ಕರೋನಾ ದೇಶ ಅಷ್ಟೇ ಅಲ್ಲ ವಿಶ್ವದಲ್ಲೇ ಮಾರ್ದನಿಸುತ್ತಿದೆ. ಕರ್ನಾಟಕದಲ್ಲೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಇದೀಗ ಲಾಕ್‌ಡೌನ್ ಸಡಿಲಿಕೆ ಕೊಟ್ಟಿರುವುದರಿಂದ ಸೋಂಕು ಮತ್ತಷ್ಟು ತೀಕ್ಷ್ಣವಾಗಿ ಹರಡುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಅಂದಾಜಿಸುತ್ತಿದ್ದಾರೆ. ಈ ನಡುವೆ ಲಾಕ್‌ಡೌನ್ ನಿಯಮದಿಂದ ಅಂತ್ಯಕ್ರಿಯೆ ಹಾಗೂ ವಿವಾಹ ಕಾರ್ಯಕ್ರಮಗಳಿಗೆ ವಿನಾಯಿತಿ ಸಿಕ್ಕಿಲ್ಲ. ಅಂತ್ಯಕ್ರಿಯೆಗಳಲ್ಲಿ ಭಾಗಿಯಾಗಲು ಈ ಹಿಂದಿನಂತೆ ಜನರು ಸೇರದೆ ಇರುವ ಪರಿಸ್ಥಿತಿ ಎದುರಾಗಿದೆ. ಯಾರಾದರೂ ಸತ್ತಿದ್ದಾರೆ ಎಂದರೆ ಹೇಗೆ ಸತ್ತರು, ಜ್ವರ ಬಂದಿತ್ತೋ, ಶೀತ ಏನಾದರೂ ಆಗಿತ್ತಾ ಎಂದು ಪ್ರಶ್ನಿಸುವ ಮಟ್ಟಕ್ಕೆ ಜನರ ಮನಸ್ಥಿತಿ ಬೆಳೆದುಕೊಂಡಿದೆ. ಇಷ್ಟೆಲ್ಲಾ ಗೊಂದಲಗಳ ನಡುವೆ ಇಲ್ಲೊಬ್ಬರು ಆಪತ್ಭಾಂದವ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಇದ್ದಾರೆ.
ಚಾಮರಾಜನಗರದ ಪೂರ್ವ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹೆಚ್.ಬಿ ಮಾದೇಗೌಡ, ಮಾನಸಿಕ ಅಸ್ವಸ್ಥನೊಬ್ಬನ ಅಂತ್ಯಕ್ರಿಯೆ ಮಾಡಿರುವ ಕ್ರಮ ಅಪಾರ ಜನಮೆಚ್ಚುಗೆ ಗಳಿಸಿದೆ. ಈ ಬಗ್ಗೆ ಮಾಹಿತಿ ಪಡೆದ ಪ್ರತಿಧ್ವನಿ ಖುದ್ದಾಗಿ ಮಾದೇಗೌಡರನ್ನು ಸಂಪರ್ಕ ಮಾಡಿದಾಗ ಅವರು ಹೇಳಿದಿಷ್ಟು. ‘ಮೇ 4ರ ರಾತ್ರಿ ಚಾಮರಾಜನಗರ ಸತ್ಯಮಂಗಲ ಕಾಡಂಚಿನ ಗ್ರಾಮವಾದ ದೊಡ್ಡ ಮೂಡಹಳ್ಳಿಯ ಮಾನಸಿಕ ಅಸ್ವಸ್ಥನೊಬ್ಬ ಕಾಡಾನೆ ದಾಳಿಗೆ ಒಳಗಾಗಿ ಸಾವನ್ನಪ್ಪಿದ್ದನು. ಅದೇ ಗ್ರಾಮದ ಯುವಕ ಮಾಹಾದೇವ ಎಂಬಾತ ಕಾಡಿಗೆ ಕಟ್ಟಿಗೆ ತರಲು ತೆರಳುತ್ತಿರುವಾಗ ಈತ ಸತ್ತು ಬಿದ್ದಿರುವುದು ಗಮನಕ್ಕೆ ಬಂದಿದೆ. ಆತ ನೇರವಾಗಿ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದ. ಆ ಬಳಿಕ ಅರಣ್ಯ ಇಲಾಖೆಯಿಂದ ನಮಗೆ ಮಾಹಿತಿ ಬಂದಿತ್ತು. ನಾನು ಹಾಗೂ ನಮ್ಮದೇ ಠಾಣೆಯ ಧಪೇದಾರ್ ರಾಜೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆವು. ಕಾಡಂಚಿನ ಗ್ರಾಮವಾಗಿದ್ದರಿಂದ ಸಾಗಾಟ ಮಾಡಲು ಅಸಾಧ್ಯವಾಗಿತ್ತು ಹಾಗಾಗಿ ಮೇಲಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಕೊಟ್ಟು ಸ್ಥಳದಲ್ಲೇ ಪೋರ್ಸ್ ಮಾರ್ಟಂ ಮಾಡಿಸಿ ಅಂತ್ಯಕ್ರಿಯೆಯನ್ನೂ ಮುಗಿಸಿದೆವು’ ಎನ್ನುತ್ತಾರೆ
ಪಿಎಸ್ಐ ಹೆಚ್ ಬಿ ಮಾದೇಗೌಡ ಕೆಲಸಕ್ಕೆ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ನಾಗ ನಾಯ್ಕ್ ಎಂಬುವರೂ ಕೂಡ ಸಹಾಯ ಮಾಡಿದ್ದು, ಅನಾಥ ಶವವನ್ನು ಹೂಳುವುದಕ್ಕೆ ಗುಂಡಿ ತೋಡಿಸಿಕೊಟ್ಟಿದ್ದು ಅನುಕೂಲ ಆಯ್ತು. ಮಾದೇಗೌಡ ಅವರು ಕಳೆದ 31 ವರ್ಷಗಳಿಂದ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ನಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯಾವುದೇ ಅನಾಥ ಶವ ಇದೆ ಎನ್ನುವ ಮಾಹಿತಿ ತಿಳಿದೊಡನೆ ನಾನು ಸ್ವಯಂ ಪ್ರೇರಣೆಯಿಂದ ಹೋಗುತ್ತೇನೆ. ನನ್ನ ಕೈಲಾಗುವ ಮಟ್ಟದಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತೇನೆ. ಇದರಿಂದ ಜೀವ ಒಂದಕ್ಕೆ ಮುಕ್ತಿ ನೀಡದ ಭಾವನೆ ನನ್ನಲ್ಲಿ ಮೂಡುತ್ತದೆ ಎಂದು ತುಂಬಾ ಸರಳವಾಗಿ ಹೇಳುತ್ತಾರೆ ಪಿಎಸ್ಐ ಹೆಚ್ ಬಿ ಮಾದೇಗೌಡ. ಚಾಮರಾಜಪೇಟೆ ಜಿಲ್ಲೆ ಗುಡ್ಲುಪೇಟೆ ತಾಲೂಕಿ ಹಂಗಲ ಗ್ರಾಮದ ಮಾದೇಗೌಡರ ಮಾನವೀಯತೆ ಎಲ್ಲೆಡೆ ಪ್ರಶಂಸೆಗೆ ಒಳಗಾಗಿದೆ.
ವೆಂಕಟೇಶ್ ವೆಂಕಿ ಎಂಬುವರು ಹೆಚ್ ಬಿ ಮಾದೇಗೌಡರ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು. ಪುಣಜನೂರು ಗ್ರಾಮ ಪಂಚಾಯತಿಗೆ ಸೇರಿದ NH 209 ದೊಡ್ಡಮೂಡಹಳ್ಳಿ ಗ್ರಾಮದ ಪಕ್ಕದಲ್ಲಿ ಯಾರೋ ಮಾನಸಿಕ ಅಸ್ವಸ್ಥನೊಬ್ಬ ನೆಡೆದುಕೊಂಡು ಬರುವಾಗ ಕಾಡನೆಗಳ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕರವನ್ನು ತನ್ನ ಸಂಬಂಧಿಯೇನೋ ಎಂಬಂತೆ ಅಂತ್ಯಸಂಸ್ಕಾರ ನೆರವೇರಿಸಿದ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ಸಹಾಯಕ ಆರಕ್ಷಕ ನಿರೀಕ್ಷಕರದ ಶ್ರೀ ಮಾದೇಗೌಡ ಅವರು ನಿಜಕ್ಕೂ ಅಭಿನಂದನಾರ್ಹರು, ಇಂತಹ ಸರಳ ಸಂಸ್ಕಾರಯುತ ಅಧಿಕಾರಿಯನ್ನು ಪಡೆದ ನಾವು ಪುಣ್ಯವಂತರು, ಸರ್ಕಾರ ಇಂತಹ ಪ್ರಾಮಾಣಿಕ ಅಧಿಕಾರಿಗೆ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರಪತಿ ಪದಕಕ್ಕೆ ಪರಿಗಣಿಸಬೇಕು ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಗಳು ಇವರ ಹೆಸರನ್ನು ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಶಿಫಾರಸ್ಸು ಮಾಡಬೇಕು, ಹೀಗೆ ಮಾಡಿದರೆ ನಮ್ಮ ಜಿಲ್ಲೆಗೂ ಹೆಮ್ಮೆ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಟ್ವಿಟ್ಟರ್‌ನಲ್ಲೂ ಮಾದೇಗೌಡರ ಗುಣಗಾನ ನಡೆದಿದ್ದು, ಕಾರ್ತಿಕ್ ನಾಯಕ ಎಂಬುವರು ಮಾದೇಗೌಡರ ಮಾನವೀಯತೆ ಬಗ್ಗೆ ಬರೆದುಕೊಂಡಿದ್ದು, ಕರೋನಾ ಸಮಯದಲ್ಲಿ ಯಾರೂ ಸಹಾಯಕ್ಕೆ ಬಾರದಿದ್ದರೂ ASI ಹೆಚ್ ಬಿ ಮಾದೇಗೌಡ ಗೌರವಾಯುತ ಅಂತ್ಯಸಂಸ್ಕಾರ ನಡೆಸಿರುವುದು ಮಾನವೀಯತೆ ಸಾಕ್ಷಿ ಎಂಬಂತೆ ಬರೆದುಕೊಂಡಿದ್ದಾರೆ. ಸುಮಾರು 2 ಸಾವಿರ ಜನರು ಇವರ ಕೆಲಸವನ್ನು ಇಷ್ಟಪಟ್ಟಿದ್ದು, ಸುಮಾರು 400 ಜನರು ರೀಟ್ವೀಟ್ ಮಾಡಿದ್ದಾರೆ. ಈ ರೀತಿಯ ಮಾನವೀಯತೆ ಹೊಂದಿರುವ ಅಧಿಕಾರಿಗಳಿಗೆ ಸಲ್ಲಬೇಕಾದ ಗೌರವ ಸಲ್ಲಬೇಕು ಎಂದು ಒತ್ತಾಯವನ್ನೂ ಮಾಡಿದ್ದಾರೆ. ಒಟ್ಟಾರೆ ಯಾವುದೇ ಪ್ರಶಸ್ತಿ ಗೌರವಗಳಿಗೆ ಬೆನ್ನು ಬೀಳದ ASI ಹೆಚ್ ಬಿ ಮಾದೇಗೌಡ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಅದರಲ್ಲೂ ಕರೋನಾ ಸಾಂಕ್ರಾಮಿಕ ಪಿಡುಗಿನ ಬೆನ್ನು ಬಿದ್ದಿರುವ ಗ್ರಾಮಸ್ಥರು ಇಂತವರು ಮಾಡುವ ಕೆಲಸಕ್ಕೆ ಸಾಥ್ ನೀಡಿದಲ್ಲಿ ನಿಜಕ್ಕೂ ಸಹಕಾರಿ.