಜ್ಮಲ್ ಅಮಿರ್ ಖಾನ್, 2013ರಲ್ಲಿ ಉಗ್ರ ಅಫ್ಜಲ್ ಗುರು, 2015ರಲ್ಲಿ ಉಗ್ರ ಹಾಗೂ 1993 ರ ಮುಂಬೈ ಸರಣಿ ಸ್ಪೋಟದ ರುವಾರಿ ಯಾಕೂಬ್ ಮೆನನ್ ನನ್ನು ಗಲ್ಲಿಗೆ ಏರಿಸಲಾಗಿತ್ತು.
ಇದೀಗ ನಿರ್ಭಯಾ ಪ್ರಕರಣದ ಆಪರಾಧಿಗಳನ್ನು ಗಲ್ಲಿಗೆ ಏರಿಸಿದರೆ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ನಾಲ್ಕು ಜನರನ್ನು ಒಟ್ಟಿಗೆ ಗಲ್ಲಿಗೇರಿಸಿದ ಅಪರೂಪದ ಘಟನೆ ಇದಾಗಲಿದೆ. ಅಲ್ಲದೆ, 2004ರ ನಂತರ ಅತ್ಯಾಚಾರ ಆರೋಪದ ಮೇಲೆ ಗಲ್ಲು ಶಿಕ್ಷೆಗೆ ಒಳಗಾದವರ ಪಟ್ಟಿಯಲ್ಲೂ ಇವರ ಹೆಸರು ದಾಖಲಾಗಲಿದೆ.
ಭಾರತದಲ್ಲಿ ಯಾವೆಲ್ಲಾ ಅಪರಾಧಕ್ಕೆ ಗಲ್ಲು?
ಭಾರತದಲ್ಲಿ ಗಲ್ಲು ಶಿಕ್ಷೆಯನ್ನು ಈಗಲೂ ಅನೇಕರು ವಿರೋಧಿಸುತ್ತಿದ್ದರೂ ಸಹ ಗಂಭೀರ ಅಪರಾಧಗಳಿಗೆ ಮಾತ್ರ ಗಲ್ಲು ಶಿಕ್ಷೆ ವಿಧಿಸುವ ಪರಿಪಾಠ ದೇಶದಲ್ಲಿ ಇದೆ.
ಭಾರತೀಯ ದಂಡ ಸಂಹಿತೆ 120 (ಬಿ)-ಗಂಭೀರ ಕ್ರಿಮಿನಲ್ ಅಪರಾಧ ಮತ್ತು ಕ್ರಿಮಿನಲ್ ಪಿತೂರಿ. ಸೆಕ್ಷನ್-132 ಸೈನ್ಯದಲ್ಲಿ ದಂಗೆ ಏಳಿಸುವುದು, ಸೆಕ್ಷನ್-121 ಭಾರತದ ವಿರುದ್ಧ ಯುದ್ಧ ಪಿತೂರಿ, ಸೆಕ್ಷನ್-194 ಓರ್ವ ವ್ಯಕ್ತಿಗೆ ಮರಣ ದಂಡನೆ ಪಡೆಯುವ ಸಲುವಾಗಿ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿ ಮಾಡುವುದು,
ಸೆಕ್ಷನ್-302, 303 ಕೊಲೆ ಆರೋಪ, ಸೆಕ್ಷನ್-305 ಅಪ್ರಾಪ್ತ ವಯಸ್ಕರ ಆತ್ಮಹತ್ಯೆಗೆ ಸಹಾಯ ಮಾಡುವುದು, ಸೆಕ್ಷನ್-364 (ಎ) ಸುಲಿಗೆ ಮತ್ತು ದಬ್ಬಾಳಿಕೆ ಕಾರಣಕ್ಕಾಗಿ ಅಪಹರಣ, ಸೆಕ್ಷನ್-31 (ಎ) ಮಾದಕ ವಸ್ತುಗಳ ಕಳ್ಳ ಸಾಗಾಟ, 376 (ಎಬಿ)-12 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುವುದು, ಸೆಕ್ಷನ್-396-ಐದು ಅಥವಾ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳ ಗುಂಪು ಘರ್ಷಣೆಯಲ್ಲಿ ಒಬ್ಬರು ಕೊಲೆ ಮಾಡಿದರೂ ಸಹ ಗುಂಪಿನ ಅಷ್ಟೂ ಜನ ಮರಣ ದಂಡನೆಗೆ ಹೊಣೆಗಾರರಾಗುತ್ತಾರೆ, 376-(ಎ) ಅತ್ಯಾಚಾರ ಮತ್ತು ಕೊಲೆ. ಈ ಮೇಲ್ಕಂಡ ಅಪರಾಧಗಳಿಗೆ ಮಾತ್ರ ಭಾರತದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗುತ್ತಿದೆ.
ಯಾವೆಲ್ಲಾ ದೇಶಗಳಲ್ಲಿ ಗಲ್ಲು ಶಿಕ್ಷೆ ನೀಡಲಾಗುತ್ತಿದೆ:
ಎರಡನೇ ಮಹಾಯುದ್ಧದ ನಂತರ ವಿಶ್ವದಾದ್ಯಂತ ಮರಣ ದಂಡನೆಯನ್ನು ನಿಷೇಧಿಸಬೇಕು ಎಂಬ ಕೂಗು ಕೇಳಿ ಬಂದಿತ್ತು. 1977ರಲ್ಲಿ ವಿಶ್ವದ 16 ರಾಷ್ಟ್ರಗಳು ಮರಣ ದಂಡನೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದವು, ಪ್ರಸ್ತುತ 95 ರಾಷ್ಟ್ರಗಳಲ್ಲಿ ಈ ಶಿಕ್ಷೆಯನ್ನೇ ರದ್ದು ಮಾಡಲಾಗಿದೆ. ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಪರಾಧಗಳಿಗಾಗಿ 9 ರಾಷ್ಟ್ರಗಳು ಈ ಶಿಕ್ಷೆಯನ್ನು ರದ್ದು ಮಾಡಿವೆ. 58 ರಾಷ್ಟ್ರಗಳು ಈ ಶಿಕ್ಷೆಯನ್ನು ಅನುಷ್ಠಾನಕ್ಕೆ ತಂದಿವೆ.
ಮರಣ ದಂಡನೆ ಕುರಿತು ಸಾರ್ವಜನಿಕ ಅಭಿಪ್ರಾಯವೇನು?:
ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಲ್ಯಾಟೀನ್ ಅಮೆರಿಕ ಮತ್ತು ಪಶ್ಚಿಮ ಯುರೋಪ್ಗಳಲ್ಲಿ ಮರಣ ದಂಡನೆಯು ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಜನಪ್ರಿಯವಲ್ಲ. ಆದರೆ, ಸಾಮೂಹಿಕ ಹತ್ಯಾಕಾಂಡ, ಭಯೋತ್ಪಾದನೆ, ಮಕ್ಕಳ ಹತ್ಯೆ ಮುಂತಾದ ಕೆಲವು ಪ್ರಕರಣಗಳು ಮರದಂಡನೆ ಮರುಸ್ಥಾಪನೆ ಕುರಿತ ಅಲೆ ಏಳುವಂತೆ ಮಾಡಿದೆ.
ಇಡೀ ವಿಶ್ವ ನಿರಂಕುಶ ಅಧಿಕಾರದಿಂದ ಪ್ರಜಾಪ್ರಭುತ್ವದ ಕಡೆಗೆ ಹೆಜ್ಜೆ ಹಾಕುತ್ತಿದ್ದ ಕಾಲದಲ್ಲಿ ಐರೋಪ್ಯ ಒಕ್ಕೂಟ ರಾಷ್ಟ್ರಗಳು ಒಂದು ಷರತ್ತು ಎಂಬಂತೆ ಮರಣ ದಂಡನೆಯನ್ನು ರದ್ದುಪಡಿಸಿತ್ತು. ಆದರೆ, ಅಮರಿಕ ಮಾತ್ರ ಇದಕ್ಕೆ ಇನ್ನೂ ಅಪವಾದವಾಗಿ ಉಳಿದಿದೆ. ಆದಗ್ಯೂ ಹಲವು ರಾಷ್ಟ್ರಗಳಲ್ಲಿ ಮರಣ ದಂಡಣೆಯನ್ನು ತೆಗೆದುಹಾಕಲಾಗಿತ್ತು. ಆದರೆ, ಬದಲಾದ ಕಾಲಘಟ್ಟದಲ್ಲಿ ಈ ಶಿಕ್ಷೆಯ ಅವಶ್ಯಕತೆಯ ಕೂಗು ಜನರ ನಡುವೆ ಮತ್ತೆ ಕೇಳಿ ಬರುತ್ತಿದೆ.
