ಕೊಡಗು ವನ್ಯ ಜೀವಿ ಸಂಘದ ಮಾಜಿ ಅಧ್ಯಕ್ಷ, ನಿವೃತ್ತ ಸೇನಾಧಿಕಾರಿ ಕರ್ನಲ್ ಚೆಪ್ಪುಡೀರ.ಪಿ. ಮುತ್ತಣ್ಣ ಅವರು ಜಿಲ್ಲೆಯಲ್ಲಿ ಕಾಡಾನೆ – ಹುಲಿ ಹಾವಳಿ ತಡೆಗಟ್ಟಲು ಸರಕಾರಕ್ಕೆ ಸಲ್ಲಿಸಿರುವ ಕಾರ್ಯಯೋಜನೆಯನ್ನು ಮಾಧ್ಯಮಗಳಿಗೆ ಮಂಗಳವಾರ (ನವೆಂಬರ್ 3) ಸಂಜೆ ಮಂಡನೆ ಮಾಡಿದ್ದರು. ಆದರೆ ಬುಧವಾರ (ನವೆಂಬರ್ 4) ದಿವಸ ಪೂರ್ವಾಹ್ನ 10 ಗಂಟೆಗೆ ಸುಮಾರಿಗೆ ಗೋಣಿಕೊಪ್ಪದಿಂದ ಸುಮಾರು 1.5 ಕಿ.ಮೀ ಅಂತರದಲ್ಲಿ ಅತ್ತೂರು ಗ್ರಾಮದ ತಮ್ಮ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವುದನ್ನು ಪರಿಶೀಲಿಸಲು ತೆರಳಿದ ಸಂದರ್ಭ ಹಠಾತಾಗಿ ಒಂಟಿ ಸಲಗದ ದಾಳಿಗೆ ಸಿಲುಕಿ ಅದೃಷ್ಟವತಾಶ್ ಪಾರಾಗಿದ್ದಾರೆ. ಮೊದಲಿನಿಂದಲೂ ವನ್ಯ ಜೀವಿ ರಕ್ಷಣೆಗೆ ಹೋರಾಡುತ್ತಿರುವ ಇವರು ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಅದ್ಯಕ್ಷರೂ ಆಗಿದ್ದರು. ಇವರು ವನ್ಯಜೀವಿ – ಮಾನವ ಸಂಘರ್ಷ ತಗ್ಗಿಸಲು ಸರ್ಕಾರಕ್ಕೆ ಸಲ್ಲಿಸಿದ ವರದಿಯ ಮುಖ್ಯಾಂಶಗಳು ಹೀಗಿವೆ.
ಕೊಡಗು ಜಿಲ್ಲೆಯ ಒಟ್ಟು 4108 ಚ.ಕಿ.ಮಿ ವಿಸ್ತೀರ್ಣದಲ್ಲಿ ಶೇ32 ರಷ್ಟು ಅರಣ್ಯ ಪ್ರದೇಶವಿದ್ದು ಇಷ್ಟು ದೊಡ್ಡ ವ್ಯಾಪ್ತಿಯ ಅರಣ್ಯ ಪ್ರದೇಶ ಇರುವಾಗ ಸಹಜವಾಗಿಯೆ ವನ್ಯ ಪ್ರಾಣಿಗಳ ಹಾವಳಿ ಇದ್ದೆ ಇರುತ್ತದೆ. ಆದರೆ ಈ ಹಾವಳಿ ಇತ್ತೀಚೆಗೆ ಹೆಚ್ಚಾಗಿದೆ. ಅರಣ್ಯ ಪ್ರದೇಶದೊಳಗೆ ಕಾರಿಡಾರ್ (ವನ್ಯ ಪ್ರಾಣಿ ಸಂಪರ್ಕ ಮಾರ್ಗ)ಗೆ ತೊಂದರೆಯಾಗಿರುವುದರಿಂದ ವನ್ಯ ಪ್ರಾಣಿಗಳ ಸಂಚಾರಕ್ಕೆ ತೊಂದರೆಯಾಗಿ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮಕ್ಕೆ ನುಸುಳುತ್ತಿದೆ, ಕೊಡಗು ಜಿಲ್ಲೆಯಲ್ಲಿ ನಾಗರಹೊಳೆ ಅರಣ್ಯ ಪ್ರದೇಶದ ಒಟ್ಟು ವ್ಯಾಪ್ತಿಯ ಶೇ. 40ರಷ್ಟು ಕೊಡಗು ಜಿಲ್ಲೆಗು ಮತ್ತು ಶೇ 60 ರಷ್ಟು ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿದೆ, ನಾಗರಹೊಳೆ ಅರಣ್ಯ ಪ್ರದೇಶದಿಂದ ಬ್ರಹ್ಮಗಿರಿ ಅರಣ್ಯ ಪ್ರದೇಶಕ್ಕೆ ಕಾರಿಡಾರ್ ಇದೆ. ನಾಗರಹೊಳೆ ಅರಣ್ಯವು ಸಮತಟ್ಟಾದ ಪ್ರದೇಶವಾಗಿದೆ ಆದರೆ ಬ್ರಹ್ಮಗಿರಿ ಗುಡ್ಡಗಾಡು ಪ್ರದೇಶವಾಗಿದೆ. ನಾಗರಹೊಳೆಯಲ್ಲಿ ಬೇಸಿಗೆಯಲ್ಲಿ ನೀರು ಕಡಿಮೆ ಲಭ್ಯವಿರುತ್ತದೆ ಅಥವಾ ಬಹುತೇಕ ಬತ್ತಿ ಹೋಗಿರುತ್ತದೆ. ಮತ್ತು ಇಲ್ಲಿ ಹೆಚ್ಚಿನ ಬಿಸಿಲು, ಹೆಚ್ಚಿನ ತಾಪಮಾನ ಇರುತ್ತದೆ.
ಬ್ರಹ್ಮಗಿರಿ ಅರಣ್ಯವು ಕೊಡಗಿನ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಬರುತ್ತದೆ. ಇದು ನಿತ್ಯ ಹರಿದ್ವರ್ಣ ಅರಣ್ಯವಾಗಿದ್ದು ಬೇಸಿಗೆಯಲ್ಲಿಯೂ ಹೆಚ್ಚಿನ ನೀರಿನ ಅನುಕೂಲ ಇರುತ್ತದೆ. ನಾಗರಹೊಳೆ ಅರಣ್ಯದಲ್ಲಿ ಮಳೆಗಾಲದಲ್ಲಿ ಸಾಧಾರಣವಾದ ಮಳೆ, ಉತ್ತಮವಾದ ಆಹಾರ ಲಭ್ಯವಿರುತ್ತದೆ. ಮಳೆಗಾಲದಲ್ಲಿ ನಾಗರಹೊಳೆಯಲ್ಲಿ ಉತ್ತಮ ವಾತಾವರಣ ಇರುವುದರಿಂದ ಪ್ರಾಣಿಗಳಿಗೆ ಅನುಕೂಲಕರ ಸ್ಥಳವಾಗಿದ್ದರೆ ಬ್ರಹ್ಮಗಿರಿ ಅರಣ್ಯದಲ್ಲಿ ಮಳೆಗಾಲದಲ್ಲಿ ಹೆಚ್ಚಿನ ಮಳೆ ಮತ್ತು ಗಾಳಿ, ನೆಲದಲ್ಲಿ ತೇವಾಂಶ ಇರುವುದರಿಂದ ಪ್ರಾಣಿಗಳಿಗೆ ಅನುಕೂಲಕರವಾಗಿಲ್ಲ. ನಾಗರಹೊಳೆಯಿಂದ ಬ್ರಹ್ಮಗಿರಿ ಅರಣ್ಯಕ್ಕೆ ವನ್ಯಪ್ರಾಣಿಗಳೂ ಋತುಮಾನಕ್ಕೆ ತಕ್ಕಂತೆ ತೆರಳುವ ಕಾರಿಡಾರ್ ಗೆ ತಡೆಯಾಗಿದೆ. ಕೇರಳ ರಾಜ್ಯದ ಬೇಗೂರು ಪ್ರದೇಶದಲ್ಲಿ ಕಾರಿಡಾರ್ ಮುಚ್ಚಲ್ಪಟ್ಟಿದ್ದು, ಕಂಪನಿ ತೋಟದಿಂದ ಕಾರಿಡಾರ್ ಗೆ ತಡೆಯಾಗಿದೆ. ಇದಲ್ಲದೆ ಕೊಡಗು ಜಿಲ್ಲೆಯ ಕಡೆ ಫೈತ್ ಎಸ್ಟೇಟ್ ಹೂವಿನ ಕಾಡು, ಕೇರಳ ಗಡಿಯ ಪಿವಿಎಸ್ ಗ್ರೂಪ್ ಗೆ ಸೇರಿದ ನರಿಕಲ್ ಎಸ್ಟೇಟ್ ಮತ್ತು ಬಾರ್ಗಿರಿ ಎಸ್ಟೇಟ್ ತಡೆಯಾಗಿದೆ. ನರಿಕಲ್ ತೋಟವು ಕೇರಳದ ರಾಜ್ಯಸಭಾ ಸದಸ್ಯ ಅಬ್ದುಲ್ ವಹಬ್ ಎಂಬುವವರ ಒಡೆತನದಲ್ಲಿದೆ.
ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾದ ರೈಟ್ ಆಫ್ ಪ್ಯಾಸೇಜ್ ಎಂಬ ಗ್ರಂಥದಲ್ಲಿ ಬೇಗೂರು ಬ್ರಹ್ಮಗಿರಿ ಕಾರಿಡಾರ್ ಮುಚ್ಚಲ್ಪಟ್ಟಿರುವ ಬಗ್ಗೆ ಪುಟ ಸಂಖ್ಯೆ 666 ನಲ್ಲಿ ಉಲ್ಲೇಖ ವಾಗಿದೆ. ಇನ್ನೊಂದು ಕಾರಿಡಾರ್ ಬ್ರಿಟಿಷ್ ಆಡಳಿತದಲ್ಲಿ ಕೆಲವು ರಬ್ಬರ್ ಕಂಪನಿಗಳಿಗೆ ಅರಣ್ಯ ಜಾಗವನ್ನು ಲೀಸ್ ಗೆ ಕೊಡಲಾಯಿತು. ಅದು ಏಕೆ ಕೊಟ್ಟಿರಬಹುದು ಎಂದು ನಾನು ಹೇಳುವುದಾದರೆ ಆ ಸಮಯದಲ್ಲಿ ಯುದ್ದ, ವಾಹನಗಳಿಗೆ ಟಯರ್ ಇತ್ಯಾದಿಗಳಿಗೆ ರಬ್ಬರ್ ಬೇಕಾಗಿತ್ತು ಅದಕ್ಕಾಗಿ ರಬ್ಬರ್ ಬೆಳೆಸಲು ಜಾಗ ಲೀಸ್ಗೆ ನೀಡಿರಬಹುದು ಎಂದು ಭಾವಿಸುತ್ತೇನೆ. ಪೋರ್ಟ್ ಲ್ಯಾಂಡ್ ನಿಲಂಬೂರ್ ಕಡಮನಕಲ್ ರಬ್ಬರ್ ತೋಟದ ಒಟ್ಟು 4-5ಸಾವಿರ ಎಕರೆ ಅರಣ್ಯ ಜಾಗ ಈ ರಬ್ಬರ್ ಎಸ್ಟೇಟಿನ ವಶದಲ್ಲಿದೆ. ಇದು ಕೇರಳ ರಾಜ್ಯದ ಮನೋರಮ ಗ್ರೂಪ್ ರವರ ಮಾಲೀಕತ್ವದಲ್ಲಿದೆ. ಸರಕಾರ ನಿಯಮದಂತೆ 99 ವರ್ಷಕ್ಕೆ ಲೀಸ್ ಅವಧಿ ಮುಗಿಯುತ್ತದೆ. ಆದರೆ 999 ವರ್ಷಗಳಿಗೆ ಲೀಸ್ ಮಾಡಿಕೊಳ್ಳಲಾಗಿದೆ ಎಂದು ಮೇಲಿನ ಎಸ್ಟೇಟ್ ರವರು ಹೇಳುತ್ತಿದ್ಧಾರೆ. ಇದರ ಬಗ್ಗೆ ನ್ಯಾಯಾಲಯ ಇತ್ಯರ್ಥ ಪಡಿಸುತ್ತದೆ. ರಬ್ಬರ್ ತೋಟದಲ್ಲಿ ಹೆಚ್ಚು ರಾಸಾಯನಿಕ ಬಳಕೆ ಮತ್ತು ಯಾವುದೇ ಆಹಾರ ಸಸ್ಯ ಬೆಳೆಯದೆ ಇರುವುದರಿಂದ ಕಾರಿಡಾರ್ ತಡೆಯಾಗಿದೆ. ಮಾಕುಟ್ಟ, ಪಟ್ಟಿಘಾಟ್, ಕಡಮಕಲ್ ವಲಯ ರಬ್ಬರ್ ತೋಟದಲ್ಲಿ ಕಾಡಾನೆಗಳಿಗೆ ಯಾವುದೇ ಆಹಾರ ಸಿಗುವುದಿಲ್ಲ. ಅಲ್ಲದೆ ರಬ್ಬರ್ ತೋಟ ಕಾರಿಡಾರ್ ಅನ್ನು ತಡೆಮಾಡಿರುವುದರಿಂದ ಜಿಂಕೆ, ಹುಲಿ ಇತ್ಯಾದಿ ಪ್ರಾಣಿಗಳು ಸಹ ಗ್ರಾಮಗಳಿಗೆ ನುಸುಳುತ್ತಿದೆ.
ಸೋಮಾವಾರಪೇಟೆ ಉಪ ವಿಭಾಗದ ಒಂದು ಕಾರಿಡಾರ್ ಗೆ ತಡೆಯಾಗಿದೆ. ಯಡವನಾಡಿನಿಂದ ಪುಷ್ಪಗಿರಿ ನಡುವೆ ಕಾರಿಡಾರ್ ಗೆ ತಡೆಯಾಗಿದ್ದು ತಡೆಯಾಗಿರುವ ಪ್ರದೇಶ ಟಾಟ ಕಾಫಿ ತೋಟ ವ್ಯಾಪ್ತಿಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ಅಧ್ಯಯನ ನಡೆಸಿ ಅವಶ್ಯಕತೆ ಇದ್ದರೆ ಟಾಟ ಕಾಫೀ ಸಂಸ್ಥೆ ಜೊತೆ ಮಾತುಕತೆ ನಡೆಸುತೇವೆ. ಅರಣ್ಯದಲ್ಲಿ ಕಾಡ್ಗಿಚ್ಚು ಬೀಳುವುದು ಹೆಚ್ಚಾಗುತ್ತಿದೆ. ಕಾಡ್ಗಿಚ್ಚು ಬಿದ್ದ ನಂತರ ನೆಲಮಟ್ಟದಲ್ಲಿ ಸಸ್ಯ ಪ್ರಬೇಧ ನಾಶವಾಗಿ ಹೊಸದಾಗಿ ಗಾಂಧಿ ಗುಲಾಬಿ, ಲ್ಯಾಂಟೇನಾ ಬೆಳೆಯುತ್ತಿದೆ. ಇದು ವನ್ಯಪ್ರಾಣಿಗಳಿಗೆ ಆಹಾರ ಅಲ್ಲ. ಸಾಧಾರಣವಾಗಿ ನೆಲದ ಮೇಲಿನ ಕಾಡ್ಗಿಚ್ಚು ಹರಡುತ್ತದೆ. ಆದರೆ 2013ರಲ್ಲಿ ಆನೆಚೌಕೂರು ಅರಣ್ಯದ ಸುತ್ತಮುತ್ತ ಕೆನಾಪಿ (ಅರಣ್ಯದ ಮೇಲ್ಮಟ್ಟದ ಕಾಡ್ಗಿಚ್ಚು) ಮರದ ಎತ್ತರದಲ್ಲಿ ಕಾಡ್ಗಿಚ್ಚು ಹರಡಿ ಹೆಚ್ಚಿನ ಪ್ರಮಾಣದ ಅರಣ್ಯ ನಾಶವಾಯಿತು. ಇದರಿಂದ ಸೆನ್ನಾಸ್ ಸ್ಪೆಕ್ಟಾಬಿಲಿಸ್ ಈ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿತು. ಇದನ್ನು ಪ್ರಾಣಿಗಳು ತಿನ್ನುವುದಿಲ್ಲ. ಆನೆಚೌಕೂರು ವ್ಯಾಪ್ತಿಯಲ್ಲಿ ಸೆನ್ನಾಸ್ ಸ್ಪೆಕ್ಟಾಬಿಲೀಸ್ ಜಾತಿಯ ಸಸ್ಯಪ್ರಬೇಧ ಕಾಡ್ಗಿಚ್ಚಿನ ನಂತರ ಹೆಚ್ಚಿನ ಪ್ರದೇಶದಲ್ಲಿ ಬೆಳೆದಿರುವುದು ಕಂಡುಬಂದಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇರುವ ಒಟ್ಟು ಅರಣ್ಯಪ್ರದೇಶಗಳಲ್ಲಿ ಪ್ರಾಣಿಗಳಿಗೆ ಅಹಾರ ಮತ್ತು ಜೀವಿಸಲು ಯೋಗ್ಯವಾದ ಜಾಗದಲ್ಲಿ ಲ್ಯಾಂಟೆನಾ, ಸೆನ್ನಾಸ್ ಸ್ಪೆಕ್ಟಾಬಿಲೀಸ್ ತುಂಬಿಕೊಂಡಿದ್ದರಿಂದ ಪ್ರಾಣಿಗಳು ಜೀವಿಸಲು ಯೋಗ್ಯ ಜಾಗದ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಇದು ಹೊರತಾದ ಯೋಗ್ಯ ಜಾಗದಲ್ಲಿ ಎಲ್ಲಾ ಪ್ರಾಣಿಗಳು ಸೇರಿಕೊಂಡು ಕಾದಾಟ ಮಾಡಿ ಸೋಲುವ ಪ್ರಾಣಿಗಳು ಅಲ್ಲಿಂದ ಗ್ರಾಮಕ್ಕೆ ನುಸುಳುತ್ತಿವೆ. ಅರಣ್ಯ ಇಲಾಖೆ ಲ್ಯಾಂಟೆನಾ ಪ್ರದೇಶವನ್ನು ತೆರವುಗೊಳಿಸಲು ಅಲ್ಲಲ್ಲಿ ಪ್ರಯತ್ನಿಸುತ್ತಿದೆ. ಅದರೊಂದಿಗೆ ಕಾಡ್ಗಿಚ್ಚನ್ನು ನಿಯಂತ್ರಣ ಮಾಡಬೇಕಾಗಿದೆ. ಸರಕಾರ ಅರಣ್ಯ ರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ಅನುದಾನ ಹಾಗೂ ಯೋಜನೆಗಳನ್ನು ರೂಪಿಸಬೇಕು. ಹಾರಂಗಿ, ಚಿಕ್ಲಿಹೊಳೆ, ಕಬಿನಿ ಹಿನ್ನೀರು, ಪವರ್ ಲೈನ್, ಹೈವೆ, ರೈಲ್ವೆಮಾರ್ಗದಂತಹ ವಿವಿಧ ಅಭಿವೃದ್ಧಿ ಯೋಜನೆಗಳಿಂದ ಅರಣ್ಯ ಪ್ರದೇಶಕ್ಕೆ ತೊಂದರೆಯಾಗುತ್ತಿದೆ. ಇವುಗಳಿಗೆ ಪರಿಹಾರವಾಗಿ ಮುಚ್ಚಿಹೋಗಿರುವ ಕಾರಿಡಾರ್ಗಳನ್ನು ಮತ್ತೆ ತೆರೆಯಬೇಕು. ಅರಣ್ಯದಲ್ಲಿ ಕಾಡ್ಗಿಚ್ಚನ್ನು ನಿಯಂತ್ರಿಸಬೇಕು. ಅನಗತ್ಯ ಯೋಜನೆಗಳನ್ನು ಸ್ಥಗಿತಗೊಳಿಸಬೇಕು. ಅರಣ್ಯ ಕಾಪಾಡಲು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕಾಡಾನೆಗಳ ಸಾಂದ್ರತೆ ಹೆಚ್ಚಾಗಿದ್ದು, ಅವುಗಳನ್ನು ಬೇರೆ ಅರಣ್ಯಪ್ರದೇಶಕ್ಕೆ ಸ್ಥಳಾಂತರಿಸಿ ಸೂಕ್ತ ಸಾಂದ್ರತೆಯನ್ನು ಕಾಪಾಡಿಕೊಳ್ಳಬೇಕು.
