ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೆಂಡಾಮಂಡಲಾಗಿದ್ದಾರೆ. ಪದೇ ಪದೇ ಕುಮಾರಸ್ವಾಮಿ ಅವರನ್ನು ಮಾತಿನಿಂದ ತಿವಿಯುತ್ತಿದ್ದ ಸಿದ್ದರಾಮಯ್ಯ ಅವರಿಗೆ ಹೆಚ್ಡಿಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ನನ್ನನ್ನು ಪದೇ ಪದೇ ಕೆಣಕಬೇಡಿ ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಜಾತಿ ಸಮೀಕ್ಷೆ ವರದಿ ಬಿಡುಗಡೆಗೆ ಕುಮಾರಸ್ವಾಮಿ ಅಡ್ಡಗಾಲು ಹಾಕಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, “ರಾಜಕೀಯ ತೆವಲಿಗೆ ಏನೋನೊ ಮಾತಾಡೋದು ಬೇಡಾ. ಸಿದ್ದರಾಮಯ್ಯಗೆ ನಿನ್ನೆ ರಾತ್ರಿ ಕನಸ್ಸು ಬಿತ್ತಂತಾ? ನನ್ನ ವಿರುದ್ದ ಟೀಕೆ ಮಾಡೋಕೆ ಬೇರೆ ವಿಚಾರಗಳು ಇಲ್ಲ. ಜನರನ್ನ ಮರಳು ಮಾಡೋಕೆ ಬತ್ತಳಿಕೆಯಲ್ಲಿ ಯಾವುದೇ ಅಸ್ತ್ರಗಳು ಇಲ್ಲ. ಪದೇ ಪದೇ ನನ್ನನ್ನ ಕೆಣಕಬೇಡಿ ಎಚ್ಚರಿಕೆ ಕೊಡ್ತಿದ್ದೇನೆ. ನನ್ನ ಬಗ್ಗೆ ಮಾತಾಡುವಾಗ ಎಚ್ಚರಿಕೆ ಇರಲಿ. ನಿಮ್ಮ ತೆವಲಿಗೆ ಜನರನ್ನು ನನ್ನ ವಿರುದ್ದ ಎತ್ತಿಕಟ್ಟಿದ್ದೀರಾ ಎಂಬುದು ಗೊತ್ತಿದೆ. ರಾಜಕೀಯದ ತೆವಲು ತೀರಿಸಿಕೊಳ್ಳಲು ಹೊರಟಿದ್ದೀರೀ. ಇದು ಬಹಳ ದಿನ ನಡೆಯೊಲ್ಲ,” ಎಂದು ಗುಡುಗಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಿದ್ದರಾಮಯ್ಯ ಹಳೆಯದನ್ನ ಮತ್ತೆ ಕೆದಕಿಕೊಂಡು ಹೊರಟಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಇದ್ದರು. ಒಂದೂ ದಿನವೂ ಸಮೀಕ್ಷೆ ವಿಚಾರ ಚರ್ಚೆ ಮಾಡಿಲ್ಲ. ಕ್ಯಾಬಿನೆಟ್ನಲ್ಲಿ ಕಾಂಗ್ರೆಸ್ನ 22 ಮಂತ್ರಿಗಳಿದ್ದರೂ ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಯಾಕೆ ಸುಳ್ಳು ಹೇಳ್ತಾರೆ. ಈಗ ಹಿಂದುಳಿದವರ ಬಗ್ಗೆ ಇವ್ರಿಗೆ ಪ್ರೀತಿ ಬಂದಿದೆ. ಅವತ್ತು ನಿಮಗೆ ಜವಾಬ್ದಾರಿ ಇರಲಿಲ್ಲವಾ? ಈಗ ಈಶ್ವರಪ್ಪನಿಗೆ ನಮೋ ನಮೋ ಅಂತಿದ್ದೀರಾ?, ಎಂದು ಅವರು ಹೇಳಿದ್ದಾರೆ.
