ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆ ಹೆಚ್ಚಾಗುತ್ತಿದ್ದು, ನದಿಗಳ ಉಬ್ಬರ ಹೆಚ್ಚಾಗುತ್ತಿದೆ. ಭಯ ಕಾಡುತ್ತಿದೆ. ಬೆಳಗಾವಿ ಜಿಲ್ಲೆಯ ವೇದಗಂಗಾ ಮತ್ತು ಶೂದಗಂಗಾ ನದಿಗಳು ಉಕ್ಕಿ ಹರಿಯುತ್ತಿದ್ದು ನೆರೆ ಭೀತಿ ಶುರುವಾಗಿದೆ. ಬೆಳಗಾವಿ ಜಿಲ್ಲೆಯ ಹಿಡಕಲ್ ಡ್ಯಾಂನಿಂದ ನೀರು ಬಿಡಲಾಗುತ್ತಿರುವುದರಿಂದ ಘಟಪ್ರಭಾ ನದಿ ತೀರದ ಗ್ರಾಮಗಳಲ್ಲಿ ಆತಂಕ ಆವರಿಸಿದೆ. ಹಿಪ್ಪರಗಿ ಬ್ಯಾರೇಜ್ಗೆ 1 ಲಕ್ಷ 60 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ. ನವಿಲುತೀರ್ಥ ಜಲಾಶಯದಿಂದ 3,500 ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಮಲಪ್ರಭಾ ನದಿಯಿಂದ 10,000 ಕ್ಯೂಸೆಕ್ಸ್ ನೀರು ಬಿಡಲಾಗಿದೆ. ಈ ಎಲ್ಲ ಭಾಗದ ನದಿ ಪಾತ್ರದ ಜನರು ಕಳೆದ ಪ್ರವಾಹ ಅನುಭವವಿರುವುದರಿಂದ ತಾವೇ ಬೇರೆ ಸ್ಥಳಗಳಿಗೆ ತೆರಳುತ್ತಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಹಾರಾಷ್ಟ್ರದ ಕೊಯ್ನಾ ಪ್ರದೇಶದಲ್ಲಿ ಮಳೆ ಹೆಚ್ಚಾಗುತ್ತಿರುವುದರಿಂಧ ಕೃಷ್ಣಾ ನದಿ ನೀರಿನ ಮಟ್ಟ ತುಸು ಏರಿಕೆಯಾಗಿದೆ. ಕಳೆದ ಮೂರು ದಿನಗಳಿಂದ ಬೆಳಗಾವಿ ಜಿಲ್ಲೆಯ ಕೆಲ ಸೇತುವೆಗಳು ಮುಳುಗಡೆಯಾಗಿದ್ದು ಇನ್ನೂ ನೀರಿನ ಮಟ್ಟ ತಗ್ಗಿಲ್ಲ. ಕೃಷ್ಣಾ, ಮಲಪ್ರಭಾ ಹಾಗೂ ತುಂಗಭದ್ರಾ ನದಿ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕರ್ನಾಟಕದಲ್ಲಿ ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಹಾವೇರಿ, ರಾಯಚೂರು, ಗದಗ, ಬಾಗಲಕೋಟೆಯ ನದಿ ಪಾತ್ರದ ಜನರಿಗೆ ಕೋವಿಡಾತಂಕದ ಜೊತೆಗೆ ನೆರೆ ಭೀತಿ ಶುರುವಾಗಿದೆ. ಕಾರವಾರದ ದೇವಳಮಕ್ಕಿಯಲ್ಲಿ ಗುಡ್ಡ ಕುಸಿತವಾಗಿದ್ದು, ಅನೇಕ ಮರಗಳು ಉರುಳಿವೆ. ಸುತ್ತಮುತ್ತಲ ಗ್ರಾಮಗಳ ಹೊಲದಲ್ಲಿ ನೀರು ನಿಂತು ಬೆಳೆ ನಾಶವಾಗಿವೆ.
