ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇ 05 ರಂದು ಹೊರಡಿಸಿದ ಪ್ರಕಟನೆಯ ಪ್ರಕಾರ ರಾಜ್ಯದಲ್ಲಿ ಧೃಡೀಕರಿಸಿದ ಕರೋನಾ ಪ್ರಕರಣಗಳ ಸಂಖ್ಯೆ 673 ತಲುಪಿದೆ. ಒಟ್ಟು 331 ಮಂದಿ ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್‌ಚಾರ್ಜ್ ಹೊಂದಿದ್ದಾರೆ. ಕರೋನಾ ಸೋಂಕಿನಿಂದಾಗಿ 29 ಮಂದಿ ಅಸುನೀಗಿದ್ದಾರೆ.
ಮೇ 04 ಸಂಜೆ 5:00 ರಿಂದ ಮೇ 5 ಸಂಜೆ 05:00ರವರೆಗೆ ಹೊಸ 22 ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದೆಯೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕರೋನಾ ಆಕ್ಟಿವ್ ಇರುವ 312 ವ್ಯಕ್ತಿಗಳಲ್ಲಿ 306 ವ್ಯಕ್ತಿಗಳು ವಿವಿಧ ಆಸ್ಪತ್ರೆಗಳ ಪ್ರತ್ಯೇಕಿಸಿದ ವಾರ್ಡುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 06 ಮಂದಿಗಳ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಪತ್ತೆಯಾಗಿರುವ ಪ್ರಕರಣದಲ್ಲಿ ದಾವಣಗೆರೆಯಲ್ಲೇ 12 ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರು ನಗರದಲ್ಲಿ 3, ಬಾಗಲಕೋಟೆಯಲ್ಲಿ 2, ಬಳ್ಳಾರಿ, ಧಾರವಾಡ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಹಾವೇರಿಯಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲೆಯಾಗಿದೆ. ಇದರಲ್ಲಿ ಧಾರವಾಡದಲ್ಲಿ ಪಾಸಿಟಿವ್ ಕಂಡುಬಂದಿರುವ ವ್ಯಕ್ತಿ ಮಹಾರಾಷ್ಟ್ರಕ್ಕೆ ಪ್ರಯಾಣ ಮಾಡಿರುವ ಹಿನ್ನಲೆಯನ್ನು ಹೊಂದಿದ್ದಾರೆ.