Also Read: ಸಿದ್ದರಾಮಯ್ಯ ಶತಮಾನದ ಮಹಾ ಸುಳ್ಳುಗಾರ – ಹೆಚ್ ಡಿ ಕುಮಾರಸ್ವಾಮಿ
“ಸಿದ್ದರಾಮಯ್ಯಗೆ ನನ್ನ ಭಯ ಇದೆ. ಜನರಿಂದ ಮತ್ತೆ ಮೇಲೆ ಬರ್ತೀನಿ ಅನ್ನೊ ಸೂಚನೆ ಅವ್ರಿಗೆ ಇದೆ. ಈಗ ನನಗೆ ಹಿನ್ನಡೆ ಆಗಿರಬಹುದು. ಆದರೆ ಈ ರಾಜ್ಯದ ಜನ ಜಾತಿ-ಭೇದ ಮರೆತು ಮತ್ತೆ ಕುಮಾರಸ್ವಾಮಿ ಬೇಕು ಅನ್ನೊ ದಿನಗಳು ಬರುತ್ತವೆ. ಸಿದ್ದರಾಮಯ್ಯಗೆ ಬಿಜೆಪಿ ಕಣ್ಣಿಗೆ ಕಾಣ್ತಿಲ್ಲ. ಜೆಡಿಎಸ್ ಮಾತ್ರ ಕಾಣ್ತಿದೆ. ಅವರಿಗೆ ಜೆಡಿಎಸ್ ಮುಗಿಸಬೇಕು,” ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಪುತ್ರನ ವಿರುದ್ದವೂ ಕಿಡಿ:
ಶಿರಾ ವಿಧಾನಸಭಾ ಕ್ಷೇತ್ರವನ್ನೂ ಗೆಲ್ಲುವ ಹುಮ್ಮಸ್ಸಿನಿಂದ ಪ್ರಚಾರದಲ್ಲಿ ತೊಡಗಿರುವ ಸಿಎಂ ಪುತ್ರ ಬಿ ವೈ ವಿಜಯೇಂದ್ರ ಅವರ ವಿರುದ್ದವೂ ಗರಂ ಆಗಿದ್ದ ಕುಮಾರಸ್ವಾಮಿ ಅವರು, ಜನರಿಗೆ ಸಾರಾಯಿ ಕುಡಿಸಿ ರಸ್ತೆಯಲ್ಲಿ ಬೀಳುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
“ನಾಮಪತ್ರ ಸಲ್ಲಿಕೆ ವೇಳೆ ಯುವಕರಿಗೆ ಕುಡಿಸಿ, ರಸ್ತೆಯಲ್ಲೇ ಮಲಗಿಸಿದ್ದಾರೆ. ಪಾಪದ ಹಣ ತಗೊಂಡು ಹೋಗಿ ಶಿರಾದಲ್ಲಿ ಕುಳಿತಿದ್ದೀರಲ್ಲ, ಅದೇ ದುಡ್ಡನ್ನು ತಗೊಂಡು ಹೋಗಿ ನೆರೆಯಿಂದ ಪೀಡಿತರಾಗಿರಾಗಿ ಬೀದಿಯಲ್ಲಿ ಇರುವ ಜನರಿಗೆ ಕೊಡಬೇಕಿತ್ತು. ಅಲ್ಲಿ ಅವರ ಕಷ್ಟ ಸುಖ ಕೇಳಲು ಕನಿಷ್ಠ ಸೌಜನ್ಯಕ್ಕಾದ್ರು ಹೋಗಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ.
Also Read: ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವವರು ಬೀದಿಗಿಳಿದು ಪ್ರತಿಭಟಿಸಬೇಕು – ಸಿದ್ದರಾಮಯ್ಯ
ಉತ್ತರ ಕರ್ನಾಟಕದ ಜನರು ನನ್ನ ಕೈಬಿಟ್ಟರೂ ನಾನು ಅವರ ಕೈಬಿಟ್ಟಿಲ್ಲ. ನನ್ನ ಕೈಲಾದಷ್ಟು ಸಹಾಯವನ್ನು ಮಾಡುತ್ತಿದ್ದೇನೆ. ನೆರೆ ಪೀಡಿತ ಪ್ರದೇಶಗಳಿಗೆ ಅಗತ್ಯ ಸಾಮಾಗ್ರಿಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದೇನೆ. ಅವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇನೆ, ಎಂದು ಹೆಚ್ಡಿಕೆ ಹೇಳಿದ್ದಾರೆ.