• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ನಾಡಿಗೆ ಬೆಳಕು ಕೊಡಲು ಬದುಕು ಕೊಟ್ಟವರ ಕರುಣಾಜನಕ ಕಗ್ಗತ್ತಲ ಕಥೆ!

by
October 22, 2020
in ಕರ್ನಾಟಕ
0
ನಾಡಿಗೆ ಬೆಳಕು ಕೊಡಲು ಬದುಕು ಕೊಟ್ಟವರ ಕರುಣಾಜನಕ ಕಗ್ಗತ್ತಲ ಕಥೆ!
Share on WhatsAppShare on FacebookShare on Telegram

ಒಂದು ಕಡೆ ಒಂದು ಶಕ್ತಿ ದೇವತೆಯ ಹೆಸರಿನ ಟ್ರಸ್ಟ್ ದೇವಾಲಯ ಅಭಿವೃದ್ಧಿಯ ಹೆಸರಿನಲ್ಲಿ ಅಭಯಾರಣ್ಯದ ಎದೆ ಬಗೆದು ರಾಜಾರೋಷವಾಗಿ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ನೂರೆಂಟು ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತದೆ. ಮತ್ತೊಂದು ಕಡೆ ಅದೇ ಅಭಯಾರಣ್ಯ ಘೋಷಣೆಗೂ ಮುಂಚೆ ದಶಕಗಳಿಂದ ನೆಲೆಸಿರುವ ಕಾಡಿನ ಮಕ್ಕಳಿಗೆ ಮಣ್ಣಿನ ರಸ್ತೆ, ವಿದ್ಯುತ್, ಶಾಲೆ ಮುಂತಾದ ಕನಿಷ್ಟ ನಾಗರಿಕ ಸೌಲಭ್ಯ ಕಲ್ಪಿಸಲು ದಶಕಗಳಿಂದ ಕಾಯ್ದೆ-ಕಾನೂನುಗಳು ಶಾಪವಾಗಿ ಪರಿಣಮಿಸಿವೆ!

ADVERTISEMENT

ಹೌದು, ಇದು ಅಭಿವೃದ್ಧಿಯ ಹರಿಕಾರ ಎಂದೇ ಬಣ್ಣಿಸಲಾಗುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆಯ ಶರಾವತಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಸದ್ಯ ಸುದ್ದಿಯಲ್ಲಿರುವ ಎರಡು ವೈರುಧ್ಯಗಳ ವಿದ್ಯಮಾನ. ಒಂದು ಕಡೆ ಸಿಗಂದೂರು ದೇವಾಲಯದ ಆಡಳಿತ ಅಭಯಾರಣ್ಯದ ನಟ್ಟನಡುವಲ್ಲೇ ಎಲ್ಲಾ ಕಾಯ್ದೆ-ಕಾನೂನುಗಳನ್ನು ಗಾಳಿಗೆ ತೂರಿ ಹತ್ತಾರು ಕಟ್ಟಡ, ಪಾರ್ಕಿಂಗ್ ಮುಂತಾದ ಪರಿಸರ ಮಾರಕ ಚಟುವಟಿಕೆಗಳನ್ನು ಮುಂದುವರಿಸಿದೆ. ಕಾನೂನು ಕಾಯ್ದೆ ಜಾರಿ ಖಾತರಿಪಡಿಸಬೇಕಾದ ಸ್ವತಃ ಸರ್ಕಾರವೇ ವನ್ಯಜೀವಿ ಕಾಯ್ದೆ, ಅರಣ್ಯ ಕಾಯ್ದೆಗಳನ್ನು ಗಾಳಿಗೆ ತೂರಿ ವಿಸ್ತಾರ ಸಿಮೆಂಟ್ ರಸ್ತೆ, ಯಾತ್ರಿ ನಿವಾಸಗಳನ್ನು ನಿರ್ಮಿಸಿದೆ. ಅದೇ ಅಭಯಾರಣ್ಯದ ಮತ್ತೊಂದು ಬದಿಯಲ್ಲಿ ಬಹುತೇಕ ಶರಾವತಿ ನದಿ ಜಲವಿದ್ಯುತ್ ಯೋಜನೆಯ ಲಿಂಗನಮಕ್ಕಿ ಜಲಾಶಯದಿಂದ ಮುಳುಗಡೆಯಾಗಿ ಸರ್ಕಾರವೇ ತೋರಿಸಿದ ಜಾಗದಲ್ಲಿ ಕೃಷಿ ಆರಂಭಿಸಿ ಬದುಕು ಕಂಡುಕೊಂಡ ಜನರಿಗೆ ಯಾವ ನಾಗರಿಕ ಸೌಲಭ್ಯಗಳೂ ತಲುಪದಂತೆ ಇದೇ ವನ್ಯಜೀವಿ ಮತ್ತು ಅರಣ್ಯ ಕಾಯ್ದೆಗಳು ಅಡ್ಡಗಾಲಾಗಿರುವ ವೈಚಿತ್ರ್ಯ.

