ಕುಲ ಕಸುಬುಗಳನ್ನು ನಂಬಿ ಅದರಲ್ಲಿಯೇ ತೃಪ್ತಿ ಪಡುತ್ತ ಹಳೆತನವನ್ನು ಹೊಸತನದಂತೆಯೇ ಮುಂದಿನ ಪೀಳಿಗೆಯವರಿಗೆ ಕಲಿಸಿದ ಕುಲಕಸುಬುಗಳು ಒಂದೊಂದೇ ನಾಶವಾಗುತ್ತಿವೆ. ಇಂತಹ ಕುಲ ಕಸುಬುಗಳ ಅವನತಿಯತ್ತ ಸಾಗುತ್ತವೆ. ಇದರ ಬಗ್ಗೆ ಅಬ್ಬಿಗೇರಿಯ ಸಾಮಾಜಿಕ ಕಾರ್ಯಕರ್ತರಾದ ಬಸವರಾಜ ಅಬ್ಬಿಗೇರಿಯವರು ಪ್ರತಿಧ್ವನಿ ತಂಡದೊಂದಿಗೆ ಈ ರೀತಿ ಹಂಚಿಕೊಂಡಿದ್ದಾರೆ.
ಅವರ ಜೊತೆ ಮಾತಾಡಿದ ವಿಷಯದ ಬಗ್ಗೆ ಒಂದು ಸಂಕ್ಷಿಪ್ತ ಸ್ಟೋರಿ:
ಕೃಷಿಕರ ಪ್ರಮಾಣ ಭಾರತದಲ್ಲಿ ಬರುಬರುತ್ತ ಕಡಿಮೆಯಾಗುತ್ತಿದೆ. ಇದರ ಜೊತೆಗೆ ಕೃಷಿ ಮತ್ತು ಕೃಷಿ ಕುಟುಂಬವನ್ನೆ ಅವಲಂಭಿಸಿ, ತಲೆತಲಾಂತರದ ಕುಲಕಸುಬು ಆಗಿದ್ದ ಉದ್ಯೋಗಗಳೂ ನಸಿಸುತ್ತಿವೆ. ಅಂತಹ ಉದ್ಯೋಗಗಳಲ್ಲಿ ಕೊರವರ ಮತ್ತು ಅವರ ಪಂಗಡಗಳ ಕುಲ ಕಸುಬುಗಳು ಸೇರಿವೆ.
ಕೊರವರು, ಕುಂಚಿಕೊರವರು ಎಂದು ಕರೆಯುವ ಒಂದು ಪರಿಶಿಷ್ಟ ಜಾತಿ ಇದೆ. ಇವರುಗಳಲ್ಲಿ ಹಲವು ಪಂಗಡಗಳೂ ಇವೆ. ಇವರುಗಳು ಕಷ್ಟ ಸಹಿಷ್ಣುಗಳಾಗಿದ್ದು, ಮಳೆ ಗಾಳಿ ಬಿಸಿಲಿಗೆ ಅಂಜದೆ ತಮ್ಮ ಕಾಯಕದಲ್ಲಿ ತೊಡಗುವರಾಗಿದ್ದಾರೆ.
