ರಾಷ್ಟ್ರೀಯ ಅಪರಾಧ ದಾಖಲೆಗಳ ದಳ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ರಾಜಕೀಯ ಮತ್ತು ಕೋಮು ಪ್ರೇರಿತ 971ರಷ್ಟು ಗಲಭೆ ಪ್ರಕರಣಗಳು ನಡೆದಿವೆ. ಆ ಪಟ್ಟಿಯಲ್ಲಿ ಕಳೆದ ವರ್ಷ (ಡಿಸೆಂಬರ್ 2019)ರಲ್ಲಿ ಮಂಗಳೂರಿನ ಇಬ್ಬರು ನಾಗರಿಕರ ಬಲಿಪಡೆದ CAA ವಿರೋಧಿ ಪ್ರತಿಭಟನೆಯೂ ಒಳಗೊಂಡಿದೆ. ಪ್ರಸ್ತುತ ಘಟನೆಯನ್ನೂ ಗಲಭೆ ಎಂದು ಪರಿಗಣಿಸಲಾಗಿದ್ದು, ಭಾರತೀಯ ದಂಡ ಸಂಹಿತೆ(IPC)ಯ ಅಡಿಯಲ್ಲಿ ಅಗತ್ಯವಿರುವ ಎಲ್ಲ ಆರೋಪಗಳ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆದರೆ, ಈ ವರ್ಷದ ಆರಂಭದಲ್ಲಿ ಡಿ.ಜೆ ಹಳ್ಳಿ ಗಲಭೆ ಘಟಿಸಿದಾಗ ಸಿ.ಸಿ.ಬಿಯು 163 ಮಂದಿಯ ವಿರುದ್ಧ UAPA ಅನ್ವಯ ಪ್ರಕರಣ ದಾಖಲಿಸಿದೆ. ಆಗಸ್ಟ್ 11 2020 ರಂದು, ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಅಳಿಯ ನವೀನ್ ಕುಮಾರ್ ಎಂಬಾತನ ಫೇಸ್ಬುಕ್ ಪೋಸ್ಟ್ನಿಂದ ಪ್ರಚೋದಿತರಾದ ಗುಂಪು ಡಿ.ಜೆ ಹಳ್ಳಿಯಲ್ಲಿ ದಾಂಧಲೆ ಎಬ್ಬಿಸಿ, ಶಾಸಕರ, ನವೀನ್ ಮನೆ, ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿಯ ಪೊಲೀಸ್ ಸ್ಟೇಷನ್ಗಳಿಗೆ ದಾಳಿ ಮಾಡಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಘಟನೆಯಲ್ಲಿ ಪೊಲೀಸರು 68ರಷ್ಟು ಎಫ್.ಐ.ಆರ್ ದಾಖಲಿಸಿದ್ದು 350 ಮಂದಿಯನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳ ಮೇಲೆ UAPAಯ ಸೆಕ್ಷನ್ 15 ಮತ್ತು 16 (ಭಯೋತ್ಪಾದನಾ ಚಟುವಟಿಕೆಗೆ ವಿಧಿಸಲಾಗುವ ಶಿಕ್ಷೆ), ಸೆಕ್ಷನ್ 18 (ಭಯೋತ್ಪಾದನಾ ಸಂಚು), ಮತ್ತು ಸೆಕ್ಷನ್ 20 (ಉಗ್ರವಾದಿ ಸಂಘಟನೆಯ ಸದಸ್ಯ) ಸಲ್ಲಿಸಲಾಗಿದೆ.
ಆದರೆ ಇದು ಮಂಗಳೂರಲ್ಲಿ ನಡೆದ ಘಟನೆಯಲ್ಲಿ ಸಲ್ಲಿಸಲಾಗಿರುವ ದೂರುಗಳಿಗೆ, ತೆಗೆದುಕೊಂಡಿರುವ ಕ್ರಮಗಳಿಗೆ ಹೋಲಿಸಿದರೆ ಸಂಪೂರ್ಣ ವಿರೋಧಾಬಾಸದಿಂದ ಕೂಡಿದೆ. ಅತಿ ಕಠಿಣ ಕಾನೂನು ಎಂದೇ ಪರಿಗಣಿಸಲ್ಪಟ್ಟಿರುವ UAPAಯ ಈ ರೀತಿಯ ಬಳಕೆ ಅಥವಾ ದುರ್ಬಳಕೆ ಕರ್ನಾಟಕದಲ್ಲಿ ಇದೇ ಮೊದಲ ಬಾರಿ ಕಂಡು ಬಂದಿದೆ.
ಹೆಸರು ಹೇಳಲಿಚ್ಛಿಸದ ಕರ್ನಾಟಕ ಕೇಡರ್ ಐ.ಪಿ.ಎಸ್ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ ” UAPA ಅಡಿಯಲ್ಲಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿ ಒಂದೇ ಘಟನೆಗೆ ಸಂಬಂಧಿಸಿದಂತೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಗಲಭೆಯೂ UAPA ಅಡಿಯಲ್ಲಿ ದಾಖಲಾಗಿಲ್ಲ. ಇಂಥದ್ದೇ ಘಟನೆಯೊಂದು ಮಂಗಳೂರಲ್ಲೂ ನಡೆದಿದ್ದು, ಅಲ್ಲೂ ಉದ್ರಿಕ್ತ ಗುಂಪು ಪೊಲೀಸ್ ಠಾಣೆಗೆ ಧಾಳಿ ಮಾಡಿತ್ತು.ಆದರೆ ಆಗ UAPA ಅನ್ವಯಿಸಿರಲಿಲ್ಲ. ಅಲ್ಲೂ UAPA ಬೇಕಿತ್ತು ಅನ್ನುತ್ತಿಲ್ಲ ನಾನು,ಆದರೆ ಎರಡು ಸಮಾನ ಗಲಭೆಗಳನ್ನು ಹೋಲಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.
ಬಿ.ಜೆ.ಪಿ ನಾಯಕ ಅರವಿಂದ ಲಿಂಬಾವಳಿಯ ನೇತೃತ್ವದ ಸತ್ಯ ಶೋಧನಾ ಸಮಿತಿ ಇಡೀ ಘಟನೆಯನ್ನು ತನಿಖೆಯನ್ನು NIAಗೆ ವಹಿಸಿಕೊಡಬೇಕು ಎಂದು ಆಗ್ರಹಿಸಿದ ಮರುದಿನವೇ ಬೆಂಗಳೂರು ಪೊಲೀಸರು ಈ ಕಠಿನ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಿದ್ದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಅಧಿಕಾರಿಯ ಪ್ರಕಾರ “ಒಮ್ಮೆ UAPA ಅನ್ವಯ ಕೇಸು ದಾಖಲಾದರೆ NIAಗೆ ಪ್ರಕರಣವನ್ನು ಸ್ವಾಧೀನ ಪಡಿಸುವ ಅಧಿಕಾರವಿದೆ”.
ದಿ ಕ್ವಿಂಟ್ ಜೊತೆ ಮಾತಾಡುತ್ತಾ, ಪ್ರಕರಣದ ಹೊಣೆ ಹೊತ್ತಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ಪ್ರಕಾರ ಡಿ.ಜೆ ಹಳ್ಳಿಯ ಪ್ರಕರಣ, ಅದರಲ್ಲೂ ಪೊಲೀಸ್ ಠಾಣೆಯ ಮೇಲಿನ ಧಾಳಿ ಭಯೋತ್ಪಾದಕ ಕೃತ್ಯವೆಂದೇ ಪರಿಗಣಿಸಲ್ಪಡುತ್ತದೆ. ” ನಾವು ಕಾನೂನಿನ ವ್ಯಾಪ್ತಿಯಲ್ಲೇ ಕ್ರಮ ಕೈಗೊಂಡಿದ್ದೇವೆ. ಈ ಹಿಂದೆಯೂ ಪೊಲೀಸ್ ಠಾಣೆ ಮೇಲೆ ನಡೆದ ದಾಳಿಯನ್ನು ಭಯೋತ್ಪಾದಕ ದಾಳಿಯೆಂದೇ ಪರಿಗಣಿಸಲಾಗಿದೆ” ಎಂದು ಸಮರ್ಥಿಸಿದ್ದಾರೆ.