ದೇವರಕಾಡು ಹಾಗೂ ನಿರ್ಲಕ್ಷ್ಯಕ್ಕೊಳಗಾದ ಕಾಫಿತೋಟಗಳಲ್ಲಿ ಕಾಡಾನೆಗಳು ಹಗಲಲ್ಲಿ ಆಶ್ರಯಪಡೆಯುತ್ತಿವೆ. ರಾತ್ರಿಯಾದಂತೆ ಗ್ರಾಮಗಳಿಗೆ ಅಲ್ಲಿಂದ ತೆರಳುತ್ತವೆ. ಪ್ರತಿದಿನ ಕಾಡಾನೆಗಳು ಅರಣ್ಯದಿಂದ ಬಂದು ಹಿಂತಿರುಗುತ್ತಿಲ್ಲ. ಇದು ಕೊಡಗಿನಾದ್ಯಂತ ಇರುವ ಸಮಸ್ಯೆಯಾಗಿದೆ. ಆದ್ದರಿಂದ ಇಂತಹ ನಿರ್ಲಕ್ಷ್ಯಕ್ಕೊಳಗಾದ ಕಾಫಿತೋಟ ಮತ್ತು ದೇವರಕಾಡು ಪ್ರದೇಶದಲ್ಲಿ ಕಾಡಾನೆಗಳು ಬೀಡುಬಿಡುವುದನ್ನು ನಿಯಂತ್ರಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ. ಭತ್ತದ ಗದ್ದೆಗಳಿಗೆ ಸೋಲಾರ್ ತೂಗುತಂತಿ ನಿರ್ಮಿಸುವುದರಿಂದ ಕಾಡಾನೆ, ಕಾಡುಹಂದಿ ಬರದಂತೆ ತಡೆಗಟ್ಟಬಹುದು. ಇದನ್ನು ಸರ್ಕಾರ ಹೆಚ್ಚಿನ ಸಹಾಯಧನದಲ್ಲಿ ನಿರ್ಮಿಸಲು ನೆರವು ನೀಡಬೇಕು. ಕೊಡಗಿನ ಟಾಟಾ ಕಾಫಿ ಸಂಸ್ಥೆಯ ತೋಟಕ್ಕೆ ನುಗ್ಗಿರುವ ಕಾಡಾನೆಗಳನ್ನು ಪತ್ತೆಹಚ್ಚುವ ಬಗ್ಗೆ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತೀದಿನ ಕಾಡಾನೆಗಳ ಚಲನವಲನದ ಬಗ್ಗೆ ಮತ್ತು ಅವುಗಳು ತೋಟದ ಯಾವಭಾಗದಲ್ಲಿ ಇವೆ ಎಂಬುವುದನ್ನು ಪತ್ತೆಹಚ್ಚಿ ತೋಟದಲ್ಲೇ ಕೆಲಸಮಾಡುವ ಕಾರ್ಮಿಕರಿಗೆ ನೀಡಲಾಗುತ್ತಿದೆ. ಇಂತಹ ಮುನ್ನೆಚ್ಚರಿಕೆಯ ಕಾರ್ಯಕ್ರಮಗಳನ್ನು ಸ್ಥಳೀಯರಿಗೆ ನೀಡುವ ಮೂಲಕ ಮಾನವ-ಕಾಡಾನೆ ಸಂವರ್ಷ ಮತ್ತು ಕಾಡಾನೆಯಿಂದ ಬೆಳೆನಾಶ ಪ್ರಮಾಣವನ್ನು ಕಡಿಮೆಮಾಡುವುದರೊಂದಿಗೆ ಸ್ಥಳೀಯರಿಗೆ ಉದ್ಯೋಗವೂ ದೊರೆಯುತ್ತದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯೊಂದಿಗೆ ಜಿಲ್ಲಾಧಿಕಾರಿಗಳು ಚರ್ಚಿಸಿ ಯೋಜನೆ ಜಾರಿಗೆ ತರಬೇಕು.