ಕುಲಕಸುಬು
ಕೊರವರು ಮೂಲತಃ ಕೃಷಿ ಕೃಷಿ ಕುಟುಂಬವನ್ನು ಅವಲಂಭಿಸಿ ಸಾಂಪ್ರದಾಯಕ ಉದ್ಯೋಗ ಮಾಡುವರಾಗಿದ್ದಾರೆ. ಕೃಷಿಕರಿಗೆ ಮತ್ತು ಕೃಷಿಕರ ಕುಟುಂಬಗಳಿಗೆ ಬೇಕಾದ ವಸ್ತುಗಳನ್ನು ಸ್ಥಳಿಯವಾಗಿಯೇ ಸಿಗುವ ಕಚ್ಚಾ ಸಂಪನ್ಮೂಲ ಬಳಸಿ ಸಿದ್ದಪಡಿಸಿದ ವಸ್ತು ಮಾಡುವದೇ ಇವರ ಮೂಲ ಉದ್ಯೋಗ, ತಮಗೆ ಬೇಕಾದ ಕಚ್ಚಾ ಸಂಪನ್ಮೂಲ ಪೂರೈಕೆದಾರರೂ ಇವರೆ, ಉತ್ಪಾದಕರೂ ಇವರೆ ಮತ್ತು ತಮ್ಮ ವಸ್ತುಗಳ ನೇರ ಮಾರಾಟಗಾರರೂ ಇವರೆ ಆಗಿದ್ದಾರೆ. ಸ್ಥಳೀಯವಾಗಿ ಹಳ್ಳ ಕೊಳ್ಳ, ಹೊಲದಲ್ಲಿ ಮತ್ತು ಬದುವುಗಳಲ್ಲಿ ಸಿಗುವ ಸಂಪನ್ಮೂಲ ಬಳಸುವ ಇವರು ‘ ಕಚ್ಚಾವಸ್ತುಗಳನ್ನು ಸಿದ್ದ ವಸ್ತು ಮಾಡುತ್ತಾರೆ. ಪರಿಸರದಿಂದ ದೊರೆಯುವ ವಸ್ತುಗಳನ್ನು ಪಡೆದು ಪರಿಸರಕ್ಕೆ ಹಾನಿಯಾಗದ ವಸ್ತುಗಳನ್ನು ತಯಾರಿಸುತ್ತಾರೆ.
ರೈತರೊಂದಿಗೆ ಅವಿನಾಭಾವ ಸಂಬಂಧ:
ರೈತರು ಮತ್ತು ರೈತ ಕುಟುಂಬಗಳಿಗೆ ಬೇಕಾದ ಸಾಂಪ್ರದಾಯಕ ವಸ್ತುಗಳನ್ನು ಇವರು ತಯಾರಿಸುತ್ತಾರೆ. ರೈತರಿಗಾಗಿಯೇ ಇವರು ಉದ್ಯೋಗ ಮಾಡುತ್ತಾರೆ. ರೈತರು ಹಿಂದೆ, ತಾವು ಬೆಳೆದ ಬೆಳೆಗಳನ್ನು ಇವರಿಗೆ ನೀಡಿ ಇವರಿಂದ ತಮಗೆ ಬೇಕಾದ ವಸ್ತು ಪಡೆಯುತ್ತಿದ್ದರು. ರೈತ ಕುಟುಂಬಗಳಲ್ಲಿ ಮದುವೆಗಳಾದರೆ ರೈತರು ಮುಂಗಡವಾಗಿಯೇ ಒಂದು ವರ್ಷಕ್ಕೆ ಬೇಕಾದ ವಸ್ತುಗಳನ್ನು ಇವರಲ್ಲಿ ಕೊಂಡುಕೊಳ್ಳುತ್ತಿದ್ದರು. ಏಕೆಂದರೆ, ಮದುವೆ ಆದನಂತರ ವರ್ಷದವರೆಗೆ, ಬುಟ್ಟಿ, ಕಸಬರಿಗೆ, ಈಚಲ ಕಸಬರಿಗೆ, ಕಡ್ಡಿ ಬರಿಗೆ ಮರ, ಜಲ್ಲಿ ಒಡ್ಡುಹೆಡಿಗೆ ‘ಹೆಡಿಗೆ, ಜಲ್ಲಿ ಇವುಗಳನ್ನು ಕೊಂಡುಕೊಳ್ಳುವ ಸಂಪ್ರದಾಯ ಇರಲಿಲ್ಲ. ಆದ್ದರಿಂದ ಕೊರವರಲ್ಲಿ ಮುಂಗಡವಾಗಿ ವಸ್ತುಗಳನ್ನು ಪಡೆಯುತ್ತಿದ್ದರು.ಆದ್ದರಿಂದ ಗ್ರಾಮೀಣ ಬದುಕಿಗೂ ಅದರಲ್ಲಿ ರೈತರಿಗೂ ಮತ್ತು ಕೊರವರಿಗೂ ಅವಿನಾಭಾವ ಸಂಬಂಧವಿದೆ.
