ಕೇರಳದ ಸಚಿವಾಲಯದಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದೆ. ವರದಿಗಳ ಪ್ರಕಾರ, ಜನರಲ್ ಅಡ್ಮಿನಿಸ್ಟ್ರೇಷನ್ ಡಿಪಾರ್ಟ್ಮೆಂಟ್ (GAD) ಅಡಿಯಲ್ಲಿ ಪ್ರೋಟೋಕಾಲ್ ವಿಭಾಗದ ಸೆಕ್ಷನ್ II ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೇರಳದ ಚಿನ್ನ ಹಗರಣ ಪ್ರಕರಣಕ್ಕೆ ಸಂಬಂಧಿಸಿದ ಫೈಲ್ಗಳನ್ನು ನಾಶ ಮಾಡಲು ಮತ್ತು ತನಿಖೆಯ ದಿಕ್ಕು ತಪ್ಪಿಸಲು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ನಿರ್ಣಾಯಕ ಸಾಕ್ಷ್ಯಗಳನ್ನು ನಾಶಮಾಡುವ ದೊಡ್ಡ ಪಿತೂರಿಯ ಭಾಗವೇ ಬೆಂಕಿ ಅವಘಡ ಎಂದು ಕೇರಳ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತಾಲಾ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆಜ್ಞೆಯ ಮೇರೆಗೆ ಈ ಪಿತೂರಿ ನಡೆದಿದೆ ಎಂದು ಚೆನ್ನಿತಾಲ ಆರೋಪ ಮಾಡಿದ್ದಾರೆ.
Also Read: ಕೇರಳ: ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಚಿನ್ನದ ಹಗರಣ
“ವಿದೇಶಿ ಪ್ರಯಾಣ ಮತ್ತು ರಾಜಕೀಯ ಕ್ಲಿಯರೆನ್ಸ್ಗೆ ಸಂಬಂಧಿಸಿದ ಎಲ್ಲಾ ಫೈಲ್ಗಳನ್ನು ಇಡಲಾಗಿದ್ದ GAD ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಾಷ್ಟ್ರೀಯ ತನಿಖಾ ದಳ(National Investigation Agency) GAD ಕಛೇರಿಯ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಕೇಳಿದೆ ಎಂಬುದನ್ನು ಯಾರೂ ಮರೆಯಬಾರದು. ಇದು ಮುಖ್ಯಮಂತ್ರಿ ವಿಜಯನ್ ಅರಿವಿದ್ದೇ ನಡೆದಿದೆ “ಎಂದು ಚೆನ್ನಿತಾಲ ಹೇಳಿದ್ದಾರೆ.
ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ನಿರ್ಣಾಯಕ ಸಾಕ್ಷ್ಯಗಳನ್ನು ನಾಶಮಾಡಲು ಬೆಂಕಿ ಹಚ್ಚಲಾಗಿದೆ ಎಂದು ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಕೂಡಾ ಆರೋಪಿಸಿದ್ದಾರೆ.

“ದಾಖಲೆಯಿಟ್ಟ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಮತ್ತು ಅಲ್ಲಿನ ಕೆಲವರಲ್ಲಿ COVID ಪಾಸಿಟಿವ್ ಬಂದ ಕಾರಣ ಕಚೇರಿಯನ್ನು ಮುಚ್ಚಲಾಗಿತ್ತು ಎಂದು ನಮಗೆ ತಿಳಿಸಿದ್ದಾರೆ. ಇದೊಂದು ಕಟ್ಟುಕತೆಯಂತೆ ಭಾಸವಾಗುತ್ತಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ಸಂಸ್ಥೆ ಈ ವಿಷಯವನ್ನು ಗಮನಿಸಬೇಕು. ಕೆಲವು ದಿನಗಳ ಹಿಂದೆ, ಸಿಸಿಟಿವಿಯ ಎಲ್ಲಾ ದೃಶ್ಯಗಳು ಸಿಡಿಲಾಘಾತಕ್ಕೆ ಹಾನಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು. ತನಿಖೆ ವಿಜಯನ್ ಅವರನ್ನು ತಲುಪುವ ಸಮಯದಲ್ಲಿಯೇ ಈ ಪ್ರಕರಣದಲ್ಲಿ ಲಭ್ಯವಿರುವ ಬಹುತೇಕ ಸಾಕ್ಷ್ಯಗಳು ನಾಶವಾಗುತ್ತಿವೆ” ಎಂದು ಸುರೇಂದ್ರನ್ ಹೇಳಿದ್ದಾರೆ.

ಕಂಪ್ಯೂಟರ್ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಾಗಿದೆ ಎಂದು GAD ಹೆಚ್ಚುವರಿ ಕಾರ್ಯದರ್ಶಿ ಪಿ ಹನಿ ಹೇಳಿದ್ದಾರೆ. ಅತಿಥಿ ಗೃಹಗಳ ಕೊಠಡಿ ಕಾಯ್ದಿರಿಸುವಿಕೆಗೆ ಸಂಬಂಧಿಸಿದ ಕೆಲವು ಫೈಲ್ಗಳು ಹಾನಿಗೊಳಗಾಗಿದೆ. ಬೆಂಕಿಯ ಘಟನೆಯಲ್ಲಿ ಯಾವುದೇ ಪ್ರಮುಖ ಫೈಲ್ ಹಾನಿಗೊಳಗಾಗಲಿಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಚೆನ್ನಿತಾಲಾ, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಭೇಟಿಯಾಗಿ ಬೆಂಕಿಯ ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ಕೋರಿದ್ದಾರೆ, ಅದೇ ವೇಳೆ ಕೇರಳ ಸರ್ಕಾರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೋಜ್ ಅಬ್ರಹಾಂ ಅವರಿಗೆ ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಆದೇಶಿಸಿದೆ.
ಘಟನೆಗೆ ಸಂಬಂಧಿಸಿದಂತೆ ಹಲವಾರು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಸಚಿವಾಲಯದ ಹೊರಗಡೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಜಲ ಫಿರಂಗಿಗಳನ್ನು ಬಳಸಬೇಕಾಯಿತು.