ಶನಿವಾರ ಮಲಪ್ರಭಾ ನದಿಯಿಂದ 10 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಿದ್ದರಿಂದ ಆ ಭಾಗದ ಜಿಲ್ಲೆಗಳ ರೈತರಲ್ಲಿ ಬೆಳೆ ನಾಶದ ಆತಂಕವಾಗುತ್ತಿದೆ. ಬಾಗಲಕೋಟೆಯ ಬಾದಾಮಿ ಹಾಗೂ ಹೊಳೆ ಆಲೂರ ರಸ್ತೆ ಸಂಪರ್ಕ ಕಳೆದೆರಡು ದಿನಗಳಿಂದ ಬಂದ್ ಅಗಿದ್ದು ಶನಿವಾರದವರೆಗೂ ನೀರಿನ ಮಟ್ಟ ತಗ್ಗಿಲ್ಲ.
ಮಲಪ್ರಭಾ ನದಿಯ ಜಲಸಂಗ್ರಹಣ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಯಾವುದೇ ಸಂದರ್ಭದಲ್ಲಾದರೂ ಮಲಪ್ರಭಾ ಜಲಾಶಯ ಭರ್ತಿ ಆಗುವ ಲಕ್ಷಣಗಳಿವೆ. ಹೀಗಾಗಿ ಜಲಾಶಯದ ಮಟ್ಟ 2070 ಅಡಿಗೆ ತಲುಪಿದ ತಕ್ಷಣ ಮಲಪ್ರಭಾ ನದಿ ಹಾಗೂ ಕಾಲುವೆಗಳಿಗೆ ನೀರು ಹರಿಸಲು ಸಂಬಧಿಸಿದ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಸಿ.ಸಿ.ಪಾಟೀಲ್ ಅವರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಮಳೆ ಸುರಿಯುತ್ತಿದ್ದು, ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಪತ್ರ ಬರೆದಿದ್ದಾರೆ.
ಧಾರವಾಡದಲ್ಲಿ ಪುಟ್ಟ ಬಾಲಕಿ ಬಲಿ
ಕಲಘಟಗಿಯ ಹತ್ತಿರ ಶ್ರೀದೇವಿ ಎಂಬ 8 ವರ್ಷದ ಪುಟ್ಟ ಬಾಲಕಿ ತನ್ನ ತಾಯಿಯ ಜೊತೆಗೆ ಹೊಲದಿಂದ ಮರಳುವಾಗ ಆಕಸ್ಮತ್ತಾಗಿ ಕಾಲು ಜಾರಿ ಹರಿಯುವ ನೀರಿಗೆ ಸಿಕ್ಕು ಪ್ರವಾಹದ ಹೊಡೆತಕ್ಕೆ ಸಿಕ್ಕು ತೇಲಿ ಶುಕ್ರವಾರ ಹೋಗಿದ್ದು ಒಂದು ದಿನದ ನಂತರ ಅಂದರೆ ಶನಿವಾರ ಶವ ಪತ್ತೆಯಾಗಿದೆ.
ಧಾರವಾಡದ ರೈತ ಶಶಿಕುಮಾರ ನವಲಗುಂದ ಅವರ ಪ್ರಕಾರ, “ಮಳೆ ಕೆಲವು ಭಾಗಗಳಲ್ಲಿ ತಗ್ಗಿದ್ದರೂ, ಅಪಾಯ ಹಾಗೂ ಇನ್ನೂ ತಪ್ಪಿಲ್ಲ. ನದಿಗಳು ಉಕ್ಕುತ್ತಲೇ ಇವೆ. ಜಲಾಶಯಗಳಿಂದ ನೀರು ಬಿಟ್ಟರೆ, ಅಪಾರ ಪ್ರಮಾಣದಲ್ಲಿ ಹೊಲಗದ್ದೆಗಳು ನಾಶವಾಗುವ ಪರಿಸ್ಥಿತಿಯಿದೆ. ಕಳೆದ ಪ್ರವಾಹದ ಹೊಡೆತಕ್ಕೆ ಸಿಕ್ಕವರು ಇನ್ನೂ ಸುಧಾರಿಸಿಕೊಂಡಿಲ್ಲ. ಧಾರವಾಡದಲ್ಲಿ ದಿನಕ್ಕೆ 200 ರವರೆಗು ಕೋವಿಡ್ ಪ್ರಕರಣ ದಾಖಲಾಗುತ್ತಿದ್ದು, ಇತ್ತ ನೆರೆ ಭೀತಿಯೂ ಶುರುವಾಗಿದೆ”.