ಗಂಗಾವಳಿಯಲ್ಲಿ ಧಾರಾಕಾರ ಮಳೆ ವಾರವಾದರೂ ನಿಂತಿಲ್ಲ. ಹುಬ್ಬಳ್ಳಿ ಧಾರವಾಡದಲ್ಲಿ ನಿರೀಕ್ಷೆಗೂ ಮೀರಿ ಆಗುತ್ತಿರುವ ಮಳೆಗೆ ಗಂಗಾವಳಿಯ ಮೂಲ ಬೇಡ್ತಿಯಿಂದ ಪ್ರವಾಹ ರೂಪದಲ್ಲಿ ನೀರು ಹರಿದು ಬರುತ್ತಿದೆ. ನದಿಪಾತ್ರದ ಬಹುತೇಕ ಎಲ್ಲ ಊರುಗಳೂ ಮುಳುಗಿವೆ.
ಹುಬ್ಬಳ್ಳಿಯಲ್ಲಿ ಹುಟ್ಟುವ ಬೇಡ್ತಿ ಉತ್ತರ ಕನ್ನಡದ ಹತ್ತಾರು ಹಳ್ಳಗಳನ್ನು ಕೂಡಿಕೊಂಡು ಗಂಗಾವಳಿಯಾಗುತ್ತದೆ. ಕಳಾಸೆ,ಕೈಗಡಿ, ಗುಳ್ಳಾಪುರ, ಕಲ್ಲೇಶ್ವರ, ಹೆಗ್ಗಾರ, ವೈದ್ಯ ಹೆಗ್ಗಾರ, ಕೋನಾಳ, ಶೇವ್ಕಾರ, ರಾಮನಗುಳಿ, ಸುಂಕಸಾಳದಿಂದ ಮುಂದೆ ಅರಬ್ಬೀಯನ್ನು ಸೇರುವ ಇಕ್ಕೆಲದಲ್ಲಿನ ಊರುಗಳಿಗೆ ಜೋರು ಮಳೆಗಾಲದಲ್ಲಿ ಪ್ರವಾಹದ ಭೀತಿಯಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
60 ವರ್ಷಗಳ ಹಿಂದೆ ಗಂಗಾವಳಿ ಮಹಾಪೂರವಾಗಿತ್ತು ಎಂದು ನೆರೆಪೀಡಿತರಾದ ಎಂಕಣ್ಣ ವೈದ್ಯರು ನೆನಪಿಸಿಕೊಳ್ಳುತ್ತಾರೆ. ಚಿಕ್ಕವನಿದ್ದಾಗ ನೆರೆ ಬಂದಾಗ ಅನುಭವಿಸದ ನೋವನ್ನು ಮತ್ತೆ ಅನುಭವಿಸುವಂತಾಗಿದೆ ಎಂದು ನೊಂದುಕೊಳ್ಳುತ್ತಾರೆ.
ಹೆಗ್ಗಾರ ಸೀಮೆಯ ಜನತೆ ಕೊಡಸಳ್ಳಿ ಆಣೆಕಟ್ಟಿನ ಜಲವಿದ್ಯುತ್ ಯೋಜನೆಗೆ ಮನೆ ಮಠ ಕಳೆದುಕೊಂಡು ಗಂಗಾವಳಿ ನದಿ ದಡದಲ್ಲಿ ಬದುಕು ಕಟ್ಟಿಕೊಂಡವರು. ಇನ್ನೇನು ಬದುಕು ಹಸನಾಯಿತು ಎಂಬಷ್ಟರಲ್ಲಿ ಎಲ್ಲವೂ ಕೊಚ್ಚಿಕೊಂಡು ಹೋಯಿತು.
ರಾಮನಗುಳಿ ತೂಗುಸೇತುವೆ ರಾಷ್ಟ್ರೀಯ ಹೆದ್ದಾರಿ 63 ರ ಪಕ್ಕವೇ ಇತ್ತು. ಡೋಂಗ್ರಿ ಪಂಚಾಯತದ ಜೀವನಾಡಿಯಂತಿದ್ದ ತೂಗುಸೇತುವೆಗೆ ಎಷ್ಟು ನೀರು ಬಂದರೂ ಏನೂ ತೊಂದರೆಯಿಲ್ಲ ಎಂದು ಜನ ನಂಬಿದ್ದರು. ನಸುಕಿಗೆ ಕುಸಿದ ಸೇತುವೆ ಕಂಡು ಇನ್ನೇನು ಕಾಣುವುದಿದೆಯೋ ಎಂದು ಕಂಗಾಲಾಗಿದ್ದರು.
ದೋಣಿ ನಾರಾಯಣ ಅವರು ತೂಗುಸೇತುವೆ ನಿರ್ಮಾಣವಾಗುವ ಮೊದಲು ದೋಣಿ ಹಾಕುತ್ತಿದ್ದರು. ಸದ್ಯ ಮೀನುಗಾರಿಕೆ, ಕೃಷಿ ಕೂಲಿ ಮಾಡಿ ಜೀವಿಸುತ್ತಿದ್ದ. ಗಂಗಾವಳಿ ಅವನ ಜೀವನದಿಯಾಗಿತ್ತು. ಈಗ ಅದೇ ಗಂಗಾವಳಿ ಮನೆ ಗೋಡೆಯನ್ನು ಕೆಡವಿತ್ತು.
ಹೆಗ್ಗಾರ ಪ್ರಶಾಂತ ಅವರು ಡೋಂಗ್ರಿ ಪಂಚಾಯತಿಯಲ್ಲಿ ನೌಕರ. ಪಂಚಾಯತಿಯ ಕಟ್ಟಡ ಮುಳುಗಿದೆ. ಅವರ ಮನೆಯೂ ಮುಳುಗಿದೆ. ರಾತ್ರೋ ರಾತ್ರಿ ಮನೆಯೊಳಗೆ ನೀರು ಹೊಕ್ಕಿ ಅಂಗಳದಲ್ಲಿ ವಾಹನವನ್ನು ಹಗ್ಗದಿಂದ ಕಂಬಕ್ಕೆ ಕಟ್ಟಿದರು. ತಕ್ಷಣಕ್ಕೆ ಅಗತ್ಯ ಸಾಮಾಗ್ರಿಗಳು ಕೈಗೆ ಸಿಗಲಿಲ್ಲ. ಜೀವ ಉಳಿದರೆ ಸಾಕೆಂದು ಹೆಂಡತಿ, ಮೂರನೆ ತರಗತಿಯ ಮಗಳು ತನ್ಮಯಿಯ ಗುಡ್ಡೆಮನೆಯ ಶಿವರಾಮ ಭಟ್ಟರ ಮನೆಗೆ ಧಾವಿಸಿದರು. ಈಗ ಮನೆಯೊಳಗೆ ಮಣ್ಣಿನ ಗುಡ್ಡೆಯೇ ಸೇರಿಕೊಂಡಿದೆ. ಖುರ್ಚಿ, ಮೇಜು, ಪಾತ್ರೆ ಪಗಡೆಗಳು ಚೆಲ್ಲಾಪಿಲ್ಲಿಯಾಗಿವೆ. ಮನೆ ಧರೆಗುರುಳಿದೆ. ಪ್ರೀತಿಯಿಂದ ಗದ್ದೆ, ತೋಟ, ಮಕ್ಕಳ ಆಟಿಕೆ, ಭಕ್ತಿಯ ದೇವರ ಕೋಣೆಗಳೆಲ್ಲವೂ ಹೊಳೆ ನುಂಗಿಹಾಕಿದೆ. ಇದು ಒಂದು ಮನೆಯ ಕಥೆಯಲ್ಲ. ಐವತ್ತಕ್ಕೂ ಹೆಚ್ಚು ಮನೆಗಳ ವಾಸ್ತವ.
ಬಯಲು ಸೀಮೆಯಲ್ಲಿ ಪ್ರವಾಹ ಬಂದರೆ ವೈಮಾನಿಕ ಸಮೀಕ್ಷೆ ಮಾಡಬಹುದು, ಆದರೆ ಬೆಟ್ಟ ಗುಡ್ಡಗಳಿಂದ ಆವೃತವಾದ ಕರಾವಳಿ- ಮಲೆನಾಡಿನ ಈ ಭಾಗದಲ್ಲಿ ವೈಮಾನಿಕ ಸಮೀಕ್ಷೆಯೂ ಫಲಪ್ರದವಲ್ಲ. ಹಾನಿಯನ್ನು ಅಂದಾಜಿಸಲು ನೆಲಕ್ಕಿಳಿದೇ ನೋಡಬೇಕು.