ಕೇರಳದಲ್ಲಿ ಪಕ್ಷಿ ಜ್ವರ (H5N8) ಹರಡಿರುವ ವರದಿ ಬಳಿಕ ಕರ್ನಾಟಕದ ಗಡಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಆರು ಕಾಗೆಗಳು ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. ಸಾವಿಗೆ ಕಾರಣವನ್ನು ಕಂಡುಹಿಡಿಯಲು ಅವುಗಳ ಮಾದರಿಗಳನ್ನು ಪರೀಕ್ಷೆಗಳಿಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಗುರುವಾರ ತಿಳಿಸಿದ್ದಾರೆ.
ಪಕ್ಷಿ ಜ್ವರ ತಡೆಗಟ್ಟಲು ಕೇರಳದೊಂದಿಗೆ ಗಡಿ ಹಂಚಿಕೊಳ್ಳುವ ಎಲ್ಲಾ ಜಿಲ್ಲೆಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ , ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಕಾಗೆಗಳು ಸಾವನ್ನಪ್ಪಿವೆ ಮತ್ತು ಅವುಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಗ್ಯ ಮತ್ತು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಪರೀಕ್ಷಾ ವರದಿಗಳನ್ನು ಪಡೆಯಲಿದ್ದಾರೆ ಎಂದು ಸುಧಾಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಆರೋಗ್ಯ ಮತ್ತು ಪಶುವೈದ್ಯಕೀಯ ಅಧಿಕಾರಿಗಳು ಕಟ್ಟುನಿಟ್ಟಿನ ಜಾಗರೂಕತೆಯನ್ನು ಕಾಯ್ದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
“ನಾವು ವರದಿಯನ್ನು ಪಡೆದ ನಂತರ, ಅದರ ಆಧಾರದ ಮೇಲೆ ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಚರ್ಚಿಸುತ್ತೇವೆ ಮತ್ತು ಮಾರ್ಗಸೂಚಿಗಳು ಮತ್ತು ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಜನರು ಚಿಂತಿಸಬೇಕಾಗಿಲ್ಲ ಆದರೆ ಎಚ್ಚರಿಕೆಯಿಂದಿರಬೇಕು” ಎಂದು ಅವರು ಹೇಳಿದ್ದಾರೆ.
ಸರಿಯಾಗಿ ಬೇಯಿಸಿದ ಮಾಂಸವನ್ನು ತಿನ್ನಲು ಮಾಂಸಾಹಾರಿಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ ಎಂದು ಸಚಿವರು ಹೇಳಿದ್ದಾರೆ. ಕರ್ನಾಟಕ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ಬುಧವಾರ ಎಲ್ಲಾ ಜಿಲ್ಲೆಗಳನ್ನು “ಹೆಚ್ಚಿನ ಎಚ್ಚರಿಕೆ” ಯಿಂದಿರಲಿ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದರು. ರಾಜ್ಯದಲ್ಲಿ ಇಲ್ಲಿಯವರೆಗೆ ಪಕ್ಷಿ ಜ್ವರ ಪ್ರಕರಣಗಳು ಅಧಿಕೃತವಾಗಿ ವರದಿಯಾಗಿಲ್ಲ.
ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಪಕ್ಷಿ ಜ್ವರ ವರದಿಯಾಗಿದ್ದು, ಬಾತುಕೋಳಿಗಳು ಮತ್ತು ಕೋಳಿ ಸೇರಿದಂತೆ 69,000 ಕ್ಕೂ ಹೆಚ್ಚು ಪಕ್ಷಿಗಳನ್ನು ಕೊಲ್ಲಲಾಗಿದೆ.