ಭಾರತದಲ್ಲಿ ಕರೋನಾದ ಅಟ್ಟಹಾಸ ಊಹೆಗೆ ನಿಲುಕದಂತೆ ಹರಡುತ್ತಿದೆ. ಇಲ್ಲೀವರೆಗೂ ಭಾರದಲ್ಲಿ 906 ಮಂದಿಯಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಅದರಲ್ಲೂ ದೇವರ ನಾಡು ಪ್ರಸಿದ್ಧಿ ಪಡೆದಿರುವ ಕೇರಳದಲ್ಲಿ ಬರೋಬ್ಬರಿ 176 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಎರಡನೇ ಸ್ಥಾನದಲ್ಲಿ 162 ಕೇಸ್ ಹೊಂದಿರುವ ಮಹಾರಾಷ್ಟ್ರ, 64 ಕೇಸ್ ಹೊಂದಿರುವ ಕರ್ನಾಟಕ ಮೂರನೇ ಸ್ಥಾನ ಹೊಂದಿದೆ. 38 ಪ್ರಕರಣಗಳನ್ನು ಹೊಂದಿರುವ ಪಂಜಾಬ್ ಇದೀಗ 10ನೇ ಸ್ಥಾನದಲ್ಲಿದೆ. ಆದರೂ ಇಡೀ ಭಾರತದಲ್ಲಿ ಗಢಗಢನೆ ನಡುಗಲು ಶುರುವಾಗಿರುವುದು ಇದೇ ಪಂಜಾಬ್. ಇದಕ್ಕೆ ಕಾರಣ ಕರೋನ. ಅದಕ್ಕಿಂತಲೂ ಮುಖ್ಯವಾಗಿ ಓರ್ವ ವ್ಯಕ್ತಿ.
ಕೇರಳ ಸಿಎಂ ಪಿಣರಾಯಿ ವಿಜಯನ್ ಕರೋನಾ ನಮ್ಮ ಹಿಡಿತಕ್ಕೆ ಸಿಗದೆ ಅಟ್ಟಹಾಸ ಮೆರೆಯುತ್ತಿದೆ ಎನ್ನುವ ಮೂಲಕ ಸರ್ಕಾರ ನಿಯಂತ್ರಣ ಮಾಡುವುದು ಅಸಾಧ್ಯ ಎಂದಿದ್ದಾರೆ. ಪಂಜಾಬ್ನಲ್ಲಿ ಒಟ್ಟು 40 ಸಾವಿರ ಜನರನ್ನು ಬಂಧನ ಮಾಡಲಾಗಿದೆ. 20 ಹಳ್ಳಿಗಳ ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಯಾರೂ ಕೂಡ ಮನೆಯಿಂದ ಹೊರಬಾರದಂತೆ ಕಟ್ಟೆಚ್ಚರ ವಹಿಸಲಾಗಿದೆ 70 ವರ್ಷದ ವ್ಯಕ್ತಿಯೊಬ್ಬ ಕರೋನ ವೈರಸ್ನಿಂದ ಸಾವನ್ನಪ್ಪಿದ ಬಳಿಕ ಇಷ್ಟೆಲ್ಲಾ ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ. ಬೋಧಕನಾಗಿದ್ದ ಮೃತ ವ್ಯಕ್ತಿ ಇಟಲಿ ಮತ್ತು ಜರ್ಮನಿ ಪ್ರವಾಸದಿಂದ ಹಿಂದಿರುಗಿದ್ದ. ಆರೋಗ್ಯ ಅಧಿಕಾರಿಗಳು ಸ್ವಯಂ ಸಂಪರ್ಕ ತಡೆಗಾಗಿ ಹೋಂ ಕ್ವಾರಂಟೈನ್ ಮಾಡಿಕೊಳ್ಳಲು ಸೂಚಿಸಿದ್ದರು. ಅಧಿಕಾರಿಗಳ ಮಾತನ್ನು ನಿರ್ಲಕ್ಷಿಸಿದ್ದ ಆತ ಹೊರಗಡೆ ಸುತ್ತಾಡಿದ್ದ ಎನ್ನಲಾಗಿದೆ. ಇದೀಗ ಇಪ್ಪತ್ತು ಹಳ್ಳಿಗಳನ್ನು ದಿಗ್ಬಂಧನಕ್ಕೆ ಒಳಪಡಿಸಲಾಗಿದೆ.
ಬಲದೇವ್ ಸಿಂಗ್ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ, ಸಾಯುವ ಸ್ವಲ್ಪ ಸಮಯದ ಮೊದಲು ಹೋಲಾ ಮೊಹಲ್ಲಾ ಎಂಬ ಸಿಖ್ ಹಬ್ಬವನ್ನು ಆಚರಣೆಗಾಗಿ ಸಭೆಯೊಂದರಲ್ಲಿ ಭಾಗಿಯಾಗಿದ್ದನು. ಆ ಬಳಿಕ ಈ ಹಳ್ಳಿಗಳಲ್ಲಿ ಆರು ದಿನಗಳ ಕಾಲ ಸಿಖ್ಖರ ಉತ್ಸವ ನಡೆದಿದ್ದು, ಪ್ರತಿದಿನ ಸುಮಾರು 10,000 ಜನರನ್ನು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಬಲದೇವ್ ಸಿಂಗ್ ಕೂಡ ಈ ಉತ್ಸವದಲ್ಲಿ ಭಾಗಿಯಾಗಿದ್ದ. ಬಲದೇವ್ ಸಿಂಗ್ ಸಾವಿನ ಬಳಿಕ ಎಚ್ಚೆತ್ತುಕೊಂಡಿದ್ದು, ಬಲದೇವ್ ಸಿಂಗ್ ಸಾವಿನ ನಂತರ ಒಂದು ವಾರದ ಅಂತರದಲ್ಲಿ ಆತನ 19 ಮಂದಿ ಸಂಬಂಧಿಕರಲ್ಲಿ ಕರೋನಾ ಸೋಂಕು ಇರುವುದು ದೃಢಪಟ್ಟಿದೆ.
ಇಲ್ಲಿಯವರೆಗೆ ಬಲದೇವ್ ಸಿಂಗ್ 550 ಜನರ ಜೊತೆಗೆ ನೇರ ಸಂಪರ್ಕದಲ್ಲಿದ್ದ ಎನ್ನಲಾಗಿದ್ದು, ಅವರನ್ನೂ ಆರೋಗ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆ ಹಳ್ಳಿ ಜನರು ಸುತ್ತಾಡಿರುವ 15 ಹಳ್ಳಿಗಳನ್ನು ಗುರುತು ಮಾಡಿದ್ದಾರೆ. ಜೊತೆಗೆ ಪಕ್ಕದ ಜಿಲ್ಲೆಯ ಐದು ಗಡಿ ಗ್ರಾಮಗಳಿಗೂ ದಿಗ್ಬಂಧನ ವಿಧಿಸಲಾಗಿದೆ.
ಭಾರತದಲ್ಲಿ ಸಾಮೂಹಿಕ ಸಂಪರ್ಕ ತಡೆಗಾಗಿ ಲಾಕ್ಡೌನ್ ಮಾಡಲಾಗಿದೆ. ಪಂಜಾಬ್ನ ಈ ವ್ಯಕ್ತಿ ರಾಜಸ್ಥಾನದ ಜವಳಿ ನಗರ ಭಿಲ್ವಾರಾದಲ್ಲೂ ಸಾಕಷ್ಟು ಜನರಿಗೆ ಸೋಂಕು ಹರಡಿಸಿರುವ ಶಂಕೆಯಿದೆ. ಇದೀಗ ಪಂಜಾಬ್ ಸರ್ಕಾರ 40 ಸಾವಿರ ಜನರನ್ನು ಬಂಧನಕ್ಕೆ ಒಳಪಡಿಸಿದ್ದು, ಆ 40 ಸಾವಿರ ಜನರು ಎಲ್ಲೆಲ್ಲಿ ಸುತ್ತಾಡಿದ್ದಾರೋ ಎನ್ನುವ ಆತಂಕ ಮನೆ ಮಾಡಿದೆ. ಅಷ್ಟು ಮಾತ್ರವಲ್ಲದೆ ಕರೋನಾ ಸೋಂಕಿತರ ಪತ್ತೆಗಾಗಿ ಭಾರತದಲ್ಲಿ ಸಾಮೂಹಿಕ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ.
ಒಂದು ವೇಳೆ ಸಾಮೂಹಿಕ ಪರೀಕ್ಷೆ ನಡೆದಾಗ ಸೋಂಕಿತರ ಪ್ರಮಾಣ ಹೆಚ್ಚುವ ಆತಂಕವೂ ಇದೆ. ಇಡೀ ವಿಶ್ವದಲ್ಲೇ ಹೆಚ್ಚು ಜನಸಾಂದ್ರತೆ ಹೊಂದಿರುವ ಭಾರತದಲ್ಲಿ ಸಾವಿನ ಸುರಿಮಳೆ ಆಗುವ ಸಾಧ್ಯತೆ ಇದೆ ಎನ್ನುತ್ತಿದೆ ವೈದ್ಯಲೋಕ. ಒಟ್ಟಾರೆ, ಕರೋನಾ ಬಗ್ಗೆ ಇನ್ನೂ ಕೂಡ ಗಂಭೀರವಾಗಿ ಪರಿಗಣಿಸದ ಜನರು ಇಂದಿನಿಂದಾದರೂ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆಯಿದೆ. ಸಾಮೂಹಿಕ ಸೋಂಕು ಹರಡುವುದು ಧೃಢವಾಗಿದ್ದು, ಮೂರನೇ ಹಂತದಲ್ಲಿ ಇದ್ದೇವಾ? ಇಲ್ಲ ನಾಲ್ಕನೇ ಹಂತದ ಕಡೆಗೆ ಹೊರಟಿದ್ದೀವಾ ಅನ್ನೋದನ್ನು ಸರ್ಕಾರವೇ ಹೇಳಬೇಕಿದೆ.