ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತಿನ ಮಲ್ಲ. ಆಕರ್ಷಕ ಘೊಷಣೆ ನೀಡುವುದರಲ್ಲಿ ನಿಸ್ಸೀಮ. ಪ್ರಧಾನಿ ಆಗುವುದಕ್ಕೂ ಮೊದಲೂ ಹೀಗೆ ಇದ್ದರು. ‘ಅಚ್ಛೇ ದಿನ್ ಆಯೇಗಾ’ ಎಂದಿದ್ದರು. ಈಗ ‘ಆತ್ಮನಿರ್ಭರ್’ ಎಂಬುದಾಗಿ ಉಚ್ಛರಿಸಲು ಕ್ಲಿಷ್ಟವಾಗಿರುವ ಸಂಸ್ಕೃತ ಮಿಶ್ರಿತ ಪದವನ್ನು ಪ್ರಸ್ತಾಪಿಸಿದ್ದಾರೆ. ‘ಮನ್ ಕಿ ಬಾತ್’ ಎಂಬ ಇನ್ನೊಂದು ಆಕರ್ಷಕ ಕಾರ್ಯಕ್ರಮದ ಮೂಲಕ ಮಾತನಾಡುತ್ತಲೇ ಇದ್ದಾರೆ.
ಮಾತುಗಳಿಂದ ಮಂಟಪ ಕಟ್ಟುವ ಹೊತ್ತಲ್ಲ ಇದು. ಕರೋನಾ ಕರುಣಿಸಿರುವುದು ಕಡುಕಷ್ಟ ಎಂಬುದು ಕಟುವಾಸ್ತವ. ಈಗ ಮಾತಿಗಿಂತ ಕೆಲಸ ಹೆಚ್ಚಾಗಬೇಕು. ಅದ್ಯಾಕೋ ಪ್ರಧಾನ ಸೇವಕರಿಗೆ ಅರ್ಥವಾಗುತ್ತಿಲ್ಲ. ಅವರು ಆಡಬೇಕಿರುವ ಮಾತುಗಳನ್ನು ಆಡುತ್ತಿಲ್ಲ. ದೇಶವಾಸಿಗಳಿಗೆ ನೀಡಲೇಬೇಕಾದ ಮಾಹಿತಿಗಳನ್ನು ಕೊಡುತ್ತಿಲ್ಲ; ಸರೀಕ ಪ್ರಧಾನಮಂತ್ರಿಗಳ ರೀತಿ. ಬೇರೆಯದೇ ಮಾತನ್ನಾಡುತ್ತಿದ್ದಾರೆ. ಮತ್ತೆ ಮತ್ತೆ ಆಕರ್ಷಕ ಘೋಷಣೆಗಳನ್ನು ಹುಡುಕಿ ಹುಡುಕಿ ತರುತ್ತಿದ್ದಾರೆ. ಸರಿ, ಅವರ ಹಿಂದಿನ ಘೋಷಣೆಗಳಿಗೆ ಈಗ ಎಂಥ ಗತಿ ಬಂದಿದೆ? ಎಂಬುದನ್ನು ನೋಡಿಬಿಡೋಣ.
ಝೀರೋ ಡಿಪೆಕ್ಟ್, ಝೀರೋ ಎಫೆಕ್ಟ್
ಕೆಂಪುಕೋಟೆ ಮೇಲೆ 65 ನಿಮಿಷಗಳ ಭಾಷಣ ಮಾಡಿದ್ದ ಮೋದಿ, ‘ಝೀರೋ ಡಿಪೆಕ್ಟ್, ಝೀರೋ ಎಫೆಕ್ಟ್’ ಎಂಬ ಘೋಷಣೆ ಮೊಳಗಿಸಿದ್ದರು. 2015ರ ಸ್ವತಂತ್ರ ದಿನಾಚರಣೆಯ ಭಾಷಣದ ಈ ಘೋಷಣೆ ಮರುದಿನ ಪತ್ರಿಕೆಗಳ ಪುಟ ಪುಟಗಳಲ್ಲಿ ಫಳಫಳಿಸುತ್ತಿತ್ತು. ಈಗ ನೆನಪಿದೆಯಾ? ಬಹುತೇಕರಿಗೆ ನೆನಪಿಲ್ಲ ಎಂಬುದು ಈ ವರದಿಗಾರನಿಗಿರುವ ಖಾತರಿ.
ಮೇಕ್ ಇನ್ ಇಂಡಿಯಾ
‘ಮೇಕ್ ಇನ್ ಇಂಡಿಯಾ’ ಎಂಬ ಮತ್ತೊಂದು ಮಜಬೂತಾದ ಘೋಷಣೆ ಕೊಟ್ಟಿದ್ದರು. ಈ ಮೇಕ್ ಇನ್ ಇಂಡಿಯಾ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದೀಗ ಎಲ್ಲರಿಗೂ ಗೊತ್ತಿರುವ ವಿಷಯ. ಬೇರೆ ವಿಷಯಗಳನ್ನು ಬಿಟ್ಟಾಕಿ, ಉಕ್ಕಿನ ಮನುಷ್ಯ ಎಂದೇ ಹೆಸರಾಗಿದ್ದ, ಸ್ವತಂತ್ರ ಚಳವಳಿಯಲ್ಲಿ ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು ಬಳಿಕ ಮುಂಚೂಣಿಯಲ್ಲಿದ್ದವರ ಪೈಕಿ ಒಬ್ಬರಾಗಿದ್ದ, ಬಿಜೆಪಿ ಈಗ ತಮ್ಮ ಪಕ್ಷದ ಐಕಾನ್ ಎಂದು ಬಿಂಬಿಸಿಕೊಳ್ಳುತ್ತಿರುವ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಮೂರ್ತಿಯನ್ನೇ ಚೀನಾದಿಂದ ಮಾಡಿ ತರಿಸಲಾಯಿತು. ಇದೊಂಥರಾ ‘ಹೈಟ್ ಆಫ್ ವಿರೋಧಭಾಸ’ ಎಂಬಂತೆ ಬಣ್ಣನೆಗೊಳಗಾಯಿತು.
ಬೇಟಿ ಬಚಾವೋ ಬೇಟಿ ಪಡಾವೋ
ʼಬೇಟಿ ಬಚಾವ್ ಬೇಟಿ ಪಡಾವ್ʼ ಎಂಬ ಇನ್ನೊಂದು ಪ್ರಾಸಬದ್ದ ಘೋಷಣೆ ಮಾಡಿದ್ದರು. ಇದು ನಿಜಕ್ಕೂ ಬಹಳ ನಿರೀಕ್ಷೆ ಹುಟ್ಟಿಸಿದ್ದ ಘೋಷಣೆ. ಆದರೆ ಕಡೆಗದು ಮೂಡಿಸಿದ್ದು ನಿರಾಸೆಯನ್ನು. ಏಕೆ ಎಂಬುದಕ್ಕೆ ಇದೇ ಮೋದಿ ಆಳ್ವಿಕೆಯ ಅವಧಿಯಲ್ಲಿ ದೇಶದುದ್ದಕ್ಕೂ ನಡೆದ ಸಾಲು ಸಾಲು ಮಹಿಳೆಯರ ದೌರ್ಜನ್ಯ ಪ್ರಕರಣಗಳೇ ಸಾಕ್ಷಿ. ಕಾಶ್ಮೀರದ ಕಥುವಾದಿಂದ ಹಿಡಿದು ಉತ್ತರ ಪ್ರದೇಶದ ಉನ್ನಾವೋ ಪ್ರಕರಣದವರೆಗೆ. ಬಹಳ ಅದ್ಭುತವಾಗಿ ಮಾತನಾಡುವ ಮೋದಿ ಈ ಅನ್ಯಾಯಗಳ ಬಗ್ಗೆ ಆಡಿದ ಅಣಿಮುತ್ತುಗಳು ನೆನಪಿವೆಯಾ ಓದುಗರೇ? ಮಾತನಾಡಿದ್ದರೆ, ಮರುಗಿದ್ದರೆ, ಅವರ ಮನ ಕಲಕಿದ್ದರೆ ತಾನೇ… ನಿಮಗೆ ನೆನಪಿರುವುದು.