ತಯಾರಿಸುವ ವಸ್ತುಗಳು:
ಬುಟ್ಟಿ’ ನೆಲುವು, ಸಿಂಬೆ’ಚಾಪೆ, ಮರ, ಈಚಲು ಕಸಬರಗಿ, ಹುಲ್ಲು ಕಸಬರಗಿ, ಕಡ್ಡಿ ಬರಗಿ, ಹಗ್ಗ, ಭಾವಿಯ ಹಗ್ಗ, ತಟ್ಟಿ, ಜಲ್ಲಿ,ಕೈಜಲ್ಲಿ, ಒಡ್ಡು ಹೆಡಿಗೆ, ಮಡ್ಡಿನ ಪುಟ್ಟಿ, ಹಗೆಯ ಬಾಯಿ ಪುಟ್ಟಿ, ತೆಂಗಿನ ಗರಿ ಕಸಬರಗಿ, ಇವೆ ಮೊದಲಾದ ವಸ್ತುಗಳನ್ನು ಕೊರವರು ಮತ್ತು ಅವರ ಪಂಗಡದವರು ಸಿದ್ದಪಡಿಸುತ್ತಾರೆ.
ಚಾಪೆ, ತಟ್ಟಿ, ಬುಟ್ಟಿ’ ಹಗೆಗೆ ಹಾಕುವ ಬಾಯಿ ಪುಟ್ಟಿ, ಒಡ್ಡು ಹೆಡಿಗೆ, ಮಡ್ಡಿನ ಪುಟ್ಟಿ, ಜಲ್ಲಿ ‘ ಕೈಜಲ್ಲಿ ‘ ಇವುಗಳನ್ನು ಇವರು “ಈಚಲ” ಕಡ್ಡಿಗಳಿಂದ ತಯಾರಿಸುತ್ತಾರೆ. ಈ ಈಚಲ ಗಿಡ ಹಳ್ಳಕೊಳಲ್ಲಿ ಸಿಗುತ್ತಿತ್ತು. ಅದನ್ನು ತಂದು ಸಂಸ್ಕರಿಸಿ ಸಿದ್ದ ವಸ್ತು ಮಾಡುತ್ತಾರೆ. ಇತ್ತೀಚೆಗೆ ಈ ಈಚಲವೂ ಕಡಿಮೆಯಾಗುತ್ತಿದೆ.
ತಯಾರಿಕೆ ಮತ್ತು ಮಾರಾಟ:
ಕೈ ಹಗ್ಗ, ಬಾವಿ ಹಗ್ಗ, ಸಿಂಬೆ , ನೆಲುವು ಕಣ್ಣಿ, ಇವುಗಳನ್ನು “ದೇವ ಬಳ್ಳಿ” ಒಣ ನಾರಿನಿಂದ ಮಾಡುತ್ತಾರೆ. ಕೆಲವು ವಸ್ತುಗಳನ್ನು ಹಸಿ ನಾರನ್ನು ಸಂಸ್ಕರಿಸಿ ತಯಾರಿಸುತ್ತಾರೆ.ಹುಲ್ಲು ಕಸಬರಗಿಯನ್ನು ” ಹುಲ್ಲಿನಿಂದ ” ಮಾಡುತ್ತಾರೆ. ಕಡ್ಡಿ ಕಸಬರಿಗೆಯನ್ನು ಇವರು “ದಾಗಡಿ ಮಂಡಲ ” ಎಂಬ ಬಳ್ಳಿಯಿಂದ ತಯಾರಿಸುತ್ತಾರೆ. ನೆಲುವು ಮತ್ತು ಸಿಂಬೆಗಳನ್ನು “ಆಪು” ಎಂಬ ಹುಲ್ಲಿನಿಂದಲೂ ತಯಾರಿಸುತ್ತಾರೆ.
ಈಚಲು ಕಡ್ಡಿಯಲ್ಲಿ 5–6 ಗರಿಗಳು ದೊರೆಯುತ್ತವೆ. ಬೇರ್ಪಡಿಸಿದ ಈಚಲು ಗರಿಯನ್ನು ಒಂದು ವಾರ ಬಿಸಿಲಿನಲ್ಲಿ ಒಣಗಿಸಿ ನಂತರ ಸೂಡು ಕಟ್ಟಿ ಹಾಗೆ ರಕ್ಷಿಸುತ್ತಾರೆ. ಗರಿಯನ್ನು ಬಳಸಿ ಬಾರಿಗೆ ಕಟ್ಟಿದರೆ, ಈಚಲು ಕಡ್ಡಿ ಬಳಸಿ ಬುಟ್ಟಿ ಹೆಣೆಯುತ್ತಾರೆ. ಇಷ್ಟೆಲ್ಲಾ ಶ್ರಮದ ಬೆವರು ಬಸಿದು ತಯಾರಿಸಿದ ಕಸಬರಿಗೆ, ಬುಟ್ಟಿ, ಇತರೆ ವಸ್ತುಗಳನು ಮಾರಾಟ ಮಾಡುವುದೇ ದೊಡ್ಡ ಸವಾಲಿನ ಕೆಲಸ. ಗಿರಾಕಿ ಬಂದಾಗ ಕಸ ಬಾರಿಗೆಗೆ 20 ರೂ ಹೇಳಿದರೆ, 10 ರೂ ಗೆ ಚೌಕಸಿ ಮಾಡುತ್ತಾರೆ. ಬುಟ್ಟಿ 100 ರೂ ಹೇಳಿದರೆ 75ಕ್ಕೆ ಕೇಳುತ್ತಾರೆ. ಹೀಗೆ ವಸ್ತುಗಳನ್ನು ಮಾರಿ ಬಂದ ಹಣದಿಂದ ಇವರ ಜೀವನ ಸಾಗಬೇಕು. ಇವರಲ್ಲಿ ಹೆಚ್ಚಿನವರಿಗೆ ಜಮೀನು ಆಸ್ತಿಪಾಸ್ತಿ ಇಲ್ಲ. ಇದರಿಂದಲೆ ಇವರ ಜೀವನ ಸಾಗಬೇಕಾಗಿದೆ.
ಇತ್ತೀಚೆಗೆ ಸಾಂಪ್ರದಾಯಕ ಕೃಷಿಯನ್ನು ರೈತರು ಬಿಡುತ್ತಿದ್ದಾರೆ. ಇದರಿಂದ ಇವರಿಗೂ ಬೇಡಿಕೆ ಕಡಿಮೆಯಾಗುತ್ತದೆ. ಕೃಷಿ ಮತ್ತು ಕೃಷಿ ಮನೆತನದವರಿಗಾಗಿ ಇವರು ಉದ್ಯೋಗ ಹೊಂದಿದ್ದರು. ಆದರೆ ಅವರೆ ಸಾಂಪ್ರದಾಯಿಕ ಉದ್ಯೋಗ ಬಿಟ್ಟು ಆಧುನಿಕ ಕೃಷಿ ಮಾಡುತ್ತಿದ್ದಾರೆ. ಇದರಿಂದ ಇವರ ತಲೆತಲಾಂತರದ ಕುಲಕಸುಬು ಮರೆಯಾಗುತ್ತಿದೆ. ಬೇಡಿಕೆ ಇಲ್ಲದ ಕಾರಣ ಕುಲ ಕಸುಬು ಬಿಟ್ಟು ಇತ್ತೀಚೆಗೆ ‘ ಕಾಳುಕಡಿ ಮಾರುವುದು, ಪ್ಲಾಸ್ಟಿಕ ವಸ್ತು ಮಾರುವುದು, ಸ್ಟೇಷನರಿ ವಸ್ತು ಮಾರುವದು, ಹಣ್ಣು ಮಾರುವದು ಹೀಗೆ ಬೇರೆ ಬೇರೆ ಉದ್ಯೋಗಗಳತ್ತ ಮುಖ ಮಾಡಿದ್ದಾರೆ.
ಮರೆಯಾಗಲು ಕಾರಣಗಳು:
1) ಇತ್ತೀಚೆಗೆ ಬೇಡಿಕೆ ಕಡಿಮೆಯಾಗುತ್ತಿದೆ.
2) ಸಾಂಪ್ರದಾಯಿಕ ಕೃಷಿ ಕಡಿಮೆಯಾಗಿರುವದು.
3) ಆಧುನಿಕ ಕೃಷಿಯ ಬೆಳವಣಿಗೆ.
4) ಕೃಷಿಯಲ್ಲಿ ಪ್ಲಾಸ್ಟಿಕ ಬಳಕೆ ಹೆಚ್ಚಾಗಿರುವದು.
5) ಕಚ್ಚಾ ಸಂಪನ್ಮೂಲವೂ ಕಡಿಮೆಯಾಗಿ ಇರುವುದು.
6) ಗ್ರಾಮೀಣರು ಆಧುನೀಕರಣಕ್ಕೆ ಮಾರು ಹೋಗಿರುವದು.
7) ಸರಕಾರದ ಪ್ರೋತ್ಸಾಹ ಇಲ್ಲದಿರುವುದು,
8) ಆಧುನಿಕತೆಯೆ ಇವರಿಗೆ ಸವಾಲು ಆಗಿರುವುದು
9) ಆಧುನಿಕ ವಸ್ತುಗಳ ಅಧಿಕ ಲಭ್ಯತೆ. ಇವೇ ಮೊದಲಾದ ಕಾರಣಗಳಿಂದ ಇವರ ಮಹತ್ವ ಕಡಿಮೆ ಆಗಿದೆ.
ಸಾಮಾನ್ಯವಾಗಿ ಅವಿದ್ಯಾವಂತರಾಗಿರುವ ‘ತಮ್ಮ ಅಭಿವೃದ್ಧಿಗಾಗಿಯೇ ಒಂದು ಸಹಕಾರ ಸಂಘವಿದೆ ಎಂದೂ ತಿಳಿಯದ ಮುಗ್ದರು ಈ ಕೊರವರು. ಬಿಂಕ ಬಿಗುಮಾನ ಇಲ್ಲದ ಬಿಸಿಲು ಮಳೆ, ಚಳಿ ಗಾಳಿಗಳಿಗೆ ಅಂಜದ ಪ್ರಕೃತಿಯ ಮಕ್ಕಳಿವರು.
ರೈತರಿಗಾಗಿಯೇ ಇರುವ ‘ಕೃಷಿ ಮತ್ತು ಕೃಷಿ ಮನೆತನಗಳನ್ನೆ ಅವಲಂಬಿಸಿರುವ ‘ಸ್ಥಳೀಯ ಸಂಪನ್ಮೂಲ ಬಳಸುವ ‘ಪರಿಸರವನ್ನೆ ಅವಲಂಭಿಸಿ, ಪರಿಸರಕ್ಕೆ ಹಾನಿಮಾಡದ ‘ ಸಾಂಪ್ರದಾಯಕ ತಲೆತಲಾಂತರದ ಕುಲಕಸುಬು ಇಂದು ಆಧುನಿಕತೆ ಮತ್ತು ಪ್ಲಾಸ್ಟಿಕ್ ಅಧಿಕ ಬಳಕೆಯಿಂದ ಅವಸಾನದತ್ತ ಸಾಗುತ್ತಿರುವುದು ದುಖಃದ ಸಂಗತಿ.