ಕೊಡಗು ಜಿಲ್ಲೆಯಲ್ಲಿ ಹಲವು ವರ್ಷದಿಂದ ಹುಲಿ ಹಾವಳಿಯು ಹೆಚ್ಚಾಗುತ್ತಿದೆ. ಹಸುಗಳನ್ನು ಹೆಚ್ಚಾಗಿ ಹಿಡಿದು ಕೊಲ್ಲುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಅರಣ್ಯದಿಂದ ಗ್ರಾಮಗಳಿಗೆ ಬರುತ್ತಿವೆ. ಇದಕ್ಕೆ ಮುಖ್ಯ ಕಾರಣ ಕಾಡುಹಂದಿಗಳ ಸಂಖ್ಯೆ ಗ್ರಾಮಗಳಲ್ಲಿ ಹೆಚ್ಚಾಗಿರುವುದು. ಆದ್ದರಿಂದ ಅರಣ್ಯದಿಂದ ಗ್ರಾಮಗಳಿಗೆ ಹುಲಿಗಳು ನುಗ್ಗುತ್ತಿದ್ದು, ಸುಲಭವಾಗಿ ಬೇಟೆಗೆ ಸಿಗುವ ಕಾಡುಹಂದಿಗಳನ್ನು ಬೇಟೆಯಾಡುತ್ತಿವೆ. ಇದರ ನಡುವೆ ಹಸುಗಳು ಎದುರಾದಾಗ ಅವುಗಳ ಮೇಲೆ ದಾಳಿ ಮಾಡುತ್ತಿರುವುದು ಅಂತೆಯೇ ಮನುಷ್ಯ ಎದುರಾದಾಗ ಸಹ ಮನುಷ್ಯನ ಮೇಲೆ ದಾಳಿ ಮಾಡುವ ಅಪಾಯ ಎದುರಾಗಿದೆ. ಕಾಡುಹಂದಿಗಳ ಸಂಖ್ಯೆ ಹೆಚ್ಚಾಗಿರುವುದಕ್ಕೆ ಗುಳ್ಳೆನರಿಗಳ ಸಂತತಿ ಕಡಿಮೆಯಾಗಿರುವುದು ಕಾರಣವಾಗಿದೆ. ಗುಳ್ಳೆನರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಸಂದರ್ಭದಲ್ಲಿ ಕಾಡುಹಂದಿಗಳ ಸಂತತಿ ನಿಯಂತ್ರಣದಲ್ಲಿತ್ತು. ಉದಾಹರಣೆಗೆ ಕಾಡುಹಂದಿಗಳು ಮರಿಮಾಡಿದಾಗ ಮರಿಗಳನ್ನು ಗುಳ್ಳೆನರಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಿಂದು ಹಾಕುತ್ತವೆ.