ಮಿನಿಮಮ್ ಗೌರ್ಮೆಂಟ್, ಮ್ಯಾಕ್ಸಿಮಮ್ ಗೌರ್ವನೆನ್ಸ್
ತಮ್ಮ ಸರ್ಕಾರ ಚಿಕ್ಕದಾಗಿರಲಿದೆ, ಕೆಲಸ ಮಾತ್ರ ಹೆಚ್ಚು ಇರುತ್ತದೆ ಎಂಬುದನ್ನು ಮೋದಿ ‘ಮಿನಿಮಮ್ ಗೌರ್ಮೆಂಟ್ ಮ್ಯಾಕ್ಸಿಮಮ್ ಗೌರ್ವನೆನ್ಸ್’ ಎಂಬ ಘೋಷಣೆ ಮೂಲಕ ಹೇಳಿದ್ದರು. ಎಲ್ಲಾ ರೀತಿಯ ಜಾತಿ, ಪ್ರದೇಶಗಳನ್ನು ಲೆಕ್ಕಾ ಹಾಕಿಕೊಂಡು ಸಚಿವ ಸ್ಥಾನಗಳನ್ನು ತುಂಬಲಾಗಿದೆ. ಅನಗತ್ಯ ವೆಚ್ಚಕ್ಕೂ ಕತ್ತರಿ ಬಿದ್ದಿಲ್ಲ. ಒಂದೊಮ್ಮೆ ಹಾಗಾಗಿದ್ದರೆ ‘ಇದರಿಂದ ಇಷ್ಟು ಹಣ ಉಳಿದಿದೆ, ಇಂಥ ಕೆಲಸಕ್ಕೆ ಬಳಸುತ್ತಿದ್ದೇವೆ’ ಎಂದು ಸರ್ಕಾರ ಹೇಳಿಕೊಳ್ಳಬಹುದಿತ್ತು. ಆದರೆ ಹಾಗಾಗಿಲ್ಲ. ಜೊತೆಗೆ ಕೆಲಸವೂ ನಡೆಯುತ್ತಿಲ್ಲ. ಮೋದಿ ಬಿಟ್ಟು ಇನ್ನೊಬ್ಬರು ಈ ಸರ್ಕಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ. ಸಚಿವರು ʼರಬ್ಬರ್ ಸ್ಟ್ಯಾಂಪ್ʼ ಗಳಾಗಿದ್ದಾರೆ. ಇದ್ದುದರಲ್ಲಿ ನಿತಿನ್ ಗಡ್ಕರಿ ಕೆಲಸಗಾರ ಎನಿಸಿಕೊಂಡಿದ್ದಾರೆ. ಸ್ವಾಯತ್ತ ಸಂಸ್ಥೆಗಳ ಬೆನ್ನುಹುರಿಗಳನ್ನೂ ಕಳಚಿಡಲಾಗಿದೆ.
