ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಮಾಜಿ ಶಾಸಕ ಮುನಿರತ್ನ ಅವರನ್ನು ಸೋಲಿಸಲೇಬೇಕೆಂದು ಕಾಂಗ್ರೆಸ್ ಪಕ್ಷ ಪಣ ತೊಟ್ಟು ನಿಂತಿದೆ. ಆರ್ಆರ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಕಾಂಗ್ರೆಸ್ ನಾಯಕರ ಬಿರುಸಿನ ಪ್ರಚಾರ ಕಾರ್ಯ ನಡೆಯುತ್ತಿದೆ.
ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, ಮುನಿರತ್ನ ಅವರನ್ನು ಬೆಳೆಸಿದ ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿದ್ದಾರೆ, ಕ್ಷೇತ್ರದಲ್ಲಿ ಗೂಂಡಾಗಿರಿ, ಬೆದರಿಕೆ ಮೂಲಕ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಮುನಿರತ್ನ ರೀತಿಯ ಗೂಂಡಾ ರಾಜಕೀಯವನ್ನು ಸೋಲಿಸಬೇಕು ಎಂದು ಗುಂಡೂರಾವ್ ಹೇಳಿದ್ದಾರೆ.
ಮುನಿರತ್ನ ಅವರನ್ನು ಬೆಳೆಸಿದ್ದು ನಮ್ಮ ಪಕ್ಷ, ಸಿದ್ದರಾಮಯ್ಯ ಸರ್ಕಾರ ರಾಜರಾಜೇಶ್ವರಿ ನಗರ ದೊಡ್ಡ ಕ್ಷೇತ್ರವೆಂದು ಈ ಕ್ಷೇತ್ರಕ್ಕೆ ಅನುದಾನ ನೀಡಿದೆ, ಮುನಿರತ್ನ ಅವರೇ ಅನುದಾನ ತಂದಿದ್ದಾರೆಂಬಂತೆ ಬಿಂಬಿಸುತ್ತಿದ್ದಾರೆ. ಅವರು ಅವರ ಜೇಬಿನಿಂದ ಅನುದಾನ ತಂದಿದ್ದಾರೆಯೇ ಎಂದು ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಹಿಂದೆ, ಕಾಂಗ್ರೆಸ್ ಪಕ್ಷವನ್ನು ಅರ್ಧದಲ್ಲಿ ಬಿಟ್ಟು ಹೋಗಿರುವ ಮುನಿರತ್ನ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದರು. ಮಾತೃ ಪಕ್ಷವನ್ನು ಬಿಟ್ಟು ಬಿಜೆಪಿ ಹಣಕ್ಕಾಗಿ ಮಾರಾಟ ಆದ ಮುನಿರತ್ನ ತನ್ನ ತಾಯಿಯನ್ನು ಮಾರಿದಂತೆ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದರು.
Also Read: ಮುನಿರತ್ನ ಗೂಂಡಾಗಿರಿಗೆ ನಾವು ಹೆದರುವುದಿಲ್ಲ, ಹುಷಾರ್!- ಸಿದ್ದರಾಮಯ್ಯ
ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು. ನನ್ನ ತಾಯಿ ಬಗ್ಗೆ ನೀವು ಮಾತನಾಡಿದ್ದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರು ಧರಣಿ ಮಾಡಿದ್ದಾರೆ. ಆದರೆ ಹಲ್ಲೆ ಮಾಡಿಲ್ಲ. ತಾಯಿಯನ್ನು ಮಾರಾಟ ಮಾಡಿದ್ದೇನೆ ಅಂದಿರುವುದು ತಪ್ಪು ಎಂದು ನಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಶಾಂತಿಕದಡುವ ಯತ್ನ ಮಾಡಿಲ್ಲ ಎಂದು ಹೇಳಿದ್ದರು.
ಕಾಂಗ್ರೆಸ್ನವರೇ ನೀವು ನನ್ನ ಬಗ್ಗೆ ಎಷ್ಟು ಬೇಕಾದರೂ ದೂಷಿಸಿ, ಮಾತನಾಡಿ. ನಿಮಗೆ ಸ್ವಾತಂತ್ರ್ಯ ಇದೆ. ಆದರೆ 25 ವರ್ಷದ ಹಿಂದೆ ತೀರಿಹೋಗಿರುವ ನನ್ನ ತಾಯಿಯ ಬಗ್ಗೆ ಮಾತ್ರ ಮಾತನಾಡಬೇಡಿ. ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಭಾವುಕರಾಗಿ ಹೇಳಿದ್ದರು. ಮುನಿರತ್ನ ನಾಯ್ಡು ಕಣ್ಣೀರಿಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ದಿನೇಶ್ ಗುಂಡೂರಾವ್, ಚಿತ್ರರಂಗದಲ್ಲಿದ್ದ ಮುನಿರತ್ನ ನಾಯ್ಡು ನವರಸಗಳನ್ನು ಅರೆದು ಕುಡಿದಿದ್ದಾರೆ. ಹಾಗಾಗಿ ನಟನೆ ಅವರಿಗೆ ಹೊಸದಲ್ಲ. ಇಂದು ಕಣ್ಣೀರು ಹಾಕಿ ‘ಕರುಣಾ’ ರಸವನ್ನು ಹೊರ ಹಾಕಿ ನಟಿಸಿದ್ದಾರೆ. ಈಗಾಗಲೇ ಮುನಿರತ್ನರ ‘ಭೀಭತ್ಸ’, ‘ರೌದ್ರ’ ಮತ್ತು ‘ಭಯಾನಕ’ ರಸಗಳು ಕ್ಷೇತ್ರದಲ್ಲಿ ಪ್ರಯೋಗವಾಗಿದೆ. ಫಲಿತಾಂಶ ಬಂದ ನಂತರ ‘ಶಾಂತ’ ರಸ ಹೊರಬರಲಿದೆ ಎಂದು ಗುಂಡೂರಾವ್ ಹೇಳಿದ್ದಾರೆ.