ಲಾಕ್ಡೌನ್ ಘೋಷಿಸಿ ಸರಿಸುಮಾರು ಒಂದು ತಿಂಗಳು ಕಳೆದರೂ ವ್ಯಾಪಕವಾಗಿ ಹರಡುತ್ತಿರುವ ಕರೋನಾ ಸೋಂಕು ಸದ್ಯಕ್ಕೆ ಭಾರತದಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ಬರುವ ಲಕ್ಶಣಗಳು ಕಾಣುತಿಲ್ಲ. ಕರ್ನಾಟಕ ಸರ್ಕಾರ ಬಿಡುಗಡೆಗೊಳಿಸಿದ ಅಂಕಿಅಂಶದ ಪಟ್ಟಿ ಪ್ರಕಾರ 28 ಎಪ್ರಿಲ್ ಮಧ್ಯಾಹ್ನದವರೆಗೆ ರಾಜ್ಯದಲ್ಲಿ ಒಟ್ಟು 520 ಕರೋನಾ ಪ್ರಕರಣಗಳು ಧೃಡಪಟ್ಟಿದ್ದು, 20 ರೋಗಿಗಳು ಕರೋನಾದಿಂದಾಗಿ ಮರಣಹೊಂದಿದ್ದಾರೆ. ಇದುವರೆಗೂ 198 ಸೋಂಕಿತರು ರೋಗದಿಂದ ಗುಣಮುಖರಾಗಿದ್ದಾರೆಂದು ಸರ್ಕಾರ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಹೇಳಿದೆ.
ಎಪ್ರಿಲ್ 27ರ ಸಂಜೆ 5 ಗಂಟೆಯಿಂದ ಎಪ್ರಿಲ್ 28ರ ಮಧ್ಯಾಹ್ನ 12ರವರೆಗೆ ರಾಜ್ಯದಲ್ಲಿ 8 ಹೊಸ ಪ್ರಕರಣ ದಾಖಲಾಗಿದೆಯೆಂದು ವರದಿ ಹೇಳಿದೆ. ಕಲಬುರಗಿಯಲ್ಲಿ ಒಟ್ಟು 6 ಪ್ರಕರಣಗಳು ಕಂಡುಬಂದಿದ್ದು ಎಲ್ಲಾ ಸೋಂಕಿತರು ಕ್ರಮಸಂಖ್ಯೆ P-425 ರೋಗಿಯ ಸಂಪರ್ಕಕ್ಕೆ ಬಂದವರೆಂದು ವರದಿಯಲ್ಲಿ ಹೇಳಲಾಗಿದೆ. ಉಳಿದಂತೆ ಬೆಂಗಳೂರಿನಲ್ಲಿ ಹಾಗೂ ಗದಗಿನಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿದೆ. 21 ಎಪ್ರಿಲ್ರಂದು ಆಸ್ಪತ್ರೆಗೆ ದಾಖಲಿಸಿದ್ದ P422 ಕ್ರಮಸಂಖ್ಯೆಯ ದೀರ್ಘ ಕಾಲದ ಯಕೃತ್ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ 57 ವಯಸ್ಸಿನ ಪುರುಷ ರೋಗಿಯು ಎಪ್ರಿಲ್ 27ರಂದು ಕಲಬುರ್ಗಿಯ ಆಸ್ಪತ್ರಯಲ್ಲಿ ಮೃತಪಟ್ಟಿದಾರೆಂದು ವರದಿ ತಿಳಿಸಿದೆ.
ಇನ್ನು ದೇಶದ್ಯಾಂತ ಕೋವಿಡ್-19 ಪ್ರಕರಣಗಳ ಕುರಿತು ಮಾಹಿತಿ ನೀಡಿರುವಂತಹ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, 14 ದಿನಗಳ ಹಿಂದೆ 8.7 ಇದ್ದ ರೋಗ ದ್ವಿಗುಣಗೊಳ್ಳುವ ದರವು ಕಳೆದ 7 ದಿನಗಳಲ್ಲಿ 10.2 ಕ್ಕೆ ಏರಿತ್ತು. ಕಳೆದ ಮೂರು ದಿನಗಳಲ್ಲಿ ಅದು 10.9 ಕ್ಕೆ ಏರಿದೆಯೆಂದು ತಿಳಿಸಿದ್ದಾರೆ. ಈ ಮೊದಲು ಕರೋನಾ ಪ್ರಕರಣ ದಾಖಲಾಗಿದ್ದ 16 ಜಿಲ್ಲೆಗಳಲ್ಲಿ ಕಳೆದ 28 ದಿನಗಳಿಂದ ಯಾವುದೇ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿಲ್ಲವೆಂದು ಕೇಂದ್ರ ಸರ್ಕಾರ ಹೇಳಿದೆ.
ಕರ್ನಾಟಕದ ಕೊಡಗು, ಚಿತ್ರದುರ್ಗ ಹಾಗೂ ದಾವಣೆಗೆರೆ ಜಿಲ್ಲೆಗಳು ಸೇರಿದಂತೆ ಪುದುಚ್ಚೇರಿಯ ಮಾಹೆ,ಉತ್ತರಖಆಂಡಿನ ಪುರಿ ಗರ್ವಾಲ್,ರಾಜಸ್ಥಾನದ ಪ್ರತಾಪಗಢ್, ಛತ್ತೀಸ್ಗಢದ ದುರ್ಗ, ರಾಜ್ನಂದಗಾಂವ್ ಮತ್ತು ಬಿಲಾಸ್ಪುರ, ಮಣಿಪುರದ ಪೂರ್ವ ಇಂಫಾಲ, ಮಿಝೊರಾಂನ ಐಝ್ವಾಲ್, ತೆಲಂಗಾನದ ಭಧ್ರಾಧ್ರಿ ಕೊತ್ತಗುಢಂ, ದಕ್ಷಿಣ ಗೋವಾ, ಮಧ್ಯ ಪ್ರದೇಶದ ಶಿವಪುರಿ , ಮಹಾರಾಷ್ಟ್ರದ ಗೊಂಡಿಯ ಮತ್ತು ಬಿಹಾರದ ಲಖ್ಖಿ ಸರಾಯ್ ಜಿಲ್ಲೆಗಳಲ್ಲಿ ಕಳೆದ 28 ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ.