ಒಂದರ ಮೇಲೆ ಒಂದರಂತೆ ಸದಾ ಹಗರಣಗಳಿಂದ ಸುದ್ದಿಯಾಗುತ್ತಿರುವ ಬಿ ಎಸ್ ಯಡಿಯೂರಪ್ಪ ಸರ್ಕಾರದ ಅವ್ಯವಹಾರಗಳ ಪಟ್ಟಿಗೆ ಇನ್ನೊಂದು ಪ್ರಕರಣ ಸೇರ್ಪಡೆಯಾಗಿದೆ. ಅವ್ಯವಹಾರಗಳ ಕುರಿತಂತೆ ನಡೆಯಬೇಕಿದ್ದ ತನಿಖೆಗೆ ತಡೆ ನೀಡಿ ಆದೇಶ ನೀಡಿರುವ ಮಾಹಿತಿ ಇದೀಗ ʼಪ್ರತಿಧ್ವನಿʼಗೆ ಲಭ್ಯವಾಗಿದೆ.
ಹೇಮಾವತಿ ಎಡದಂಡೆ ನಾಲೆ ಆಧುನೀಕರಣ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತಂತೆ ನಡೆಯಬೇಕಿದ್ದ ತನಿಖೆಯ ಆದೇಶಕ್ಕೆ ಯಡಿಯೂರಪ್ಪ ಅವರ ಸರ್ಕಾರ ಅಧಿಕಾರ ವಹಿಸಿಕೊಂಡ 25 ದಿನಗಳೊಳಗಾಗಿಯೇ ತಡೆ ನೀಡಿ ಆದೇಶಿದೆ.
ದಿನಾಂಕ 08/11/2017 ರಲ್ಲಿ ಹೇಮಾವತಿ ಎಡದಂಡೆ ನಾಲೆ (ಸಾಹುಕಾರ್ ಚೆನ್ನಯ್ಯ ನಾಲೆ) ಆಧುನೀಕರಣಕ್ಕೆಂದು ಸುಮಾರು 809 ಕೋಟಿ ಮೊತ್ತದ ಯೋಜನೆಗೆ ಸರ್ಕಾರ ಅನುಮೋದನೆ ನೀಡಿ ಆದೇಶಿಸಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೆ, ಈ ನಾಲಾ ಅಭಿವೃದ್ಧಿ ಕಾಮಗಾರಿಯನ್ನು ಸುಮಾರು ಸಾವಿರ ಕೋಟಿ ವೆಚ್ಚದಲ್ಲಿ ಆಧುನೀಕರಣ ಮಾಡಿದ್ದು, ಈ ಕಾಮಗಾರಿಯಲ್ಲಿ ನೂರಾರು ಕೋಟಿಗಳ ಬೋಗಸ್ ಬಿಲ್ ಪಾವತಿ ಮಾಡಿ ಅವ್ಯವಹಾರ ಎಸಗಲಾಗಿದೆಯಂದು, ಗುತ್ತಿಗೆದಾರರಿಗೆ ಬೋಗಸ್ ಬಿಲ್ ಪಾವತಿ ಮಾಡಿ ಅವ್ಯವಹಾರ ನಡೆಸುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಗಳನ್ನು ಕೈಗೊಳ್ಳಬೇಕೆಂದು, ಈ ಕುರಿತು ಉನ್ನತ ತನಿಖಾ ಸಂಸ್ತೆಯಿಂದ ತನಿಖೆ ನಡೆಸುವಂತೆ ʼಹೇಮಾವತಿ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿʼ ಅಧ್ಯಕ್ಷ ಎಂ ಕೆ ಶೇಷೇಗೌಡ ಅವರು ಸರ್ಕಾರಕ್ಕೆ ಮನವಿ ಅರ್ಜಿ ಸಲ್ಲಿಸಿದ್ದರು.
ಅಲ್ಲದೆ, 2018 ರಲ್ಲಿ ಇದೇ ಕಾಮಗಾರಿಗಳಿಗೆ ಸಂಬಂಧಿಸಿದಂತೆ, ಮಾಜಿ ಸಚಿವ ಎ ಮಂಜು ಅವರು ಕೂಡಾ ಸರ್ಕಾರಕ್ಕೆ ಪತ್ರ ಬರೆದು ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಿ ಶಿಸ್ತುಕ್ರಮ ಕೈಗೊಳ್ಳುವಂತೆ ಹಾಗೂ ಗುತ್ತಿಗೆದಾರರಿಗೆ ಪಾವತಿ ಮಾಡಿರುವ ಹೆಚ್ಚಿನ ಮೊತ್ತವನ್ನು ಕಾನೂನಿನ ಪ್ರಕಾರ ಹಿಂಪಡೆಯುವಂತೆ ಒತ್ತಾಯಿಸಿದ್ದರು.
ನಾಲೆ ಅಭಿವೃದ್ಧಿ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಸತ್ಯಾಸತ್ಯತೆಯನ್ನು ಪತ್ತೆಹಚ್ಚಲು 2019 ರ ಜುಲೈ 9ರಂದು ಜಲಸಂಪನ್ಮೂಲ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎಸ್ ಜೆ ಚನ್ನಬಸಪ್ಪ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಮೂರು ತಿಂಗಳೊಳಗೆ ತನಿಖೆ ನಡೆಸಿ ತನಿಖಾ ವರದಿಯನ್ನು ಸಲ್ಲಿಸಲು ಸೂಚಿಸಿತ್ತು.
ಈ ಆದೇಶ ನೀಡುವ ವೇಳೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಮೈತ್ರಿ ಸರ್ಕಾರ ಆಡಳಿತವಿತ್ತು. ಬಳಿಕ, ಅಂದರೆ 2019ರ ಜುಲೈ 23 ರಂದು ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನಗೊಂಡಿತು. ಇದರ ನಂತರ ಅಧಿಕಾರ ಹಿಡಿದ ಬಿ ಎಸ್ ಯಡಿಯೂರಪ್ಪ ಸರ್ಕಾರ ಅಂದರೆ, ಜುಲೈ 26 ರಂದು ರಚನೆಯಾದ ಸರ್ಕಾರ ಆಗಸ್ಟ್ 13 ರಂದು ಈ ತನಿಖಾ ಆದೇಶವನ್ನು ತಡೆಹಿಡಿದಿದೆ. ಹೊಸ ಸರ್ಕಾರ ರಚನೆಯಾಗಿ 25 ದಿನಗೊಳಗೆ ತರಾತುರಿಯಲ್ಲಿ ತನಿಖೆಯನ್ನು ತಡೆಹಿಡಿದಿರುವುದು ಸಾಕಷ್ಟು ಗುಮಾನಿಗೆ ಕಾರಣವಾಗಿದೆ.
ಅವ್ಯವಹಾರ ನಡೆದಿದೆ ಎನ್ನಲಾದ ಕಾಮಗಾರಿಗೆ ಅನುಮೋದನೆ ನೀಡಿರುವುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಧಿಕಾರವಧಿಯಲ್ಲಿ. ಅವ್ಯವಹಾರದ ಕುರಿತು ತನಿಖೆಗೆ ಆದೇಶಿಸಿರುವುದು ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಅಧಿಕಾರವಧಿಯಲ್ಲಿ. ಹಾಗೂ ತನಿಖೆಗೆ ತಡೆ ನೀಡಿರುವುದು ಯಡಿಯೂರಪ್ಪ ಅವರ ಸರ್ಕಾರ!
ಸದಾ ಒಂದಿಲ್ಲೊಂದು ಹಗರಣಗಳ ಸುಳಿಯಲ್ಲಿ ಸಿಲುಕುತ್ತಿರುವ ಯಡಿಯೂರಪ್ಪ ಸರ್ಕಾರ, ಆಡಳಿತದಲ್ಲಿ ತೋರುತ್ತಿರುವ ತನ್ನ ಅಪಾರದರ್ಶಕ ನಿಲುವಿನಿಂದಾಗಿ ಮತ್ತೆ ಮತ್ತೆ ನಂಬಿಕೆ ಕಳೆದುಕೊಳ್ಳುತ್ತಿದೆ. ಕಾಮಗಾರಿ ಬಿಲ್ ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಯನ್ನು ತರಾತುರಿಯಲ್ಲಿ ಸ್ಥಗಿತಗೊಳಿಸಿದ ಕಾರಣವೇನು? ಇದರ ಹಿಂದೆ ಯಾರೆಲ್ಲಾ ಕೈವಾಡವಿದೆ? ಎನ್ನುವುದು ಬೆಳಕಿಗೆ ಬರಬೇಕಿದೆ. ಹೀಗೆ ತನಿಖೆಯೊಂದನ್ನು ಹಳ್ಳಹಿಡಿಸುವ ಸರ್ಕಾರದ ಪ್ರಯತ್ನ ಪ್ರತಿಪಕ್ಷಗಳ ಗಮನಕ್ಕೆ ಬಂದಿಲ್ಲವೇ? ಬಂದಿದ್ದರೆ ಯಾಕೆ ಸುಮ್ಮನಾಗಿವೆ? ಎನ್ನುವುದು ಕೂಡಾ ಪ್ರಶ್ನಾರ್ಹ.