ಈ ಬಿಜೆಪಿ ನಾಯಕರಿಗೆ ಅಧಿಕಾರದ ಮದ ನೆತ್ತಿಗೇರಿದೆ ಎಂಬುದರಲ್ಲಿ ಎರಡು ಮಾತಿಲ್ಲ. ತಾವು ಏನು ಮಾತನಾಡುತ್ತಿದ್ದೇವೆ? ಇದರಿಂದ ಏನು ಪರಿಣಾಮ ಬೀರುತ್ತದೆ? ಎಂಬುದರ ಸಾಮಾನ್ಯ ಪರಿಜ್ಞಾನವೂ ಇಲ್ಲದಂತೆ ಹೇಳಿಕೆ ಕೊಡುವುದನ್ನೇ ಗೀಳಾಗಿಸಿಕೊಂಡಿದ್ದಾರೆ.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಜಾರಿಗೆ ತರುವ ನೀತಿಗಳು ಜನವಿರೋಧಿಯಾಗಿದ್ದರೂ ಅವುಗಳನ್ನು ಜನತೆ ಗೋಣು ಹಾಕಿ ಒಪ್ಪಿಕೊಳ್ಳಬೇಕು. ಒಂದು ವೇಳೆ ಅದಕ್ಕೆ ವಿರೋಧ ವ್ಯಕ್ತಪಡಿಸಿದರೆ ದೇಶದ್ರೋಹಿ ಪಟ್ಟ ಕಟ್ಟಿ ಅವರನ್ನು ಶಿಕ್ಷಿಸುವಂತಹ ಕೆಲಸವನ್ನು ಮಾಡುತ್ತಿದೆ. ಹೀಗಾಗಿ ಹಾದಿ ಬೀದಿಯಲ್ಲಿ ಬಿಜೆಪಿ ನಾಯಕರು ಎಲುಬಿಲ್ಲದ ನಾಲಗೆಯನ್ನು ಹರಿಯಬಿಡುತ್ತಿದ್ದಾರೆ.
ಚುನಾವಣೆಗಳ ಸಂದರ್ಭದಲ್ಲಿ ಅಸಹ್ಯ ಹುಟ್ಟಿಸುವ ರೀತಿಯಲ್ಲಿ ವಿವಾದಾಸ್ಪದೆ ಹೇಳಿಕೆಗಳನ್ನು ನೀಡುತ್ತಿದ್ದ ಬಿಜೆಪಿ ನಾಯಕರು ಚುನಾವಣೆ ನಂತರ ಅಧಿಕಾರಕ್ಕೆ ಬಂದ ಮದದಿಂದ ದರ್ಪ ತೋರಿಸುವಂತಹ ಮಾತನಾಡುತ್ತಿದ್ದಾರೆ.
ಕರ್ನಾಟಕದ ಸಂಸದ ಅನಂತಕುಮಾರ ಹೆಗ್ಡೆ, ಉತ್ತರ ಪ್ರದೇಶದ ಹಲವಾರು ಮುಖಂಡರು ಸೇರಿದಂತೆ ಹತ್ತು ಹಲವಾರು ಮಂದಿ ಸಮಾಜದ ಸ್ವಾಸ್ಥ್ಯ ಕೆಡಿಸುವ ರೀತಿಯಲ್ಲಿ ಹೇಳಿಕೆಗಳನ್ನು ನೀಡಿ ತಮ್ಮ ಪಕ್ಷದ ಮುಖಂಡರನ್ನು ಓಲೈಸಿಕೊಳ್ಳಲು ಯತ್ನಿಸುತ್ತಾ ಬಂದಿದ್ದಾರೆ. ಅದರಲ್ಲಿ ಕೆಲವರು ಯಶಸ್ವಿಯಾಗಿದ್ದರೆ, ಮತ್ತೆ ಕೆಲವರು ಶಿಕ್ಷೆ ಅನುಭವಿಸಿದ್ದಾರೆ.