Also Read: ಸಿಗಂದೂರಿನಲ್ಲಿ ಭಾರೀ ಅಭಯಾರಣ್ಯ ಒತ್ತುವರಿಗೆ ಅರಣ್ಯ ಇಲಾಖೆಯ ಮೌನವೇ ಉತ್ತರ?

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್- ಕೋಗಾರ್ ರಸ್ತೆಯ ಭಾನುಕುಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಈ ಊರಗಳು ಈಗಲೂ ವಿದ್ಯುತ್‌, ರಸ್ತೆ, ಶಾಲೆ, ಶುದ್ಧ ಕುಡಿಯುವ ನೀರು ಮುಂತಾದ ಎಲ್ಲಾ ಬಗೆಯ ನಾಗರಿಕ ಸೌಲಭ್ಯಗಳಿಂದ ದೂರವೇ ಉಳಿದಿವೆ. ಗ್ರಾಮ ಪಂಚಾಯ್ತಿ ಕಚೇರಿಗೆ ತಲುಪಲು ಆ ಊರಿನ ಜನ ಕನಿಷ್ಠ 25 ಕೀ.ಮೀ ದೂರ ಬರಬೇಕು. ಅಲ್ಲಿನ ಯಾವುದೇ ಮಗು ಅಕ್ಷರ ಲೋಕದ ದಾರಿ ತುಳಿಯಬೇಕಾದರೆ, ಅಂಗನವಾಡಿಗೆ ತಲುಪಲು ಕೂಡ ಬರೋಬ್ಬರಿ 12 ಕಿ.ಮೀ ದೂರ ಕ್ರಮಿಸಬೇಕು. ಆ ಪೈಕಿ ಸುಮಾರು 10 ಕಿ.ಮೀ ದೂರದ ದಟ್ಟ ಕಾಡಿನ ನಡುವಿನ ದಾರಿ ಇಂದಿಗೂ ಗುಂಡಿ-ಗೊಟರುಗಳ, ಮರದ ಬೇರು-ಬೊಡ್ಡೆಗಳ ದುರ್ಗಮ ಕೊರಕಲು ಹಾದಿ. ಮಳೆಗಾಲದ ನಾಲ್ಕೈದು ತಿಂಗಳ ಕಾಲ ಜೀಪು ಹೊರತುಪಡಿಸಿ ಬೇರಾವುದೇ ನಾಲ್ಕು ಚಕ್ರದ ವಾಹನ ಹೋಗಲಾರದು. ಆ ದುರ್ಗಮ ದಾರಿಯಲ್ಲಿ ಬೈಕ್, ಸೈಕಲ್ಲನ್ನು ಕೂಡ ಸರ್ಕಸ್ ನಂತೆ ಅನುಭವಿಗಳು ಮಾತ್ರ ಓಡಿಸಲು ಸಾಧ್ಯ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಭಾನುಕುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಳಿಗಾರು ಗ್ರಾಮದಿಂದ ಒಳಗೆ ಕಾನೂರು ಕೋಟೆ ರಸ್ತೆಯಲ್ಲಿ ಹತ್ತು ಕಿ.ಮೀ ಸಾಗಿದರೆ, ಮುಂದೆ ಸುಮಾರು 12 ಕಿ.ಮೀ ದುರ್ಗಮ ಹಾದಿ ಸವೆಸಿದರೆ, ಅಲ್ಲಿ ಉರುಳುಗಲ್ಲು ಗ್ರಾಮ ವ್ಯಾಪ್ತಿಯ ಚೀಕನಹಳ್ಳಿ, ಸಾಲ್ಕೋಡ್ಲು, ಹೆಬ್ಬನಕೇರಿ, ಮೇಲೂರು, ದಾಸಮನೆ, ಮುಂಡುವಾಳ ಹಾಗೂ ಕಾನೂರು ಭಾಗದ ಕಲ್ಲಗಲ್ಲಿ, ತತ್ತಿ ಮತ್ತಿತರ ಕುಗ್ರಾಮಗಳು ಶತಮಾನಗಳ ಪಳೆಯುಳಿಕೆಯಂತೆ ಈಗಲೂ ಇವೆ. ಒಟ್ಟು ಸುಮಾರು 60 ಮನೆಗಳಿರುವ ಈ ಊರುಗಳಲ್ಲಿ ಸುಮಾರು 310 ಮಂದಿ ಜನಸಂಖ್ಯೆ ಇದ್ದು, ಬಹುತೇಕ ಎಲ್ಲರೂ ಹಿರೇಭಾಸ್ಕರ, ಲಿಂಗನಮಕ್ಕಿ ಹಾಗೂ ತಳಕಳಲೆ ಜಲಾಶಯಗಳಲ್ಲಿ ಮುಳುಗಡೆಯಾಗಿ ಆಸ್ತಿ-ಮನೆ ಕಳೆದುಕೊಂಡು ನಿರಾಶ್ರಿತರಾಗಿ ಬಂದು ನೆಲೆ ಕಂಡುಕೊಂಡವರೇ! ಕೆಲವರಂತೂ ಎರಡು, ಮೂರು ಬಾರಿ ನಿರಂತರವಾಗಿ ಮುಳುಗಡೆ ಸಂತ್ರಸ್ತರಾಗಿ, ಪೈಸೆ ಪರಿಹಾರವೂ ಇಲ್ಲದೆ ಬರೀಗೈಲಿ ಊರು ತೊರೆದು, ದುರ್ಗಮ ಕಾಡಿನ ನಡುವೆ ಬದುಕು ಕಂಡುಕೊಂಡವರು.

ಕೇವಲ ಒಂದು, ಎರಡು ಎಕರೆ ಜಮೀನನ್ನೇ ಜೀವನಾಧಾರವಾಗಿ ಹೊಂದಿರುವ ಬಹುತೇಕ ಕುಟುಂಬಗಳಿಗೆ ಕೃಷಿ ಹೊರತುಪಡಿಸಿ ಇತರ ಆದಾಯವೂ ಇಲ್ಲ. ಭಾರೀ ಮಳೆ ಸುರಿಯುವ ಈ ಪ್ರದೇಶದಲ್ಲಿ, ಮಳೆಗಾಲದ ನಾಲ್ಕೈದು ತಿಂಗಳು ಇಡೀ ಜನಸಮುದಾಯವೇ ಹೊರಜಗತ್ತಿನ ಸಂಪರ್ಕ ಕಡಿದುಕೊಳ್ಳುತ್ತದೆ. ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಗ್ರಾಮದ ಗಟ್ಟಿಮುಟ್ಟಾದ ಯುವಕರು ಬೈಕಿನ ಮೇಲೆ ಸಮೀಪದ ಗ್ರಾಮ ಪಂಚಾಯ್ತಿ ಕೇಂದ್ರವಿರುವ ಬಿಳಿಗಾರಿಗೆ ಹೋಗುತ್ತಾರೆ.

ಈ ಯಾವ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಇಲ್ಲ. ಇಡೀ ನಾಡಿಗೆ ಬೆಳಕು ನೀಡಿದ ವಿದ್ಯುತ್ ಯೋಜನೆಗಳಿಗಾಗಿ ಮತ್ತೆ-ಮತ್ತೆ ಸಂತ್ರಸ್ತರಾಗಿ ಬದುಕು ಕಳೆದುಕೊಂಡ ಈ ಜನರ ಬದುಕು ಐವತ್ತು ವರ್ಷಗಳ ಬಳಿಕ ಈಗಲೂ ಕತ್ತಲಲ್ಲೇ ಮುಳುಗಿದೆ. ವಿದ್ಯುತ್ ಮಾರ್ಗಕ್ಕೆ ಶರಾವತಿ ಅಭಯಾರಣ್ಯದ ಕಾನೂನು ಅಡ್ಡಿಯಾಗಿವೆ. ಅಭಯಾರಣ್ಯದ ನಡುವಿನ ಈ ಹಳ್ಳಿಗಳಿಗೆ ವಿದ್ಯುತ್ ಮತ್ತು ರಸ್ತೆ ಸಂಪರ್ಕಕ್ಕೆ ದಶಕಗಳಿಂದ ಇಲ್ಲಿನ ಜನ ಶತಪ್ರಯತ್ನ ನಡೆಸುತ್ತಿದ್ದರೂ, ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು, ಉನ್ನತ ಅರಣ್ಯಾಧಿಕಾರಿಗಳು ಸೇರಿದಂತೆ ಹತ್ತಾರು ಅಧಿಕಾರಸ್ಥರು, ಜನಪ್ರತಿನಿಧಿಗಳನ್ನು ಬೇಡಿಕೊಂಡರೂ, ಲೋಕಸಭೆ, ವಿಧಾನಸಭೆ ಚುನಾವಣೆಗಳನ್ನು ಬಹಿಷ್ಕರಿಸಿ ತಮ್ಮ ಬೇಡಿಕೆ ಮುಂದಿಟ್ಟಿದ್ದರೂ ಪ್ರಯೋಜನವಾಗಿಲ್ಲ.

ಇಲ್ಲಿನ ಜನರ ಒತ್ತಾಯ, ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಮೆಸ್ಕಾಂ ಈ ಹಳ್ಳಿಗೆ ನಾಲ್ಕು ವರ್ಷದ ಹಿಂದೆ ಸೋಲಾರ್ ವ್ಯವಸ್ಥೆ ಮಾಡಿತ್ತು. ಆದರೆ, ಕೇವಲ ಆರು ತಿಂಗಳಲ್ಲೇ ಬಹುತೇಕ ಸೋಲಾರ್ ಸಿಸ್ಟಂಗಳು ಹಾಳಾಗಿದ್ದು, ಮತ್ತೆ ಮೆಸ್ಕಾಂ ಆಗಲೀ, ಸೋಲಾರ್ ಅಳವಡಿಸಿದ ಗುತ್ತಿಗೆ ಸಂಸ್ಥೆಯಾಗಲೀ ದುರಸ್ತಿ ಅಥವಾ ಸಿಸ್ಟಂ ಬದಲಾವಣೆಯ ಬಗ್ಗೆ ಗಮನ ಹರಿಸಿಲ್ಲ. ಗ್ರಾಮದ ಕೆಲವರು ಸಾಲ ಮಾಡಿ ಸ್ವಂತ ಸೋಲಾರ್ ಹಾಕಿಸಿಕೊಂಡಿದ್ದರೂ, ಅಲ್ಲಿನ ಮಳೆ ಮತ್ತು ಮೋಡಕವಿದ ವಾತಾವರಣದ ಕಾರಣದಿಂದ ವರ್ಷದ ಆರು ತಿಂಗಳು ಅವು ಬೆಳಕು ನೀಡದ ಪರಿಸ್ಥಿತಿ ಇದೆ. ವಿದ್ಯುತ್ ಇರದ ಹಿನ್ನೆಲೆಯಲ್ಲಿ ಇಡೀ ಐದೂ ಊರಿನ ಬಹುತೇಕ ಮನೆಗಳಲ್ಲಿ ಟಿವಿ ಕೂಡ ಇಲ್ಲ. ಮೊಬೈಲ್ ಫೋನುಗಳಿದ್ದರೂ, ಅವುಗಳಿಗೂ ಪೇಟೆಗೆ ಹೋದಾಗ ಅಂಗಡಿ ಮುಂಗಟ್ಟುಗಳಲ್ಲಿ ಚಾರ್ಜು ಮಾಡಿಕೊಂಡು ಇಟ್ಟುಕೊಳ್ಳಬೇಕಾದ ಸ್ಥಿತಿ ಇದೆ.

