ಕೇಂದ್ರದಿಂದ ಆರ್ಥಿಕ ಪ್ಯಾಕೇಜ್ ಘೋಷಣೆಯಾದ ಬಳಿಕ ಇದೀಗ ರಾಜ್ಯದಲ್ಲೂ ಕೂಡ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೆಲವೊಂದು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಮುಖ್ಯವಾಗಿ ಮೆಕ್ಕೆಜೋಳ ಬೆಳೆದ ರೈತರಿಗೆ ರೂ. 5,000 ಹಾಗೂ ಆಶಾಕಾರ್ಯಕರ್ತೆಯರಿಗೆ ರೂ. 3,000 ಪ್ರೋತ್ಸಾಹ ಧನ ನೀಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.
ಎಪಿಎಂಸಿ ನಿಯಮಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ತಂದ ಯಡಿಯೂರಪ್ಪ ರೈತರಿಗೆ ತೊಂದರೆಯಾಗುವಂತಹ ಯಾವ ತಿದ್ದುಪಡಿಯನ್ನು ತಂದಿಲ್ಲವೆಂದು ಸ್ಪಷ್ಟೀಕರಣ ನೀಡಿದ್ದಾರೆ. ಈ ತಿದ್ದುಪಡಿಯಿಂದಾಗಿ ಎಪಿಎಂಸಿಯ ಹೊರಗಡೆಯೂ ರೈತ ತನ್ನ ಬೆಳೆ ಮಾರಾಟ ಮಾಡುವ ಸ್ವಾತಂತ್ರ್ಯ ನೀಡಲಾಗಿದೆ. ರೈತ ಬೆಳೆದ ಬೆಳೆಯನ್ನು ಎಲ್ಲಿಯೂ ಮಾರಾಟಮಾಡುವಂತಹ ಹಕ್ಕು ರೈತನಿಗಿರಬೇಕು ಎಂದು ಸಿಎಂ ಯಡಿಯೂರಪ್ಪ ಪತ್ರಕರ್ತರೊಡನೆ ಹೇಳಿದ್ದಾರೆ.
ಮೆಕ್ಕೆ ಜೋಳ ಬೆಳೆದ 10 ಲಕ್ಷ ರೈತರಿಗೆ ತಲಾ ಐದು ಸಾವಿರ ರುಪಾಯಿ ಪರಿಹಾರ ನೀಡುವ ಯೋಜನೆಗೆ 500 ಕೋಟಿ ಮೀಸಲಿಡಲಾಗಿದೆ.ಕರೋನಾದ ವಿರುಧ್ಧ ಹೋರಾಟದಲ್ಲಿ ಮುಖ್ಯ ಭಾಗವಾದ 40 ಸಾವಿರ ಆಶಾ ಕಾರ್ಯಕರ್ತೆಯರಿಗೆ ರೂ 3,000 ದಂತೆ ನೆರವು ನೀಡಲು 12.5 ಕೋಟಿ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಗೃಹ ಕಚೇರಿ ಕೃಷ್ಣಾ ದಲ್ಲಿ ಸಭೆ ನಡೆಸಿದರು. ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಹಣಕಾಸು ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು