ಅಮೆರಿಕಾದಲ್ಲಿ ಜನಾಂಗೀಯವಾದದ ವಿರುದ್ಧ ಭುಗಿಲೆದ್ದ ಆಕ್ರೋಶದ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಅಮೆರಿಕಾದ ಅಟ್ಲಾಂಟಾದಲ್ಲಿ ಮತ್ತೋರ್ವ ಕಪ್ಪು ವರ್ಣದ ವ್ಯಕ್ತಿಯನ್ನ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ಇದು ಅಮೆರಿಕಾದ್ಯಂತ ಪ್ರತಿಭಟನೆ ತೀವ್ರಗೊಳ್ಳಲು ಕಾರಣವಾಗುತ್ತಿದೆ. 27 ವರುಷದ ರೇಶರ್ಡ್ ಬ್ರೂಕ್ಸ್ ನನ್ನ ಪೊಲೀಸರು ಅಟ್ಲಾಂಟಾದಲ್ಲಿ ಶನಿವಾರ ರಾತ್ರಿ ಹತ್ಯೆಗೈದಿದ್ದಾರೆ. ಹತ್ಯೆಗೈಯಲು ಪೊಲೀಸರು ಕ್ಷುಲ್ಲಕ ಕಾರಣವನ್ನೇ ಒದಗಿಸಿದ್ದಾರೆ ಎಂದು ಆರೋಪಿಸಿ ಅಟ್ಲಾಂಟಾದಲ್ಲಿ ಪ್ರತಿಭಟನೆಯೂ ನಡೆದಿದ್ದು, ಘಟನಾ ಸ್ಥಳದಲ್ಲಿದ್ದ ರೆಸ್ಟೋರೆಂಟ್ ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾಗಿದೆ. ಇಂಟೆರೆಸ್ಟಿಂಗ್ ವಿಚಾರವೆಂದರೆ, ಈ ಹತ್ಯೆಯನ್ನ ಖಂಡಿಸಿ ಅಟ್ಲಾಂಟಾ ಪೊಲೀಸ್ ಮುಖ್ಯಸ್ಥ ಎರಿಕಾ ಶೀಲ್ಡ್ಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ಇದು ಕಪ್ಪು ವರ್ಣೀಯರ ಪ್ರತಿಭಟನೆ ಸಿಕ್ಕ ಗೆಲುವು ಎಂದೇ ಭಾವಿಸಲಾಗಿದೆ. ಹಾಗೂ ಅಮೆರಿಕಾ ಪೊಲೀಸರ ತಾರತಮ್ಯ ನೀತಿಯ ವಿರುದ್ಧದ ನಡೆಯೂ ಎಂದು ಬಣ್ಣಿಸಲಾಗಿದೆ.
ಮೇ 25 ರಂದು ಜಾರ್ಜ್ ಫ್ಲಾಯ್ಡ್ ಹತ್ಯೆ ಬೆನ್ನಿಗೆ ಅಮೆರಿಕಾದ ಹಲವು ನಗರಗಳಲ್ಲಿ ಏಕಕಾಲಕ್ಕೆ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಅಮೆರಿಕಾ ಅಧ್ಯಕ್ಷ ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಪೊಲೀಸರ ಮೇಲೆ ಒತ್ತಡ ಹೇರಿದ ವಿಚಾರವಾಗಿ ಸಂದರ್ಶನವೊಂದರಲ್ಲಿ ಹೂಸ್ಟನ್ ನ ಪೊಲೀಸ್ ಮುಖ್ಯಸ್ಥ ಆರ್ಟ್ ಅಸೆವೆಡೋ, “Keep your mouth shut Mr. Donald Trump” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಪ್ರತಿಭಟನೆ ಹತ್ತಿಕ್ಕುವ ಭರದಲ್ಲಿ 75 ರ ಹರೆಯದ ವಯೋವೃದ್ಧರೊಬ್ಬರನ್ನ ನೆಲಕ್ಕೆ ಕೆಡವಿದ ಪೊಲೀಸ್ ಸಿಬ್ಬಂದಿಗಳ ಅಮಾನತು ವಿರೋಧಿಸಿ 57 ಮಂದಿ ಪೊಲೀಸ್ ಸಿಬ್ಬಂದಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದರು. ಆ ಮೂಲಕ ಪೊಲೀಸ್ ವರ್ಗವೂ ಡೊನಾಲ್ಡ್ ಟ್ರಂಪ್ ನೇತೃತ್ವದ ಸರಕಾರದ ವಿರುದ್ಧ ಬಂಡಾಯ ಏಳುವ ಸಾಧ್ಯತೆಗಳೂ ಇವೆ. ಒಂದೊಮ್ಮೆ ಪ್ರತಿಭಟನಾಕಾರರ ಮೇಲೆ ಕಠಿಣ ಕ್ರಮಕ್ಕೆ ಟ್ರಂಪ್ ಸೂಚಿಸಿದ್ದರೆ, ಅದೇ ಇನ್ನೊಂದೆಡೆ ಜಾರ್ಜ್ ಫ್ಲಾಯ್ಡ್ ಹತ್ಯೆ ಗೆ ಪ್ರತಿಭಟನಾಕಾರರ ಮುಂದೆ ಪೊಲೀಸ್ ಅಧಿಕಾರಿಗಳು ಮಂಡಿಯೂರಿ ಕ್ಷಮೆಯಾಚಿಸಿದ ಸುದ್ದಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು.
ಕಳೆದ ಒಂದು ದಶಕದಲ್ಲಿ ಅಮೆರಿಕಾದಲ್ಲಿ ನಡೆದ ಕಪ್ಪು ವರ್ಣದ ಮಂದಿಯನ್ನ ಯಾವ ರೀತಿ ವ್ಯವಸ್ಥಿತವಾಗಿ ಕೊಲೆಗೈಯ್ಯಲಾಗಿದೆ ಅನ್ನೋದರ ಬಗ್ಗೆ ಅಮೆರಿಕಾದ್ಯಂತ ಚರ್ಚೆ ಆರಂಭಗೊಂಡಿದೆ. ಜಾರ್ಜ್ ಫ್ಲಾಯ್ಡ್ ಹತ್ಯೆ ಅನ್ನೋದು ಅಮೆರಿಕಾದ ಮೊದಲ ಕಪ್ಪು ವರ್ಣದವರ ಹತ್ಯೆಯಾಗಿ ಉಳಿದಿಲ್ಲ. ಆದರೆ ಜಾರ್ಜ್ ಫ್ಲಾಯ್ಡ್ ಹತ್ಯೆ ಅನ್ನೋದು ಅಮೆರಿಕಾದ ಜನಾಂಗೀಯ ದ್ವೇಷದ ವಿರುದ್ಧದ ಪ್ರತಿಭಟನೆಯ ಆರಂಭವಷ್ಟೇ. ಕಳೆದ ಒಂದು ದಶಕದಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಪೊಲೀಸರು ಹತ್ಯೆ ಮಾಡಿರುವವರ ಅತ್ತ ಕಣ್ಣು ಹಾಯಿಸುವುದಾದರೆ..
2014 ರಲ್ಲಿ ಅಮೆರಿಕನ್ ಪೊಲೀಸರಿಂದ ನಡೆದ ಕಪ್ಪು ವರ್ಣೀಯರ ಹತ್ಯೆಗಳು:
ಘಟನೆ 1: ತನಿಷಾ ಆಂಡರ್‌ಸನ್ ಹೆಸರಿನ 37 ರ ಹರೆಯದ ಮಹಿಳೆಯೊಬ್ಬಳು ಕ್ಲೆವೆಲ್ಯಾಂಡ್ ನ ತನ್ನ ಮನೆಯಿಂದ ತಪ್ಪಿಸಿಕೊಂಡಿದ್ದರು. ಮಾನಸಿಕ ಸ್ಥಿಮಿತತೆ ಕಳೆದುಕೊಂಡ ಆಕೆಯನ್ನ ಪತ್ತೆ ಹಚ್ಚಲು ಮನೆಯವರು ಪೊಲೀಸರ ಮೊರೆ ಹೋಗಿದ್ದರು. ಅಂತೆಯೇ ಆಕೆಯನ್ನ ಹುಡುಕಲು ಬಂದ ಪೊಲೀಸರು ಮನೋ ವೈದ್ಯರ ಬಳಿಗೆ ಬರುವಂತೆ ಮನವೊಲಿಸಲು ಪ್ರಯತ್ನಿಸಿದ್ದರು. ಆಕೆಗೆ ಕೈಕೋಳ ತೊಟ್ಟು ವಶಕ್ಕೆ ಪಡೆದಿದ್ದ ಪೊಲೀಸರು, ವೈದ್ಯರು ಬರುವ ಮುನ್ನ 21 ನಿಮಿಷಗಳ ಕಾಲ ವಶದಲ್ಲಿಟ್ಟಿದ್ದು, ಬವೈದ್ಯರ ಆಗಮನಕ್ಕೂ ಮುನ್ನವೇ ಆಕೆ ಸಾವನ್ನಪ್ಪಿದ್ದರು. ಆದರೆ ಪೊಲೀಸರು ಆಕೆ ಕುಸಿದು ಬಿದ್ದು ಸಾವನ್ನಪ್ಪಿದ್ದಾಗಿ ಹೇಳಿದ್ದರು. ಆದರೆ ತನಿಖೆಯಲ್ಲಿ ಆಕೆಗೆ 21 ನಿಮಿಷಗಳ ಕಾಲ ಪೊಲೀಸರು ಕೈಕೋಳ ತೊಟ್ಟಿದ್ದ ವಿಚಾರ ಬಹಿರಂಗವಾಗಿತ್ತು. ಆಲ್ಡ್ರಿಜ್ ಎಂಬ ಪೊಲೀಸ್ ಅಧಿಕಾರಿಯನ್ನ ಹತ್ತು ದಿವಸಗಳ ಕಾಲ ರಜೆಯಲ್ಲಿ ಹಾಗೂ ಇನ್ನೋರ್ವ ಅಧಿಕಾರಿ ಮೈಯರ್ಸ್ ಎಂಬಾತನಿಗೆ ಎಚ್ಚರಿಕೆ ನೀಡಲಾಗಿತ್ತು. ಕುಟುಂಬಕ್ಕೆ 2.25 ಮಿಲಿಯನ್ ಅಮೆರಿಕನ್ ಡಾಲರ್ ಪರಿಹಾರ ನೀಡಲಾಗಿತ್ತು.
ಘಟನೆ 2: ಫರ್ಗ್ಯೂಶನ್ ನಲ್ಲಿ ತನ್ನ ಸ್ನೇಹಿತನ ಜೊತೆ ತೆರಳುತ್ತಿದ್ದ 18 ರ ಹರೆಯದ ಮೈಕಲ್ ಬ್ರೌನ್ ಎಂಬಾತನನ್ನ ತಡೆದು ನಿಲ್ಲಿಸಿದ ಕಾರಣ ವಾಗ್ವಾದ ನಡೆದ ಬಳಿಕ ಪೊಲೀಸ್ ಅಧಿಕಾರಿ ಡ್ಯಾರೆನ್ ವಿಲ್ಸನ್ ತನ್ನ ಗನ್ ನಿಂದ ಶೂಟ್ ಮಾಡಿ ಹತ್ಯೆಗೈದಿದ್ದ. ಸ್ವಯಂ ರಕ್ಷಣೆಯ ಉದ್ದೇಶದಿಂದ ತಾನು ಎನ್‌ಕೌಂಟರ್ ಮಾಡಿದ್ದಾಗಿ ಹೇಳಿದ್ದ ವಿಲ್ಸನ್ ಆನಂತರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಆ ಅಧಿಕಾರಿಯ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸಲಾಗಲಿಲ್ಲ.
ಘಟನೆ 3: 12 ರ ಹರೆಯದ ತಮೀರ್ ರೈಸ್ ಎಂಬ ಹುಡುಗ ಕ್ಲೆವೆಲ್ಯಾಂಡ್ ನ ಪಾರ್ಕ್ ವೊಂದರ ಪಾರ್ಕ್ ನಲ್ಲಿ ಆಟಿಕೆ ಗನ್ ನಲ್ಲಿ ಆಟವಾಡುತ್ತಿದ್ದಾಗ ಅಲ್ಲಿಗೆ ಆಗಮಿಸಿದ್ದ ಪೊಲೀಸರು ನೇರವಾಗಿ ಆತನಹ ಮೇಲೆ ಶೂಟ್ ಮಾಡಿ ಹತ್ಯೆಗೈದಿದ್ದರು. ರೈಸ್ ಜೊತೆಗಿದ್ದ ಆತನ ಸಹೋದರಿಯನ್ನ ಕೈಕೋಳ ತೊಡಿಸಿ ತಮ್ಮ ಜೀಪಿನಲ್ಲಿ ಸುಮಾರು ಹೊತ್ತು ಕಾಲ ವಿಚಾರಣೆ ನಡೆಸಿದ್ದರು. ಈ ಸುದ್ದಿ ಗೊತ್ತಾಗುತ್ತಲೇ ಶೂಟ್ ಮಾಡಿದ್ದ ಅಧಿಕಾರಿ ಫ್ರಾಂಕ್ ಗ್ರಾಂಬಾರ್ಕ್ ನನ್ನ ಹತ್ತು ದಿವಸಗಳ ಕಾಲ ವಜಾ ಮಾಡಲಾಗಿತ್ತು. ಸ್ಥಳೀಯ ಕ್ಲೆವೆಲ್ಯಾಂಡ್ ಆಡಳಿತವು ರೈಸ್ ಕುಟುಂಬಕ್ಕೆ 6 ಮಿಲಿಯನ್ ಡಾಲರ್ ಪರಿಹಾರ ನೀಡಿತ್ತು.
ಘಟನೆ 4: ಕ್ಯಾಲಿಫೋರ್ನಿಯಾದ ಸ್ಯಾಕ್ರೋಮೆಂಟೋ ಎಂಬಲ್ಲಿ ಕಾರು ಚಲಾಯಿಸುತ್ತಿದ್ದ 22 ರ ಹರೆಯದ ಗ್ಯಾಬ್ರಿಯೆಲ್ ನೆವಾರೆಝ್ ಎಂಬಾಕೆಯನ್ನ ತಡೆದ ಪೊಲೀಸರು ಆಕೆ ಕುಡಿದು ಡ್ರೈವಿಂಗ್ ನಡೆಸುತ್ತಿದ್ದಾಳೆ ಅನ್ನೋ ಕಾರಣವೊಡ್ಡಿ ಫೈರಿಂಗ್ ನಡೆಸಿದ್ದರು. ಘಟನೆಯಿಂದ ನೆವಾರೆಝ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು. ಬಳಿಕ ಇಬ್ಬರು ಇಬ್ಬರು ಅಧಿಕಾರಿಗಳು ಇಲಾಖಾ ರಜೆಯಲ್ಲಿ ಕಳುಹಿಸಿಕೊಡಲಾಗಿತ್ತು.
ಘಟನೆ 5: ಅಕಾಯ್ ಗುರ್ಲೆ ಅನ್ನೋ ನ್ಯೂಯಾರ್ಕ್ ನ 28 ರ ಹರೆಯದ ವ್ಯಕ್ತಿಯೊಬ್ಬನನ್ನ ಕಟ್ಟಡವೊಂದರಲ್ಲಿ ಗಸ್ತು ಸಂದರ್ಭ ಪೊಲೀಸರು ಗುಂಡಿಕ್ಕಿ ಕೊಂದಿದ್ದರು. ಘಟನೆ ಸಂಬಂಧ ಪೊಲೀಸ್ ಅಧಿಕಾರಿಯನ್ನ 5 ವರುಷಗಳ ಕಾಲ ಸೇವೆಯಿಂದ ವಜಾ ಮಾಡಲಾಗಿತ್ತು.
ಘಟನೆ 6: ಅಕ್ರಮವಾಗಿ ಸಿಗರೇಟ್ ಮಾರಾಟ ಮಾಡಿದ ಆರೋಪದಡಿ ನ್ಯೂಯಾರ್ಕ್ ನ ಸ್ಟೇಟನ್ ಐಲ್ಯಾಂಡ್ ನಲ್ಲಿ 43 ರ ಹರೆಯದ ಎರಿಕ್ ಗಾರ್ನರ್ ಎಂಬಾತನನ್ನು ಹತ್ಯೆಗೈಯಲಾಗಿತ್ತು. ಜಾರ್ಜ್ ಫ್ಲಾಯ್ಡ್ ಮಾದರಿಯಲ್ಲೇ ಗಾರ್ನರ್ ಕೂಡಾ ಉಸಿರುಗಟ್ಟುವ ಸಮಯದಲ್ಲಿ “I Can’t Breathe” ಎಂದು ಚಡಪಡಿಸಿದ್ದ ಎಂದು ತನಿಖೆಯಿಂದ ಗೊತ್ತಾಗಿತ್ತು.
2015
ಘಟನೆ 1: ಉತ್ತರ ಕರೋಲಿನಾದಲ್ಲಿ ನಡೆದ ಘಟನೆಯಲ್ಲಿ ಮನೆಯಲ್ಲಿದ್ದ 20 ತನಿಶಾ ಫಾನ್ವಿಲ್ಲೆ ಅವರನ್ನ ಮಾನಸಿಕ ರೋಗದ ಚಿಕಿತ್ಸೆಗಾಗಿ ಕರೆದುಕೊಳ್ಳಲು ಬಂದಿದ್ದ ಅಧಿಕಾರಿಗಳು ಆಕೆ ಚಾಕು ಹಿಡಿದುಕೊಂಡಿದ್ದಳು ಅನ್ನೋ ಕಾರಣಕ್ಕಾಗಿ ಆಕೆಗೆ ಗುಂಡಿಕ್ಕಿದ್ದರು. ಆದರೆ ಗುಂಡಿಕ್ಕಿದ ಅಧಿಕಾರಿ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಾಗಿರಲಿಲ್ಲ.
ಘಟನೆ 2: ಅಮೆರಿಕಾದ ಮೇರಿಲ್ಯಾಂಡ್ ನಲ್ಲಿ ನಡೆದ ಘಟನೆಯಲ್ಲಿ 25 ರ ಹರೆಯದ ಫ್ರೆಡ್ಡಿ ಗ್ರೇ ಎಂಬಾತನನ್ನ ಬಂಧಿಸಿದ್ದ ಪೊಲೀಸರು, ಆನಂತರ 45 ನಿಮಿಷಗಳ ಕಾಲ ತಮ್ಮ ವಾಹನದಲ್ಲಿ ಕೂಡಿಟ್ಟಿದ್ದರು. ಆದರೆ ಅದಾಗಲೇ ಆತನನ್ನ ಹತ್ಯೆ ಮಾಡಲಾಗಿತ್ತು ಅನ್ನೋ ಆರೋಪವಿದ್ದು, ಆತ ಶವವಾಗಿ ವಾಹನದಲ್ಲಿ ಪತ್ತೆಯಾಗುವ ಸಂದರ್ಭದಲ್ಲಿ ಆತನ ಬೆನ್ನುಮೂಳೆ ಮುರಿದಿದ್ದು ಗಮನಕ್ಕೆ ಬಂದಿತ್ತು. ಪ್ರಕರಣದ ವಿಚಾರಣೆ ನಡೆದು ಆರು ಮಂದಿಯ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತಾದರೂ, ಅದರಲ್ಲಿ ಮೂರು ಮಂದಿಗೆ ಖುಲಾಸೆ ಹಾಗೂ ಇನ್ನು ಮೂವರನ್ನ ಪ್ರಕರಣದಿಂದ ಕೈ ಬಿಡಲಾಗಿತ್ತು. ಗ್ರೇ ಕುಟುಂಬಕ್ಕೆ 6.4 ಮಿಲಿಯನ್ ಡಾಲರ್ ಪರಿಹಾರ ನೀಡಲಾಗಿತ್ತು.
ಘಟನೆ 3: ಈ ಘಟನೆಯಲ್ಲೂ ಫಿಯೋನಿಕ್ಸ್ ಅರಿಝೋನ ದಲ್ಲಿ 50 ವರುಷದ ಮೈಕೆಲ್ ಕ್ಯೂಸೆಕ್ಸ್ ಎಂಬವರನ್ನ ನ್ಯಾಯಾಲಯದ ಆದೇಶ ಪಡೆದು ಮಾನಸಿಕ ರೋಗ ಚಿಕಿತ್ಸೆಗಾಗಿ ಕರೆದೊಯ್ಯಲು ಬಂದವರು, ಕ್ಯೂಸೆಕ್ಸ್ ಕೈಯಲ್ಲಿ ಸುತ್ತಿಗೆ ಇತ್ತು ಅನ್ನೋ ಕಾರಣಕ್ಕಾಗಿ ಗುಂಡಿಕ್ಕಿದ್ದರು. ಗುಂಡಿಕ್ಕಿದ್ದ ಅಧಿಕಾರಿಗೆ ಹಿಂಬಡ್ತಿ ನೀಡಲಾಗಿತ್ತು.
2016
ಘಟನೆ 1: ಲೂಯಿಸಿಯಾನದಲ್ಲಿ ನಡೆದ ಘಟನೆಯಲ್ಲಿ 37 ರ ಹರೆಯದ ಕಪ್ಪು ವರ್ಣದ ಆಲ್ಟನ್ ಸ್ಟರ್ಲಿಂಗ್ ಎಂಬಾತನನ್ನ ಆರು ಬಾರಿ ಫೈರಿಂಗ್ ನಡೆಸುವ ಮೂಲಕ ಕೊಂದು ಹಾಕಲಾಗಿತ್ತು. ಸಿಸಿಟಿವಿಗಳಲ್ಲೂ ಈ ದೃಶ್ಯಗಳು ಸೆರೆಯಾಗಿದ್ದವು. ಅಲ್ಲದೇ ಜನಾಂಗೀಯ ನಿಂದನೆಯ ಪದಗಳನ್ನೂ ಇಲ್ಲಿ ಪೊಲೀಸ್ ಅಧಿಕಾರಿಗಳು ಬಳಸಿದ್ದರು. ಆದರೆ ಕಠಿಣ ಕ್ರಮ ಕೈಗೊಳ್ಳಲಾಗಿರಲಿಲ್ಲ.
ಘಟನೆ 2: ಮಿನ್ನಸೋಟದಲ್ಲಿ ನಡೆದ ಘಟನೆಯಲ್ಲಿ ಟ್ರಾಫಿಕ್ ಸಂಬಂಧಿಸಿ ಕ್ಷುಲ್ಲಕ ವಿಚಾರಕ್ಕಾಗಿ 32 ರ ಹರೆಯದ ಫಿಲಾಂಡೋ ಕ್ಯಾಸ್ಟಿಲ್ ಎಂಬಾತನನ್ನು ಆತನ ಗೆಳತಿ ಹಾಗೂ 4 ರ ಹರೆಯದ ಮಗಳು ಕಾರಿನಲ್ಲಿದ್ದಂತೆಯೇ ಆತನನ್ನ ಅಧಿಕಾರಿಯೊಬ್ಬ ಗುಂಡಿಕ್ಕಿ ಸಾಯಿಸಿದ್ದ. ಆ ನಂತರ ಕ್ಯಾಸ್ಟಿಲ್ ತಾಯಿಗೆ 3 ಮಿಲಿಯನ್ ಡಾಲರ್ ಪರಿಹಾರ ನೀಡುವ ಮೂಲಕ ಪ್ರಕರಣ ಇತ್ಯರ್ಥ ಪಡಿಸಲಾಗಿತ್ತು.
2018
ಘಟನೆ 1: ಭೋಥಾಮ್ ಜೀನ್ ಎಂಬಾತ ಮನೆಯ ಸೋಫಾದಲ್ಲಿ ಕೂತು ಐಸ್‌ಕ್ರೀಂ ತಿನ್ನುತ್ತಿದ್ದ ಸಂದರ್ಭ ಮನೆಗೆ ನುಗ್ಗಿ ಬಂದ ಪೊಲೀಸರು ಆತನಿಗೆ ಗುಂಡಿಕ್ಕಿ ಕೊಂದಿದ್ದರು. ಈ ಪ್ರಕರಣದಲ್ಲಿ ಗುಂಡಿಕ್ಕಿದ್ದ ಅಧಿಕಾರಿಣಿ ಗೈಯರ್ ಗೆ ನ್ಯಾಯಾಲಯ ಹತ್ತು ವರುಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಜೀನ್ ಸಹೋದರ ಗೈಯರ್ ನನ್ನು ಕೋರ್ಟ್ ಆವರಣದಲ್ಲಿಯೇ ಅಪ್ಪಿ ಹಿಡಿದು ಕ್ಷಮಿಸುವುದಾಗಿ ತಿಳಿಸಿದ್ದು ಭಾರೀ ಸುದ್ದಿಯಾಗಿತ್ತು.
ಘಟನೆ 2: ಅಮೆರಿಕಾದ ಪೊಲೀಸ್ ಅಧಿಕಾರಿಗಳಿಗೆ ಕಪ್ಪು ವರ್ಣೀಯರ ಬಗ್ಗೆ ಇರುವ ಕೀಳು ಭಾವನೆ ಈ ಪ್ರಕರಣದಲ್ಲೂ ವ್ಯಕ್ತವಾಗುತ್ತದೆ. ತನ್ನ ಅಜ್ಜಿ ಜೊತೆ ಕ್ಯಾಲಿಫೋರ್ನಿಯಾದಲ್ಲಿ ನಿಂತಿದ್ದ 22 ರ ಹರೆಯದ ಸ್ಟೀಫನ್ ಕ್ಲಾರ್ಕ್ ನಿಗೆ ಪೊಲೀಸ್ ಅಧಿಕಾರಿಗಳು ಗುಂಡಿಕ್ಕಿ ಸಾಯಿಸಿದ್ದರು. ಕಾರಣ, ಆತನ ಕೈಯಲ್ಲಿ ಗನ್ ಇತ್ತು ಅನ್ನೋ ಗುಮಾನಿ ಮೇಲೆ, ಆದರೆ ವಾಸ್ತವದಲ್ಲಿ ಆತ ತನ್ನ ಅಜ್ಜಿ ಹಿಂದೆ ನಿಂತು ಕೇವಲ ಮೊಬೈಲ್ ಫೋನ್ ಅಷ್ಟೇ ಬಳಸುತ್ತಿದ್ದ ಅನ್ನೋದು ತನಿಖೆಯಿಂದ ಆಮೇಲೆ ಗೊತ್ತಾಯಿತು. 20 ರಷ್ಟು ಬಾರಿ ಗುಂಡು ಹಾರಾಟ ನಡೆಸಿದ್ದ ಅಧಿಕಾರಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಯಿತು. ಮತ್ತು ಕುಟುಂಬಕ್ಕೆ 2.4 ಮಿಲಿಯನ್ ಡಾಲರ್ ಪರಿಹಾರ ನೀಡಲಾಯಿತು.
2019
ಘಟನೆ 1: ಕ್ಷುಲ್ಲಕ ಕಾರಣವೊಂದಕ್ಕೆ 28 ರ ಹರೆಯದ ಅಟಾಟಿಯಾನ ಜೆಫರ್ ಸನ್ ಎಂಬಾಕೆಯನ್ನ ಫ್ಲೋರಿಡಾದ ಆಕೆಯ ಮನೆಯಲ್ಲಿದ್ದಾಗ ಕಿಟಕಿಯಿಂದ ಫೈರಿಂಗ್ ನಡೆಸಿ ಹತ್ಯೆಗೈಯಲಾಗಿತ್ತು. ಹತ್ಯೆಗೈದಿದ್ದ ಅಧಿಕಾರಿ ಆರೋನ್ ಡೀನ್ ಮೇಲೆ ನಂತರ ಕೊಲೆ ಪ್ರಕರಣ ದಾಖಲಾಗಿತ್ತು.
2020
ಘಟನೆ 1: ಇದೇ ವರುಷದ ಮಾರ್ಚ್ 13 ರಂದು ನಡೆದಿದ್ದ ಘಟನೆಯಲ್ಲಿ ತನ್ನ ಲೂಯಿಸ್ ವಿಲ್ಲೆಯ ಮನೆಯಲ್ಲಿ ಸ್ನೇಹಿತನ ಜೊತೆಗೆ ಮಲಗಿದ್ದ ಸಮಯದಲ್ಲಿ ಸರ್ಚ್ ವಾರೆಂಟ್ ಜೊತೆಗೆ ಡ್ರಗ್ಸ್ ಪತ್ತೆಗಾಗಿ ಆಗಮಿಸಿದ ಅಧಿಕಾರಿಗಳು, ಆ ನಂತರ ಅಲ್ಲಿದ್ದ 26 ರ ಹರೆಯದ ಬ್ರಿಯೋನಾ ಟೇಲರ್ ಮೇಲೆ ಎಂಟು ಬಾರಿ ಗುಂಡಿಕ್ಕಿ ಕೊಂದು ಹಾಕಿದ್ದರು. ಈ ಪ್ರಕರಣದ ವಿಚಾರಣೆ ಇನ್ನೂ ತನಿಖಾ ಹಂತದಲ್ಲಷ್ಟೇ ಇದೆ.
ಘಟನೆ 2: ಇನ್ನು ಅಮೆರಿಕಾವನ್ನ ಹೊತ್ತಿ ಉರಿಯಲು ಕಾರಣವಾದ ಜಾರ್ಜ್ ಫ್ಲಾಯ್ಡ್ ಘಟನೆ ಮೇ 25 ರಂದು ಮಿನಿಪೊಲೀಸ್ ನಲ್ಲಿ ನಡೆದಿದ್ದು, ನಕಲಿ ನೋಟು ನೀಡಿದ್ದಾನೆ ಅನ್ನೋ ಕಾರಣಕ್ಕಾಗಿ 46 ರ ಹರೆಯದ ಫ್ಲಾಯ್ಡ್ ಸುಮಾರು ಎಂಟೂವರೆ ನಿಮಿಷ ಕಾಲ ಉಸಿರುಗಟ್ಟಿಸಿ ಕೊಂದು ಹಾಕಲಾಗಿತ್ತು. ಘಟನೆ ಸಂಬಂಧ ಈಗಾಗಲೇ ಅಧಿಕಾರಿಗಳನ್ನ ಬಂಧಿಸಲಾಗಿದೆ. ಮಾತ್ರವಲ್ಲದೇ ಇದು ಇಡೀ ಅಮೆರಿಕಾದಲ್ಲಿ ಹೊತ್ತಿ ಉರಿಯಲೂ ಕಾರಣವಾಗಿದೆ.
ಘಟನೆ 3: ಜಾರ್ಜ್ ಫ್ಲಾಯ್ಡ್ ಹತ್ಯೆ ಖಂಡಿಸಿ ಎರಡು ವಾರಗಳಿಂದ ಪ್ರತಿಭಟನೆ ನಡೆಯುತ್ತಲೇ ಜೂನ್ 13 ರ ರಾತ್ರಿ ಅಟ್ಲಾಂಟಾ ಮತ್ತೊಬ್ಬ ಕಪ್ಪು ವರ್ಣೀಯನನ್ನು ಕ್ಷುಲ್ಲಕ ಕಾರಣಕ್ಕಾಗಿ ಗುಂಡಿಕ್ಕಿ ಕೊಲ್ಲಲಾಗಿದೆ. 27 ರ ಹರೆಯದ ರೇಶರ್ಡ್ ಬ್ರೂಕ್ಸ್ ಹತ್ಯೆ ಅಮೆರಿಕಾದಲ್ಲಿ ಮತ್ತಷ್ಟು ಪ್ರತಿಭಟನೆಯ ಕಿಚ್ಚನ್ನ ಹೆಚ್ಚಿಸಿದೆ.
ಒಟ್ಟಿನಲ್ಲಿ ಜಾರ್ಜ್ ಫ್ಲಾಯ್ಡ್ ಮಾತ್ರವಲ್ಲದೇ ಅದೆಷ್ಟೂ ಗಂಭೀರವಲ್ಲದ ಪ್ರಕರಣಗಳಲ್ಲೂ, ಕ್ಷುಲ್ಲಕ ಕಾರಣಗಳಿಗೂ ಕಪ್ಪು ವರ್ಣೀಯರನ್ನ ಹಿಂಸಿಸುವ, ಕೊಂದು ಹಾಕುವ ವ್ಯವಸ್ಥಿತ ಕೃತ್ಯ ಅಮೆರಿಕಾದ ಆಡಳಿತ ವರ್ಗದಿಂದಲೇ ನಡೆಯುತ್ತಿದೆ. ಇದೆಲ್ಲದರ ಒಟ್ಟು ಪರಿಣಾಮ ಜಾರ್ಜ್ ಫ್ಲಾಯ್ಡ್ ಹತ್ಯೆ ಮೂಲಕ ಆಕ್ರೋಶದ ಬುಗ್ಗೆಯಾಗಿ ಹೊರ ಬಂದಿದೆಯಷ್ಟೇ..