ಕೊಡಗಿನಲ್ಲಿ ಕಳೆದ ವರ್ಷ ಸಂಭವಿಸಿದ ಭೀಕರ ಭೂ ಕುಸಿತ ಹಾಗೂ ಮಳೆಯ ಕಾರಣದಿಂದ ಸಾವಿರಾರು ಜನರು ಸಂತ್ರಸ್ತರಾದರು. ರಾಜ್ಯ ಸರ್ಕಾರವೂ ಸಂತ್ರಸ್ತರಿಗೆ ಮನೆಗಳ ನಿರ್ಮಾಣ ಮಾಡಿಕೊಡಲು ಕೊಡಗು ಪುನರ್ನಿರ್ಮಾಣ ಪ್ರಾಧಿಕಾರವನ್ನೂ ರಚಿಸಿತು. ಸ್ವತಃ ಮುಖ್ಯಮಂತ್ರಿಗಳೇ ಇದರ ಅಧ್ಯಕ್ಷರಾಗಿದ್ದು ಜಿಲ್ಲೆಯ ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಕೆ ಜಿ ಬೋಪಯ್ಯ ಇದರ ಸದಸ್ಯರೂ ಆಗಿದ್ದಾರೆ. ಅದರೆ, ಇದುವರೆಗೂ ಮನೆಗಳ ಹಸ್ತಾಂತರ ಮಾತ್ರ ಆಗಿಲ್ಲ.
ಜಿಲ್ಲೆಯಲ್ಲಿ ಕಳೆದ ವರ್ಷದ ಮಳೆಗೆ ಒಟ್ಟು 842 ಸಂತ್ರಸ್ತರನ್ನು ಗುರುತಿಸಲಾಗಿದ್ದು, ನಂತರ ಪುನಃ ಸಂತ್ರಸ್ತರ ಪಟ್ಟಿಯನ್ನು ಪರಿಷ್ಕರಿಸಲಾಯಿತು. ಕೆಲವು ಗುಡ್ಡಗಳಲ್ಲಿ ಮನೆ ಕಟ್ಟಿಕೊಂಡು ಇರುವವರನ್ನು ಅಪಾಯಕಾರಿಯಾದ ಕಾರಣ ಜಿಲ್ಲಾಡಳಿತ ಅವರಿಗೆ ಮನೆ ತೆರವು ಮಾಡುವಂತೆ ಸೂಚಿಸಿ ಸಂತ್ರಸ್ತರ ಸಂಖ್ಯೆಯನ್ನೂ 925 ಕ್ಕೆ ಏರಿಸಲಾಗಿದೆ. ಸಂತ್ರಸ್ತರಿಗೆ ತಲಾ 9.45 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಉತ್ತಮ ಮನೆಗಳನ್ನು ಕಟ್ಟಿ ಕೊಡಲು ತೀರ್ಮಾನಿಸಿ ನಿರ್ಮಾಣ ಕಾರ್ಯವೂ ಭರದಿಂದ ಸಾಗುತ್ತಿದೆ. ಈಗ ಮಡಿಕೇರಿ ತಾಲ್ಲೂಕಿನ ಬಿಳಿಗೇರಿ, ಮದೆ, ಗಾಳಿಬೀಡು , ಕರ್ಣಂಗೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದಲ್ಲಿ 580 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ಸುಮಾರು 150 ರಷ್ಟು ಮನೆಗಳು ಪೂರ್ಣಗೊಂಡಿದ್ದು, ಇದನ್ನು ಸಂತ್ರಸ್ತರಿಗೆ ಹಸ್ತಾಂತರಿಸಲು ಸ್ವತಃ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರೇ ಹಿಂದೇಟು ಹಾಕುತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏಕೆ ಹಿಂದೇಟು ?
ಹಿಂದೆ ಇದ್ದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೊಡಗಿನಲ್ಲಿ ಮಾತ್ರ ಭೂ ಕುಸಿತ ಸಂಭವಿಸಿದ್ದು, ಬೇರೆ ಯಾವ ಜಿಲ್ಲೆಯಲ್ಲೂ ಅಷ್ಟು ಪ್ರಮಾಣದ ಹಾನಿ ಆಗಿರಲಿಲ್ಲ. ಜನತೆಯ ಕರೆಗೆ ಓಗೊಟ್ಟು ಸಹಸ್ರಾರು ಜನರು, ಹತ್ತಾರು ಕಂಪೆನಿಗಳು ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಿಕೊಡಲು ಸರ್ಕಾರದೊಂದಿಗೆ ಕೈ ಜೋಡಿಸಲು ಮುಂದೆ ಬಂದವು. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹರಿದು ಬಂದ ನೆರವಿನ ಮೊತ್ತ 50 ಕೋಟಿ ರೂಪಾಯಿಗಳಿಗೂ ಅಧಿಕ ಎನ್ನಲಾಗಿದೆ. ಅಲ್ಲದೆ ಐಟಿ ದಿಗ್ಗಜ ಇನ್ಫೋಸಿಸ್ಪ್ರತಿಷ್ಠಾನ 25 ಕೋಟಿ ರೂಪಾಯಿಗಳ ನೆರವಿನಲ್ಲಿ ಮನೆಗಳ ನಿರ್ಮಾಣಕ್ಕೆ ಮುಂದಾಗಿದೆ. ಹೀಗಾಗಿ ಅಂದಿನ ಸರ್ಕಾರ ಪ್ರತಿಯೊಬ್ಬ ಫಲಾನುಭವಿಗೂ 9.45 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡಲು ನೀಲ ನಕ್ಷೆ ರೂಪಿಸಿತು.
ಆದರೆ ಈಗಿನ ಪರಿಸ್ಥಿತಿ ಬೇರೆಯೇ ಇದೆ. ಈ ವರ್ಷ ರಾಜ್ಯದ 12 ಜಿಲ್ಲೆಗಳಲ್ಲಿ ಮಳೆ ಆರ್ಭಟಕ್ಕೆ ಎರಡು ಲಕ್ಷಕ್ಕೂ ಅಧಿಕ ಮನೆಗಳು ಹಾನಿಗೀಡಾಗಿವೆ. ಜತೆಗೇ ಚಿಕ್ಕಮಗಳೂರು ಜಿಲ್ಲೆಯಲ್ಲೂ ಭೂ ಕುಸಿತ ಸಂಭವಿಸಿದೆ. ರಾಜ್ಯ ಸರ್ಕಾರವೇ ಕೇಂದ್ರಕ್ಕೆ ಕಳುಹಿಸಿರುವ ಪ್ರಸ್ತಾವನೆಯ ಪ್ರಕಾರ ರಾಜ್ಯದಲ್ಲಿ ಒಟ್ಟು 2.5 ಲಕ್ಷ ಮನೆಗಳು ಪೂರ್ಣ ಹಾನಿಗೀಡಾಗಿವೆ. ಬರೇ ಇಷ್ಟೇ ಅಲ್ಲ ಕಳೆದ ಆಗಸ್ಟ್ ನಲ್ಲಿ ಮತ್ತೆ ಭೂ ಕುಸಿತ ಹಾಗೂ ಮಳೆಯಿಂದ ಕೊಡಗಿನಲ್ಲಿ 1000 ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಹೀಗಿರುವಾಗ ಕೊಡಗಿನಲ್ಲಿ 9.45 ಲಕ್ಷ ರೂಪಾಯಿಗಳ ಅಚ್ಚುಕಟ್ಟಾದ ಮನೆ ನಿರ್ಮಿಸಿಕೊಟ್ಟು ಬೇರೆ ಜಿಲ್ಲೆಗಳಲ್ಲಿ ಕಡಿಮೆ ಹಣದಲ್ಲಿ ನಿರ್ಮಾಣ ಮಾಡಿಕೊಡಲು ಆಗುವುದಿಲ್ಲ.
ಕೊಡಗಿನಲ್ಲೇ ಅಪಾಯಕಾರಿ ಸ್ಥಳದಲ್ಲಿ ಮನೆ ಕಟ್ಟಿಕೊಂಡಿರುವವರೂ ಸೇರಿದಂತೆ ಈ ವರ್ಷವೇ ಸಂತ್ರಸ್ತರ ಸಂಖ್ಯೆ ಎರಡು ಸಾವಿರ ದಾಟಲಿದೆ. ಇವರೆಲ್ಲರೂ ಸರ್ಕಾರ ಮನೆ ಕಟ್ಟಿಸಿಕೊಡುವುದನ್ನೇ ಕಾಯುತ್ತಿದ್ದಾರೆ. ಆದರೆ, ಎಲ್ಲ ಸಂತ್ರಸ್ತರಿಗೂ ಮನೆ ಕಟ್ಟಿಸಿಕೊಡುವುದಕ್ಕೆ ಸರ್ಕಾರದ ಬಳಿ ಜಾಗವಾದರೂ ಎಲ್ಲಿದೆ ? ಇದ್ದ ಪೈಸಾರಿ ಭೂಮಿಯನ್ನೆಲ್ಲ ಉಳ್ಳವರು ಒತ್ತುವರಿ ಮಾಡಿಕೊಂಡು ದಶಕಗಳೇ ಉರುಳಿವೆ.
ಸರ್ಕಾರ ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಸಂಪೂರ್ಣ ಮನೆ ಕಳೆದುಕೊಂಡವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ, ಭಾಗಶಃ ಹಾನಿಗೀಡಾದವರಿಗೆ ತಲಾ ಒಂದು ಲಕ್ಷ ರೂಪಾಯಿ ಹಾಗೂ ಅಲ್ಪ ಹಾನಿಗೀಡಾದವರಿಗೆ ತಲಾ 25 ಸಾವಿರ ರೂಪಾಯಿ ಕೊಡಲು ಯೋಜನೆ ಹಾಕಿಕೊಂಡಿದೆ ಎಂದು ರಾಜೀವ್ ವಸತಿ ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು. ಅಲ್ಲದೆ ಕಳೆದ ವರ್ಷದ 462 ಸಂತ್ರಸ್ತ ಕುಟುಂಬಗಳಿಗೆ ತಿಂಗಳಿಗೆ ತಲಾ 10 ಸಾವಿರ ರೂಪಾಯಿಗಳಂತೆ 10 ತಿಂಗಳಿಗೆ ಬಾಡಿಗೆ ನೀಡಿದ್ದು ಕಳೆದ ಆಗಸ್ಟ್ ವರೆಗೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ. ಮನೆ ಅಪಾಯದಲ್ಲಿರುವ 443 ಕುಟುಂಬಗಳಿಗೂ 4 ತಿಂಗಳಿಗೆ ತಲಾ 10 ಸಾವಿರದಂತೆ, ಮನೆಗಳ ಸ್ಥಳಾಂತರ ಮಾಡಿದ 207 ಕುಟುಂಬಗಳಿಗೆ ತಲಾ 10 ಸಾವಿರದಂತೆ ಮೂರು ತಿಂಗಳ ಬಾಡಿಗೆ ಹಣವನ್ನು ನೀಡಲಾಗಿದೆ. ಸೆಪ್ಟೆಂಬರ್ ನಿಂದ ಯಾರಿಗೂ ಕೂಡ ಬಾಡಿಗೆ ಹಣವನ್ನು ನೀಡಲಾಗಿಲ್ಲ. ಅಲ್ಲದೆ ಕೇಂದ್ರ ಸರ್ಕಾರದಿಂದ ಬರಬೇಕಾದ ಯಾವುದೇ ಹೆಚ್ಚಿನ ಪರಿಹಾರವೂ ಇನ್ನೂ ಬಂದಿಲ್ಲ. ರಾಜ್ಯ ಸರ್ಕಾರದ ಖಜಾನೆಯೂ ಖಾಲಿ ಇದೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದರೆ ಮುಜುಗರ ಜತೆಗೆ ಸಾರ್ವಜನಿಕರ ಟೀಕೆಯನ್ನೂ ಎದುರಿಸಬೇಕಾಗುತ್ತದೆ ಎಂದೂ ಯಡಿಯೂರಪ್ಪ ಅವರು ಜಿಲ್ಲೆಯ ಭೇಟಿಯನ್ನು ಮುಂದಕ್ಕೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿಗಳು ಭೇಟಿ ನಿಗದಿಪಡಿಸಿದರೆ ಪೂರ್ಣಗೊಂಡಿರುವ 125 ಮನೆಗಳನ್ನು ಸಂತ್ರಸ್ತ ಕುಟುಂಬಗಳಿಗೆ ವಿತರಣೆ ಮಾಡಬಹುದಾಗಿದೆ ಜತೆಗೇ ತಿಂಗಳಿಗೆ ಆ ಕುಟುಂಬಗಳಿಗೆ ನೀಡಬೇಕಾದ ಬಾಡಿಗೆ ಹಣವೂ ಸರ್ಕಾರಕ್ಕೆ ಉಳಿಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಮನೆಗಳ ಹಂಚಿಕೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈಗ ಎಲ್ಲರೂ ಮುಖ್ಯಮಂತ್ರಿಗಳ ಭೇಟಿಯನ್ನು ಎದುರು ನೋಡುತಿದ್ದಾರೆ. ಶೀಘ್ರ ಮುಖ್ಯಮಂತ್ರಿಗಳು ಆಗಮಿಸಿದರೆ ಸಂತ್ರಸ್ತರ ಹೊಟ್ಟೆ ತಣ್ಣಗಾಗುತ್ತದೆ.