ಕಾಂಗ್ರೆಸ್ ಪಕ್ಷದಲ್ಲಿ ಇತ್ತೀಚಿಗೆ ಒಂದು ಪ್ರಮುಖ ಬೆಳವಣಿಗೆಯೊಂದು ನಡೆದಿತ್ತು. 23 ಮಂದಿ ಹಿರಿಯ Congress ನಾಯಕರು ಸೋನಿಯಾ ಗಾಂಧಿಗೆ ಒಂದು ಪತ್ರ ಬರೆಯುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಪೂರ್ಣಕಾಲಿಕ ಅಧ್ಯಕ್ಷನ ನೇಮಕ ಮಾಡಬೇಕು ಎಂದು ಆಗ್ರಹ ಮಾಡಿದ್ದರು. ಪೂರ್ಣಕಾಲಿಕ ಅಧ್ಯಕ್ಷರ ನೇಮಕದಿಂದ ದೇಶದಲ್ಲಿ ಪ್ರಬಲ ಆಗಿರುವ ಬಿಜೆಪಿ ವಿರುದ್ಧ ಹೋರಾಟ ಮಾಡಲು ಅನುಕೂಲ ಎನ್ನುವುದನ್ನು ತಿಳಿಸಿದ್ದರು. ಆದರೆ ಇದು ಕಾಂಗ್ರೆಸ್ ಹೈಕಮಾಂಡ್‌ಗೆ ಸಿಟ್ಟು ತರಿಸಿತ್ತು. ಕಳೆದ ವಾರ ನಡೆದ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಈ ವಿಚಾರ ಪ್ರಸ್ತಾಪವಾಗಿತ್ತು. ಸ್ವತಃ ಸೋನಿಯಾ ಗಾಂಧಿ ಭಾಗಿಯಾಗಿದ್ದ ಸಭೆಯಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಿಚಾರ ಪ್ರಸ್ತಾಪ ಮಾಡಿದರು ಎನ್ನಲಾಗಿತ್ತು. ಸೋನಿಯಾ ಗಾಂಧಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ವೇಳೆ ಪತ್ರ ಬರೆದಿದ್ದು ಸರಿಯೇ ಎನ್ನುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿತ್ತು. ಬಿಜೆಪಿ ಬೆಂಬಲಿಸುವಿರಾ..? ಎಂದಿದ್ದಾರೆ ಎನ್ನುವ ಬಗ್ಗೆಯೂ ಸಾಕಷ್ಟು ಮಾತುಗಳ ಬದಲಾವಣೆ ಆಗಿತ್ತು. ಆದರೆ, ಇದೀಗ ಆ 23 ಮಂದಿ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸೋನಿಯಾಗೆ ಬರೆದ ಪತ್ರದ ಬಗ್ಗೆ ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಹಾಗೂ ರಾಹುಲ್, ಪ್ರಿಯಾಂಕ ಗಾಂಧಿ ಜೊತೆಗೆ ಸೋನಿಯಾ ಗಾಂಧಿ ಚರ್ಚೆ ನಡೆಸಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಸೋನಿಯಾ ಗಾಂಧಿಗೆ ಪತ್ರ ಬರೆದ ಬಗ್ಗೆ ಯಾವುದೇ ಆಕ್ಷೇಪಣೆ ಇಲ್ಲದಿದ್ದರೆ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ವಿಷಯ ಪ್ರಸ್ತಾಪ ಆಗುತ್ತಿದ್ದಂತೆ ನಾಯಕರು ಅಧ್ಯಕ್ಷರಿಗೆ ಬರೆದು ಕೇಳಿಕೊಂಡಿರುವ ಪತ್ರದ ಬಗ್ಗೆ ಯಾವುದೇ ಚರ್ಚೆ ಬೇಡ. ಅಧ್ಯಕ್ಷರ ನೇಮಕ ಹಾಗೂ ಪಕ್ಷದಲ್ಲಿ ಉದ್ಬವ ಆಗಿರುವ ಗೊಂದಲಗಳ ಬಗ್ಗೆ ಚರ್ಚೆ ಮಾಡೋಣ ಎನ್ನಬಹುದಿತ್ತು. ಆದರೆ ಪತ್ರ ಬರೆದ ಬಗ್ಗೆಯೇ ಸುದೀರ್ಘ ಚರ್ಚೆ ನಡೆಯಲು ಅವಕಾಶ ಮಾಡಿಕೊಟ್ಟರು. ಅಂತಿಮವಾಗಿ ಇದು ನಮ್ಮ ಪಕ್ಷೆದ ಒಳಗೆ ನಡೆದಿರುವ ಸಣ್ಣ ಘಟನೆ ಅಷ್ಟೆ. ಇದನ್ನು ಮುಂದುವರಿಸುವುದು ಬೇಡ. ಇನ್ಮುಂದೆಯೂ ಒಂದು ಕುಟುಂಬವಾಗಿ ಇರೋಣ, ಬಿಜೆಪಿ ವಿರುದ್ಧ ಹೋರಾಟ ಮಾಡೋಣ ಎಂದಿದ್ದರು. ಆದರೆ ಕಾಂಗ್ರೆಸ್ ಪಕ್ಷ ತನ್ನದೇ ನಾಯಕರ ಮೇಲೆ ಸೇಡಿನ ಕ್ರಮಕ್ಕೆ ಮುಂದಾಗಿರುವಂತಿದೆ ಕಾಂಗ್ರೆಸ್‌ನ ಇತ್ತೀಚಿನ ನಡೆಗಳು.
ಮಾಜಿ ಕೇಂದ್ರ ಸಚಿವ ಜಿತಿನ್ ಪ್ರಸಾದ್ ಸೇರಿದಂತೆ ಪತ್ರ ಬರೆದ ಎಲ್ಲಾ ನಾಯಕ ಮೇಲೆ ಕ್ರಮಕೈಗೊಳ್ಳಬೇಕು ಎಂದು ಉತ್ತರ ಪ್ರದೇಶ ಕಾಂಗ್ರೆಸ್ ನಿಂದ ಕಾಂಗ್ರೆಸ್ ಹೈಕಮಾಂಡ್ ಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಮೌನಕ್ಕೆ ಶರಣಾಗಿದ್ದರೂ ಪತ್ರಕ್ಕೆ ಸಹಿ ಹಾಕಿದ್ದ ಹಿರಿಯ ನಾಯಕ ಕಪಿಲ್ ಸಿಬಲ್ ಮಾತ್ರ ಈ ಕ್ರಮವನ್ನು ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ. ಉತ್ತರ ಪ್ರದೇಶ ಕಾಂಗ್ರೆಸ್ ನಲ್ಲಿ ಅಧಿಕೃತವಾಗಿಯೇ ಜಿತಿನ್ ಪ್ರಸಾದ್ ಅವರನ್ನು ಗುರಿಯಾಗಿಸುತ್ತಿರುವುದು ದುರಾದೃಷ್ಟಕರ, ಬಿಜೆಪಿಯನ್ನು ಟಾರ್ಗೆಟ್ ಮಾಡಬೇಕಿರುವ ಕಾಂಗ್ರೆಸ್ ಪಕ್ಷ ತನ್ನದೇ ಪಕ್ಷದ ನಾಯಕರನ್ನು ಗುರಿಯನ್ನು ಇಟ್ಟುಕೊಂಡು ತನ್ನ ಶಕ್ತಿಯನ್ನು ವ್ಯರ್ಥ ಮಾಡುತ್ತಿದೆ. ಎಂದು ಖಾರವಾಗಿ ಬರೆದಿದ್ದರು.
Unfortunate that Jitin Prasada is being officially targeted in UP
Congress needs to target the BJP with surgical strikes instead wasting its energy by targeting its own
— Kapil Sibal (@KapilSibal) August 27, 2020
ಜಿತಿನ್ ಪ್ರಸಾದ್ ಅವರ ತಂದೆ ಜಿತೇಂದ್ರ ಪ್ರಸಾದ್ ಅವರು 1999ರಲ್ಲಿ ಸೋನಿಯಾ ಗಾಂಧಿ ಅವರ ನಾಯಕತ್ವವನ್ನು ಪ್ರಶ್ನಿಸಿದ್ದರು. ಆ ಬಳಿಕ ಅಧ್ಯಕ್ಷಗಾದಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದ ಕುಟುಂಬ ಅವರದ್ದು, ಹಾಗಿದ್ದರೂ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಟ್ಟು ಕೇಂದ್ರದಲ್ಲಿ ಮಂತ್ರಿಯನ್ನಾಗಿ ಮಾಡಿದ್ದೀರಿ. ಇಷ್ಟೆಲ್ಲಾ ಮಾಡಿದ ಬಳಿಕವೂ ವಿವೇಚನೆ ಇಲ್ಲದೆ ಪತ್ರ ಬರೆದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಆದರೆ, ಉತ್ತರ ಪ್ರದೇಶ ರಾಜ್ಯ ಕಾಂಗ್ರೆಸ್ ಮಾತ್ರ ಇದನ್ನು ಕಾರ್ಯಕರ್ತರ ಭಾವನೆ ಎಂದು ತಳ್ಳಿ ಹಾಕಿದ್ದು, ಈ ರೀತಿಯ ಪತ್ರ ಬರೆಯುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ ಉತ್ತರ ಪ್ರದೇಶ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು.
ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ನಸೀಬ್ ಪಠಾಣ್ ಆಗ್ರಹಿಸಿದ್ದರು. ಇದಾದ ಬಳಿಕ ಮಾತನಾಡಿರುವ ಗುಲಾಂ ನಬಿ ಆಜಾದ್, ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಯದಿದ್ದರೆ ಇನ್ನೂ ಮುಂದಿನ 50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷದ ಸ್ಥಾನವೇ ಗತಿ ಎಂದು ವ್ಯಂಗ್ಯವಾಡಿದ್ದಾರೆ. ಅಂದರೆ ಪಕ್ಷದಲ್ಲಿ ಆಂತರಿಕವಾಗಿ ಚುನಾವಣೆ ನಡೆದು ಅಧ್ಯಕ್ಷನಾದರೆ ಎಲ್ಲರ ಬೆಂಬಲದೊಂದಿಗೆ ಪಕ್ಷವನ್ನು ಮುನ್ನಡಸಬಹುದು. ಕಾಂಗ್ರೆಸ್ ಪಕ್ಷದ ಭವಿಷ್ಯ ಕೂಡ ಉತ್ತಮ ಸ್ಥಿತಿ ತಲುಪುತ್ತದೆ. ಒಂದೊಮ್ಮೆ ನೇರವಾಗಿ ನೇಮಕಗೊಳ್ಳುವ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರಿಗೆ ಪಕ್ಷದಲ್ಲಿ ಶೇಕಡ 1ರಷ್ಟು ಬೆಂಬಲವೂ ಇಲ್ಲದೆಯೂ ಇರಬಹುದು. ಚುನಾವಣೆ ನಡೆದು ಅಧ್ಯಕ್ಷನಾದರೆ ಕನಿಷ್ಟ ಪಕ್ಷ ಶೇಕಡ 51ರಷ್ಟು ಪಕ್ಷದ ನಾಯಕರ ಬೆಂಬಲವಾದರೂ ಇರುತ್ತದೆ ಎಂದಿದ್ದರು.

ಒಟ್ಟಾರೆ, ಕಾಂಗ್ರೆಸ್ ನಲ್ಲಿ ಆಂತರಿಕ ರಾಜಕೀಯದ ಬೇಗುದಿ ಹೊರಬಿದ್ದಿದೆ. ಇದನ್ನು ಇಲ್ಲೇ ಮಟ್ಟ ಹಾಕೋಣ ಎನ್ನುವ ಮನಸ್ಥಿತಿಯನ್ನು ಕಾಂಗ್ರೆಸ್ ಪಕ್ಷ ಹೊಂದದೇ ಇದ್ದರೆ ಮುಂದಿನ ದಿನಗಳಲ್ಲಿ ಗುಲಾಂ ನಬಿ ಆಜಾದ್ ಅವರು ಹೇಳಿದಂತೆ ಪಕ್ಷ ಅವತಿಯ ಹಾದಿ ಹಿಡಿಯುವುದು ಶತಸಿದ್ಧ. ಆದರೆ ಎಲ್ಲಾ ಹುದ್ದೆಗಳಿಗೂ ಚುನಾವಣೆ ಮೂಲಕವೇ ಆಯ್ಕೆ ಮಾಡುವ ಪದ್ಧತಿ ಪಕ್ಷಕ್ಕೆ ಅನುಕೂಲ. ಸೋನಿಯಾ ಬಳಿಕ ರಾಹುಲ್, ರಾಹುಲ್ ಬಳಿಕ ಅವರ ಪುತ್ರ ಎನ್ನುತ್ತಾ ವಂಶಪಾರಂಪರಿಕವಾಗಿ ಅಧ್ಯಕ್ಷರಾಗುತ್ತಿದ್ದರೆ ರಾಜಪ್ರಭುತ್ವದಂತೆ ಆಗಲಿದ್ದು ಜನರು ವಿಶ್ವಾಸ ಕಳೆದುಕೊಳ್ಳಲಿದ್ದಾರೆ. ಜನರ ವಿಶ್ವಾಸ ಗಳಿಸಬೇಕು ಎನ್ನುವುದು ಕಾಂಗ್ರೆಸ್ ಉದ್ದೇಶವಾಗಿದ್ದರೆ ಚುನಾವಣೆ ನಡೆಸುವುದು ಸೂಕ್ತವಾಗಿದೆ.