2000 ಇಸವಿಯಲ್ಲಿ ಗ್ಯಾಲಪ್ ಅಂತಾರಾಷ್ಟ್ರೀಯ ಸಮಿತಿ “ಮರಣ ದಂಡನೆ ಪರವಾಗಿ ವಿಶ್ವವ್ಯಾಪಿ ಜನ ಬೆಂಬಲ ವ್ಯಕ್ತವಾಗಿದೆ” ಎಂದು ವರದಿ ನೀಡಿತ್ತು. ಈ ವರದಿಯಲ್ಲಿ ಉಗ್ರ ರೂಪದ ಅಪರಾಧಕ್ಕೆ ಮರಣ ದಂಡನೆಯೇ ಸುಕ್ತ ಎಂದು ವಿಶ್ವದ ಶೇ. 52 ರಷ್ಟು ಜನ ಅಭಿಪ್ರಾಯಪಟ್ಟಿದ್ದರೆ, ಶೇ. 30 ರಷ್ಟು ಜನ ಮಾತ್ರ ಈ ರೀತಿಯ ಶಿಕ್ಷೆಯನ್ನು ವಿರೋಧಿಸಿದ್ದರು.
ಇನ್ನೂ ವಿಶ್ವಸಂಸ್ಥೆ ಪ್ರಧಾನ ಸಭೆಯ 62ನೇ ಅಧಿವೇಶನದಲ್ಲಿ ವಿಶ್ವ ಮಾನವ ಹಕ್ಕು ಆಯೋಗ ಮರಣ ದಂಡನೆಗೆ ಸಾರ್ವತ್ರಿಕ ನಿಷೇಧ ಹೇರಿ ನಿರ್ಣಯವೊಂದನ್ನು ಮಂಡಿಸಿತ್ತು. ಈ ನಿರ್ಣಯವನ್ನು ಎರಡು ಬಾರಿ ಮತಕ್ಕೆ ಹಾಕಲಾಯಿತಾದರೂ ಅನೇಕ ರಾಷ್ಟ್ರಗಳು ಇದನ್ನು ವಿರೋಧಿಸಿದ್ದವು.
ವಿಶ್ವಸಂಸ್ಥೆ ಈವರೆಗೆ ಎಷ್ಟೇ ಪ್ರಯತ್ನ ನಡೆಸಿದರೂ ಈವರೆಗೆ ವಿಶ್ವವ್ಯಾಪಿ ಮರಣ ದಂಡನೆಯನ್ನು ನಿಷೇಧಿಸಲು ಸಾಧ್ಯವಾಗಿಲ್ಲ ಎಂಬುದನ್ನು ಈ ನಿದರ್ಶನಗಳು ಸ್ಪಷ್ಟಪಡಿಸುತ್ತವೆ. ಅಲ್ಲದೆ, ಜನರ ಅಭಿಪ್ರಾಯವನ್ನೂ ಇದು ಪ್ರತಿಬಿಂಬಿಸುತ್ತಿವೆ. ಆದರೆ ಮತ್ತೊಂದು ಕಡೆ ಪ್ರಜಾಪ್ರಭುತ್ವ ವಾದಿಗಳು ಹಾಗೂ ಮಾನವ ಹಕ್ಕು ಹೋರಾಟಗಾರರು ಮರಣ ದಂಡನೆ ಅತ್ಯಂತ ಹೇಯ ಕೃತ್ಯ ಎಂದು ಟೀಕಿಸುತ್ತಲೇ ಇದ್ದಾರೆ.
ಒಟ್ಟಾರೆ ಮರಣ ದಂಡನೆ ಕುರಿತ ಪರ -ವಿರೋಧ ಚರ್ಚೆ ಕಳೆದ 70 ವರ್ಷಗಳಿಂದ ನಡೆಯುತ್ತಲೇ ಇದೆ. ಈ ಚರ್ಚೆಯ ನಡುವೆಯೇ ವರ್ಷಕ್ಕೆ ವಿಶ್ವದಾದ್ಯಂತ ಸುಮಾರು 1400ಕ್ಕೂ ಅಧಿಕ ಆರೋಪಿಗಳು ನೇಣು ಕುಣಿಕೆಗೆ ಅಥವಾ ಬಂದೂಕಿಗೆ ಬಲಿಯಾಗುತ್ತಲೇ ಇದ್ದಾರೆ ಎಂಬುದು ಮಾತ್ರ ವಾಸ್ತವ.