ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಕಾವು ಜೋರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ವಿಚಾರಣೆಗೆ ಖುದ್ದಾಗಿ ಹಾಜರಾಗಲು ನನಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದ ದರ್ಶನ್ ಅವರ ಅರ್ಜಿಯನ್ನು ಬೆಂಗಳೂರಿನ 59 ನೇ ಸಿಸಿಹೆಚ್ ನ್ಯಾಯಾಲಯ ತಿರಸ್ಕರಿಸಿದೆ. ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕು ಎಂದು ಸೂಚಿಸಿದೆ.
ಹಿರಿಯ ವಕೀಲ ಹಷ್ಮತ್ ಪಾಷಾ ಅವರು ದರ್ಶನ್ ಪರ ವಾದ ಮಂಡಿಸಿದ್ದರು. ಖುದ್ದು ಹಾಜರುಪಡಿಸಿದರೆ ಸಾಕ್ಷ್ಯ ವಿಚಾರಣೆ ವೇಳೆ ಸೂಚನೆ ಪಡೆಯಲು ಅನುಕೂಲವಾಗುತ್ತದೆ. ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಲು ಹೆಡ್ ಫೋನ್ ವ್ಯವಸ್ಥೆ ಇಲ್ಲ. ಹೀಗಾಗಿ ಖುದ್ದು ಹಾಜರಿಗೆ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ ಇದಕ್ಕೆ ಎಸ್ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು.

‘ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿಗೆ ಕಾನೂನಿನಲ್ಲೇ ಅವಕಾಶವಿದೆ. ದರ್ಶನ್ ಅವರನ್ನು ಖುದ್ದು ಹಾಜರುಪಡಿಸಿದರೆ ಕೋರ್ಟ್ ಕಲಾಪಕ್ಕೆ ಅಡ್ಡಿಯಾಗಬಹುದು. ಆದ್ದರಿಂದ ಖುದ್ದು ಹಾಜರಿ ಅಗತ್ಯವಿಲ್ಲ’ ಎಂದು ಪ್ರಸನ್ನ ಕುಮಾರ್ ವಾದ ಮಾಡಿದ್ದರು. ಜಡ್ಜ್ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಆದೇಶ ಕಾಯ್ದಿರಿಸಿದ್ದರು. ಇಂದು ಆದೇಶ ಪ್ರಕಟ ಆಗಿದ್ದು, ದರ್ಶನ್ ಅವರಿಗೆ ಹಿನ್ನಡೆಯಾಗಿದೆ.
ಆರೋಪಿಗಳು ತಮ್ಮ ವಕೀಲರೊಂದಿಗೆ ಮಾತನಾಡಲು ಖಾಸಗಿತನದ ವ್ಯವಸ್ಥೆ ಕಲ್ಪಿಸಲು ಕೋರ್ಟ್ ಸೂಚನೆ ನೀಡಿದೆ. ನಿಯಮ 8.3ರ ಅಡಿಯಲ್ಲಿ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ. ಸಾಕ್ಷ್ಯ ವಿಚಾರಣೆ ವೇಳೆ ಅಗತ್ಯವಾದಾಗ ಸಂಪರ್ಕದ ಅವಕಾಶ ನೀಡಬೇಕು. ಸಾಕ್ಷ್ಯ ವಿಚಾರಣೆ ಮುನ್ನ ಮತ್ತು ನಡುವೆ, ನಂತರ ಸಂಪರ್ಕ ಮಾಡಬಹುದು. ಸಾಕ್ಷಿಗಳ ಹೇಳಿಕೆಯನ್ನು ಸ್ಪಷ್ಟವಾಗಿ ಕೇಳುವಂತೆ ವ್ಯವಸ್ಥೆ ಕಲ್ಪಿಸಿ ಎಂದು ಸಿವಿಲ್ ಕೋರ್ಟ್ನ ತಾಂತ್ರಿಕ ವಿಭಾಗಕ್ಕೆ ಕೋರ್ಟ್ ಸೂಚನೆ ನೀಡಿದೆ.