ಇನ್ನು ಶಿಕ್ಷಣ ಮತ್ತು ಆರೋಗ್ಯ ಸೇವೆಯಂತೂ ಈ ಜನಗಳಿಗೆ ಗಗನಕುಸುಮ. ಸುಮಾರು 35-40 ಮಕ್ಕಳು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗೆ ಹೋಗುವ ವಯಸ್ಸಿನವರಿದ್ದರೂ, ಆ ಮಕ್ಕಳಿಗೆ ಕನಿಷ್ಠ 10 ಕಿ.ಮೀ. ಒಳಗೆ ಯಾವ ಶಾಲೆಯೂ ಇಲ್ಲ. ಮೂರೂವರೆ ವರ್ಷದ ಮಗುವೊಂದು ಜಗತ್ತಿನೆಲ್ಲೆಡೆ ಅಂಗನವಾಡಿಯ ಮೂಲಕ ಶಿಕ್ಷಣದ ಬೆಳಕಿಗೆ ಮುಖ ಮಾಡಿದರೆ, ಇಲ್ಲಿನ ಮಕ್ಕಳು ಅಂತಹ ಕನಿಷ್ಟ ಹಕ್ಕಿನಿಂದಲೂ ವಂಚಿತರು! ಒಂದನೇ ತರಗತಿಗೆ ಇಲ್ಲಿನ ಮಕ್ಕಳು 10 ಕಿ.ಮೀ ದೂರ, ಕಲ್ಲುಮುಳ್ಳಿನ ಕಾಡುದಾರಿಯಲ್ಲಿ ನಡೆದುಹೋಗಬೇಕು. ಎರಡು ಹೊಳೆಗಳನ್ನು ಕಾಲುಸಂಕದ ಮೇಲೆ ದಾಟಬೇಕು. ಇನ್ನು ಐದನೇ ತರಗತಿಗೆ ಹೋಗಲು 25 ಕಿ.ಮೀ ದೂರದ ಬಿಳಿಗಾರಿಗೇ ಹೋಗಬೇಕು. ಅದೂ ಎದೆನಡುಗಿಸುವ ದಟ್ಟ ಅರಣ್ಯದ ನಡುವಿನ ದುರ್ಗಮ ದಾರಿಯಲ್ಲಿ!

ಶಿಕ್ಷಣದ ಈ ಭೀಕರ ಸವಾಲಿನ ಕಾರಣಕ್ಕಾಗಿಯೇ ಇಲ್ಲಿನ ಬಹುತೇಕ ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಹಾಗೂ ಪಟ್ಟಣಗಳಲ್ಲಿ ಸಂಪರ್ಕವಿದ್ದವರು ಸಂಬಂಧಿಕರು, ಇಲ್ಲವೇ ವಿದ್ಯಾರ್ಥಿನಿಲಯಗಳಲ್ಲಿ ಮಕ್ಕಳನ್ನು ಬಿಟ್ಟಿದ್ದಾರೆ. ಅಂತಹ ಅದೃಷ್ಟವಂತರ ಸಂಖ್ಯೆ ಕೂಡ ತೀರಾ ವಿರಳ. ಚೀಕನಹಳ್ಳಿಯ ಆನಂದ ಎಂಬ ಪದವಿ ವಿದ್ಯಾರ್ಥಿಯ ಮಾತುಗಳಲ್ಲೇ ಹೇಳುವುದಾದರೆ, “ಕುಗ್ರಾಮದಲ್ಲಿ ಹುಟ್ಟಿದ ತಪ್ಪಿಗೆ ನಾವು ಶಿಕ್ಷಣದಿಂದಲೂ ವಂಚಿತರಾಗುತ್ತಿದ್ದೇವೆ. ನಾನು ಒಂದನೇ ತರಗತಿಯಿಂದಲೇ ಬಿಳಿಗಾರಿನ ನೆಂಟರ ಮನೆಯಲ್ಲಿದ್ದುಕೊಂಡು ಓದಿದವನು. ಈಗಲೂ ಸಾಗರದಲ್ಲಿ ಹಾಸ್ಟೆಲಿನಲ್ಲಿದ್ದು ಓದುತ್ತಿದ್ದೇನೆ. ಐದು ವರ್ಷದ ಮಗುವೊಂದು ತಂದೆತಾಯಿಯರಿಂದ ದೂರಾಗಿ ಯಾರದೋ ಮನೆಯಲ್ಲಿದ್ದು ಓದುವುದು ಎಂತಹ ಕಷ್ಟ ಎಂಬುದು ನನಗಷ್ಟೇ ಗೊತ್ತು”.

ಇನ್ನು ಯಾರಿಗಾದರೂ ದಿಢೀರ್ ಅನಾರೋಗ್ಯವಾದರೆ, ಮಳೆಗಾಲದಲ್ಲಂತೂ ಅವರನ್ನು ಕಂಬಳಿಜೋಲಿ ಕಟ್ಟಿಕೊಂಡೇ ಹೊತ್ತು ಕಾನೂರು ರಸ್ತೆಯವರೆಗೆ ಸಾಗಿಸಬೇಕು. ಅದರಲ್ಲೂ ತುರ್ತು ಚಿಕಿತ್ಸೆಯ ಅಗತ್ಯವಿದ್ದರೆ, 90 ಕಿ.ಮೀ ದೂರದ ಸಾಗರಪಟ್ಟಣಕ್ಕೇ ಹೋಗಬೇಕು!

“ನಮ್ಮ ತಂದೆಯರ ಕಾಲದಲ್ಲೇ ಲಿಂಗನಮಕ್ಕಿ ಜಲಾಶಯ ಯೋಜನೆಯ ಸಂತ್ರಸ್ತರಾಗಿ ನಾವು ಇಲ್ಲಿಗೆ ಬಂದಿದ್ದೇವೆ. ಈ ಊರಿನಲ್ಲಿ ಯಾವ ಸೌಲಭ್ಯಗಳೂ ಇಲ್ಲದೆ, ನಾವು ಒಂದು ರೀತಿಯಲ್ಲಿ ಬಯಲ ಬಂಧಿಖಾನೆಯಲ್ಲಿ ಜೀವನ ಕಳೆಯುತ್ತಿದ್ದೇವೆ. ನಮಗೆ ರಸ್ತೆ, ವಿದ್ಯುತ್, ಶಾಲೆ ಸೇರಿದಂತೆ ಎಲ್ಲಾ ಸೌಲಭ್ಯಕ್ಕೂ ಅಡ್ಡಗಾಲಾಗಿರುವುದೇ ಅಭಯಾರಣ್ಯ ಯೋಜನೆ. ಆದರೆ, ಈ ಅಭಯಾರಣ್ಯ ಘೋಷಣೆಯಾಗುವುದಕ್ಕೆ ಮುಂಚೆ 25-30 ವರ್ಷ ಹಿಂದೆಯೇ ನಾವಿಲ್ಲಿ ಸ್ವಂತ ಜಮೀನು-ಮನೆ ಮಾಡಿಕೊಂಡು ನೆಲೆಸಿದ್ದೆವು. ಹಾಗಿರುವಾಗ, ನಮ್ಮ ನಾಗರಿಕ ಹಕ್ಕುಗಳನ್ನು ತುಳಿದು ಇವರು ಪ್ರಾಣಿ-ಪಕ್ಷಿಗಳ ಹಕ್ಕನ್ನು ಸ್ಥಾಪಿಸುವುದು ಸರಿಯೇ?” ಎಂದು ತಮ್ಮ ಸಂಕಷ್ಟಗಳಿಗೆ ಸರ್ಕಾರದ ಅರಣ್ಯ ನೀತಿಗಳೇ ಕಾರಣ ಎಂದು ದೂರುತ್ತಾರೆ ಸಾಲ್ಕೋಡ್ಲು ನಾಗರಾಜ್.

1950ರ ದಶಕದ ಅಂತ್ಯದ ಸುಮಾರಿಗೆ ಲಿಂಗನಮಕ್ಕಿ ಜಲಾಶಯ ಪೂರ್ಣಗೊಳ್ಳುವ ಹೊತ್ತಿಗೆ ಈ ಉರುಳುಗಲ್ಲು ಗ್ರಾಮ ವ್ಯಾಪ್ತಿಯ ಹಳ್ಳಿಗಳ ನಿವಾಸಿಗಳು ಇಲ್ಲಿಗೆ ವಲಸೆ ಬಂದಿದ್ದಾರೆ. ಆದರೆ, ಶರಾವತಿ ಅಭಯಾರಣ್ಯ ಯೋಜನೆ ಘೋಷಣೆಯಾಗಿದ್ದು, 1974ರಲ್ಲಿ. ಅಭಯಾರಣ್ಯ ಘೋಷಣೆಗೂ ಮುನ್ನವೇ ದಶಕಗಳ ಕಾಲ ಅಲ್ಲಿ ವಾಸವಿದ್ದ ಜನಗಳ ಮೂಲ ಸೌಕರ್ಯದ ಹಕ್ಕನ್ನು ಅರಣ್ಯ ಕಾಯ್ದೆಗಳು ಕಿತ್ತುಕೊಳ್ಳುವುದು ಸರಿಯೇ ಎಂಬ ಅವರ ಪ್ರಶ್ನೆಯಲ್ಲಿ ನ್ಯಾಯವಿಲ್ಲದಿಲ್ಲ. ಜೊತೆಗೆ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಮತ್ತು ಅಭಯಾರಣ್ಯ ಕಾನೂನಿನಲ್ಲಿ ಹಾಲಿ ಇರುವ ರಸ್ತೆ ಮತ್ತಿತರ ನಾಗರಿಕ ಸೌಲಭ್ಯಗಳ ನಿರ್ವಹಣೆ ಮತ್ತು ದುರಸ್ತಿಗೆ ಅವಕಾಶವಿದ್ದರೂ, ಆ ಕಾರ್ಯಕ್ಕೂ ಕಾಯ್ದೆಯ ನೆಪದಲ್ಲಿ ಅಡ್ಡಿಪಡಿಸಲಾಗುತ್ತಿದೆ ಎಂಬ ಅಳಲು ತೋಡಿಕೊಂಡರು.