ಯೆಸ್, ವಿ ಕ್ಯಾನ್
ಮೋದಿ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮ ಜೊತೆ ರೇಡಿಯೊ ಕಾರ್ಯಕ್ರಮದಲ್ಲಿ ‘ಯೆಸ್, ವಿ ಕ್ಯಾನ್’ ಎಂಬ ಸಾಮಾಜಿಕ ಮಾಧ್ಯಮ ಅಭಿಯಾನ ಶುರುಮಾಡಿದರು. ‘ನಾವಿದನ್ನು ಮಾಡಬಹುದು’ ಎಂದಿದ್ದ ಮೋದಿ, ‘ಯೆಸ್, ವಿ ಡಿಡ್ ಇಟ್’ ಎಂದು ಏನನ್ನಾದರೂ ಹೇಳಿದ್ದಾರಾ? ಅದೇ ರೇಡಿಯೋ ಕಾರ್ಯಕ್ರಮದಲ್ಲಿ ‘ನಾನು ಮಾಡಬೇಕಾದ ಕೆಲಸಗಳ ಬಗ್ಗೆ ಸಲಹೆಗಳಿದ್ದರೆ, ಸಮಸ್ಯೆಗಳಿದ್ದರೆ ಪತ್ರ ಬರೆಯುವಂತೆ ತಿಳಿಸಿದ್ದರು. ಬಹುಶಃ ಅವರು ಮಾಡಬಹುದಾದ ಯಾವುದೇ ಕೆಲಸ ಇಲ್ಲ ಎನಿಸುತ್ತೆ. ದೇಶದಲ್ಲಿ ಸಮಸ್ಯೆಗಳೂ ಇಲ್ಲ ಎನಿಸುತ್ತೆ. ಯಾರೂ ಪತ್ರ ಬರೆಯದಿದ್ದರೆ ಅವರಾದರೂ ಏನು ಮಾಡಲು ಸಾಧ್ಯ?
ಸಬ್ ಕಾ ಸಾಥ್, ಸಬ್ ಕಾ ವಿಕಾಸ್
ʼಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ ಎಂಬ ಘೋಷಣೆ ಈ ಕಾರಣಗಳಿಗಾಗಿ ನೆನಪಿರಲೇಬೇಕು. ಮೋದಿಯೇ ಇದನ್ನು ಬಹಳಷ್ಟು ಬಾರಿ ಪುನರುಚ್ಛರಿಸಿದ್ದಾರೆ. ಅವರೇ ಹಾಗೆ ಮಾಡಿರುವುದರಿಂದ ಅವರ ಸಂಪುಟ ಸಹುದ್ಯೋಗಿಗಳು, ಬಿಜೆಪಿ ಐಟಿ ಸೆಲ್ ಭಕುತರು ಭಜನೆ ಮಾಡದೆ ಇರುತ್ತಾರೆಯೇ? ಇನ್ನು ವಿರೋಧ ಪಕ್ಷಗಳು ಕೂಡ ಈ ಬಗ್ಗೆ ಬಹಳಷ್ಟು ಟೀಕೆ ಮಾಡಿವೆ. ಹಾಗಾಗಿ ನೆನಪಿರುತ್ತದೆ. ಜೊತೆಗೆ ಈ ಘೋಷಣೆ ಎಷ್ಟರಮಟ್ಟಿಗೆ ಸಾಕಾರವಾಗಿದೆ ಎಂಬುದಕ್ಕೂ ಭರಪೂರ ಉದಾಹರಣೆಗಳಿವೆ. ಉತ್ತರ ಪ್ರದೆಶದ ದಾದ್ರಿಯಲ್ಲಿ ನಡೆದ ಘಟನೆ, ಅನಂತಕುಮಾರ್ ಹೆಗಡೆ, ಪ್ರಗ್ಯಾ ಸಿಂಗ್, ತೇಜಸ್ವಿ ಸೂರ್ಯ ಅವರಂತಹವರು ಕರೆಕೊಟ್ಟ ‘ಸರ್ವಧರ್ಮ ಸಹಿಷ್ಣು’ ಹೇಳಿಕೆಗಳು, ಮೊನ್ನೆ ಉತ್ತರ ಪ್ರದೇಶದ ಸರ್ಕಾರ ತನ್ನ ಕಾನೂನು ಇಲಾಖೆಯ 312 ಸ್ಥಾನಗಳಲ್ಲಿ 152 ಜನ ಬ್ರಾಹ್ಮಣರನ್ನು ಭರ್ತಿ ಮಾಡಿದ್ದು, ಇದೆಲ್ಲದಕ್ಕೂ ಮುಕುಟಪ್ರಾಯದಂತಿರುವ ಮೋದಿ ಸಂಪುಟ ಮತ್ತು ಮೋದಿಯ ದಿವ್ಯ ಮೌನ.
ಕೊಹಿ ರೋಡ್ ಪರ್ ನಾ ನಿಕಲೆ
ಕರೋನಾ ವಿಷಯವನ್ನೂ ಬಿಡಲಿಲ್ಲ ಮೋದಿ. ಯಾರೋ ಹೇಳಿದ್ದರು ಎಂದು ಉಲ್ಲೇಖಿಸಿ ‘ಕೊಹಿ ರೋಡ್ ಪರ್ ನಾ ನಿಕಲೆ’ ಎಂಬ ಇನ್ನೊಂದು ಘೋಷಣೆಯನ್ನು ಮಾಡೇಬಿಟ್ಟರು. ಮುಂದೊಂದು ದಿನ ಮೋದಿ ಅತಿಹೆಚ್ಚು ಘೋಷಣೆಗಳನ್ನು ನೀಡಿದ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾದರೂ ಆಗಬಹುದೇನೋ… ಮೋದಿ ‘ಕೊಹಿ ರೋಡ್ ಪರ್ ನಾ ನಿಕಲೆ’ ಎಂದು ಹೇಳಿದ ಬೆನ್ನಲ್ಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಹಿರಂಗವಾಗಿ ರಾಮನವಮಿ ಆಚರಿಸಿ ಪಾನಕ-ಕೋಸಂಬರಿ ಹಂಚಿದರು. ಮಧ್ಯಪ್ರದೇಶದಲ್ಲಿ ರಾಜರೋಷೋವಾಗಿ ಸರ್ಕಾರ ರಚನೆಯಾಯಿತು.
ಆತ್ಮನಿರ್ಭರ ಭಾರತ
ಈಗ ʼಆತ್ಮನಿರ್ಭರ ಭಾರತʼ ಎಂಬ ಹೊಸ ಘೋಷಣೆ ಕೊಟ್ಟಿದ್ದಾರೆ. ವಿದೇಶಿ ವಸ್ತುಗಳಿಗೆ ಕಡಿವಾಣ ಹಾಕೋಣ, ದೇಶದಲ್ಲೇ ಉತ್ಪಾದನೆ ಮಾಡೋಣ ಎಂಬುದು ತಾತ್ಪರ್ಯ. ಭಾರತದ ಬ್ರಾಂಡ್ ಸೃಷ್ಟಿಸೋಣ ಎಂಬ ಅರ್ಥ. ಈ ಸರಳ ಸಂಗತಿಗೆ ‘ಆತ್ಮನಿರ್ಭರ ಭಾರತ ಅಭಿಯಾನ’ ಎಂಬ ಉಚ್ಛರಿಸಲು ಕಷ್ಟವಾಗುವ ಹೆಸರನ್ನು ಏಕಿಟ್ಟರೋ? ಸ್ವದೇಶಿ, ಸ್ವದೇಸಿ, ಸ್ವಾವಲಂಬಿ ಎಂಬ ಬಗ್ಗೆ ಮಾತನಾಡಿರುವ ಮೋದಿ ಇಲ್ಲಿಯವರೆಗೆ ಕರೋನಾ ವಿರುದ್ಧ ಹೋರಾಡಲು ಕೊಟ್ಟ ಚಪ್ಪಾಳೆ ತಟ್ಟುವ, ಗಂಟೆ ಬಾರಿಸುವ, ದೀಪ ಹಚ್ಚುವ ಟಾಸ್ಕ್ ಗಳು ಅವರ ಸ್ವತಃ ಆಲೋಚನೆಗಳಾ?
