ಪ್ರಪಂಚದಾದ್ಯಂತ ಭಯಹುಟ್ಟಿಸಿರುವ ಕರೋನಾ ಸಾಂಕ್ರಾಮಿಕ ರೋಗವನ್ನು ಉಂಟುಮಾಡುವ ನೋವೆಲ್ ಕೊರೋನಾ ಅಥವಾ ಕೋವಿಡ್ ವೈರಸ್ ಕಾಳ್ಗಿಚ್ಚಿನಂತೆ ಹಬ್ಬುತ್ತಿರುವಾಗ ಎಲ್ಲರ ಬಾಯಲ್ಲಿರುವ ಮಂತ್ರವೊಂದೇ. ಅದೆಂದರೆ, ಮನೆಯಿಂದ ಹೊರಬರಬೇಡಿ; ಮನೆಯಲ್ಲಿಯೇ ಇರಿ ಎಂಬುದು. ಈ ಮಾರಕ ವೈರಸ್‌ನ ಹಬ್ಬುವಿಕೆಯನ್ನು ತಡೆಯಲು, ಅಥವಾ ಅದರ ವೇಗಕ್ಕೆ ಕಡಿವಾಣ ಹಾಕಲು ಅಥವಾ ಸೂಕ್ತ ಲಸಿಕೆ ಕಂಡುಹಿಡಿಯುವ ವರೆಗಾದರೂ ಸಮಯಾವಕಾಶ ಪಡೆಯಲು ಇದು ಅತ್ಯಗತ್ಯ ಎಂದು ಎಲ್ಲರೂ ಒಪ್ಪುತ್ತಾರೆ.
ತಾತ್ವಿಕವಾಗಿ ಇದನ್ನು ಯಾರೂ ವಿರೋಧಿಸುವುದಿಲ್ಲ. ಆದರೆ, ನರೇಂದ್ರ ಮೋದಿ ಸರಕಾರದ ಬೇಜವಾಬ್ದಾರಿಯಿಂದಾಗಿ ಇಂದು ಅದನ್ನು ಅಕ್ಷರಶಃ ಪಾಲಿಸಲು ಬಹುತೇಕರು ಪರದಾಡುತ್ತಿದ್ದಾರೆ. ಬೇಜವಾಬ್ದಾರಿ ಏನೆಂದು ಮೊದಲಿಗೆ ನೋಡೋಣ. ಕಳೆದ ವರ್ಷ ನವೆಂಬರ್ ತಿಂಗಳ ಕೊನೆಯ ಭಾಗದಲ್ಲಿಯೇ ಹೊಸ ವೈರಸೊಂದು ಹರಿದಾಡುತ್ತಿರುವ ಸುಳಿವು ಸಿಕ್ಕಿತ್ತು. ಆದರೆ, ಜಗತ್ತಿನ ಬಹುತೇಕ ಎಲ್ಲಾ ಪ್ರಭುತ್ವಗಳ ಗುಣಸ್ವಭಾವಗಳು ಒಂದೇ ಎಂದು ಕಾಣುತ್ತದೆ- ಇದೊಂದು ಹೊಸ ರೀತಿಯ ನ್ಯುಮೋನಿಯಾ ಎಂದು ಭಾವಿಸಿದ ಚೀನಾ ಸರಕಾರ, ಈ ಕುರಿತು ಡಿಸೆಂಬರ್ ತಿಂಗಳಲ್ಲೇ ಸುಳಿವು ನೀಡಿದ ವೈದ್ಯ ಡಾ. ಲೀ ವೆಲ್ ಲಯಾಂಗ್ ಅವರನ್ನು ಸುಳ್ಳು ಸುದ್ದಿ ಹರಡಿ ಜನರಲ್ಲಿ ಭಯವನ್ನು ಹುಟ್ಟಿಸಿದ ಆರೋಪದಲ್ಲಿ ಬಂಧಿಸಿತ್ತು. ಆದರೆ, ಸುದ್ದಿಗಿಂತಲೂ ವೇಗವಾಗಿ ಕರೋನಾ ವೈರಸ್ ಹಬ್ಬಿದಾಗ, ಎಚ್ಚೆತ್ತ ಸರಕಾರ ಅವರನ್ನು ಬಿಡುಗಡೆ ಮಾಡಿ ಕ್ಷಮೆ ಯಾಚಿಸಿದ್ದೇ ಅಲ್ಲದೆ, ಮೋದಿ ಸರಕಾರಕ್ಕೆ ವ್ಯತಿರಿಕ್ತವಾಗಿ ತ್ವರಿತ ಮತ್ತು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿತು. ಆದರೆ, ಡಾ. ಲೀ ಅವರು ಕರೋನಾಕ್ಕೆ ಬಲಿಯಾದರು.
ನಂತರ ಜನವರಿ ತಿಂಗಳ ಕೊನೆಯ ಭಾಗದಲ್ಲಿ ಚೀನಾದ ಹ್ಯುಬೆಯ್ ಪ್ರಾಂತ್ಯದಲ್ಲಿ ಕರೋನಾ ಹಾವಳಿ ತಾರಕಕ್ಕೆ ಮುಟ್ಟಿ, ಇಟಲಿ ಸೇರಿದಂತೆ ಹಲವು ದೇಶಗಳಿಗೆ ಪಸರಿಸಲಾರಂಭಿಸಿತ್ತು. ನೆರೆ ಮನೆಗೆ ಬೆಂಕಿ ಹತ್ತಿ, ಅದು ಉರಿಯುತ್ತಿರುವಾಗಲೂ, ಈ ಬೆಂಕಿ ನಮ್ಮ ಛಾವಣಿಗೂ ಹರಡಬಹುದು ಎಂದು ವಿಶ್ವಗುರು ಎಂದು ತನ್ನ ಬೆಂಬಲಿಗರಿಂದ ಕರೆಸಿಕೊಳ್ಳಲು ಇಷ್ಟಪಡುವ ಮೋದಿ ಮನಗಾಣಲೇ ಇಲ್ಲ. ನಂತರದಲ್ಲಿ ಆತ, ತನ್ನ ದೇಶದಲ್ಲಿ ಕರೋನಾ ತಾಂಡವಕ್ಕೆ ತನ್ನ ಬೇಜವಾಬ್ದಾರಿ ಮತ್ತು ಉದ್ಧಟತನದಿಂದ ನೇರ ಹೊಣೆಗಾರನಾದ ಯುಎಸ್‌ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನ ಪತ್ನಿ ಸಹಿತ ಫ್ಯಾಮಿಲಿ ಟೂರ್‌ನಲ್ಲಿ ಗೈಡ್‌ನ ಪಾತ್ರ ವಹಿಸುವುದರಲ್ಲಿ, ನಂತರ ಸಿಎಎ/ಎನ್ಆರ್‌ಸಿ ವಿವಾದ ಬಡಿದೆಬ್ಬಿಸುವುದರಲ್ಲಿ, ದಿಲ್ಲಿ ಗಲಭೆಗಳ “ನಿರ್ವಹಣೆ”ಯಲ್ಲಿ ಕಾಲಕಳೆದರು. ಕೊನೆಗೂ ಆತ ಎಚ್ಚೆತ್ತಾಗ, “ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ” ಆಗಿತ್ತು. ಕೋವಿಡ್-19 ವೈರಸ್ ಭಾರತದಲ್ಲಿ ಆತಂಕ ಉಂಟುಮಾಡಲು ಆರಂಭಿಸಿತ್ತು.
ಒಂದು ವೇಳೆ ನೆರೆಯ ಚೀನಾದಲ್ಲಿ ಕರೋನಾ ಹಾವಳಿ ಎಬ್ಬಿಸಿದಾಗಲೇ ಸರಕಾರ ಎಚ್ಚೆತ್ತುಕೊಂಡಿದ್ದರೆ, ಬಹಳಷ್ಟು ಅನಾಹುತಗಳನ್ನು ತಪ್ಪಿಸಿ, ನಮ್ಮ ದೇಶವಿಡೀ ಬಾಗಿಲು ಮುಚ್ಚಿ ಅಡಗಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ. ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಿಡಬಹುದಿತ್ತು. ವೈದ್ಯರಿಗೆ, ಆರೋಗ್ಯ ಕಾರ್ಯಕರ್ತರಿಗೆ, ಸ್ವಚ್ಛತಾ ಕಾರ್ಯಕರ್ತರಿಗೆ ಸುರಕ್ಷಾ ಸಾಧನಗಳ ವ್ಯವಸ್ಥೆ ಮಾಡಬಹುದಿತ್ತು. ತಳಮಟ್ಟದಲ್ಲಿ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಬಹುದಿತ್ತು. ಹಾಗೆ ಮಾಡಿದ್ದರೆ, ವೈದ್ಯರು, ಆರೋಗ್ಯ, ಕಾರ್ಯಕರ್ತರು ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡಬೇಕಾಗಿರಲಿಲ್ಲ. ಜನರು ಆಹಾರಕ್ಕಾಗಿ ಪರದಾಡಬೇಕಾಗಿರಲಿಲ್ಲ. ಮೋದಿ ಆಣತಿಯಂತೆ ಅವರ ಬೆಂಬಲಿಗರು ಗುಂಪುಗುಂಪಾಗಿ ಜಾಗಟೆ ಬಡಿಯುತ್ತಾ ಬೀದಿಗಿಳಿದು ಸಾಮಾಜಿಕ ಅಂತರದ ಮೂಲಕಲ್ಪನೆಯನ್ನೇ ಬೀದಿ ಕಸ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಕನಿಷ್ಟ ಎರಡು ಅಮೂಲ್ಯ ತಿಂಗಳುಗಳನ್ನು ಮೋದಿ ಸರಕಾರ ವ್ಯರ್ಥ ಮಾಡಿತು. ಇಡೀ ವರ್ಷ ಓದದೆ, ಪರೀಕ್ಷೆಯ ಹಿಂದಿನ ರಾತ್ರಿ ಓದಲು ಕುಳಿತ ವಿದ್ಯಾರ್ಥಿಯಂತಾಗಿದೆ ಮೋದಿ ಸರಕಾರದ ಪರಿಸ್ಥಿತಿ.
ನಂತರವೂ ಅವಸರವಸರವಾಗಿ 21 ದಿನಗಳ ರಾಷ್ಟ್ರೀಯ ಲಾಕ್‌ಡೌನ್ ಘೋಷಿಸಿದಾಗ, ಜನರಿಗೆ ಸಿದ್ಧರಾಗಲು ಸಾಕಷ್ಟು ಕಾಲಾವಕಾಶವನ್ನೇ ಕೊಡಲಿಲ್ಲ. ಏಕಾಏಕಿ ಅಂಗಡಿ ವ್ಯಾಪಾರ, ರೈಲು, ಬಸ್ಸು, ವಾಹನ ಎಲ್ಲವನ್ನೂ ನಿಲ್ಲಿಸಲಾಯಿತು. ವಲಸೆ ಕಾರ್ಮಿಕರು ನೂರಾರು ಕಿ.ಮೀ. ಬಿರುಬಿಸಿಲಿನಲ್ಲಿ, ಹಸಿದ ಹೊಟ್ಟೆಯಲ್ಲಿ ಮಕ್ಕಳು ಮರಿ, ಸಾಮಾನು ಸರಂಜಾಮುಗಳನ್ನು ಹೊತ್ತು ಸಾಗುತ್ತಿರುವ ದೃಶ್ಯಗಳು ಹೊಟ್ಟೆ ಕಿವಿಚುವಂತೆ ಮಾಡುತ್ತವೆ. ಇದೂ ಸಾಲದೆಂಬಂತೆ ದಿನಸಿ, ಔಷಧಿ, ತರಕಾರಿ ಕೊಳ್ಳಲು ಬಂದವರಿಗೆ ಕೆಲವು ಪೊಲೀಸರು ನಿಷ್ಕರುಣೆಯಿಂದ ಮೃಗಗಳಂತೆ ಥಳಿಸುವ ಹೃದಯವಿದ್ರಾವಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಸಂಖ್ಯೆಯಲ್ಲಿ ಹರಿದಾಡುತ್ತಿವೆ. ನಮ್ಮ ನಾಯಕರಾಗಲೀ, ಮೇಲಧಿಕಾರಿಗಳಾಗಲೀ ಏನೊಂದೂ ಮಾತನಾಡದೆ, ನಮ್ಮದೇ ಪ್ರಜೆಗಳ ಮೇಲೆ ತೋರಿಸಲಾಗುತ್ತಿರುವ ಈ ಕೌರ್ಯಕ್ಕೆ ಮೌನ ಬೆಂಬಲ ನೀಡುತ್ತಿದ್ದಾರೆ.
ಇದನ್ನು ಸಮರ್ಥಿಸುವ ಮೋದಿ ಅಭಿಮಾನಿಗಳು, ಮನೆಯಿಂದ ಏಕೆ ಹೊರಬೇಕು ಎಂದು ಕೇಳುತ್ತಾರೆ. ಹೌದು. ಮನೆಯೊಳಗೆ ಇರಬೇಕಾದುದು ಅಗತ್ಯ. ಆದರೆ, ಈ ಪ್ರಶ್ನೆ ಕೆಲವೊಂದು ಸಂದರ್ಭಗಳಲ್ಲಿ ಕ್ರೂರ ಎನಿಸುತ್ತದೆ. ಮನೆಯಲ್ಲಿ ದಾಸ್ತಾನು ಇರಿಸಿಕೊಂಡ ಸ್ಥಿತಿವಂತರಿಗೆ ಈ ಪ್ರಶ್ನೆ ಕೇಳುವುದು ಸುಲಭ. ಆದರೆ, ದಿನದಿನ ದುಡಿದು ಹೊಟ್ಟೆಹೊರೆಯುವ ಕೋಟ್ಯಂತರ ಜನರಿಗೆ ಹಠಾತ್ ಕೆಲಸ ಕಳೆದುಕೊಂಡವರಿಗೆ ಇದು ಹಸಿವಿನ ಮತ್ತು ಜೀವನ್ಮರಣದ ಪ್ರಶ್ನೆ. ಅವರಿಗೆ ನೆರವಾಗುವ ಜವಾಬ್ದಾರಿ ಇಲ್ಲದ ಸರಕಾರ, ಮನೆಯಲ್ಲಿ ಇರಿ ಎಂದರೆ, ಹಸಿವು ಕೇಳುವುದೇ? ಇವೆಲ್ಲವೂ ಬಡಜನರ ಪಾಡಾಯಿತು.
ಇದೀಗ ಮುಖ್ಯ ಪ್ರಶ್ನೆ. ಸಾಮಾನ್ಯ ಜನರ ಪಾಡೇ ಹೀಗಾಗಿದ್ದರೆ, ಯಾವುದೇ ನೆಲೆಯಿಲ್ಲದೆ ಹಾದಿ ಬೀದಿಗಳಲ್ಲಿ ಬದುಕುತ್ತಿರುವ 17.7 ಲಕ್ಷ ಭಾರತೀಯರ ಪಾಡು ಏನಾಗಿರಬೇಕು? ನೋಡುವ ಕಣ್ಣಿದ್ದರೆ, ಇಂತವರನ್ನು ಎಲ್ಲೆಲ್ಲೂ ಕಾಣಬಹುದು. ರಸ್ತೆಬದಿಯಲ್ಲಿ, ಫ್ಲೈಓವರ್‌ಗಳ ಕೆಳಗೆ, ಕಸದ ರಾಶಿಯಗಳ ನಡುವಿನ ತಟ್ಟಿ ಗುಡಿಸಲುಗಳಲ್ಲಿ… ರೈಲು, ಬಸ್ಸು ನಿಲ್ದಾಣಗಳಲ್ಲಿ… ಆದರೆ ಇವರು ಯಾವ ಸರಕಾರದ ಕಣ್ಣಿಗೂ ಬೀಳುವುದಿಲ್ಲ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮೋದಿ ಸರಕಾರದ ಜೊತೆ ರಾಜ್ಯ ಸರಕಾರಗಳನ್ನೂ ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂಕೋರ್ಟ್, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಎನ್‌ಯುಎಲ್‌ಎಂ) ಹಣಕಾಸಿನ ಬಗ್ಗೆ ಸಿಎಜಿ ಲೆಕ್ಕಪರಿಶೋಧನೆಗೆ ಆದೇಶಿಸಿತ್ತು. ವಾಸ್ತವವಾಗಿ ಈ ಹಣವನ್ನು (ಸುಮಾರು 1000 ಕೋಟಿ ರೂ.) ಬೇರೆ ಕಡೆ ತಿರುಗಿಸಿರುವುದಕ್ಕೆ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು. ಪ್ರಧಾನಿಯವರು ಬಾಯಿಮಾತಿನಲ್ಲಿ ಲಕ್ಷಾಂತರ ಮನೆಗಳನ್ನು ಕಟ್ಟುತ್ತಲೇ ಇದ್ದರೂ, ಈ ನಿರ್ಗತಿಗರ ಪರಿಸ್ಥಿತಿ ಕಿಂಚಿತ್ತೂ ಬದಲಾಗಿಲ್ಲ.
ಇವರ ವಸತಿ ಸಮಸ್ಯೆಯನ್ನು ವಿವರವಾಗಿ ಚರ್ಚಿಸುವುದು ಈ ಬರಹದ ಮೂಲ ಉದ್ದೇಶವಲ್ಲ. ಎಲ್ಲಾ ಭಾರತೀಯರು ಮನೆಯೊಳಗೆ ಇರಬೇಕು ಎಂದು ಒಂದೇ ಮಾತಿನಲ್ಲಿ ಹೇಳುವವರಿಗೆ ಒಂದೇ ಪ್ರಶ್ನೆ ಎಂದರೆ, ಮನೆಯೇ ಇಲ್ಲದವರು ಮನೆಯೊಳಗೆ ಇರುವುದು ಹೇಗೆ? ನೀವು ಮನೆಯೊಳಗೆ ಸೇರಿಸಿಕೊಳ್ಳುತ್ತೀರಾ? ಕರೋನಾ ಪಿಡುಗಿನ ಸಂದರ್ಭದಲ್ಲಿ ಇರುವ ಆತಂಕಗಳೆಂದರೆ, ಸಾಮಾನ್ಯ ಬಡವರನ್ನೇ ಇಷ್ಟೊಂದು ನಿರ್ದಯವಾಗಿ ನಡೆಸಿಕೊಳ್ಳುತ್ತಿರುವ ಸರಕಾರಗಳು ಈ ನಿರ್ಗತಿಕರನ್ನು ಹೇಗೆ ನೋಡಿಕೊಂಡಾವು? ಅವರ ಊಟ, ವಸತಿ, ಆರೋಗ್ಯದ ಗತಿಯೇನು? ಹೊಟ್ಟೆ ಪಾಡಿಗೆ ಅಲೆದಾಡಲೇಬೇಕಾದ ಈ ಮಾನವರಿಂದ ಸೋಂಕು ಹರಡದಂತೆ ಸರಕಾರದ ಯೋಜನೆಯೇನು? ಇಂತಹಾ ಹಲವಾರು ಪ್ರಶ್ನೆಗಳು ಇದ್ದು, ಸರಕಾದ ಬಳಿ ಸಿದ್ಧ ಉತ್ತರ ಇರಲಾರದು.
ಅಧಿಕಾರಕ್ಕೆ ಬಂದಾಗ ನರೇಂದ್ರ ಮೋದಿ 2022ರ ಒಳಗಾಗಿ ಪ್ರತಿಯೊಬ್ಬ ಭಾರತೀಯರಿಗೆ ಮನೆ ಒದಗಿಸುವುದಾಗಿ ಕೊಚ್ಚಿಕೊಂಡಿದ್ದರು. ಈ ಗುರಿಗೆ ಇನ್ನುಳಿದಿರುವುದು ಒಂದೂ ಮುಕ್ಕಾಲು ವರ್ಷ ಮಾತ್ರ. ಕೊರೋನಾ ಹಾವಳಿಯಿಂದಾಗಿ ದೇಶದ ಆರ್ಥಿಕತೆಯು 1980ರ ದಶಕದ ಮಟ್ಟವನ್ನು ತಲಪಬಹುದು ಎಂದು ಆರ್ಥಿಕ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಆದುದರಿಂದ, ಮೋದಿಯ ಈ ‘ಗುರಿ’, ತುಳುಭಾಷೆಯ ಗುರಿ- ಅಂದರೆ ಹೊಂಡ ಸೇರುವುದು ಖಂಡಿತ. ಆದರೆ, ಆ ವೇಳೆಗೆ ಬಯಲಲ್ಲಿ ಯಾವುದೇ ಆಧಾರ, ಜೀವನೋಪಾಯವಿಲ್ಲದೆ ಬಯಲಲ್ಲಿ ಬದುಕುತ್ತಿರುವ ಈ 17 ಲಕ್ಷ 70 ಸಾವಿರ ನತದೃಷ್ಟರಲ್ಲಿ ಎಷ್ಟು ಮಂದಿ ಕರೋನಾದಿಂದ ಪಾರಾಗಿ ಬದುಕುಳಿಯಬಹುದು ಎಂಬುದೇ ಆತಂಕದ ವಿಷಯ.