ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದಾಗ ಅವರೊಂದಿಗೆ ಚರ್ಚಿಸಿ ಸಚಿವ ಸಂಪುಟ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಅದರಂತೆ ಅಮಿತ್ ಶಾ ಅವರು ರಾಜ್ಯಕ್ಕೆ ಬಂದೂ ಆಯಿತು, ಹೋಗಿಯೂ ಆಯಿತು. ಈ ಮಧ್ಯೆ ಸಂಪುಟ ವಿಸ್ತರಣೆ ಕುರಿತಂತೆ ಇಬ್ಬರು ಮಾತುಕತೆ ನಡೆಸಿದ್ದಾರೆ. ಅಮಿತ್ ಶಾ ಅವರಿಂದ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ಸಿಕ್ಕಿದೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿವೆ. ಆದರೆ, ಗಣರಾಜ್ಯೋತ್ಸವದ ವೇಳೆ ನೂತನ ಸಚಿವರಿಗೆ ಧ್ವಜಾರೋಹಣ ಮಾಡಲು ಮಾತ್ರ ಆಗುತ್ತಿಲ್ಲ. ಅಂದರೆ, ಅದುವರೆಗೆ ಸಂಪುಟ ವಿಸ್ತರಣೆಯಾಗಿ ಖಾತೆಗಳ ಹಂಚಿಕೆ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಆಗುವುದಿಲ್ಲ ಎಂಬುದು ಸ್ಪಷ್ಟ.
ಏಕೆಂದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಮುಖ್ಯಸ್ಥರಿಗೆ ಸುತ್ತೋಲೆಯೊಂದು ಹೋಗಿದ್ದು, ಅದರಲ್ಲಿ ಜ. 26ರಂದು ಯಾವ್ಯಾವ ಸಚಿವರು ಯಾವ್ಯಾವ ಜಿಲ್ಲೆಗಳಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ಮಾಡಲಿದ್ದಾರೆ ಎಂಬ ಪಟ್ಟಿ ನೀಡಲಾಗಿದೆ. ಅದರಂತೆ 30 ಜಿಲ್ಲೆಗಳ ಪೈಕಿ 17 ಜಿಲ್ಲೆಗಳಲ್ಲಿ ಮಾತ್ರ ಸಚಿವರು ಧ್ವಜಾರೋಹಣ ಮಾಡುತ್ತಿದ್ದು, ಉಳಿದ 13 ಜಿಲ್ಲೆಗಳಲ್ಲಿಯಾ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಹಾಲಿ ಸಚಿವರಿಗೆ ಹೆಚ್ಚುವರಿ ಉಸ್ತುವಾರಿ ಇರುವ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅಂದರೆ, ಅದುವರೆಗೆ ಸಚಿವ ಸಂಪುಟ ವಿಸ್ತರಣೆ ಕಷ್ಟಸಾಧ್ಯ.
ಈ ಮಧ್ಯೆ ಸ್ವಿಜರ್ ಲೆಂಡ್ ನ ದಾವೋಸ್ ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾನುವಾರ (ಜ.19) ತೆರಳುತ್ತಿದ್ದು, ಅವರು ಬೆಂಗಳೂರಿಗೆ ವಾಪಸಾಗುವುದು ಮುಂದಿನ ಜ. 24ರ ಶುಕ್ರವಾರ. ಜ. 25ರಂದು ನಾಲ್ಕನೇ ಶನಿವಾರ ಇರಲಿದ್ದು, ಅಂದು ಸರ್ಕಾರಿ ರಜೆ ಇರುತ್ತದೆ. ಹೀಗಾಗಿ ಬಂದ ಮಾರನೇ ದಿನವೇ ಸಂಪುಟ ವಿಸ್ತರಣೆ ಮಾಡಿ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ಹಂಚಲು ಸಾಧ್ಯವಿಲ್ಲ. ಹೀಗಾಗಿ ಹೊಸ ವರ್ಷ ಕಳೆದು, ಸಂಕ್ರಾಂತಿ ಮುಗಿದು ಗಣರಾಜ್ಯೋತ್ಸವಕ್ಕೂ ಸಚಿವರಾಗುವ ಕನಸು ಕಾಣುತ್ತಿರುವ ಅಕಾಂಕ್ಷಿಗಳಿಗೆ ನಿರಾಶೆ ತಪ್ಪಿದ್ದಲ್ಲ ಎನ್ನುವಂತಾಗಿದೆ.
ಸಂಪುಟ ವಿಸ್ತರಣೆ ಸುಲಭದ ಕೆಲಸವಲ್ಲ
ಅಮಿತ್ ಶಾ ಅವರಿಂದ ಅನುಮತಿ ಸಿಕ್ಕಿದರೂ ಸಚಿವ ಸಂಪುಟ ವಿಸ್ತರಣೆ ಯಡಿಯೂರಪ್ಪ ಅವರ ಪಾಲಿಗೆ ಅಷ್ಟೊಂದು ಸುಲಭದ ಕೆಲಸವಲ್ಲ. ಕಬ್ಬಿಣದ ಕಡಲೆಯಾಗುತ್ತಿರುವ ವಿವಾದವನ್ನು ಬಗೆಹರಿಸಿಕೊಳ್ಳಬೇಕು. ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿಗೆ ಸೇರಿ ಗೆದ್ದು ಬಂದ 11 ಶಾಸಕರ ಜತೆಗೆ ಸೋತ ಇಬ್ಬರೂ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದು ಕುಳಿತಿದ್ದಾರೆ. ಸೋತವವರಿಗೆ ಗೆದ್ದು ಬಂದಿರುವ ಶಾಸಕರು ಕೂಡ ಬೆಂಬಲಿಸುತ್ತಿದ್ದು, ನಾವೆಲ್ಲರೂ ಒಟ್ಟಾಗಿ ಬಿಜೆಪಿ ಸೇರಿದ್ದು, ಸೋತವರಿಗೂ ಸಚಿವ ಸ್ಥಾನ ನೀಡಬೇಕು ಎನ್ನುತ್ತಿದ್ದಾರೆ. ಈ ಮಧ್ಯೆ ಹತ್ತಕ್ಕೂ ಹೆಚ್ಚು ಬಿಜೆಪಿಯ ಹಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿದ್ದು, ಮೂರ್ನಾಲ್ಕು ಮಂದಿ ತೀವ್ರ ಒತ್ತಡ ಹೇರುತ್ತಿದ್ದಾರೆ. ಇದರ ಜತೆಗೆ ಉಪಮುಖ್ಯಮಂತ್ರಿ ಸ್ಥಾನವೂ ಮುಖ್ಯಮಂತ್ರಿಗಳ ತಲೆತಿನ್ನುತ್ತಿದೆ. ಹಾಲಿ ಸಚಿವ ಶ್ರೀರಾಮುಲು ಮತ್ತು ನೂತನ ಶಾಸಕ ರಮೇಶ್ ಜಾರಕಿಹೊಳಿ ಅವರು ಈ ಹುದ್ದೆಯ ಮೇಲೆ ಕಣ್ಣಿಟ್ಟು ವಿವಿಧ ರೀತಿಯ ಲಾಬಿಗಳನ್ನು ಮಾಡುತ್ತಿದ್ದಾರೆ.
ಈ ಎಲ್ಲಾ ಜಂಜಾಟಗಳಿಂದಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ವರಿಷ್ಠರು ಸಂಪುಟ ವಿಸ್ತರಣೆ ವಿಳಂಬ ಮಾಡುತ್ತಾ ಬಂದಿದ್ದರು. ಇಂದಲ್ಲಾ ನಾಳೆ ಈ ಎಲ್ಲಾ ಸಮಸ್ಯೆಗಳ ತೀವ್ರತೆ ಕಡಿಮೆಯಾಗಬಹುದು. ನಂತರ ಸಂಪುಟ ವಿಸ್ತರಣೆ ಮಾಡಿದರೆ ಹೆಚ್ಚು ಗೊಂದಲ ಸೃಷ್ಟಿಯಾಗಲಿಕ್ಕಿಲ್ಲ ಎಂದು ಭಾವಿಸಿದ್ದರು. ಆದರೆ, ಪರಿಸ್ಥಿತಿ ಹುಚ್ಚು ಬಿಡದೆ ಮದುವೆಯಾಗದು, ಮದುವೆಯಾಗದೆ ಹುಚ್ಚು ಬಿಡದು ಎನ್ನುವಂತಾಗಿದೆ. ಸಮಸ್ಯೆಯ ತೀವ್ರತೆ ಕಡಿಮೆಯಾಗುವ ಬದಲು ಜಟಿಲಗೊಳ್ಳುತ್ತಿದೆ. ಇದೆಲ್ಲದರ ಮಧ್ಯೆ ಸಚಿವ ಸ್ಥಾನಕ್ಕಾಗಿ ಪಂಚಮಸಾಲಿ ಲಿಂಗಾಯತ ಸಮುದಾಯದಿಂದ ಮತ್ತೊಂದು ವಿವಾದ ಶುರುವಾಗಿದೆ. ಪಂಚಮಸಾಲಿ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ವಚನಾನಂದ ಸ್ವಾಮೀಜಿ ನೀಡಿದ ಹೇಳಿಕೆ ಗೊಂದಲಗಳನ್ನು ಸೃಷ್ಟಿಸಿದೆ. ಇದೆಲ್ಲವನ್ನು ಬಗೆಹರಿಸಿಕೊಂಡು ಸಂಪುಟ ವಿಸ್ತರಣೆ ಮಾಡಬೇಕಾದರೆ ಯಡಿಯೂರಪ್ಪ ಅವರಿಗೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಫೆಬ್ರವರಿ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ಆಗಬಹುದು ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.
ಯಡಿಯೂರಪ್ಪ ಮೆತ್ತಗಾಗಲು ಕಾರಣಗಳೇನಿರಬಹುದು?
ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವು ಯಡಿಯೂರಪ್ಪ ಅವರ ಮುಖ್ಯಮಂತ್ರಿ ಸ್ಥಾನವನ್ನು ಭದ್ರಗೊಳಿಸಿದ್ದು ಮಾತ್ರವಲ್ಲ, ಬಿಜೆಪಿಯಲ್ಲಿ ಅವರ ಶಕ್ತಿಯನ್ನೂ ಹೆಚ್ಚಿಸಿತ್ತು. ಆದರೆ, ಉಪ ಚುನಾವಣೆ ನಡೆದು ತಿಂಗಳು ಕಳೆದರೂ ಸಂಪುಟ ವಿಸ್ತರಣೆ ಮಾಡಲು ಅವರಿಂದ ಸಾಧ್ಯವಾಗದೇ ಇರುವುದನ್ನು ಗಮನಿಸಿದಾಗ ಇವರೇನಾ ಶಕ್ತಿ ಹೆಚ್ಚಿಸಿಕೊಂಡ ಯಡಿಯೂರಪ್ಪ ಎಂಬ ಪ್ರಶ್ನೆ ಉದ್ಭವವಾಗಲಾರಂಭಿಸಿದೆ.
ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚಿಸುವ ವಿಚಾರವಿರಲಿ, ನಂತರ ಸಚಿವ ಸಂಪುಟ ರಚನೆ, ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ವಿಚಾರದಲ್ಲಿ ಯಡಿಯೂರಪ್ಪ ಅವರ ಕೈ ಮೇಲಾಗಿತ್ತು. ಉಪಮುಖ್ಯಮಂತ್ರಿ ಸ್ಥಾನ ಹೊರತುಪಡಿಸಿ ಅವರು ಹೇಳಿದ ಎಲ್ಲಾ ಮಾತುಗಳಿಗೂ ವರಿಷ್ಠರು ಸಮ್ಮತಿಸಿದ್ದರು. ಸಂಪುಟ ರಚನೆ ಬಳಿಕ ಉಂಟಾದ ಗೊಂದಲ ಬಗೆಹರಿಸಿಕೊಳ್ಳುವುದರಲ್ಲೂ ಯಡಿಯೂರಪ್ಪ ಬಹುತೇಕ ಯಶಸ್ವಿಯಾಗಿದ್ದರು. ಪ್ರವಾಹ ಸಂದರ್ಭದಲ್ಲಿ ಸಚಿವರು ಸರಿಯಾಗಿ ಸಾಥ್ ನೀಡದೇ ಇದ್ದರೂ ಏಕಾಂಗಿಯಾಗಿ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿ ತಿರುಗಿ ಬಿದ್ದ ಸಚಿವರನ್ನು ತಣ್ಣಗಾಗಿಸಿದ್ದರು.
ಆದರೆ, ಸಚಿವ ಸಂಪುಟ ವಿಸ್ತರಣೆಯಲ್ಲಿ ಎದುರಾಗುತ್ತಿರುವ ವಿಘ್ನಗಳನ್ನು ಬಗೆಹರಿಸಿಕೊಳ್ಳಲು ಅವರು ಅನುಭವಿಸುತ್ತಿರುವ ತೊಂದರೆಗಳನ್ನು ಗಮನಿಸಿದಾಗ ಉಪ ಚುನಾವಣೆ ಬಳಿಕ ಗಟ್ಟಿಯಾದ ಯಡಿಯೂರಪ್ಪ ಅವರು ಮತ್ತೆ ಮೆತ್ತಗಾದರೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಇದರ ಮಧ್ಯೆ, ಸಮಸ್ಯೆಗಳ ಸುಳಿಯಿಂದ ಹೊರಬರಲು ಮೆತ್ತಗಾದಂತೆ ನಟಿಸುತ್ತಿದ್ದಾರೆಯೇ ಎಂಬ ಅನುಮಾನವೂ ಕಾಡುತ್ತದೆ. ಏಕೆಂದರೆ, ಸೋತಾಗಲೂ ಮೆತ್ತಗಾಗದ ಯಡಿಯೂರಪ್ಪ ಅವರು ಈ ಒಂದು ವಿಚಾರಕ್ಕೆ ತಣ್ಣಗಾಗುವ ಮನಸ್ಥಿತಿಯವರಲ್ಲ. ಶಾಸಕರು ಹಠಕ್ಕೆ ಬಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ಕೊಟ್ಟು ಅವರನ್ನು ಮೆತ್ತಗಾಗಿಸುವ ಧೈರ್ಯ ಅವರಲ್ಲಿದೆ. ಆದರೂ ಯಡಿಯೂರಪ್ಪ ಅವರ ಈಗಿನ ನಡವಳಿಕೆಗಳನ್ನು ಗಮನಿಸಿದಾಗ ಅವರ ಮನಸ್ಸಿನಲ್ಲಿ ಬೇರೇನೋ ಯೋಚನೆಗಳಿವೆ ಎಂಬುದು ಸ್ಪಷ್ಟ. ಅದೇನೆಂದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಷ್ಟೆ.
ಏನೇ ಆದರೂ ನೂತನ ಸಚಿವರಿಗೆ ಗಣರಾಜ್ಯೋತ್ಯವದ ಧ್ವಜಾರೋಹಣ ನೆರವೇರಿಸುವ ಅವಕಾಶ ಸಿಗುವುದಿಲ್ಲ. ಈ ತಿಂಗಳು ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಬಹುಷಃ ಸಂಪುಟ ವಿಸ್ತರಣೆ ವಿಳಂಬದ ಮೂಲಕವೇ ಗೊಂದಲಕ್ಕೆ ತೆರೆ ಎಳೆಯುವ ಉದ್ದೇಶದಿಂದ ಯಡಿಯೂರಪ್ಪ ಇಷ್ಟೆಲ್ಲಾ ಕಸರತ್ತು ಮಾಡುತ್ತಿರಬಹುದು ಎಂಬ ಚರ್ಚೆ ಪಕ್ಷದಲ್ಲಿ ನಡೆಯುತ್ತಿರುವುದು ಮಾತ್ರ ಸುಳ್ಳಲ್ಲ.