ಈಗ ಸ್ವದೇಶಿ ಎನ್ನಲಾಗುತ್ತಿದೆ, ಹಾಗಾದರೆ ಹಿಂದೆ ‘ಮೇಕ್ ಇನ್ ಇಂಡಿಯಾ’ ಯೋಜನೆಯ ಉದ್ದೇಶ ಏನಾಗಿತ್ತು? ಈಗಾಗಲೇ ಕೇಂದ್ರ ಸರ್ಕಾರ ಜೂನ್ 1ರಿಂದ ಕೇಂದ್ರೀಯ ಸಶಕ್ತ ಮಿಸಲು ಪಡೆ (ಸಿಎಪಿಎಫ್) ಕ್ಯಾಂಟೀನ್ ಮತ್ತು ಅಂಗಡಿಗಳಲ್ಲಿ ಭಾರತೀಯ ಉತ್ಪನ್ನಗಳನ್ನು ಮಾತ್ರವೇ ಮಾರಾಟ ಮಾಡಬೇಕೆಂದು ಆದೇಶಿದೆ. ಅದೇ ರೀತಿ ಕೇಂದ್ರ ಸರ್ಕಾರ ತನಗೆ ಬೇಕಿರುವ ಎಲ್ಲಾ ಸಾಮಗ್ರಿಗಳನ್ನೂ ದೇಶಿಯ ಕಂಪನಿಗಳಿಂದಲೇ ಖರೀದಿಸಬೇಕೆಂದು ಆದೇಶ ಮಾಡಲಿ. ‘ತಾನು ಮಾಡಿ, ಜನರನ್ನು ಮಾಡುವಂತೆ ಪ್ರೇರೇಪಿಸಲಿ’.
ʼಆತ್ಮನಿರ್ಭರ ಭಾರತʼ ಎನ್ನುವ ಮೋದಿ ವಿದೇಶಿ ಬಂಡವಾಳ ಹೂಡಿಕೆಯನ್ನೂ ನಿರಾಕರಿಸಬೇಕು. ಬಂಡವಾಳ ಹೂಡಿದವರು ಲಾಭ ಮಾಡಿಕೊಳ್ಳುತ್ತಾರೆ. ಅಂದರೆ ಈ ದೇಶದ ಲಾಭ ಬೇರೆ ದೇಶಗಳ ಪಾಲಾಗುತ್ತದೆ. ಆಮದು ಸುಂಕ ಹೆಚ್ಚಿಸಲಿ, ವಿದೇಶಿ ಉತ್ಪನ್ನಗಳ ತೆರಿಗೆ ಹೆಚ್ಚು ಮಾಡಲಿ, ಆಗ ವಿದೇಶಿ ಉತ್ಪನ್ನಗಳ ಬೆಲೆ ಏರಿಕೆಯಾಗಲಿವೆ. ಇನ್ನೊಂದೆಡೆ ಕೈಗೆಟುಕುವ ದರದಲ್ಲಿ ಸಿಗುವಂತೆ ಸ್ವದೇಶಿ ಸಾಮಗ್ರಿಗಳನ್ನು ಉತ್ಪಾದಿಸಲು ಉತ್ತೇಜನ ನೀಡಲಿ. ಇವೆಲ್ಲವೂ ಆಡದೆ ಮಾಡಬೇಕಾದ ಕೆಲಸಗಳು. ಇಂಥ ವಿಷಯಗಳು ಬಹಳ ಇವೆ.
ಮಾತುಗಳಿಂದ ಮಂಟಪ ಕಟ್ಟುವ ಹೊತ್ತಲ್ಲ ಇದು. ಕರೋನಾ ಕಡುಕಷ್ಟದ ವೇಳೆ ಮಾತಿಗಿಂತ ಕೆಲಸ ಹೆಚ್ಚಾಗಬೇಕು ಎಂದು ಮೊದಲೇ ಹೇಳಿದ್ದೆ.
ಹಿರಿಯರು,
“ಆಡದೇ ಮಾಡುವವನು ರೂಢಿಯೊಳಗುತ್ತಮನು
ಆಡಿ ಮಾಡುವವನು ಮಧ್ಯಮನು
ಆಡಿಯೂ ಮಾಡದವನು ಅಧಮನು…” ಎಂದಿದ್ದರು.