ಕರ್ನಾಟಕ ಕರಾವಳಿಯ ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಸ್ಥಾವರ ವಿಸ್ತರಿಸಿ 5 ಮತ್ತು 6ನೇ ಘಟಕಗಳನ್ನು ಕಾಳಿ ಹುಲಿ ಸಂರಕ್ಷಣಾ ಅರಣ್ಯದ ಸನಿಹದಲ್ಲೇ ಸ್ಥಾಪಿಸಲು ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಅನುಮತಿ ನೀಡಿದೆ.
ಕಾಳಿ ಟೈಗರ್ ರಿಸರ್ವ್ ಅರಣ್ಯ ಪ್ರದೇಶದಿಂದ ಕೇವಲ 1.300 ಕಿ. ಮೀ. ಸನಿಹದಲ್ಲಿ, ಕಾಳಿ ನದಿಯ ಜೀವವೈವಿಧ್ಯ ಅಳಿವೆ ಮತ್ತು ಕದ್ರ ಅಣೆಕಟ್ಟಿನ ಸಮೀಪದಲ್ಲಿ ತಲಾ 700 ಮೆಗಾ ವ್ಯಾಟ್ ಸಾಮರ್ಥ್ಯದ ಎರಡು ಅಣು ವಿದ್ಯುತ್ ಸ್ಥಾವರಗಳ ಸ್ಥಾಪನೆ ಆಗುತ್ತಿದೆ. ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯ ರಾಷ್ಟ್ರೀಯ ವನ್ಯಜೀವಿ ಮಂಡಳಿಯ National Board for Wildlife (NBWL) ಸ್ಥಾಯಿ ಸಮಿತಿ ಸಭೆಯಲ್ಲಿ ಹಸಿರು ನಿಶಾನೆ ನೀಡಲಾಗಿದೆ.
ಇವೆರಡು ಹೊಸ ಘಟಕಗಳ ನಿರ್ಮಾಣಕ್ಕೆ 2018ರ ಡಿಸೆಂಬರ್‌ನಲ್ಲಿ ನಡೆಸಲಾದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಪರಿಸರವಾದಿಗಳಿಂದ ಆಕ್ಷೇಪಣೆ ವ್ಯಕ್ತವಾಗಿತ್ತು. ಮತ್ತೊಂದೆಡೆ, ಕೈಗಾ ವ್ಯಾಪ್ತಿಯ ಗ್ರಾಮೀಣ ಭಾಗದ ಮೂಲ ಸೌಕರ್ಯ ಅಭಿವೃದ್ಧಿ ಆಗಲಿದೆ ಎಂದು ಯೋಜನೆಗೆ ತಾತ್ವಿಕ ಬೆಂಬಲವು ವ್ಯಕ್ತವಾಗಿತ್ತು. ಈ ಮಧ್ಯೆ, ಇತ್ತೀಚೆಗೆ ಕೈಗಾ ಅಣು ಸ್ಥಾವರ ವಿಸ್ತರಣೆ ಯೋಜನೆಯನ್ನು ಕೈಬಿಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ವಿನಂತಿಸಿ ಪತ್ರ ಬರೆದಿದ್ದರು. ಕೈಗಾದಲ್ಲಿ 5 ಮತ್ತು 6ನೇ ಅಣು ವಿದ್ಯುತ್ ಘಟಕಗಳ ಸ್ಥಾಪನೆಗೆ ಅನುಮತಿ ನೀಡಿರುವುದು ಆಘಾತಕಾರಿ ವಿಷಯವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಮೇಲೆ ಅಣುಸ್ಥಾವರ ಈಗಾಗಲೇ ದುಷ್ಪರಿಣಾಮ ಬೀರಿದೆ. ಹೊಸ ಘಟಕ ಸ್ಥಾಪನೆಯಿಂದ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಡುವ ಇದೆ ಎಂದು ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯ ಲಿಮಿಟೆಡ್ ಈಗಾಗಲೇ ಕಾರವಾರ ಸಮೀಪದ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿದೆ. 1992ರಲ್ಲಿ ತಲಾ 220 ಮೆಗಾ ವಾಟ್ ಸಾಮರ್ಥ್ಯದ ಆರು ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಪರಿಸರ ಅನುಮತಿ ದೊರೆತಿತ್ತು. ಪ್ರಸ್ತುತ ತಲಾ 220 ಮೆವಾ ಸಾಮರ್ಥ್ಯದ ನಾಲ್ಕು ಘಟಕಗಳು ಕೆಲಸ ಮಾಡುತ್ತಿವೆ. ಈಗ ಕೈಗಾರಿಕಾ ಸ್ಥಾವರ ಇರುವ 54 ಹೆಕ್ಟರ್ ಪ್ರದೇಶದಲ್ಲೇ ಹೊಸ 2 ಸ್ಥಾವರಗಳು ನಿರ್ಮಾಣ ಆಗಲಿರುವುದರಿಂದ ಹೊಸದಾಗಿ ಭೂಸ್ವಾಧೀನ ಇರುವುದಿಲ್ಲ. 2019 ಆಗಸ್ಟ್ 29ರಂದು ತಲಾ 700 ಮೆ.ವಾ. ಸಾಮರ್ಥ್ಯದ ಘಟಕಗಳಿಗೆ ಪರಿಸರ ಅನುಮತಿ ನೀಡಲಾಗಿದ್ದು, ಶೇಕಡ 50 ರಷ್ಟು ವಿದ್ಯುತ್ ಕರ್ನಾಟಕ ರಾಜ್ಯದ ಗ್ರಾಹಕರಿಗೆ ಪೂರೈಕೆ ಆಗಲಿದೆ. ಪ್ರಸ್ತಾವಿತ ಘಟಕಗಳ ಸ್ಥಾಪನೆಯಿಂದ ಸುಮಾರು 4500 ಜನರಿಗೆ ಉದ್ಯೋಗಾವಕಾಶ ಲಭಿಸಲಿದೆ.
ಹೊಸದಾಗಿ ಅರಣ್ಯ ಭೂಮಿ ಬಳಕೆ ಇಲ್ಲದಿದ್ದರೂ ಯೋಜನೆಯ ಅನುಷ್ಠಾನ ವೇಳೆ ಸುಮಾರು 8,700 ಮರಗಳನ್ನು ಕಡಿಯುವ ಅಗತ್ಯವಿದೆ. ಇದರ ಬದಲಾಗಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಎನ್‌ಪಿಸಿಎಲ್ ಅರಣ್ಯ ಬೆಳೆಸಲಿದೆ. ಕೈಗಾ ಅಣು ಸ್ಥಾವರದಿಂದ ಆ ಪ್ರದೇಶದ ಒಟ್ಟು ಜೀವವೈವಿಧ್ಯದ ಮೇಲೆ ಪ್ರತಿಕೂಲ ಪರಿಣಾಣ ಬೀರಲಿದೆ ಎಂಬುದನ್ನು ಒಪ್ಪಿಕೊಂಡಿರುವ ಎನ್‌ಪಿಸಿಎಲ್, ಕಾಳಿ ನದಿ ಮತ್ತು ಇತರ ಪ್ರದೇಶಗದಳಲ್ಲಿ ಮಾಲಿನ್ಯ ಮಟ್ಟವನ್ನು ಕನಿಷ್ಟ ಮಟ್ಟಕ್ಕೆ ನಿಯಂತ್ರಿಸಲಾಗುವುದು ಎಂದು ಹೇಳಿದೆ.
ಅಣು ಸ್ಥಾವರದ ಕಾಮಗಾರಿಯು ಸಂಪೂರ್ಣವಾಗಿ ಅರಣ್ಯ ಇಲಾಖೆಯ ಮೇಲುಸ್ತುವಾರಿಯಲ್ಲಿ ನಡೆಯಲಿದೆ. ಪ್ರದೇಶದ ಜೀವ ವೈವಿಧ್ಯಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಅನುಮತಿ ನೀಡುವಾಗ ಹಲವು ನಿಬಂಧನೆಗಳನ್ನು ಹೇರಲಾಗಿದೆ. ಅರಣ್ಯ ಪ್ರದೇಶದಲ್ಲಿ ಯಾವುದೇ ರೀತಿಯಲ್ಲಿ ನಿರ್ಮಾಣ ಸಲಕರಣೆಗಳನ್ನು ದಾಸ್ತಾನು ಮಾಡಬಾರದು, ರಾತ್ರಿ ವೇಳೆ ನಿರ್ಮಾಣ ಸರಕುಗಳ ಸಾಗಾಟ ಮಾಡಬಾರದು, ಯೋಜನೆಗೆ ಪೂರಕವಾಗಿ ನಿರ್ಮಾಣ ಆಗುವ ವಸತಿ ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಕೂಡ ಅರಣ್ಯ ಪ್ರದೇಶದಲ್ಲಿ ನಡೆಸಬಾರದು ಎಂದು ನಿಬಂಧನೆಯಲ್ಲಿ ಕಟ್ಟುನಿಟ್ಟಾಗಿ ಹೇಳಲಾಗಿದೆ.
ಅಣು ವಿದ್ಯುತ್ ಸ್ಥಾವರ ಕಾಳಿ ನದಿ ಅಳಿವೆ ತೀರ ಮತ್ತು ಅಣೆಕಟ್ಟು ಪ್ರದೇಶದಲ್ಲಿ ಇರುವುದರಿಂದ ಪರಿಸರವಾದಿಗಳು ಯೋಜನೆಯ ವಿಸ್ತರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಹಲವು ಅಣೆಕಟ್ಟುಗಳನ್ನು ಅತ್ಯಂತ ಕೆಟ್ಟದಾಗಿ ನಿರ್ವಹಣೆ ಮಾಡಲಾಗುತ್ತಿದ್ದು, ಡ್ಯಾಂಗಳ ನಿರ್ವಹಣೆ ಬಗ್ಗ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇರುವುದಿಲ್ಲ. ಅಣೆಕಟ್ಟುಗಳ ನಿರ್ವಹಣೆ ಮತ್ತು ಕಾಳಿ ನದಿ ಅಳಿವೆಯ ಜೀವವೈವಿಧ್ಯವು ಪರಿಸರವಾದಿಗಳ ಆತಂಕಕ್ಕೆ ಕಾರಣವಾಗಿದೆ.
ಇವೆರೆಡು ಹೊಸ ಘಟಕಗಳ ಸ್ಥಾಪನೆ ವಿಚಾರದಲ್ಲಿ ಸರಕಾರ ಪಾರದರ್ಶಕವಾಗಿ ವ್ಯವಹಾರಗಳನ್ನು ನಡೆಸಿಲ್ಲ ಎಂಬುದಾಗಿ ಪರಿಸರವಾದಿಗಳ ವಾದವಾಗಿದ್ದು, ಪರಿಸರ ಇಲಾಖೆಯಾಗಲಿ, ಇತರ ಪರಿಸರ ಪ್ರಾಧಿಕಾರಗಳಾಗಲಿ ಜನಜೀವನ ಮತ್ತು ಅರಣ್ಯ ಜೀವಿಗಳ ಬಗ್ಗೆ ಯಾವುದೇ ರೀತಿಯ ಕಾಳಜಿ ಹೊಂದಿಲ್ಲ ಎಂಬುದು ಯೋಜನೆಗೆ ಅನುಮತಿಗಳ ಅನುಮತಿಗಳು ವೇಗವಾಗಿ ದೊರಕಿರುವುದು ಇದಕ್ಕೆ ಉದಾಹರಣೆಯಾಗಿದೆ ಎನ್ನುತ್ತಾರೆ ಪರಿಸರ ಕಾರ್ಯಕರ್ತರು.