ಸರಕಾರ ರೈತರಿಗೆ ಬೇಕಾಗುವ ಉಪಯುಕ್ತ ಯೋಜನೆಗಳಿಗೆ ಅನುದಾನ ಇಲ್ಲ ಎನ್ನುತ್ತಿದೆ. ಆದರೆ ಸಾವಿರಾರು ಕೋಟಿಯ ರೈಲ್ವೆ ಯೋಜನೆ ಬಹುಪಥದ ಹೆದ್ದಾರಿ ಯೋಜನೆಗೆ ಅನುದಾನ ನೀಡಲು ಉತ್ಸುಕತೆ ತೋರುತ್ತಿರುವುದು ವಿಪರ್ಯಾಸ. ಮುಚ್ಚಲ್ಪಟ್ಟಿರುವ ಕಾರಿಡರ್ಗಳನ್ನು ತೆರೆಯುವುದು, ಮತ್ತು ಅರಣ್ಯ ಪ್ರದೇಶವನ್ನು ಅತಿಕ್ರಮಿಸಿಕೊಂಡಿರುವ ಆಹಾರಕ್ಕೆ ಯೋಗ್ಯವಲ್ಲದ ಸಸ್ಯಪ್ರಬೇಧಗಳನ್ನು ತೆರವುಮಾಡಿ ಆಹಾರಕ್ಕೆ ಪೂರಕವಾದ ಸಸ್ಯಪ್ರಬೇಧಗಳನ್ನು ಅಭಿವೃದ್ಧಿ ಮಾಡುವುದರಿಂದ ವನ್ಯಪ್ರಾಣಿಗಳು ಗ್ರಾಮಗಳಿಗೆ ನುಸುಳುವುದನ್ನು ಹೆಚ್ಚಿನ ಪ್ರಮಾಣದಲ್ಲಿ ತಡೆಗಟ್ಟಬಹುದಾಗಿದೆ. ಹೆಚ್ಚಿನ ಸಂರಕ್ಷಣಾ ಕಾಯ್ದೆಯಿಂದ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಗ್ರಾಮಕ್ಕೆ ಬರುವ ಹುಲಿಗಳನ್ನು ಹುಲಿ ಸಾಂದ್ರತೆ ಕಡಿಮೆ ಇರುವ ಅರಣ್ಯ ಪ್ರದೇಶಗಳಿಗೆ ಸ್ಥಳಾಂತರಿಸಬೇಕು. ಕುದುರೆಮುಖದ ಕಾರೆಕಟ್ಟೆ ಅರಣ್ಯ, ತೀರ್ಥಹಳ್ಳಿಯ ಶೆಟ್ಟಿಹಳ್ಳಿ ಅರಣ್ಯ, ದಾಂಡೇಲಿಯ ಅಸ್ಸಿ ಅರಣ್ಯದಲ್ಲಿ ಹುಲಿ ಸಾಂದ್ರತೆ ಕಡಿಮೆ ಇರುವುದರಿಂದ ಅಲ್ಲಿಗೆ ಸ್ಥಳಾಂತರಿಸಬಹುದಾಗಿದೆ.
ಹುಲಿ ಮತ್ತು ಕಾಡಾನೆ ಹಾವಳಿಗಳನ್ನು ಕೇವಲ ಅರಣ್ಯ ಇಲಾಖೆ ನಿಯಂತ್ರಿಸಲು ಸಾಧ್ಯವಿಲ್ಲ. ಇದನ್ನು ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ನಿಯಂತ್ರಿಸಬೇಕು. ಜಿಲ್ಲಾಧಿಕಾರಿಯವರು ರಾಜ್ಯಸರ್ಕಾರದ ಮುಖ್ಯಕಾರ್ಯದರ್ಶಿ ಅವರೊಂದಿಗೆ ಸಮಾಲೋಚನೆ ಮಾಡಿ ಪರಿಹಾರ ಉಪಾಯ ಕಂಡು ಹಿಡಿಯಬೇಕು. ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಯವರು, ಅರಣ್ಯ ಇಲಾಖಾಧಿಕಾರಿಗಳು, ಜಿ.ಪಂ. ಸಿ.ಇ.ಓ ವನ್ಯಪ್ರಾಣಿಗಳ ಬಗ್ಗೆ ಮಾಹಿತಿ ಇರುವ ಸಂಘ ಸಂಸ್ಥೆಗಳೊoದಿಗೆ ಚರ್ಚಿಸಿ ಸಮಸ್ಯೆ ನಿಯಂತ್ರಿಸಬಹುದಾಗಿದೆ. ಇದರಿಂದ ಮುಂದಿನ ದಿನ ಗಳಲ್ಲಿ ಸಮಸ್ಯೆ ಗಂಭೀರವಾಗುವುದನ್ನು ತಡೆಯಬುದಾಗಿದೆ ಎಂದು ಕರ್ನಲ್ ಮುತ್ತಣ್ಣ ಹೇಳಿದ್ದಾರೆ.