ಆದರೆ ಡಿ.ಜೆ ಹಳ್ಳಿಯಲ್ಲಿ ಬಂಧನಕ್ಕೊಳಗಾದವರ ಕುಟುಂಬಗಳ ಪ್ರಕಾರ ಇಡೀ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು ಅದು ಅನ್ಯಾಯದ ಬಂಧನವಾಗಿದೆ. ಡಿ.ಜೆ ಹಳ್ಳಿ ನಿವಾಸಿ ಸಾಯಿರಾ (ಹೆಸರು ಬದಲಿಸಲಾಗಿದೆ) ಅವರ ಬಳಿ ಅವರ ಗಂಡನ ನಿರಪರಾಧಿತ್ವವನ್ನು ಸಾಬೀತು ಪಡಿಸಲು ಸಿಸಿಟಿವಿ ಫೋಟೇಜ್ಗಳು ಇವೆ ಅನ್ನುತ್ತಾರೆ. ಅವರು ” ಅಪಾರ್ಟ್ಮೆಂಟ್ ಒಳಗೆ ತನ್ನ ಗಂಡ ಬಂದಿದ್ದು ಅದರ ಫೊಟೇಜ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯ ಸಂದರ್ಭದಲ್ಲಿ ಅವರು ಹೋಗಿಯೇ ಇಲ್ಲ. ಇರುವ ಒಂದೇ ಒಂದು ಪ್ರವೇಶ ದ್ವಾರದ ಮೂಲಕ ಹೊರಹೋಗಿದ್ದರೆ ಅದರ ಫೊಟೇಜ್ ಇರುತ್ತಿತ್ತು” ಎಂದು ವಾದ ಮಂಡಿಸುತ್ತಾರೆ. ಜೊತೆಗೆ, NIA ಆರೋಪ ಪಟ್ಟಿ ಸಲ್ಲಿಸಿದ ಬಳಿಕವಷ್ಟೇ ತನ್ನ ಗಂಡ ಮತ್ತು ಉಳಿದ 162 ಆರೋಪಿಗಳ ಪರ ವಕೀಲರು ಅವರನ್ನು ಜೈಲಿನಿಂದ ಬಿಡಿಸಿಕೊಳ್ಳಬಹುದು ಎನ್ನುವ ಕಾನೂನು ಎಷ್ಟು ಸರಿ ಎಂದು ಅವರು ಪ್ರಶ್ನಿಸುತ್ತಾರೆ.
ವಕೀಲ ಮತ್ತು ಕಾನೂನು ತಜ್ಞ ವಿನಯ ಶ್ರೀನಿವಾಸ್ ಅವರು ಹೇಳುವಂತೆ UAPA ಎಂಬುವುದು ಭಯೋತ್ಪಾದನಾ ಚಟುವಟಿಕೆಗಳನ್ನು ನಿಯಂತ್ರಿಸುವದಕ್ಕಿಂತ ಅಥವಾ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಿಂತ ಹೆಚ್ಚಾಗಿ ಜನರನ್ನು ಜೈಲಿಗೆ ಹಾಕಲು ಅನುವು ಮಾಡಿಕೊಡುವ ಕಾನೂನು. ” ಇಡೀ ತನಿಖಾ ಪ್ರಕ್ರಿಯೆಯೇ ನಿರಂಕುಶವಾಗಿದೆ. ಪೊಲೀಸರು ಅನಿಯಂತ್ರಿತವಾಗಿ ಮತ್ತು ಗೊತ್ತು ಗುರಿಯಿಲ್ಲದೆ ಮುಸ್ಲಿಂ ಯುವಕರನ್ನು ಆ ರಾತ್ರಿ ಬಂಧಿಸಿದ್ದಾರೆ ಎನ್ನುವುದರ ಬಗ್ಗೆ ನೂರಾರು ಆರೋಪಗಳಿವೆ. ಘಟನೆ ನಡೆದ ಕೆಲವೇ ಘಂಟೆಗಳ ಒಳಗೆ ನೂರಕ್ಕಿಂತ ಅಧಿಕ ಆರೋಪಿಗಳನ್ನು ಗುರುತಿಸಿ, ಅವರ ವಿಳಾಸ ಪಡೆದು ಬಂಧಿಸಿದ್ದಾರೆ ಎನ್ನುವುದೇ ಇಡೀ ಘಟನೆಯಲ್ಲಿ ಪೊಲೀಸರ ನಡೆಯನ್ನು ಸಂದೇಹಕ್ಕೆ ಈಡು ಮಾಡುತ್ತದೆ” ಎಂದು ಹೇಳಿದ್ದಾರೆ.
Also Read: ಡಿಜೆ ಹಳ್ಳಿ ಗಲಭೆ: ಮಾಜಿ ಮೇಯರ್ ಸಂಪತ್ ರಾಜ್ ಬಂಧನ
ಮುಂದುವರೆದು ” ಪೊಲೀಸರು ದಾಖಲಿಸಿರುವ ಎಫ್.ಐ.ಆರ್ ಅಸ್ಪಷ್ಟತೆಯಿಂದ ಕೂಡಿದೆ. ಪೊಲೀಸರ ದಾಖಲೆಗಳಲ್ಲಿ ‘ಇತರೆ ಮುಸ್ಲಿಮರು’ಗಳಂತಹ ಅಸ್ಪಷ್ಟ ಪದ ಸಮುಚ್ಛಯಗಳಿವೆ. ಇದರಿಂದ ಇಡೀ ಮುಸ್ಲಿಂ ಸಮುದಾಯವನ್ನೇ ಟಾರ್ಗೆಟ್ ಮಾಡಿರುವಂತೆ ತೋರುತ್ತದೆ. ಘಟನೆಗೆ ಸಂಬಂಧವೇ ಪಡದ ನೂರಾರು ಅಮಾಯಕ ಮುಸ್ಲಿಂ ಯುವಕರನ್ನು ಯಾವ ಕಾರಣವನ್ನೂ ನೀಡದೆ, ಅವರಿಗಾಗಲೀ ಅವರ ಕುಟುಂಬಕ್ಕಾಗಲೀ ಯಾವ ಮಾಹಿತಿಯನ್ನೂ ನೀಡದೆ ಬಂಧನದ ರೀತಿ ರಿವಾಜುಗಳನ್ನೂ ಪಾಲಿಸದೆ ಬಂಧಿಸಲಾಗಿದೆ” ಎಂದಿದ್ದಾರೆ.
ಹಾಗೆಯೇ, ಎಫ್.ಐ.ಆರ್ನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಮತ್ತು ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ)ವನ್ನು ಡಿ.ಜೆ.ಹಳ್ಳಿ ಹಿಂಸಾಚಾರದಲ್ಲಿ ಭಾಗಿಯಾದ ಸಂಘಟನೆಗಳೆಂದು ಗುರುತಿಸಲಾಗಿದೆ. ಹಾಗೆಯೇ ಸದರಿ ಸಂಘಟನೆಯಲ್ಲಿ ಸಕ್ರಿಯವಾಗಿರುವ ಸದಸ್ಯರನ್ನೂ ಈ ಕೇಸಿಗೆ ಅನ್ವಯಿಸುವಂತೆ ಸೆಕ್ಷನ್ 20ರ (ಉಗ್ರವಾದಿ ಸಂಘಟನೆಯ ಸದಸ್ಯ) ಅಡಿಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ. ಆದರೆ ಕೇಂದ್ರ ಸರಕಾರ ಇನ್ನೂ ಈ ಸಂಘಟನೆಯನ್ನು ಭಯೋತ್ಪಾದನಾ ಸಂಘಟನೆಯೆಂದು ಘೋಷಿಸಿಲ್ಲವಾದರೂ ಉಗ್ರವಾದಿ ಸಂಘಟನೆಯ ಸದಸ್ಯರೆಂದು ಎಸ್ಡಿಪಿಐ ಸದಸ್ಯರ ಮೇಲೆ ಪ್ರಕರಣ ದಾಖಲಿಸಿದ್ದು ಪೊಲೀಸರ ತನಿಖೆಯ ಮೇಲೆ ಅನುಮಾನವನ್ನು ಹುಟ್ಟಿಸಿದೆ.
ಕೃಪೆ: ದಿ ಕ್ವಿಂಟ್