ಕಬ್ಬಿಣವನ್ನು ಕಾದು ಕೆಂಪಾದಾಗ ಬಡಿಯಬೇಕು ಎಂಬ ಮಾತಿದೆ. ಚೀನಾ ಈಗ ಮಾಡುತ್ತಿರುವುದು ಅದನ್ನೇ. ಭಾರತದ ಪರಿಸ್ಥಿತಿಯನ್ನು ನೋಡಿ ತೊಡೆ ತಟ್ಟುತ್ತಿದೆ. ಬಹಳ ವರ್ಷಗಳಿಂದ ಕಾದು ಈಗ ಅಬ್ಬರಿಸತೊಡಗಿದೆ. ಇದು ಆರಂಭ; ಚೀನಾದ ವರಸೆಗಳು ಇನ್ನೂ ಮೊನಚಾಗುವ ಸಾಧ್ಯತೆಗಳು ದಟ್ಟವಾಗಿವೆ. ದುರಾದೃಷ್ಟವೆಂದರೆ ಆರಂಭವೇ ಆದರೂ ಭಾರತದ ಪಾಲಿಗೆ ‘ಮೊಳಕೆಯಲ್ಲೇ ಚಿಗುಟುವಷ್ಟು’ ಸಲೀಸಾದ ಕೆಲಸವಂತೂ ಅಲ್ಲ. ಏಕೆಂದರೆ ಭಾರತದ ಸದ್ಯದ ನಾಯಕತ್ವ ಹಾಗೂ ಸದ್ಯದ ಪರಿಸ್ಥಿತಿ ಎರಡೂ ಪೂರಕವಾಗಿಲ್ಲ. ಇನ್ನೊಂದೆಡೆ ಸಕಲ ಸಿದ್ದತೆಯೊಂದಿಗೆ, ಮೊದಲಿಗೆ ರಣರಂಗಕ್ಕಿಳಿದಿರುವ ಚೀನಾ ಸ್ಥಿತಿ ಸಹಜವಾಗಿಯೇ ಸ್ವಲ್ಪ ಪ್ರಬಲವಾಗಿದೆ.
ಚೀನಾ ಸದ್ಯ 600 ಮೀಟರ್ ಭಾರತದ ಗಡಿಯೊಳಗೆ ಬಂದಿದೆ, 1 ಕಿಲೋ ಮೀಟರ್ ಬಂದಿದೆ ಎಂಬ ಸುದ್ದಿಗಳಿವೆ. ಇವು ಅಧಿಕೃತವಲ್ಲ. ಅಧಿಕೃತವಲ್ಲವೇ ಹೊರತು ಸುಳ್ಳು ಕೂಡ ಅಲ್ಲ. ಎಷ್ಟೋ ಒಂದಷ್ಟು ಗಡಿಯೊಳಗೆ ನುಸುಳಿದೆ. ಚೀನಾ ಇದ್ದಕ್ಕಿದ್ದಂತೆ ಭಾರತದ ಗಡಿಯೊಳಗೆ ನುಸುಳಿದೆ ಎಂಬ ಪ್ರಚಾರವಾಗುತ್ತಿದೆ. ಅದು ಕೂಡ ಪ್ರಮಾದವೇ. ಇದು ದಿಢೀರನೆ ನಡೆದ ಘಟನೆಯಂತೂ ಅಲ್ಲವೇ ಅಲ್ಲ. ಚೀನಾ ಇದಕ್ಕಾಗಿ ಭಾರೀ ತಯಾರಿ ನಡೆಸಿದೆ. ಈಗ ಸೂಕ್ತ ಸಂದರ್ಭ ಎಂದು ನಿರ್ಧರಿಸಿದೆ. ಚೀನಾಗೆ ಇದೇ ಸೂಕ್ತ ಸಂದರ್ಭ ಎಂದು ಅನಿಸಿದ್ದಾದರೂ ಏಕೆ? ಎಂಬುದನ್ನು ತಿಳಿಯಲು ಭಾರತದ ಕಳೆದ ಆರು ವರ್ಷದ, ಅಂದರೆ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆದಮೇಲೆ ಭಾರತದ ವಿದೇಶಾಂಗ ನೀತಿ ಹೇಗಿದೆ ಎಂಬುದನ್ನು ತಿಳಿಯಬೇಕು. ಅದರಲ್ಲೂ ನೆರೆಯ ದೇಶಗಳ ವಿಷಯದಲ್ಲಿ ಹೇಗಿದೆ ಎಂಬುದನ್ನು ತಿಳಿಯುವುದು ಇನ್ನೂ ಅವಶ್ಯಕ.
