ಬ್ರೆಝಿಲ್‌ನಲ್ಲಿ ನಡೆದ ಹೊಸ ಸಂಶೋಧನೆಯು ಕರೋನಾ ವೈರಸ್ ಹಾಗೂ ಡೆಂಗ್ಯೂ ನಡುವಿನ ಸಂಬಂಧವೊಂದನ್ನು ಪತ್ತೆಹಚ್ಚಿದೆ. ಡೆಂಗ್ಯೂ ಹರಡುವಿಕೆಯ ದತ್ತಾಂಶವನ್ನು ಪ್ರಸ್ತುತ ಕರೋನಾ ಹರಡುವಿಕೆಯ ಅಂಕಿಅಂಶದೊಂದಿಗೆ ಸಮೀಕರಿಸಿ ವಿಶ್ಲೇಷಿದ ಸಂಶೋಧಕರು, ಡೆಂಗ್ಯೂ ಸೋಂಕು ತೀವ್ರವಾಗಿ ಹರಡಿದ ಪ್ರದೇಶಗಳಲ್ಲಿ ಕರೋನಾದ ನಿಧಾನಗತಿಯ ಹರಡುವಿಕೆ ಹಾಗೂ ಕಡಿಮೆ ಹರಡುವಿಕೆಯನ್ನು ಪತ್ತೆಹಚ್ಚಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಡೆಂಗ್ಯೂ ಸೋಂಕು ತಗುಲಿದವರಲ್ಲಿ ಉತ್ಪತ್ತಿಯಾದ ರೋಗನಿರೋಧಕ ಶಕ್ತಿಯು ಕರೋನಾದ ವಿರುದ್ಧ ಹೋರಾಡಲು ದೇಹವನ್ನು ತಯಾರಾಗಿಟ್ಟುಕೊಂಡಿದೆ ಎಂದು ಸಂಶೋಧಕರು ವಿಶ್ಲೇಷಿಸಿದ್ದಾರೆ.
ಡ್ಯೂಕ್ ವಿಶ್ವವಿದ್ಯಾಲಯದ (Duke University) ಪ್ರಾಧ್ಯಾಪಕ ಮಿಗುಯೆಲ್ ನಿಕೋಲೆಲಿಸ್ (Miguel Nicolelis) ನೇತೃತ್ವದಲ್ಲಿ ನಡೆದ ಅಧ್ಯಯನವನ್ನು ರಾಯಿಟರ್ಸ್‌ನೊಂದಿಗೆ (Reuters) ಹಂಚಿಕೊಂಡಿದ್ದು, ಸಂಶೋಧನೆಯು ಕರೋನವೈರಸ್ ಪ್ರಕರಣಗಳ ಭೌಗೋಳಿಕ ವಿತರಣೆಯನ್ನು 2019, 2020 ರ ಡೆಂಗ್ಯೂ ಹರಡುವಿಕೆಯೊಂದಿಗೆ ಹೋಲಿಸಿದೆ.
ಕಡಿಮೆ ಪ್ರಮಾಣದಲ್ಲಿ ಕರೋನಾ ಸೋಂಕಿಗೆ ತುತ್ತಾದ ಪ್ರದೇಶಗಳಲ್ಲಿ ಈ ವರ್ಷ ಅಥವಾ ಈ ಹಿಂದೆ ಡೆಂಗ್ಯೂ ತೀವ್ರವಾಗಿ ಹರಡಿತ್ತು ಎಂಬುದನ್ನು ನಿಕೋಲೆಲಿಸ್ ಗಮನಿಸಿದ್ದಾರೆ.
ಈ ಗಮನಾರ್ಹ ಸಂಶೋಧನೆಯು ಡೆಂಗ್ಯೂನ ಪ್ರತಿಕಾಯಗಳು ಕರೋನಾ ವೈರಸ್‌ನ್ನು ತಡೆಗಟ್ಟಬಲ್ಲದು ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ. ಒಂದು ವೇಳೆ, ಇದು ಸರಿ ಎಂದು ಸಾಬೀತಾದರೆ ಡೆಂಗ್ಯೂ ವ್ಯಾಕ್ಸಿನ್ ಕರೋನಾದ ವಿರುದ್ಧ ಹೋರಾಡಲು ಸಾಕಷ್ಟು ಮಟ್ಟಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲದು ಎಂದು ಅಧ್ಯಯನಕಾರರು ನಂಬುತ್ತಾರೆ.
ಸಂಶೋಧನೆಯು, ಎರಡು ಪ್ರತ್ಯೇಕ ವೈರಸ್‌ಗಳ ನಡುವೆ ರೋಗನಿರೋಧಕ ಸಂವಹನವಿದೆಯೆಂದು ಸೂಚಿಸುತ್ತದೆ. ಅದಾಗ್ಯೂ, ಡೆಂಗ್ಯೂ ಹಾಗೂ ಕರೋನಾ ಒಂದಕ್ಕೊಂದು ಸಂಬಂಧವಿಲ್ಲದ ವೈರಾಣು ಆಗಿರುವುದರಿಂದ ಇದರ ನಡುವಿನ ಸಂಪರ್ಕವನ್ನು ಸಾಬೀತುಪಡಿಸಲು ಇನ್ನಷ್ಟು ಆಳವಾದ ಅಧ್ಯಯನವು ಬೇಕೆಂದು ನಿಕೋಲೆಲಿಸ್ ರಾಯಿಟರ್ಸ್ ಸಂಸ್ಥೆಗೆ ಹೇಳಿದ್ದಾರೆ.
ತಮ್ಮ ಸಂಶೋಧನೆಯ ಫಲಿತಾಂಶಕ್ಕೆ ಪೂರಕವೆನಿಸುವ ಮಾಹಿತಿಯನ್ನು ಹಂಚಿದ ನಿಕೋಲೆಲಿಸ್, ಕಳೆದ ಹಾಗೂ ಈ ವರ್ಷ ವ್ಯಾಪಕವಾಗಿ ಡೆಂಗ್ಯೂಗೆ ತುತ್ತಾದ ಬ್ರೆಝಿಲ್ ನ ಪರಾನಾ, ಸಾಂತಾ ಕ್ಯಾಟರೀನಾ, ರಿಯೊ ಗ್ರಾಂಡೆ ಡೊ ಸುಲ್, ಮ್ಯಾಟೊ ಗ್ರೊಸೊ ಡೊ ಸುಲ್ ಮತ್ತು ಮಿನಾಸ್ ಗೆರೈಸ್ ಮುಂತಾದ ರಾಜ್ಯಗಳಲ್ಲಿ ಕರೋನಾ ಸೋಂಕು ಸಾಮುದಾಯಿಕ ಹರಡಲು ಸಾಕಷ್ಟು ಕಾಲಾವಕಾಶ ತೆಗೆದುಕೊಂಡಿದೆ. ಹಾಗೂ ಡೆಂಗ್ಯೂ ಸೋಂಕಿನ ಪ್ರಮಾಣ ಕಡಿಮೆಯಿದ್ದ ಅಮಾಪೆ, ಮರನ್ಹಾವೊ ಮತ್ತು ಪಾರೆಯಂತಹ ರಾಜ್ಯಗಳಲ್ಲಿ ಕರೋನಾ ತೀವ್ರವಾಗಿ ಹಾಗೂ ವೇಗವಾಗಿ ಹರಡಿಕೊಂಡಿದೆ ಎಂದು ತಿಳಿಸಿದ್ದಾರೆ.
ನಿಕೋಲೆಲಿಸ್ ಪ್ರಕಾರ, ಕೋವಿಡ್‌ನೊಂದಿಗೆ ಕರೋನಾದ ಸಂಬಂಧವು ಅಚಾನಕ್ಕಾಗಿ ಆವಿಷ್ಕಾರಕ್ಕೊಳಪಟ್ಟಿದೆ. ಬ್ರೆಝಿಲ್‌ನಲ್ಲಿ ಕೋವಿಡ್ ಹರಡುವಿಕೆ ಗಮನದಲ್ಲಿಟ್ಟು ನಡೆಸಿದ ಸಂಶೋಧನೆಯು ಈ ಫಲಿತಾಂಶಕ್ಕೆ ನಮ್ಮನ್ನು ತಂದಿದೆ ಎಂದಿದ್ದಾರೆ. ಅದಾಗ್ಯೂ, ಬ್ರೆಝಿಲ್‌ನಲ್ಲಿ ಕೋವಿಡ್ ಹರಡಲು ʼಅಂತರಾಜ್ಯ ಹೆದ್ದಾರಿಗಳುʼ ಪ್ರಮುಖ ಪಾತ್ರ ವಹಿಸಿವೆ ಎಂದು ಕಂಡುಕೊಂಡಿದ್ದಾರೆ.
ನಕಾಶೆಯಲ್ಲಿ ಕೆಲವು ʼಕರೊನಾ ಪ್ರಕರಣವಿಲ್ಲದʼ ತಾಣಗಳನ್ನು ಗುರುತಿಸಿದ ನಂತರ, ತಂಡವು ಸಂಭವನೀಯ ವಿವರಣೆಗಳನ್ನು ಹುಡುಕುತ್ತಾ ಹೋಯಿತು. ತಂಡವು ಡೆಂಗ್ಯೂ ಹರಡುವಿಕೆಯನ್ನು ಕರೋನವೈರಸ್‌ನೊಂದಿಗೆ ಹೋಲಿಸಿದಾಗ ಸಂಶೋಧನೆಯಲ್ಲಿ ಒಂದು ಪ್ರಗತಿ ಕಂಡು ಬಂದಿತು. ಇದು ಅಕಸ್ಮಾತಾಗಿ ಕಂಡುಬಂದ ಆಶ್ಚರ್ಯಕಾರಿ ಸಂಗತಿಯಾಗಿತ್ತು ಎಂದು ಅವರು ತಿಳಿಸಿದ್ದಾರೆ.