ಏಮ್ಸ್ (All India Institute Of Medical Sciences) ಆಸ್ಪತ್ರೆ ಕರ್ನಾಟಕಕ್ಕೂ ಬರುವ ಕಾಲ ಕೂಡಿ ಬಂದಿದೆ. ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುವ ಈ ಸಂಸ್ಥೆಯಲ್ಲಿ ವಿಶ್ವದರ್ಜೆಯ ಪ್ರಮುಖ ವೈದ್ಯಕೀಯ ಸಲಕರಣೆಗಳು (Medical instruments) ಲಭ್ಯವಾಗಲಿವೆ. ಯಾವ ಉಪಕರಣ ಖಾಸಗಿ ಆಸ್ಪತ್ರೆಗಳಲ್ಲೂ ಹೊಂದಿಲ್ಲವೋ ಆ ಉಪಕರಣಗಳು ಕೂಡ ಏಮ್ಸ್(All India Institute Of Medical Sciences) ಸಂಸ್ಥೆ ಹೊಂದಿರಲಿದೆ ಎನ್ನುವುದೇ ಈ ಸಂಸ್ಥೆಯ ಹೆಗ್ಗಳಿಕೆ. ಈ ರೀತಿಯ ಒಂದು ಸಂಸ್ಥೆ ಕರ್ನಾಟಕಕ್ಕೆ ಬೇಕು ಎನ್ನುವ ಕೂಗು ಹಲವಾರು ವರ್ಷಗಳಿಂದ ಕೇಳಿಬರುತ್ತಿತ್ತು. ಆದರೆ ಕಾಲ ಕೂಡಿ ಬಂದಿರಲಿಲ್ಲ. ಇದೀಗ ಆ ಸುಸಮಯ ಒದಗಿಬಂದಿದ್ದು, ಮುಂದಿನ ವರ್ಷವೇ ಕರ್ನಾಟಕಕ್ಕೆ ಏಮ್ಸ್ಸಂಸ್ಥೆ ಕಾಲಿಡಲಿದೆ.
ಬಳ್ಳಾರಿಯ ವಿಜಯನಗರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಟ್ರಾಮಾ ಕೇರ್ ಉದ್ಘಾಟಿಸಿ ಆನ್ಲೈನ್ನಲ್ಲಿ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್, ಕರ್ನಾಟಕಕ್ಕೆ ಮುಂದಿನ ವರ್ಷದ ಆಯವ್ಯಯದಲ್ಲಿ AIIMS ಸಂಸ್ಥೆ ಕೊಡಲಾಗುವುದು ಎಂದಿದ್ದಾರೆ. ಅದರ ಜೊತೆಗೆ ಕರ್ನಾಟಕದ ಚಿಕ್ಕಮಗಳೂರು, ಹಾವೇರಿ, ಯಾದಗಿರಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವೈದ್ಯಕೀಯ ಮೆಡಿಕಲ್ ಕಾಲೇಜು ತೆರೆಯಲು ಸಮ್ಮತಿ ಕೊಡಲಾಗುವುದು ಎಂದು ತಿಳಿಸಿದ್ದಾರೆ. ಕರ್ನಾಟಕದ ಪಾಲಿಗೆ ಕೇಂದ್ರ ಸರ್ಕಾರ ಸಂಭ್ರಮದ ವಿಚಾರವನ್ನು ಕೊಟ್ಟಿದೆ ಎನ್ನುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಆದರೆ ಈಗ ಸಮಸ್ಯೆಯೊಂದ ತಲೆದೋರಿದ್ದು, ಕರುನಾಡಿಗೆ ಅನ್ಯಾಯ ಆಗುವ ಬಹುತೇಕ ಸಾಧ್ಯತೆ ಇದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಭಾರತದಲ್ಲಿ ಏಮ್ಸ್ ಸಂಸ್ಥೆ ಇತಿಹಾಸ..!
1956 ರಲ್ಲಿ ಮೊದಲು ದೆಹಲಿಯಲ್ಲಿ ಸ್ಥಾಪನೆಯಾದ ಏಮ್ಸ್(All India Institute Of Medical Sciences) ಸಂಸ್ಥೆ, ಕಾಲಕ್ರಮೇಣ 2012ರಲ್ಲಿ ಮಧ್ಯಪ್ರದೇಶದ ಭೋಪಾಲ್, ಒಡಿಶಾದ ಭುವನೇಶ್ವರ್, ರಾಜಸ್ಥಾನದ ಜೋಧ್ಪುರ, ಬಿಹಾರದ ಪಾಟ್ನಾ, ಛತ್ತೀಸ್ಗಢದ ರಾಯ್ಪುರ, ಉತ್ತರಾಖಂಡ್ನ ಋಷಿಕೇಶ, 2013 ರಲ್ಲಿ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಏಮ್ಸ್ ಸಂಸ್ಥೆ ಸ್ಥಾಪನೆಯಾಗಿತ್ತು. ನಂತರ ಇದೀಗ 2018ರಲ್ಲಿ ಆಂಧ್ರದ ಮಂಗಳಗಿರಿ, ಮಹಾರಾಷ್ಟ್ರದ ನಾಗ್ಪುರ, 2019ರಲ್ಲಿ ಉತ್ತರ ಪ್ರದೇಶದ ಗೋರಖ್ಪುರ, ಪಂಜಾಬ್ನ ಬತಿಂದ, ತೆಲಂಗಾಣದ ಬಾಬಿನಗರ್, ಪಶ್ಚಿಮ ಬಂಗಾಳದ ಕಲ್ಯಾಣಿ, ಜಾರ್ಖಂಡ್ನ ದಿಯೋಘರ್ ಗೂ ಏಮ್ಸ್ ಸಂಸ್ಥೆಯನ್ನು ಕೊಡಲಾಗಿದೆ.
2003ರಲ್ಲಿ ಶುರುವಾದ ಏಮ್ಸ್ ಮಾಡುವ ಅಭಿಯಾನದಲ್ಲಿ ಕಳೆದ ಹಿಂದಿನ ಸರ್ಕಾರ 8 ಸಂಸ್ಥೆಗಳನ್ನು ಮಾಡಿದೆ. ಆದರೆ, ನಾವು ಅದನ್ನು 22ರ ಸಂಖ್ಯೆಗೆ ಏರಿಸುತ್ತಿದ್ದೇವೆ ಎಂದಿದ್ದಾರೆ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್. 2025ರ ವೇಳೆಗೆ 22 AIIMS ಹೊಂದುವ ಗುರಿ ಇಟ್ಟುಕೊಂಡಿದ್ದು, ಅದರಲ್ಲಿ ಕರ್ನಾಟಕ. ಗೋವಾ, ಅರುಣಾಚಲ ಪ್ರದೇಶ, ತ್ರಿಪುರ, ಮಿಜೋರಾಂ ಗೆ ಕೊಡಲಾಗುತ್ತಿದೆ. ಮುಂದಿನ ವರ್ಷ 2021ರ ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಏಮ್ಸ್ (All India Institute Of Medical Sciences) ಸಂಸ್ಥೆ ಘೋಷಣೆ ಆಗಲಿದೆ ಎಂದಿದ್ದಾರೆ ಡಾ. ಹರ್ಷವರ್ಧನ್.
ಆನ್ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್, ಈಗಾಗಲೇ ಸಿಎಂ ಬಿ.ಎಸ್. ಯಡಿಯೂರಪ್ಪ ಪತ್ರ ಬರೆದಿದ್ದು, ಕಲಬುರಗಿಯಲ್ಲಿರುವ ಇಎಸ್ಐ ಆಸ್ಪತ್ರೆಯನ್ನು ಕೇಂದ್ರ ಸರ್ಕಾರ ಸ್ವಾಧೀನಕ್ಕೆ ಪಡೆದುಕೊಂಡು ಏಮ್ಸ್ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು ಮನವಿ ಮಾಡಿದ್ದಾರೆ ಎಂದಿದ್ದಾರೆ. ಕಲಬುರಗಿ ಹಿಂದುಳಿದ ಜಿಲ್ಲೆಯಾಗಿದ್ದು, ಕಲಬುರಗಿಯಲ್ಲಿ ಇರುವ ESI ಆಸ್ಪತ್ರೆಯಲ್ಲಿ AIIMS ಆಗಿ ಮಾರ್ಪಾಡು ಮಾಡಿದರೆ ಆ ಭಾಗದ ಜನರಿಗೆ ಸಹಕಾರಿಯಾಗುತ್ತದೆ ಎಂದಿದ್ದಾರೆ ಡಾ ಹರ್ಷವರ್ಧನ್.
ಏಮ್ಸ್ ಸಂಸ್ಥೆಯಲ್ಲೂ ರಾಜ್ಯ ಸರ್ಕಾರದ ಎಡವಟ್ಟು..!?
ಕೇಂದ್ರ ಸರ್ಕಾರ ರಾಜ್ಯಕ್ಕೆ ಏಮ್ಸ್ ಸಂಸ್ಥೆಯನ್ನು ನೀಡುವುದಾಗಿ ಹೇಳಿದೆ. ಆದರೆ, ರಾಜ್ಯದ ಮುಖ್ಯಮಂತ್ರಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕಲಬುರಗಿಯ ಇಎಸ್ಐ ಆಸ್ಪತ್ರೆಯಲ್ಲೇ ಏಮ್ಸ್ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಿ ಎಂದಿರುವುದು ಸಾಕಷ್ಟು ಅಸಮಾಧಾನ ಉಂಟುಮಾಡಿದೆ. ರಾಜ್ಯದಲ್ಲಿ ಸೂಕ್ತ ಜಾಗದ ಸಮಸ್ಯೆ ಇದೆಯೋ..? ಅಥವಾ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲವೋ ಎಂದು ಜನನಾಯಕರು ಸೇರಿದಂತೆ ಪ್ರಜ್ಞಾವಂತ ಸಮಾಜ ಪ್ರಶ್ನೆ ಮಾಡುತ್ತಿದೆ. ಕೇಂದ್ರ ಸರ್ಕಾರ ಕೇಳುವ ಮೂಲಭೂತ ಸೌಕರ್ಯವನ್ನು ಮಾಡಿಕೊಡುತ್ತ ರಾಜ್ಯಕ್ಕೆ ಮತ್ತೊಂದು ಸಂಸ್ಥೆಯನ್ನು ತರುವುದನ್ನು ಬಿಟ್ಟು ಈಗಾಗಲೇ ನಿರ್ಮಾಣ ಆಗಿರುವ ಸುಸಜ್ಜಿತ ಆಸ್ಪತ್ರೆಯನ್ನೇ ಏಮ್ಸ್ ಆಗಿ ಬದಲಾವಣೆ ಮಾಡಿ ಎಂದಿದ್ದಾರಂತೆ..!
ಖರ್ಗೆ ಕನಸಿಗೆ ಸಿಎಂ ಯಡಿಯೂರಪ್ಪ ಮಸಿ..!?
ಕೇಂದ್ರ ಕಾರ್ಮಿಕ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಸ್ವಕ್ಷೇತ್ರವಾಗಿದ್ದ ಕಲಬುರಗಿ ಜಿಲ್ಲೆಗೆ ಅತ್ಯುನ್ನತ ದರ್ಜೆಯ ಇಎಸ್ಐ ಆಸ್ಪತ್ರೆ ಮಂಜೂರು ಮಾಡಿದ್ದರು. ಶ್ರೇಷ್ಟ ದರ್ಜೆಯಲ್ಲಿ ನಿರ್ಮಾಣ ಆಗಿರುವ ಆಸ್ಪತ್ರೆಗೆ ಸೂಕ್ತ ರೋಗಿಗಳು ಇಲ್ಲದ ಕಾರಣಕ್ಕೆ ರಾಜ್ಯ ಸರ್ಕಾರದ ಸುಪರ್ದಿಗೆ ವಹಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರು ಇಲ್ಲದ ಕಾರಣ ನಾನು ವಿರ್ವಹಣೆ ಮಾಡುವುದು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ ಎನ್ನಲಾಗಿದೆ. ಎಲ್ಲಾ ರೋಗಿಗಳಿಗೂ ಚಿಕಿತ್ಸೆ ನೀಡುವಂತಾಗಲಿ ಎಂದರೆ ನಾನು ನಿರ್ವಹಣೆ ಮಾಡುವುದಿಲ್ಲ, ರಾಜ್ಯ ಸರ್ಕಾರವೇ ನಿರ್ವಹಣೆ ಮಾಡಲಿ ಎಂದು ಹೇಳಿ ಕೇಂದ್ರ ಕೈ ತೊಳೆದುಕೊಂಡಿದೆ. ಇದೀಗ ಇಎಸ್ಐ ಆಸ್ಪತ್ರೆ ಕೋವಿಡ್ ಸೆಂಟರ್ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಆದರೆ ಕೇಂದ್ರ ಸರ್ಕಾರ ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂದು ಕೈಬಿಟ್ಟಿರುವ ಆಸ್ಪತ್ರೆ ಏಮ್ಸ್ ಆಗಿ ಬದಲಾದರೂ ಅದರಿಂದ ಆಗುವ ಅನುಕೂಲ ಅಷ್ಟಕ್ಕಷ್ಟೆ ಎನ್ನಲಾಗುತ್ತಿದೆ.
ಮಂಡ್ಯ, ಹಾಸನ, ರಾಮನಗರ ಭಾಗ ಹೇಳಿ ಮಾಡಿಸಿದ್ದು..!
ರಾಮನಗರ, ಮಂಡ್ಯ, ಹಾಸನ ಭಾಗದಲ್ಲಿ ಏಮ್ಸ್ನಿರ್ಮಾಣವಾದರೆ ಬಹುತೇಕ ಬೆಂಗಳೂರಿಗೆ ಸನಿಹದಲ್ಲೇ ಇರಲಿದ್ದು ಅತ್ಯುನ್ನತ ಸೌಲಭ್ಯವನ್ನು ಒದಗಿಸಿದರೆ ಸಾಕಷ್ಟು ರೋಗಿಗಳು ಪ್ರಯೋಜನ ಪಡೆಯಲಿದ್ದಾರೆ. ಬೆಂಗಳೂರು ಮೈಸೂರು ಹೆದ್ದಾರಿ ವಿಸ್ತರಣೆ ಆಗುತ್ತಿದ್ದು, ಉನ್ನತ ಮಟ್ಟದ ವೈದ್ಯರು, ವಿಜ್ಞಾನಿಗಳು ತುರ್ತಾಗಿ ಬರುವುದಕ್ಕೂ ಅನುಕೂಲ ಆಗಲಿದೆ. ರಾಮನಗರದ ಚನ್ನಪಟ್ಟಣ ಹಾಗೂ ಮದ್ದೂರಿನ ನಡುವೆ ಜಾಗ ಗುರುತಿಸಿ ಏಮ್ಸ್ ಸಂಸ್ಥೆ ನಿರ್ಮಾಣ ಮಾಡಬಹುದು. ನೀರಾವರಿ ಭೂಮಿಯಲ್ಲಿ ಸಾಧ್ಯವಿಲ್ಲ ಎನ್ನುವುದಾದರೆ ಈಗಾಗಲೇ ಅತ್ಯುನ್ನತ ರಸ್ತೆ ಮಾರ್ಗ ಹೊಂದಿರುವ ಬೆಂಗಳೂರು ಮಂಗಳೂರು ರಸ್ತೆಯಲ್ಲಿ ಅಂದರೆ ಮಂಡ್ಯ ಜಿಲ್ಲೆಯ ನಾಗಮಂಗಲ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಡುವೇ ಸಾವಿರಾರು ಎಕೆರೆ ಒಣಭೂಮಿಯಿದ್ದು ಏಮ್ಸ್ ಸಂಸ್ಥೆ ನಿರ್ಮಾಣಕ್ಕೆ ಹೇಳಿ ಮಾಡಿಸಿದಂತಹ ಜಾಗವಾಗಿದೆ.
ಇಲ್ಲಿ ಏಮ್ಸ್ ಸ್ಥಾಪನೆ ಮಾಡುವುದರಿಂದ ಹೈದ್ರಾಬಾದ್ ಕರ್ನಾಟಕ ಹೊರತು ಪಡಿಸಿ ಬಹುತೇಕ ಶೇಕಡಾ 60 ರಷ್ಟು ಕರ್ನಾಟಕದ ಜನರು ಏಮ್ಸ್ ಸಂಸ್ಥೆಯ ಸೌಲಭ್ಯ ಪಡೆಯಬಹುದಾಗಿದೆ. ಕಲಬುರಗಿಯಲ್ಲಿ ಇಎಸ್ಐ ಕಟ್ಟಡವಿದೆ. ಅಲ್ಲಿ ಜನರಿಲ್ಲದೆ ಬಣಗುಡುತ್ತಿದೆ. ಕಟ್ಟಡ ನಿರ್ವಹಣೆ ಕಷ್ಟವಾಗಿದೆ. ಏಮ್ಸ್ ಸಂಸ್ಥೆ ಬಂದರೆ ಹೇಗೋ ಕಟ್ಟಡ ಪಾಳು ಬೀಳುವುದು ತಪ್ಪಲಿದೆ ಎನ್ನುವ ಕಾರಣ ಕಲಬುರಗಿಯಲ್ಲಿ ಏಮ್ಸ್ ಮಾಡಿದರೆ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ ಜನರಿಗೆ ಮಾತ್ರವೇ ಸಹಕಾರಿ ಆಗಬಲ್ಲದು. ಈ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತೊಮ್ಮೆ ಚರ್ಚೆ ಮಾಡಬೇಕಾದ ಅನಿವಾರ್ಯತೆ ಇದೆ.