ಗ್ರಾಮದ ಮತ್ತೊಂದು ಸಮಸ್ಯೆಯ ಬಗ್ಗೆ ಹೇಳುವ, ಯೋಗರಾಜ್, “ನಾವು ಇಲ್ಲಿ ಅಕ್ಷರಶಃ ಕಾಡು ಮನುಷ್ಯರಂತೆ ಜೀವನ ನಡೆಸುತ್ತಿದ್ದೇವೆ. ಒಂದು ಪಡಿತರ ಧಾನ್ಯಕ್ಕಾಗಲೀ, ಅಕ್ಕಿಬೇಳೆಗಾಗಲೀ ನಾವು 20 ಕಿ.ಮೀ ದೂರ ಹೋಗಬೇಕು. ಅದೂ ನಮ್ಮೂರಿನ ಜನ ಮಳೆಗಾಳಿ, ಚಳಿಯ ನಡುವೆ ಗೊಂಡಾರಣ್ಯದಲ್ಲಿ ನಡೆದುಕೊಂಡು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕು. ಕರಡಿ, ಚಿರತೆ, ಹುಲಿ, ಕಾಡುಕೋಣಗಳ ದಾಳಿಯ ಭೀತಿಯಂತೂ ನಮಗೆ ವರ್ಷದ ಮುನ್ನೂರೈವತ್ತು ದಿನವೂ ತಪ್ಪದು. ಜನರ ಒತ್ತಾಯಕ್ಕೆ ಮಣಿದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮಗೆ ಕನಿಷ್ಟ ಸೌಕರ್ಯ ಕಲ್ಪಿಸಲು ಮನಸು ಮಾಡಿದರೂ ಕಾಯ್ದೆ-ಕಾನೂನು ತೊಡಕಾಗಿವೆ. ಹಾಗಾಗಿ ನಮ್ಮ ಗೋಳಿಗೆ ಕೊನೆಯೇ ಇಲ್ಲದಂತಾಗಿದೆ” ಎನ್ನುತ್ತಾರೆ.

“ಮಕ್ಕಳು ಮರಿಗೆ ಮೈಗೆ ಹುಷಾರಿಲ್ಲದಿದ್ದರೆ, ಎದ್ದುಬಿದ್ದು ಏನಾದ್ರೂ ಅನಾಹುತವಾದರೆ ತಕ್ಷಣಕ್ಕೆ ಆಸ್ಪತ್ರೆಯೋ, ಡಾಕ್ಟರ ಹತ್ರಾನೋ ಕರ್ಕೊಂಡು ಹೋಗಬೇಕು ಅಂದರೂ ಆಗೋದಿಲ್ಲ. ಇಲ್ಲಿಂದ ಕಾನೂನು ತನಕ ಅವರನ್ನು ಜೋಲಿ ಕಟ್ಟಿ ಹೊತ್ತುಕೊಂಡೇ ಹೋಗಬೇಕು. ಮಳೆಗಾಲದಲ್ಲಂತೂ ಜೀಪಿನವರೂ ಯಾರೂ ಬರೋದಿಲ್ಲ. 65-70 ವರ್ಷದ ಹಿಂದೆ ಡ್ಯಾಂ ಕಟ್ಟಿ ನಮ್ಮನ್ನು ಮುಳುಗಿಸಿದರು. ಈಗ ನಿತ್ಯವೂ ನಮ್ಮನ್ನು ಮುಳುಗಿಸ್ತಾನೇ ಇದಾರೆ” ಚೀಕನಹಳ್ಳಿಯ ಬೀರಮ್ಮನ ಮಾತುಗಳು ಜೊತೆಗೆ ಅವರ ಕಣ್ಣೀರೂ ಕೆನ್ನೆಯ ಮೇಲೆ ಬಸಿಯುತ್ತದೆ. ಪಟ್ಟ ಪಾಡಿನ ನೋವು ಮತ್ತು ಜಿಡ್ಡುಗಟ್ಟಿದ ವ್ಯವಸ್ಥೆಯ ವಿರುದ್ಧದ ಹತಾಶೆ ಆ ಕಣ್ಣೀರನ್ನು ಬಿಸಿಯೇರಿಸದೇ ಇರಲಿಲ್ಲ!

ಆದರೆ, ಅದೇ ಶರಾವತಿ ಅಭಯಾರಣ್ಯದ ಹೃದಯಭಾಗದಲ್ಲಿ ಶರಾವತಿ ಭೂ ಗತ ಜಲವಿದ್ಯುತ್ ಯೋಜನೆಗಾಗಿ ಬರೋಬ್ಬರಿ 800 ಎಕರೆಯಷ್ಟು ವಿಸ್ತಾರದ ದಟ್ಟ ಕಾಡಿನ ಕಣಿವೆಯನ್ನೇ ಬಲಿ ಕೊಡಲು ಸಿದ್ಧವಿರುವ ಆಡಳಿತಕ್ಕೆ ಇಂತಹ ನೋವುಂಡ ಜನರ ಅಳಲನ್ನು ಕೇಳುವ ಕಿವಿ ಮತ್ತು ಹೃದಯ ಇವೆಯೇ ಎಂಬುದು ಕಾಡುವ ಪ್ರಶ್ನೆ! ಹಾಗಾಗಿ, ಕಲ್ಲು-ಮುಳ್ಳು, ಬೇರು-ಗೊಟರುಗಳ ಜಾರು ದಾರಿಯ ಪಯಣದಲ್ಲಿ ಪಾದದ ಗೆರೆ ಸವೆದಂತೆಯೇ, ಉರುಳುಗಲ್ಲಿನ ಜನರ ಬದುಕು ಕೂಡ ಕಾಡಿನ ನಡುವೆ ಕರಗುತ್ತಿದೆ!

Tags: ಅರಣ್ಯಕಾಯ್ದೆಉರುಳುಗಲ್ಲುಚೀಕನಹಳ್ಳಿಬಿಳಿಗಾರುಭಾನುಕುಳಿವನ್ಯಜೀವಿ ಕಾಯ್ದೆಶರಾವತಿ ಅಭಯಾರಣ್ಯಶರಾವತಿ ಕಣಿವೆಶಿವಮೊಗ್ಗಸಾಗರಸಾಲ್ಕೋಡ್ಲು
Previous Post

ಕರ್ನಾಟಕ: 5872 ಹೊಸ ಕರೋನಾ ಪ್ರಕರಣಗಳು ಪತ್ತೆ

Next Post

ಬಿಹಾರ ಚುನಾವಣಾ ಕಣದಲ್ಲಿ ಬೀಸತೊಡಗಿದೆಯೇ ಬದಲಾವಣೆಯ ಗಾಳಿ?

Related Posts

Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
0

ಸ್ಯಾಂಡಲ್ವುಡ್ ನ ಭರವಸೆಯ ನಟ ಕಿರಣ್ ರಾಜ್ ಹುಟ್ಟು ಹಬ್ಬದಂದು ಸಿಕ್ಕಿತು ಮತ್ತೊಂದು ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ ಮತ್ತು ಉದ್ಯೋನ್ಮುಖ ನಟ ಕಿರಣ್ ರಾಜ್,...

Read moreDetails

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

July 5, 2025

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

July 5, 2025
Next Post
ಬಿಹಾರ ಚುನಾವಣಾ ಕಣದಲ್ಲಿ ಬೀಸತೊಡಗಿದೆಯೇ ಬದಲಾವಣೆಯ ಗಾಳಿ?

ಬಿಹಾರ ಚುನಾವಣಾ ಕಣದಲ್ಲಿ ಬೀಸತೊಡಗಿದೆಯೇ ಬದಲಾವಣೆಯ ಗಾಳಿ?

Please login to join discussion

Recent News

Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
Top Story

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada