ಅಮೆರಿಕಾದಲ್ಲಿ ಕರೋನಾ ವೈರಸ್ ನಿಯಂತ್ರಣ ವಿಫಲವಾಗಿ ಆರೋಗ್ಯ ಸಂಕಷ್ಟವನ್ನು ಎದುರಿಸುತ್ತಿದ್ದರೆ ಇದೇ ಕಾರಣಕ್ಕಾಗಿ ಅಲ್ಲಿನ ಪತ್ರಿಕೋದ್ಯಮ ಕೂಡ ಅನಿಶ್ಚಿತತೆಯತ್ತ ಮುಖಮಾಡಿದೆ. ಒಂದು ಕಾಲದ ಜನಪ್ರಿಯ ‘ಪ್ಲೇಬಾಯ್’ ಕೂಡ ಪತ್ರಿಕೆಯ ಕೊನೆಯ ಮುದ್ರಣ ಪ್ರತಿಯ ಹೊರತರುತ್ತಿರುವ ನಗ್ನ ಸತ್ಯವನ್ನು ಪ್ರಕಟಿಸಿದೆ. ವಿದೇಶಗಳಲ್ಲಿ ಅದಾಗಲೇ ಟಿವಿ ಮತ್ತು ಡಿಜಿಟಲ್ ಮೀಡಿಯ ಮುದ್ರಣ ಮಾಧ್ಯಮಕ್ಕೆ ಸವಾಲು ಹಾಕಿತ್ತು. ಭಾರತದ ಪರಿಸ್ಥಿತಿ ಇದುವರೆಗೆ ಭಿನ್ನವಾಗಿತ್ತಾದರು ಕರೋನಾ ವೈರಸ್ ನಿಯಂತ್ರಣಕ್ಕಾಗಿ ಹಾಕಲಾದ ಲಾಕ್ ಡೌನ್ ಮುದ್ರಣ ಮಾಧ್ಯಮದ ಕತ್ತು ಹಿಡಿದಂತಾಗಿದೆ.
ಜಾಹಿರಾತು ಬರುತ್ತಿಲ್ಲ ಎಂಬ ಒಂದೇ ವಿಚಾರವಲ್ಲ, ಪತ್ರಿಕೆಯನ್ನು ವಿತರಣೆ ಮಾಡುವುದೇ ಬಹುದೊಡ್ಡ ಸವಾಲಾಗಿದೆ. ವೈರಸ್ ಭೀತಿಯಿಂದಾಗಿ ಪತ್ರಿಕೆ ಹಾಕುವ ಹುಡುಗರು ಮಾತ್ರ ಅಲ್ಲ ಖರೀದಿಸಿ ಓದುವ ಓದುಗ ಕೂಡ ಮನೆ ಬಾಗಿಲಿಗೆ ಬಂದ ಪತ್ರಿಕೆಯನ್ನು ಕೈಗೆತ್ತಿಕೊಳ್ಳಲು ಹೆದರುತ್ತಿದ್ದಾನೆ. ಕೊನೆಗೊಂದು ದಿನ ಪತ್ರಿಕೆಗಳಿಂದ ವೈರಸ್ ಹರಡುವುದಿಲ್ಲ ಎಂದು ದೊಡ್ಡದಾಗಿ ಎಲ್ಲರೂ ಢಂಗುರ ಸಾರಬೇಕಾಯಿತು. ಢಂಗುರ ಸಾರಿರುವುದು ಓದುಗನಿಗೆ ಕೇಳಿಸಿದರೆ ತಾನೇ.
ಜನರು ರಸ್ತೆಗೆ ಇಳಿಯುವಂತಿಲ್ಲ ಎಂದ ಮೇಲೆ ಪೇಪರ್ ಸ್ಟಾಲಿಗೆ ಬಂದು ಪೇಪರ್ ಕೊಂಡು ಹೋಗುವುದು ಅಷ್ಟಕ್ಕೆ ಇದೆ. ಬಹುತೇಕ ಜಿಲ್ಲೆಗಳಲ್ಲಿ ಬೆಳಗ್ಗೆ ಗಂಟೆ 7ರಿಂದ ಕೆಲವು ಗಂಟೆಗಳ ಕಾಲವಷ್ಟೇ ದಿನಸಿ ಖರೀದಿಸಲು ಅವಕಾಶ ನೀಡಲಾಗಿತ್ತು, ಸ್ಟಾಲ್ ಸೇಲ್ ಕಡಿಮೆಯಾಗಿದೆ. ಮನೆ ಮನೆ ವಿತರಿಸಲು ಹುಡುಗರು ಬರುತ್ತಿಲ್ಲ. ಆರಂಭದ ದಿನಗಳಲ್ಲಿ ಪೊಲೀಸರ ಲಾಠಿ ಏಟು ಕೂಡ ಬಿದ್ದಿತ್ತು. ಪೇಪರ್ ವಿತರಿಸಲು ಕೂಡ ಅಡ್ಡಿಪಡಿಸಲಾಗಿತ್ತು.
ಎಲ್ಲ ವಾಣಿಜ್ಯೋದ್ಯಮಗಳು ಲಾಕ್ ಡೌನ್ ಆದ ಪರಿಣಾಮ ಜಾಹಿರಾತು ಕೂಡ ಸಂಪೂರ್ಣ ಬಂದ್ ಆಗಿದೆ. ಭವಿಷ್ಯದ ಪರಿಸ್ಥಿತಿ ಏನು ಎಂಬುದು ಯಾರಿಗೂ ಗೊತ್ತಿಲ್ಲ. ಪತ್ರಿಕಾ ಸಂಸ್ಥೆಗಳ ಆದಾಯ ಖೋತಾ ಆಗಿದೆ, ಖರ್ಚು ಹೆಚ್ಚಾಗುತ್ತಿದೆ. ಖರ್ಚು ಕಡಿಮೆ ಮಾಡಲು ಪತ್ರಿಕೆಯ ಪುಟಗಳ ಸಂಖ್ಯೆ ಕಡಿಮೆ ಆಗುತ್ತಲೇ ಇದೆ. ಆದಾಯ ಮತ್ತು ಖರ್ಚು ಸರಿದೂಗಿಸುವಾಗ ನೇರವಾಗಿ ಏಟು ಬೀಳುತ್ತಿರುವುದೇ ಉದ್ಯೋಗಿಗಳಿಗೆ. ಸುದ್ದಿಗಾರರೇ ಮೊದಲು ʼಪಿಂಕ್ʼ ಚೀಟಿ ಪಡೆಯುವವರು.
ಲಾಕ್ ಡೌನ್ ಮುನ್ನವೇ ಆರ್ಥಿಕ ಹಿನ್ನಡೆ ನಡುವೆ ಕಳೆದ ವರ್ಷವೇ ಎರಡು ಆಂಗ್ಲ ಪತ್ರಿಕೆಗಳು ತಮ್ಮ ಮುದ್ರಣ ಆವೃತ್ತಿ ಬಂದ್ ಮಾಡಿದ್ದವು. ಇತ್ತೀಚೆಗೆ ಹೈದರಾಬಾದ್ ಮೂಲದ ಡೆಕ್ಕನ್ ಕ್ರಾನಿಕಲ್ ತನ್ನ ಬೆಂಗಳೂರು ಆವೃತ್ತಿಗೆ ಬಾಗಿಲು ಹಾಕಿದ್ದರೆ, ಝೀ ಗ್ರೂಪಿನ ಡೈಲಿ ನ್ಯೂಸ್ ಆಂಡ್ ಅನಾಲಿಸಿಸ್ (ಡಿಎನ್ಎ) ದೇಶದ ಇತರೆಡೆ ಮುದ್ರಣ ನಿಲ್ಲಿಸಿತ್ತು.
ಲಾಕ್ ಡೌನ್ ಆರಂಭವಾದ ಕೆಲವೇ ವಾರಗಳಲ್ಲಿ ರಾಜ್ಯದ ಹಲವು ಸಂಜೆ ಆವೃತ್ತಿಯ ಪತ್ರಿಕೆಗಳು ಮುದ್ರಣ ನಿಲ್ಲಿಸಿವೆ. ಮಂಗಳೂರು, ಮೈಸೂರಿನಂತಹ ನಗರಗಳಲ್ಲಿ ಸಂಜೆ ಪತ್ರಿಕೆಗಳು ಮುದ್ರಣ ನಿಲ್ಲಿಸುತ್ತಿರುವ ಬಗ್ಗೆ ಪ್ರಕಟಣೆ ನೀಡಿವೆ. ವಾರ ಪತ್ರಿಕೆಗಳು, ಜಿಲ್ಲಾ ಮಟ್ಟದ ಸಣ್ಣ ಪತ್ರಿಕೆಗಳು ಮುದ್ರಣಗೊಳ್ಳುತ್ತಿಲ್ಲ. ಇವರೆಲ್ಲರಿಗೂ ಬಹುದೊಡ್ಡ ಸಮಸ್ಯೆ ಪತ್ರಿಕೆಯ ವಿತರಣೆ ಮೊದಲನೇಯದಾದರೆ, ಎರಡನೆಯದು ಜಾಹಿರಾತು. ಸುದ್ದಿ ಹೇಗೂ ಸಂಗ್ರಹ ಆಗುತ್ತದೆ. ಪತ್ರಿಕೆಯ ಪುಟಗಳನ್ನು ತುಂಬಿಸಬಹುದು. ಆದರೆ, ವಿತರಣೆಯು ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಿಗೆ ಹೊರೆಯಾಗಿತ್ತು. ಸರಕಾರಿ ಜಾಹಿರಾತು ಹೊರತಾಗಿ ಬೇರೆ ಜಾಹಿರಾತು ದೊರೆಯುವ ಸಾಧ್ಯತೆಯೇ ಇಲ್ಲ. ಸುದ್ದಿಯು ಅಷ್ಟೇ ಕೊವಿಡ್-19 ಬಿಟ್ಟರೆ ಬೇರೆ ಸುದ್ದಿ ಆಗುತ್ತಿಲ್ಲ.
ಅಷ್ಟೇ ಅಲ್ಲದೆ ಸಣ್ಣ ಪತ್ರಿಕೆಗಳಿಗೆ ದುಬಾರಿ ಆಗಿರುವ ನ್ಯೂಸ್ ಪ್ರಿಂಟ್ ಲಭ್ಯವೂ ಆಗುತ್ತಿಲ್ಲ. ಬಹುತೇಕ ನ್ಯೂಸ್ ಪ್ರಿಂಟ್ ರಫ್ತು ಆಗುತ್ತಿದ್ದು, ಸಾಗಾಟ ಸಮಸ್ಯೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ನ್ಯೂಸ್ ಪೇಪರ್ ಆವಶ್ಯ ಸಾಮಾಗ್ರಿ ಪಟ್ಟಿಯಲ್ಲಿದ್ದರೂ, ಬಂದರುಗಳಿಂದ ನ್ಯೂಸ್ ಪ್ರಿಂಟ್ ಸಾಗಿಸಲು ಅನುಮತಿ ದೊರೆಯುತ್ತಿಲ್ಲ.
ಸಣ್ಣ, ಮಧ್ಯಮ ಮತ್ತು ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಕರೋನಾ ವೈರಸ್ ಕೇಡುಗಾಲ ತಂದಿದೆ. ಇನ್ನು ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳು, ಆಂಗ್ಲ ಮಾಧ್ಯಮ ಪತ್ರಿಕೆಗಳ ಪರಿಸ್ಥಿತಿ ಕೂಡ ಇದಕ್ಕಿಂತ ತುಂಬಾ ಭಿನ್ನವಾಗಿ ಇಲ್ಲ. ಕರೋನಾ ವೈರಸ್ ಭೀತಿ ಹುಟ್ಟುವ ಮುನ್ನವೇ ಕನ್ನಡದ ವಿಶ್ವಾಸಾರ್ಹ ಪತ್ರಿಕೆ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಹಿರಿಯ ಪತ್ರಕರ್ತರ ತಂಡವೊಂದಕ್ಕೆ ಅತ್ಯಂತ ಗೌರವಯುತವಾಗಿ ಬೀಳ್ಕೋಡುಗೆ ನೀಡಿದ್ದರು. ಈ ಲಾಕ್ ಡೌನ್ ಸಂದರ್ಭದಲ್ಲಿ ಅನುಭವಿ ಮಾಧ್ಯಮ ತಜ್ಞರ ಪ್ರಕಾರ ರಾಜ್ಯ ಮಟ್ಟದ ಪತ್ರಿಕೆಗಳ ಶೇಕಡ 40ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳು ಕೆಲಸ ಕಳಕೊಳ್ಳಲಿದ್ದಾರೆ. ಇದರಲ್ಲಿ ಪತ್ರಕರ್ತರು, ಜಾಹಿರಾತು ಮತ್ತು ಪ್ರಸರಣ ವಿಭಾಗದವರೂ ಸೇರುತ್ತಾರೆ.
ಇನ್ನು ಕನ್ನಡ ಪ್ರಾದೇಶಿಕ ಖಾಸಗಿ ಟಿವಿ ಚಾನಲುಗಳು ಹಿಂದಿನಿಂದಲೂ ಅನಿಶ್ಚಿತತೆಯ ನಡುವೆಯೇ ಬೊಬ್ಬೆ ಹಾಕಿಕೊಂಡು ಬದುಕುತ್ತಿವೆ. ನ್ಯೂಸ್ 18, ಏಷಿಯಾನೆಟ್, ಟಿವಿ ನೈನ್ ಮುಂತಾದ ಗ್ರೂಪ್ ಮತ್ತು ಪಬ್ಲಿಕ್ ಟಿವಿ ಯಂತಹ ವ್ಯವಹಾರಿಕ ಪರಿಜ್ಞಾನ ಹೊಂದಿರುವ ನೆಲೆ ಕಾಣಬಹುದು ಎನ್ನುತ್ತಾರೆ ಉದ್ಯಮದ ಮಂದಿ. ದೇಶದ ಹಲವು ಪ್ರಾದೇಶಿಕ ಭಾಷಾ ಚಾನಲುಗಳಂತೆ ಕನ್ನಡದಲ್ಲಿ ಕೂಡ ಸಮಸ್ಯೆ ಇದೆ. ವೃತ್ತಿಪರತೆಯೊಂದೇ ಕೊರತೆಯಲ್ಲದೆ, ಸರಿಯಾದ ಆದಾಯ ಮೂಲ ಇಲ್ಲದಿರುವುದು, ಹೊಸ ಆದಾಯ ಮೂಲಗಳನ್ನು ಹುಡುಕದಿರುವುದು ಕೂಡ ಇಲ್ಲಿಯ ಸಮಸ್ಯೆಗಳಿಗೆ ಕಾರಣ. ಇಲ್ಲೂ ಸಂಕಷ್ಟ ಎದುರಿಸುವುದು ಅದೇ ಕ್ಯಾಮರಾಮನ್, ವರದಿಗಾರರು, ಬುಲೆಟಿನ್ ಪ್ರೊಡ್ಯೂಸರ್ ಇತ್ಯಾದಿ ಮಂದಿ. ಇಲ್ಲಿ ಕಾರ್ಯ ಒತ್ತಡ ಕೂಡ ಸ್ವಲ್ಪ ಹೆಚ್ಚಾಗಿದೆ.
ನಮ್ಮ ಪತ್ರಿಕೆಗಳಿಗೆ ಹಲವು ದಶಕಗಳ ಇತಿಹಾಸ ಇದೆ, ಬಂಡವಾಳ ಹೂಡಿದ ಮಾಲೀಕರು ಕಾಲ ಕಾಲಕ್ಕೆ ಸಾಕಷ್ಟು ಆಸ್ತಿಯನ್ನು ಕೂಡಿ ಹಾಕಿದ್ದಾರೆ, ಪ್ರಭಾವವನ್ನು ಕೂಡ ಬೆಳೆಸಿಕೊಂಡಿದ್ದಾರೆ. ತಮಗೆ ಬೇಕು ಬೇಡದ್ದನೆಲ್ಲ ಮಾಡಿಕೊಂಡಿದ್ದಾರೆ. ಈಗ ಒಂದೆರಡು ತಿಂಗಳ ಲಾಕ್ ಡೌನ್, ಸರಕಾರದ ಆರ್ಥಿಕ ವೈಫಲ್ಯದಿಂದಾದ ದೇಶದ ಆರ್ಥಿಕತೆಯ ಹಿನ್ನಡೆಯ ಸೋಗಿನಲ್ಲಿ ಪತ್ರಕರ್ತರನ್ನು ಕೆಲಸದಿಂದ ವಜಾ ಮಾಡುವುದು ಎಷ್ಟು ಸರಿ ಎಂದು ಪರಾಮರ್ಶೆ ಮಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ, ಈಗಾಗಲೇ ಇವರ ಪ್ರಾತಿನಿಧಿಕ ಸಂಸ್ಥೆ ಸರಕಾರದ ಬಾಗಿಲು ತಟ್ಟಿದೆ. ಎರಡು ವರ್ಷಗಳ ಕಾಲ ತೆರಿಗೆ ರಜಾ ಬೇಡಿಕೆ ಮಂಡಿಸಿದೆ. ನಮ್ಮ ಪ್ರಧಾನಿ ನರೇಂದ್ರ ದಾಮೋದರದಾಸ್ ಮೋದಿ ಹೇಳಿದ್ದಾರೆ, ಯಾರನ್ನೂ ಕೆಲಸದಿಂದ ತೆಗೆಯಬೇಡಿ ಎಂದು. ಭಕ್ತಾಗ್ರೇಸರ ಮಾಲೀಕರು ಭಕ್ತ ಪತ್ರಕರ್ತರನ್ನು ಹೇಗೆ ಮನೆಗೆ ಕಳುಹಿಸಲು ಸಾಧ್ಯ ಆಗುತ್ತದೆ. ಹಾಗೆ ಆಗದಿರಲಿ ಎಂದು ಹಾರೈಸಬಹುದೇ?