ಆರ್.ಆರ್ ನಗರ ಮತ್ತು ಶಿರಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಹಣಬಲದ ಮೂಲಕ ಗೆಲುವು ಸಾಧಿಸಲು ಬಿಜೆಪಿ ಹೊರಟಿದ್ದಾರೆ. ಆದರೆ ಶಿರಾದಲ್ಲಿ ಹಣಬಲದಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಹಣಬಲದಿಂದ ಶಿರಾದಲ್ಲಿ ಗೆಲ್ಲಲು ಆಗಲ್ಲ. ಎಲ್ಲಾ ಸಂಧರ್ಭದಲ್ಲೂ ಹಣಬಲದಿಂದ ಗೆಲ್ಲುತ್ತೇವೆ ಅನ್ನೋದು ಭ್ರಮೆ. ಕೆ.ಆರ್ ಪೇಟೆಯಲ್ಲಿ ಕಮಲ ಅರಳಿಸಿದಂತೆ ಶಿರಾದಲ್ಲಿ ಕಮಲ ಅರಳಿಸಲು ಆಗಲ್ಲ. ಅಂದಿನ ಚುನಾವಣೆಗೂ ಇಂದಿನ ಚುನಾವಣೆಗೂ ವ್ಯತ್ಯಾಸವಿದೆ. ‘ಎವೆರಿ ಡೇಸ್ ಇಸ್ ನಾಟ್ ಸಂಡೆ’ ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಳೀನ್ ಕುಮಾರ್ ಕಟೀಲ್ ಗೆ ಘನತೆಯೇ ಇಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಹೇಗಿದ್ದೆ ಎಂದು ಜನತೆಗೆ ಗೊತ್ತು. ನನ್ನಷ್ಟು ಜನಸಾಮಾನ್ಯರಿಗೆ ಸಿಗುವವ ಬೇರೆ ಯಾರು ರಾಜಕಾರಣಿ ಇಲ್ಲ. ಅಧಿಕಾರ ಇಲ್ಲದಿದ್ದರೂ ಜನ ನಮ್ಮ ಮನೆಗೆ ಬರುತ್ತಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಎಷ್ಟು ಬಡ ಜನರಿಗೆ ಸಹಾಯ ಮಾಡಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ವಿರುದ್ಧ ಕಿಡಿಕಾರಿದ್ದಾರೆ.

ಸಮ್ಮಿಶ್ರ ಸರ್ಕಾರ ಉರುಳಲು ಕಾಂಗ್ರೆಸ್ ನಾಯಕರೇ ಕಾರಣ ಎಂಬ ಡಿಸಿಎಂ ಅಶ್ವಥ್ ನಾರಾಯಣ್ ಆರೋಪದ ಕುರಿತು ಮಾತನಾಡಿದ ಕುಮಾರಸ್ವಾಮಿ, ಅಶ್ವಥ್ ನಾರಾಯಣ್ ಹಾಗೆ ಹೇಳಿದ್ದಾರೆಂದರೆ ಅವರಿಗೂ ನಿಖರವಾದ ಮಾಹಿತಿ ಇರಬೇಕಲ್ಲವೇ?, ಸತ್ಯಗಳು ಈಗ ಹೊರಗಡೆ ಬರುತ್ತಿವೆ. ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣವಾದವರ ಕುರಿತು ಜನರು ಅಂತಿಮ ನಿರ್ನಯ ಮಾಡಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸಿದ್ದರಾಮಯ್ಯ ಐದು ವರ್ಷ ಸರ್ಕಾರ ನಡೆಸಿ ಮಾಡಿರುವ ಅಭಿವೃದ್ಧಿಗಿಂತ ಹದಿನಾಲ್ಕು ತಿಂಗಳಲ್ಲಿ ನಾನು ಹೆಚ್ಚು ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.











