ಕೋವಿಡ್ – 19 ಪರೀಕ್ಷೆಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಬೇಕು ಎಂದು ಸುಪ್ರಿಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ದೇಶದಲ್ಲಿ ಕರೋನಾ ವೈರಸ್ ಪರೀಕ್ಷೆಗಳ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಸುಪ್ರಿಂ ಕೋರ್ಟ್ ಈ ನಿರ್ದೇಶನವನ್ನು ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಅಥವಾ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ICMR) ನಿಂದ ಎನ್ಎಬಿಎಲ್ ಪ್ರಮಾಣಪತ್ರ ಪಡೆದಂತಹ ಲ್ಯಾಬೋರೇಟರಿಗಳಲ್ಲಿ ಮಾತ್ರ ಕರೋನಾ ವೈರಸ್ ಕುರಿತಾದ ಪರೀಕ್ಷೆಗಳನ್ನು ನಡೆಸಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇದರೊಂದಿಗೆ, ಖಾಸಗಿ ಲ್ಯಾಬ್ಗಳು ಕೊವಿಡ್-19ನ ಒಂದು ಪರೀಕ್ಷೆಗೆ ರೂ. 4500 ದರ ನಿಗದಿ ಪಡಿಸಿರುವುದನ್ನು ಕೂಡಾ ಪ್ರಶ್ನಿಸಿದೆ.
ಇನ್ನು ಖಾಸಗಿ ಲ್ಯಾಬೋರೇಟರಿಗಳಲ್ಲಿ ವಿಧಿಸುವ ಹೆಚ್ಚಿನ ಮೊತ್ತಕ್ಕೆ ಕಡಿವಾಣ ಹಾಕಿ, ಸಾರ್ವಜನಿಕರು ಪಾವತಿಸುವ ಹಣವನ್ನು ಅವರಿಗೆ ವಾಪಾಸ್ಸು ನೀಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕಿದೆ ಎಂದು ಸುಪ್ರಿಂ ಕೋರ್ಟ್ ಈ ಮುಂಚೆ ಹೇಳಿತ್ತು.
ದೇಶದಾದ್ಯಂತ ಕೋವಿಡ್-19 ಪರೀಕ್ಷೆಗಳನ್ನು ಉಚಿತವಾಗಿ ನಡೆಸಿಕೊಡಬೇಕು ಎಂದು ಮನವಿ ಮಾಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಾರ್ಚ್ 31ರಂದು ಸುಪ್ರಿಂಗೆ ಸಲ್ಲಿಸಲಾಗಿತ್ತು. ವಕೀಲರಾದ ಶಶಾಂಕ್ ದಿಯೋ ಸುಧಿ ಅವರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ರವೀಂದ್ರ ಎಸ್ ಭಟ್ ಅವರನ್ನು ಒಳಗೊಂಡ ಪೀಠವು ಈ ಮಹತ್ವದ ನಿರ್ದೇಶನವನ್ನು ನೀಡಿದೆ.
ಇನ್ನು ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇದೊಂದು ಆಕಸ್ಮಿಕವಾದಂತಹ ಸಂಕಷ್ಟವಾಗಿರುವುದರಿಂದ ಸರ್ಕಾರವು ಅಗತ್ಯವಿರುವ ಸಂಪನ್ಮೂಲಗಳನ್ನು ಕ್ರೋಢೀಕರಿಸುತ್ತಿದೆ. ಈ ಸಮಯದಲ್ಲಿ ಪರೀಕ್ಷೆಗಳನ್ನು ನಡೆಸಲು ಎಷ್ಟು ಲ್ಯಾಬ್ಗಳು ಬೇಕಾಗಬಹುದು ಹಾಗೂ ಲಾಕ್ಡೌನ್ ಎಷ್ಟು ಸಮಯದ ವರೆಗೆ ಮುಂದೂಡಬೇಕಾಗಬಹುದು ಎಂಬುದನ್ನು ನಿರ್ಧಿಷ್ಟವಾಗಿ ಹೇಳಲಾಗುವುದಿಲ್ಲ ಎಂದು ಹೇಳಿದ್ದಾರೆ.
ಈಗಾಗಲೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ದೇಶದಾದ್ಯಂತ ಯಾವುದೇ ಕೊರತೆ ಇಲ್ಲದಂತೆ ಕೋವಿಡ್-19 ಟೆಸ್ಟಿಂಗ್ ಕಿಟ್ಗಳು ಹಾಗೂ ಪರೀಕ್ಷಾ ಕೇಂದ್ರಗಳನ್ನು ತೆರೆಯಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನವನ್ನು ಜಾರಿಗೊಳಿಸಬೇಕೆಂದು ಕೂಡಾ ಕೋರಲಾಗಿದೆ.