ಲಾಕ್ಡೌನ್ ಹಿನ್ನಲೆಯಲ್ಲಿ ಬಾಕಿಯಾಗಿರುವ ವಲಸೆ ಕಾರ್ಮಿಕರನ್ನು ಗುರುತಿಸಿ, ಅವರಿಗೆ ಆಹಾರ, ವಸತಿ ಹಾಗೂ ಉಚಿತ ಪ್ರಯಾಣ ವ್ಯವಸ್ಥೆಯನ್ನು ಕಲ್ಪಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳಿಗೆ ನಿರ್ದೇಶಿಸುವಂತೆ ಸುಪ್ರಿಂ ಕೋರ್ಟ್ ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನಿರಾಕರಿಸಿದ ಸುಪ್ರೀಂ ಕೋರ್ಟ್ ಈ ಕುರಿತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಮೂರ್ತಿಗಳಾದ ಎಲ್ ನಾಗೇಶ್ವರ ರಾವ್, S K ಕೌಲ್ ಹಾಗೂ B R ಗವಾಯಿ, ರಸ್ತೆಯಲ್ಲಿ ನಡೆಯುವ ವಲಸೆ ಕಾರ್ಮಿಕರನ್ನು ತಡೆಯಲು ನ್ಯಾಯಾಲಯಕ್ಕೆ ಹೇಗೆ ಸಾಧ್ಯವಾಗುತ್ತದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ರೈಲ್ವೇ ಹಳಿ ಮೇಲೆ ಮಲಗುವವರನ್ನು ಯಾರಾದರೂ ಹೇಗೆ ತಡೆಯಬಹುದು ಎಂದು ನ್ಯಾಯಮೂರ್ತಿ ಕೌಲ್ ಕೇಳಿದ್ದಾರೆ. ಜನರು ರಸ್ತೆಯ ಮೇಲೆ ನಿರಂತರ ನಡೆಯುತ್ತಿದ್ದಾರೆ, ನಾವು ಹೇಗೆ ಅವರನ್ನು ನಿಲ್ಲಿಸುವುದು ಎಂದು ಪ್ರಶ್ನಿಸಿದ್ದಾರೆ.
ಕೋರ್ಟಿನ ಗಮನ ಸೆಳೆಯಲು ಮಹಾರಾಷ್ಟ್ರದಲ್ಲಿ ರೈಲು ಹಳಿಯ ಮೇಲೆ ಮೃತ ಪಟ್ಟ 16 ವಲಸೆ ಕಾರ್ಮಿಕರು ಹಾಗೂ ಗುನ ರಸ್ತೆ ಅಪಘಾತದಲ್ಲಿ ಅಸುನೀಗಿದ 8 ವಲಸೆ ಕಾರ್ಮಿಕರ ಕುರಿತು ಅರ್ಜಿ ಹಾಕಿರುವ ವಕೀಲ ಅಲಖ್ ಅಲೋಕ್ ಶ್ರೀವಾಸ್ತವ್ ಉಲ್ಲೇಖಿಸಿದರು.

ಎಲ್ಲಾ ವಕೀಲರು ವೃತ್ತ ಪತ್ರಿಕೆಯನ್ನು ಓದಿ, ಪ್ರತಿಯೊಂದು ವಿಷಯದ ಬಗ್ಗೆ ತಿಳಿದಿರುತ್ತಾರೆ. ನಿಮಗೆ ಗೊತ್ತಿರುವ ಮಾಹಿತಿ ಕೇವಲ ನ್ಯೂಸ್ ಪೇಪರ್ ಆಧಾರಿತ. ನೀವು ಈ ಕುರಿತು ನ್ಯಾಯಾಲಯ ತೀರ್ಮಾನಿಸಲಿ ಎಂದು ಬಯಸುತ್ತಿದ್ದೀರಿ, ಆದರೆ ಸರ್ಕಾರಗಳು ಈ ಕುರಿತು ತೀರ್ಮಾನಿಸಲಿ ಎಂದು ನ್ಯಾ. ಕೌಲ್ ಅರ್ಜಿದಾರರ ಬಳಿ ಹೇಳಿದ್ದಾರೆ.
ಬಳಿಕ ಸರ್ಕಾರದ ಪರ ವಕೀಲ ತುಷಾರ್ ಮೆಹ್ತಾ ಅವರ ಬಳಿ, “ಸರ್ಕಾರ ಈ ಕುರಿತು ಯಾವ ಕ್ರಮ ಕೈಗೊಂಡಿದೆ” ಎಂದು ನ್ಯಾ. ರಾವ್ ಕೇಳಿದರು.
ಸರ್ಕಾರ ಈಗಾಗಲೇ ವಲಸೆ ಕಾರ್ಮಿಕರಿಗೆ ಅಂತರ್ ರಾಜ್ಯ ಸಾರಿಗೆಯನ್ನು ಒದಗಿಸಿದೆ. ಆದರೂ ತಮ್ಮ ಸರದಿಗಾಗಿ ಕಾಯದೆ ಕಾರ್ಮಿಕರು ನಡೆಯಲು ಶುರು ಮಾಡಿದ್ದಾರೆ, ಅವರನ್ನು ಬಲವಂತವಾಗಿ ತಡೆದು ನಿಲ್ಲಿಸಲು ಸಾಧ್ಯವಿಲ್ಲವೆಂದು ಸರ್ಕಾರದ ಪರ ವಕೀಲ ಮೆಹ್ತಾ ಹೇಳಿದ್ದಾರೆ.