ಇಂದು ಚೀನಾ ಮಾತ್ರವಲ್ಲ, ಭಾರತದ ಸುತ್ತಲಿನ ಎಲ್ಲಾ ದೇಶಗಳೂ ಕತ್ತಿ ಮಸೆಯುತ್ತಿವೆ. ಪಾಕಿಸ್ತಾನದ ನಿಲುವಿನ ಬಗ್ಗೆ ಹೇಳುವ ಅಗತ್ಯ ಇಲ್ಲ. ಅಂಗೈ ಅಗಲದ ನೇಪಾಳ ಅಚ್ಚರಿಯ ರೀತಿಯಲ್ಲಿ ಭಾರತದ ವಿರುದ್ಧ ರಣಕಹಳೆ ಮೊಳಗಿಸಿದೆ. ಭಾರತ ಮತ್ತು ಚೀನಾ ನಡುವೆ ಸಿಲುಕಿರುವ ಟಿಬೆಟ್ ಮತ್ತು ಭೂತಾನ್ ದೇಶಗಳ ಸದ್ಯದ ಆಯ್ಕೆ ಚೀನಾವೇ ಆಗಿರಲಿದೆ. ಮ್ಯಾನ್ಮಾರ್, ಥೈಲ್ಯಾಂಡ್, ಇಂಡೋನೇಷಿಯಾ, ಮಲೇಷಿಯಾ ದೇಶಗಳಲ್ಲಿ ಚೀನಾ ಅಪಾರ ಪ್ರಮಾಣದ ಬಂಡವಾಳ ಹೂಡಿದೆ. ಎಷ್ಟರ ಮಟ್ಟಿಗೆ ಎಂದರೆ ಆ ದೇಶಗಳ ಆರ್ಥಿಕತೆ ಸಂಪೂರ್ಣವಾಗಿ ಚೀನಾದ ಬಂಡವಾಳವನ್ನು ಆಧರಿಸಿದೆ. ಇವು ಒಂದು ರೀತಿಯ ಋಣಭಾರದಲ್ಲಿವೆ. ಶ್ರೀಲಂಕಾದಲ್ಲಿ ಈಗಾಗಲೇ ಚೀನಾ ತನ್ನ ‘ಡಾರ್ಕ್ ಸೆಂಟರ್’ ಸೃಷ್ಟಿಸಿಕೊಂಡಿದೆ. ನೆರೆಯಲ್ಲಿ ಭಾರತದ ಪರ ಇರುವ ಏಕೈಕ ರಾಷ್ಟ್ರವೆಂದರೆ ಮುಸ್ಲಿಂ ದೇಶ ಎಂಬ ಕಾರಣಕ್ಕೆ ಭಾರತೀಯರು ಮೂಗು ಮುರಿಯುವ ಬಾಂಗ್ಲಾದೇಶ.
ಪ್ರಧಾನಿ ನರೇಂದ್ರ ಮೋದಿ ಅದ್ಭುತ ಭಾಷಣಕಾರ. ಚೆನ್ನಾಗಿ ಮಾತನಾಡುತ್ತಾರೆ. ಚೆನ್ನಾಗಿ ಉಪಚರಿಸುತ್ತಾರೆ. ಅಷ್ಟರಿಂದ ದೇಶದೇಶಗಳ ನಡುವಿನ ಗೆಳೆತನ ಗಟ್ಟಿಯಾಗುವುದಿಲ್ಲ. ಒಂದೊಮ್ಮೆ ಹಾಗೆ ಆಗುವುದಿದ್ದರೆ ಚೀನಾ ನಡುವೆ ಇಂಥ ಸಮಸ್ಯೆಯೇ ಉದ್ಭವಿಸುತ್ತಿರಲಿಲ್ಲ. ಏಕೆಂದರೆ ಪ್ರಧಾನಿಯಾದ ಬಳಿಕ 6 ವರ್ಷದಲ್ಲಿ ಮೋದಿ 5 ಬಾರಿ ಚೀನಾಕ್ಕೆ ಭೇಟಿ ನೀಡಿದ್ದಾರೆ. ಇದೊಂದು ದಾಖಲೆ. ಭಾರತದ ಯಾವ ಪ್ರಧಾನಿಯೂ ಚೀನಾಕ್ಕೆ 5 ಬಾರಿ ಭೇಟಿ ನೀಡಿಲ್ಲ. ಅಷ್ಟೇಯಲ್ಲದೆ ಚೀನಾ ಅಧ್ಯಕ್ಷರನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ. ಆದರೆ ಇಂದು ಏನಾಗುತ್ತಿದೆ?
ಯುದ್ಧ ಮಾಡಿ ಭಾರತದ ಒಂದಷ್ಟು ಜಾಗವನ್ನು ವಶಪಡಿಸಿಕೊಳ್ಳುವ ದರ್ದು ಚೀನಾಗೆ ಖಂಡಿತಕ್ಕೂ ಇಲ್ಲ. ಅದರಲ್ಲೂ ಭಾರತ ಚೀನಾ ನಡುವಿರುವ ಹಿಮಾಲಯದ ತಪ್ಪಲನ್ನು, ಕಡಿದಾದ ಕಣಿವೆಯನ್ನು ಗಳಿಸಿ ಅದು ಸಾಧಿಸುವುದು ಏನೂ ಇಲ್ಲ. ಈಗಾಗಲೇ ಆರ್ಥಿಕವಾಗಿ ಭಾರತಕ್ಕಿಂತ ಭಾರೀ ಅಭಿವೃದ್ಧಿ ಸಾಧಿಸಿರುವ ಚೀನಾ ಇನ್ನಷ್ಟು ಗಳಿಸುವ ಉದ್ದೇಶ ಹೊಂದಿದೆ. ತನ್ನ ಆರ್ಥಿಕ ಸಾಮ್ರಾಜ್ಯ ವಿಸ್ತರಿಸುವ ಅಭಿಲಾಷೆ ಹೊಂದಿದೆ. ತಾನು ಬಲಿಷ್ಠವಾಗುವುದರ ಜೊತೆಗೆ ಇತರರನ್ನು ದುರ್ಬಲಗೊಳಿಸುವ ಕೆಲಸವನ್ನೂ ಮಾಡುತ್ತಿದೆ. ಏಷ್ಯಾ ಉಪಖಂಡದಲ್ಲಿ ಮೊದಲಿಂದಲೂ ಭಾರತದ ಮೇಲೆ ಕಣ್ಣಿಟ್ಟಿತ್ತು. ಆದರೆ ಮೋದಿ ಬರುವ ಮುನ್ನ ಭಾರತದ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು. ಜೊತೆಗೆ ಪಾಕಿಸ್ತಾನವೊಂದನ್ನು ಹೊರತುಪಡಿಸಿ ಭಾರತ ನೆರೆಹೊರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿತ್ತು. ಇದರಿಂದ ಚೀನಾದ ಬೇಳೆ ಬೇಯುತ್ತಿರಲಿಲ್ಲ.
