ಕರ್ನಾಟಕದಲ್ಲಿ ರೈತ ಪರ ಚಳವಳಿಗಳಲ್ಲಿ ಸಕ್ರಿಯರಾಗಿದ್ದ ಸಿಪಿಎಂ ನಾಯಕ ಮಾರುತಿ ಮಾನ್ಪಡೆ ಇಂದು ಅಸುನೀಗಿದ್ದಾರೆ. ಕೋವಿಡ್-19 ಮತ್ತು ನ್ಯುಮೋನಿಯಾದಿಂದ ಸೋಲಾಪುರದ ಆಸ್ಪತ್ರೆಗೆ ದಾಖಲಾಗಿದ್ದ ಅವರು ತಮ್ಮ 67ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ.
ರೈತ ಚಳವಳಿಗಳಿಂದಲೇ ಮುನ್ನೆಲೆಗೆ ಬಂದಿದ್ದ ಮಾನ್ಪಡೆ ಅವರು, ತಮ್ಮ ಕೊನೇಯ ದಿನಗಳಲ್ಲಿ ಕೂಡಾ ರೈತ ಪರ ಹೋರಾಟದಲ್ಲಿ ಸಕ್ರೀಯರಾಗಿದ್ದರು. ಲಾಕ್ಡೌನ್ನ ಹೊರತಾಗಿಯೂ ಸಾಮಾಜಿಕ ಅಂತರಗಲನ್ನು ಕಾಪಾಡಿಕೊಂಡು ಯಶಸ್ವಿ ಹೋರಾಟಗಳನ್ನು ಆಯೋಜಿಸುವತ್ತ ತಮ್ಮ ಗಮನವನ್ನು ಕೇಂದ್ರಿಕರಿಸಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದ್ವಿದಳ ದಾನ್ಯಗಳನ್ನು ಸುಂಕ ರಹಿತವಾಗಿ ಭಾರತಕ್ಕೆ ಆಮದು ಮಾಡಿಕೊಳ್ಳುವುದನ್ನು ತೀವ್ರವಾಗಿ ವಿರೋಧಿಸಿದ್ದ ಮಾನ್ಪಡೆ ಅವರು, ದೇಸೀಯ ಧಾನ್ಯ ಬೆಳೆಗಾರರ ಅಭಿವೃದ್ದಿಗಾಗಿ ಅವಿರತವಾಗಿ ಶ್ರಮಿಸಿದರು. ಧಾನ್ಯಗಳನ್ನು ಆಮದು ಮಾಡಿಕೊಳ್ಳಲು ಕನಿಷ್ಟ ಪಕ್ಷ 30% ಸುಂಕ ವಿಧಿಸಬೇಕೆಂದು ಆಗ್ರಹಿಸಿದ್ದರು. ರೈತರ ಸಮಸ್ಯೆಗಳು ಹೆಚ್ಚಾಗಲು ಕೇಂದ್ರ ಸರ್ಕಾರದ ಆಮದು ನೀತಿಗಳೇ ಕಾರಣ ಎಂಬ ವಿಚಾರವನ್ನು ಮಾನ್ಪಡೆ ಅವರು ಬಲವಾಗಿ ನಂಬಿದ್ದರು.
ಕಲಬುರ್ಗಿಯಲ್ಲಿಯೇ ಹೆಚ್ಚಿನ ಸಮಯದಿಂದ ವಾಸವಿದ್ದ ಕಾರಣಕ್ಕೆ, ಅಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದ್ದ ಧಾನ್ಯ ಬೆಳೆಗಾರರ ಪರವಾಗಿ ಅವರು ದನಿ ಎತ್ತಿದ್ದರು. ಅದಾನಿಯಂತಹ ಅತೀ ದೊಡ್ಡ ಕಂಪೆನಿಗಳಿಗೆ ಯಾವುದೇ ಸುಂಕವಿಲ್ಲದೇ ಧಾನ್ಯಗಳನ್ನು ಆಮದು ಮಾಡಿಕೊಳ್ಳಲು ಪರವಾನಿಗೆ ನೀಡಿದ್ದು ರೈತರ ಹಿತಕ್ಕೆ ಮಾರಕ ಎಂದು ಅವರು ಪ್ರತಿಪಾದಿಸಿದ್ದರು.
ಚುನಾವಣೆಯಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆ ಮಾಡಿದ್ದ ಮಾರುತಿ ಮಾನ್ಪಡೆ ಅವರು, ಸಫಲರಾಗಿರಲಿಲ್ಲ. ಬೀದರ್ ಲೋಕಸಭಾ ಕ್ಷೇತ್ರದಿಂದ ಒಮ್ಮೆ ಸ್ಪರ್ಧಿಸಿದ್ದ ಮಾನ್ಪಡೆ ಅವರು ಜೆಡಿಎಸ್ನೊಂಡಿದೆ ಮೈತ್ರಿ ಮಾಡಿಕೊಂಡಿದ್ದರೂ ಸೋಲು ಕಾಣಬೇಕಾಯಿತು. ನಂತರ ಮೂರು ಬಾರಿ ವಿಧಾನಸಭಾ ಚುನಾವಣೆಗೆ ಕಮಲಾಪುರ ಮತ್ತು ಗುಲ್ಬರ್ಗಾ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾನ್ಪಡೆಯವರಿಗೆ ಯಶಸ್ಸು ಸಿಗಲಿಲ್ಲ. ಸಂಸತ್ತಿನಲ್ಲಿ ಅಥವಾ ವಿಧಾನಸಭೆಯಲ್ಲಿ ರೈತರ ದನಿಯನ್ನು ಪ್ರತಿಧ್ವನಿಸಬೇಕೆಂಬ ಅವರ ಆಶಯ ಕೊನೆಗೂ ಈಡೇರಲಿಲ್ಲ.
ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾಗಿದ್ದ ಮಾನ್ಪಡೆ ಅವರು ರೈತ ವಿರೋಧಿ ನೀತಿಗಳ ಹಾಗೈ ಕಾಯ್ದೆಗಳ ವಿರೋಧಿಯಾಗಿದ್ದರು. ಇತ್ತೀಚಿಗೆ ನಡೆದ ರೈತ ಸಂಘದ ಪ್ರತಿಭಟನೆಗಳಲ್ಲಿಯೂ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಐಕ್ಯ ಸಮಿತಿಯ ಸದಸ್ಯರೂ ಆಗಿದ್ದ ಮಾನ್ಪಡೆ ಅವರು, ಇತ್ತೀಚಿಗೆ ಜಾರಿಗೆ ತರಲಾದ ಎಪಿಎಂಪಿ ತಿದ್ದಪಡಿ ಕಾಯ್ದೆ, ಕಾಂಟ್ರಾಕ್ಟ್ ಫಾರ್ಮಿಂಗ್ ಕಾಯ್ದೆ ಹಾಗೂ ಇತರ ರೈತ ವಿರೋಧಿ ಕಾಯ್ದೆಗಳ ವಿರುದ್ದದ ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಾಕಷ್ಟು ಜನರೊಂದಿಗೆ ಬೆರೆತು ಹೋರಾಟವನ್ನು ಸಂಘಟಿಸಿದ ನಂತರ ಕೋವಿಡ್ ಸೋಂಕು ಅವರನ್ನು ಮಂಕಾಗಿಸಿತ್ತು. ಮೊದಲು ಗುಲ್ಬರ್ಗಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ ದಾಖಲಾಗಿದ್ದ ಅವರನ್ನು ನಂತರ ಸೋಲಾಪುರಕ್ಕೆ ವರ್ಗಾಯಿಸಲಾಗಿತ್ತು.
ಸೋಲಾಪುರದಿಂದ ಅವರನ್ನು ಮುಂಬೈ ಅಥವಾ ಹೈದರಾಬಾದ್ಗೆ ಸ್ಥಳಾಂತರಿಸುವ ಯೋಚನೆ ಇತ್ತಾದರೂ, ಅದಕ್ಕೂ ಮುಂಚೆ ಅವರು ದೈವಾಧೀನರಾದರು. ಮರಣದ ನಂತರ ಅವರ ಮೃತದೇಹವನ್ನು ಕಲಬುರ್ಗಿಗೆ ತರಲು ಅಡಚೆನ ಉಂಟಾಗಿದೆ. ಕಲಬುರ್ಗಿ ಜಿಲ್ಲಾಡಳಿತ ನಿರಾಕ್ಷೇಪಣಾ ಪತ್ರ ನೀಡಿದಲ್ಲಿ ಮಾತ್ರ ಅವರ ದೇಹವನ್ನು ನೀಡುವುದಾಗಿ ಸೋಲಾಪುರದ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯ ಕಂಡ ಓರ್ವ ಶ್ರೇಷ್ಟ ರೈತ ಪರ ಹಾಗೂ ಕಾರ್ಮಿಕಪರ ಹೋರಾಟಗಾರ ಇಂದು ನಮ್ಮೊಂದಿಗಿಲ್ಲ. ಸಂಘಟನೆ ಹಾಗೂ ಹೋರಾಟದಲ್ಲೇ ತಮ್ಮ ಜೀವನವನ್ನು ಮುಗಿಸಿದ ಮಾನ್ಪಡೆ ಅವರು ರಾಜ್ಯದ ಎಲ್ಲಾ ರೈತ ಚಳವಳಿಗೆ ಸ್ಪೂರ್ತಿಯ ಸೆಲೆಯಾಗಿ ನಿಂತಿದ್ದಾರೆ.