ಕಳೆದ 24 ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಲಕ್ಷಾಂತರ ರೈತರ ಅನಿರ್ದಿಷ್ಟ ಐತಿಹಾಸಿಕ ಹೋರಾಟ ಬೆಂಬಲಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ರೈತರ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ರೈತ -ಕಾರ್ಮಿಕ ಸಂಘ (RKS) ಕಾರ್ಯಕರ್ತರು ಭಾಗವಹಿಸಿದ್ದ ಶನಿವಾರದ ಧರಣಿಯನ್ನು ಸಮಾಜವಾದಿ ಚಿಂತಕ ಮೈಸೂರಿನ ಪ ಮಲ್ಲೇಶ್ ಉದ್ಘಾಟಿಸಿದ್ದಾರೆ.
ಜನ ಹಿತ ಇಲ್ಲದ ಕಾಯ್ದೆಗಳು ಸಾಲು ಸಾಲಾಗಿ ಜಾರಿಗೆ ಬರುತ್ತಿದ್ದು ಕೃಷಿಗೆ ಸಂಭಂಧಿಸಿದ ಮೂರು ಕಾಯ್ದೆಗಳಲ್ಲದೇ ನೂತನ ಶಿಕ್ಷಣ ಕಾಯ್ದೆ , ವಿದ್ಯುತ್ ಮಸೂದೆ,ಕಾರ್ಮಿಕ ಕಾಯ್ದೆ ಮುಂತಾದವುಗಳನ್ನು ಮೋದಿ ಸರ್ಕಾರ ಜಾರಿಗೆ ತಂದಿದೆ. ಇಂತಹ ಎಲ್ಲಾ ಜನ ವಿರೋಧಿ ಕ್ರಮಗಳನ್ನು ಬಲವಾಗಿ ಪ್ರತಿರೋಧಿಸಬೇಕೆಂದು ಪ ಮಲ್ಲೇಶ್ ಕರೆ ನೀಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ಬಿಜೆಪಿ ಹಾಗೂ ಆರ್ ಎಸ್ ಎಸ್ ತನ್ನ ಟ್ರೋಲ್ ಸೈನ್ಯ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ಬಳಸಿ ಅಪಪ್ರಚಾರ ನಡೆಸುತ್ತಿದೆ. ರಾಜ್ಯದ ಪ್ರತಿ ಮನೆ ಮನೆಗೂ ರೈತ ಹೋರಾಟದ ಬೇಡಿಕೆ ತಲುಪಬೇಕು. ಈ ಕಾಯ್ದೆಗಳ ಕುರಿತು ಸರಿಯಾದ ಮಾಹಿತಿ ಕೊಡಬೇಕು ಆಗ ಮಾತ್ರ ಇಂತಹ ಅಪಪ್ರಚಾರಗಳನ್ನು ಹಿಮ್ಮೆಟ್ಟಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಂತರ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ್ ರವರು ,ಇವತ್ತು ದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಸೃಷ್ಟಿಯಾಗಿದೆ.ಕೋವಿಡ್ ನಂತರ ಹೆಚ್ಚಾಗಿರುವ ನಿರುದ್ಯೋಗ ದಿಂದ ಯುವಜನ ದಾರಿ ತಪ್ಪುತ್ತಿದ್ದಾರೆ.ಎಲ್ಲಾ ರೀತಿಯ ವಸ್ತುಗಳ ಮತ್ತು ಸೇವೆಗಳ ಬೆಲೆ ತೀವ್ರ ಏರಿಕೆ ಕಂಡಿದೆ.ಕೋವಿಡ್ ನಾಶ ಮಾಡುವ ಹೆಸರಿನಲ್ಲಿ ಮೋದಿ ಸರ್ಕಾರ ಇಡೀ ಮನುಕುಲವನ್ನೇ ನಾಶಪಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ಧರಣಿಯ ನೇತೃತ್ವವನ್ನು ರೈತ ಕಾರ್ಮಿಕ ಸಂಘ ದ ರಾಜ್ಯ ಅಧ್ಯಕ್ಷರಾದ ಡಾ.ಸುನೀಲ್ ಕುಮಾರ್ ರಾಜ್ಯ ಕಾರ್ಯದರ್ಶಿ ದಿವಾಕರ್ ಐಕ್ಯ ಹೋರಾಟದ ಸಂಯೋಜಕ ಡಾ.ಪ್ರಕಾಶ್ ಕಮ್ಮರಡಿ ,ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಯು ಬಸವರಾಜು,ರಾಜ್ಯ ಸಮಿತಿ ಸದಸ್ಯ ಟಿ.ಯಶವಂತ, ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷ ಜಿ.ಟಿ.ರಾಮಸ್ವಾಮಿ, ಮುಖಂಡ ಗೋಪಾಲ್ ,ಕರ್ನಾಟಕ ಜನಶಕ್ತಿ ಸಂಘಟನೆಯ ಸಿರಿಮನೆ ನಾಗರಾಜ್, ಹಿಂದ್ ಮಜ್ದೂರ್ ಕಿಸಾನ್ ಪಂಚಾಯತ್ ರಾಜ್ಯ ಅಧ್ಯಕ್ಷ ಎಲ್ ಕಾಳಪ್ಪ ,ಟಿಯುಸಿಸಿ ನಾಯಕ ಅಣ್ಣಪ್ಪ ಸಮಾಜವಾದಿ ಸಭಾದ ಆಲಿಬಾಬಾ ಮುಂತಾದವರು ವಹಿಸಿದ್ದರು.