ಮೋದಿ ಪ್ರಧಾನಿ ಆದ ಬಳಿಕ ಭಾರತದ ಆರ್ಥಿಕತೆಯು ಇಳಿಮುಖವಾಗುತ್ತಿದೆ ಎಂಬುದನ್ನು ಹಲವಾರು ಸಂಗತಿಗಳು ಋಜುವಾತು ಮಾಡಿವೆ. ಇನ್ನೊಂದೆಡೆ ಚೀನಾದ ಆರ್ಥಿಕತೆ ಮೇಲ್ಮುಖವಾಗಿದೆ. ಯಾವ ದೇಶ ತಾನೇ ಕುಸಿಯುತ್ತಿರುವ ಆರ್ಥಿಕತೆ ಹೊಂದಿರುವ ದೇಶದೊಂದಿಗೆ ನಿಲ್ಲಲು ಬಯಸುತ್ತದೆ. ಭಾರತದ ವಿಷಯದಲ್ಲೂ ಇದೇ ಆಗಿದ್ದು. ನರೇಂದ್ರ ಮೋದಿ ನೆರೆಹೊರೆಯ ದೇಶಗಳ ಬಗ್ಗೆ ಒಳ್ಳೆಯ ಮಾತನಾಡಿದರು. ಆದರೆ ನೆರವು ನೀಡಲಿಲ್ಲ, ನೆರವು ನೀಡುವ ಭರವಸೆ ಹುಟ್ಟಿಸಲಿಲ್ಲ. ಇದರ ಪರಿಣಾಮ ಪಕ್ಕದ ದೇಶಗಳು ಶತ್ರುಪಾಳೆಯ ಸೇರಿಕೊಂಡವು.
ನಮ್ಮ ಸೇನಾ ಸಾಮರ್ಥ್ಯ ದೊಡ್ಡದಿದ್ದರೆ ಸಾಲದು. ಆರ್ಥಿಕವಾಗಿ ಕೂಡ ನಾವು ಬಲಾಢ್ಯರಾಗಿರಬೇಕು. ಇದು ಸದ್ಯದ ಅನಿವಾರ್ಯ. ಚೀನಾ ಇದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಮೊದಲಿಗೆ ನೆರೆಯ ರಾಷ್ಟಗಳನ್ನು ಹಿಡಿತಕ್ಕೆ ತೆಗೆದುಕೊಂಡಿದೆ. ಬಳಿಕ ಏಷ್ಯಾದಲ್ಲೇ ಬೃಹತ್ ಅರ್ಥ ವ್ಯವಸ್ಥೆಯಾಗುವತ್ತ ಚಿತ್ತ ಹರಿಸಿದೆ. ಆನಂತರದಲ್ಲಿ ಜಗತ್ತಿನಾದ್ಯಂತ ವಿಸ್ತರಿಸಿಕೊಳ್ಳಲು ಹಪಹಪಿಸುತ್ತಿದೆ. ಭಾರತ ನೆರೆಹೊರೆಯಲ್ಲೇ ನಲುಗಿ ಹೋಗಿದೆ. ಆರ್ಥಿಕತೆ ಮತ್ತು ವಿದೇಶಾಂಗ ನೀತಿ ಎರಡೂ ವಿಷಯಗಳಲ್ಲಿ ಮೋದಿ ಇಟ್ಟ ತಪ್ಪು ನಡೆ ಭಾರತದ ಭವಿಷ್ಯ ಮಂಕಾಗುವಂತೆ ಮಾಡಿವೆ ಎಂದರೆ ತಪ್ಪಾಗುವುದಿಲ್ಲ. ಸದ್ಯ ‘ಆತ್ಮನಿರ್ಭರ್’ ಅಂತಾ ಹೇಳುವುದಲ್ಲ, ‘ದೃಢ ನಿಶ್ಚಯ’ ಕೈಗೊಂಡು ಬಲಾಢ್ಯರಾಗಬೇಕಾಗಿದೆ. ಆಗ ಮಾತ್ರ ಚೀನಾವನ್ನು ಹಿಮ್ಮೆಟ್ಟಿಸಲು ಸಾಧ್ಯ.