ಈಗ ದೇಶದಲ್ಲಿ ವಿವಾದದ ಕೇಂದ್ರ ಬಿಂದುವಾಗಿರುವ ಸಿಎಎ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಮಟ್ಟದಲ್ಲಿ ವಾಕ್ಸಮರವೇ ನಡೆಯುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸಿಎಎ ವಿರುದ್ಧ ಟೊಂಕ ಕಟ್ಟಿ ನಿಂತಿದ್ದಾರೆ. ಅಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿರುವ ಮಮತಾ ತಮ್ಮ ಅಧಿಕಾರ ಹೋದರೂ ಚಿಂತೆಯಿಲ್ಲ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸಿಎಎ ಜಾರಿಗೆ ಅವಕಾಶ ನೀಡುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ.
ಪಶ್ಚಿಮ ಬಂಗಾಳದ ಚುನಾವಣೆಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಎದುರು ಮುದುಡಿಕೊಂಡು ಮಕಾಡೆ ಮಲಗುತ್ತಾ ಬಂದಿರುವ ಕಮಲ ಪಾಳಯ ಸಿಎಎ ವಿಚಾರದಲ್ಲಿ ಹೇಗಾದರೂ ಮಾಡಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕೆಂದು ಹೆಣಗಾಡುತ್ತಿದೆ. ಇದಕ್ಕೆ ಬಿಜೆಪಿ ಹುಡುಕಿಕೊಂಡಿರುವುದು ಸಿಎಎ ವಿಚಾರವನ್ನು. ಬಿಜೆಪಿಯೇತರ ರಾಜ್ಯಗಳಲ್ಲಿ ಸಿಎಎ ಪರವಾಗಿ ಜನರನ್ನು ಓಲೈಸಿಕೊಳ್ಳಲು ಬಿಜೆಪಿ ಹಲವಾರು ಸಮಾವೇಶಗಳನ್ನು ನಡೆಸುತ್ತಿದೆ. ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಸಮಾವೇಶಗಳನ್ನು ನಡೆಸುತ್ತಿದೆ.
ಈ ಸಮಾವೇಶಗಳಿಗೆ ಬರುವ ಬಿಜೆಪಿ ಕಾರ್ಯಕರ್ತರ ಎದುರು ಸ್ಥಳೀಯ ಮುಖಂಡರ ಬಡಾಯಿ ಕೊಚ್ಚಿಕೊಳ್ಳುವುದರಲ್ಲಿ ಮತ್ತು ಮುಸ್ಲಿಂರನ್ನು ತುಚ್ಛೀಕರಿಸಲು ಮೀಸಲಿಟ್ಟಿದ್ದಾರೆ. ಎಡ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಪ್ರಾಬಲ್ಯವಿರುವ ಈ ರಾಜ್ಯದಲ್ಲಿ ತಾನೂ ಗಟ್ಟಿ ಧ್ವನಿಯಲ್ಲಿ ಮಾತನಾಡಬಲ್ಲೆ ಎಂಬುದನ್ನು ಬಿಜೆಪಿ ಹೈಕಮಾಂಡ್ ಗೆ ತೋರಿಸಲೆಂದೇ ಅಲ್ಲಿನ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಬಾಯಿಗೆ ಬಂದಂತೆ ಮಾತನಾಡತೊಡಗಿದ್ದಾರೆ. ದೇಶದಲ್ಲಿ 50 ಲಕ್ಷಕ್ಕೂ ಅಧಿಕ ಮುಸ್ಲಿಂ ಅಕ್ರಮ ನಿವಾಸಿಗಳನ್ನು ಗುರುತಿಸುತ್ತೇವೆ ಮತ್ತು ಅಗತ್ಯ ಬಿದ್ದರೆ ಅವರನ್ನು ದೇಶದಿಂದ ಹೊರ ಹಾಕಲೂ ಸಿದ್ಧ ಎಂದು ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಗುರಿಯಾಗಿದೆ.
ಸಿಎಎ ಬಗ್ಗೆ ಜನಸಾಮಾನ್ಯರಲ್ಲಿ ಅದರಲ್ಲೂ ವಿಶೇಷವಾಗಿ ಆತಂಕಕ್ಕೆ ಒಳಗಾಗಿರುವ ಮುಸ್ಲಿಂರಿಗೆ ಇದರಿಂದ ಯಾವುದೇ ತೊಂದರೆಯಿಲ್ಲ, ಮುಸ್ಲಿಂರ ವಿರುದ್ಧ ತರುತ್ತಿರುವ ನೀತಿಯಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟು ಅವರಿಗೆ ಧೈರ್ಯ ತುಂಬುವ ಸಲುವಾಗಿ ಬಿಜೆಪಿ ಜಾಗೃತಿ ಅಭಿಯಾನ ನಡೆಸುತ್ತಿರುವುದಾಗಿ ಹೇಳಿಕೊಂಡಿತ್ತು.
ಆದರೆ, ಈಗ ಆಗುತ್ತಿರುವುದೇ ಬೇರೆ. ಮುಸ್ಲಿಂರನ್ನು ಹೀಗಳೆಯಲು, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುವುದಕ್ಕೆ ಮಾತ್ರ ಈ ಸಮಾವೇಶಗಳು ಸೀಮಿತವಾಗಿವೆ. ಇದರಿಂದ ಆಗುವ ಪ್ರಯೋಜನಗಳೇನು? ಯಾರನ್ನು ಗುರಿಯಾಗಿಸಿ ಈ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂಬುದರ ಬಗ್ಗೆ ಒಂದೇ ಒಂದು ಅಂಶವನ್ನೂ ಸಹ ಜನರ ಮುಂದಿಡಲಾಗುತ್ತಿಲ್ಲ.
ಪಶ್ಚಿಮ ಬಂಗಾಳದಲ್ಲಿ ನಡೆದ ಸಮಾವೇಶದಲ್ಲಿ ದಿಲೀಪ್ ಘೋಷ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಟೀಕಿಸುವ ಭರದಲ್ಲಿ ಮುಸ್ಲಿಂರನ್ನು ದೇಶದಿಂದಲೇ ಹೊಡೆದೋಡಿಸುತ್ತೇವೆ ಎಂದು ಅವಿವೇಕದ ಹೇಳಿಕೆಯನ್ನು ನೀಡಿದ್ದಾರೆ.
ದೇಶದಲ್ಲಿರುವ 50 ಲಕ್ಷದಷ್ಟು ನುಸುಳುಕೋರ ಮುಸ್ಲಿಂರನ್ನು ಗುರುತಿಸುತ್ತೇವೆ. ಒಂದು ವೇಳೆ ಅಗತ್ಯ ಬಿದ್ದರೆ ಅವರನ್ನೆಲ್ಲಾ ದೇಶದಿಂದ ಹೊರ ಹಾಕುತ್ತೇವೆ. ಅದಕ್ಕೂ ಮುನ್ನ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡುತ್ತೇವೆ. ಆಗ ದೀದಿ (ಮಮತಾ ಬ್ಯಾನರ್ಜಿ) ಯಾರನ್ನೂ ಸಮಾಧಾನಪಡಿಸುವಂತಿಲ್ಲ ಎಂದು ಘೋಷ್ ಹೇಳಿದ್ದಾರೆ.
ದಿಲೀಪ್ ಘೋಷ್ ಇದೊಂದೇ ವಿವಾದಾಸ್ಪದ ಹೇಳಿಕೆ ನೀಡಿಲ್ಲ. ಇದಕ್ಕೂ ಮುನ್ನ ಹಲವು ಬಾರಿ ಇಂತಹ ಹೇಳಿಕೆ ನೀಡಿದ್ದಾರೆ ಮತ್ತು ಇದೇ ಕಾಯಕ ಎಂದುಕೊಂಡಿದ್ದಾರೆ.
ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾನಿಗೊಳಿಸಿದ ಸಂದರ್ಭದಲ್ಲಿ ಇಂತಹವರನ್ನು ನಾಯಿಯನ್ನು ಅಟ್ಟಾಡಿಸಿಕೊಂಡು ಹೊಡೆಯುವಂತೆ ಹೊಡೆಯಬೇಕೆಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಈ ಮೂಲಕ ಘೋಷ್ ಬಾಯಿ ತೆಗೆದರೆ ಸಾಕು ಅವರಿಂದ ದ್ವೇಷದ ಮಾತುಗಳೇ ಬರುತ್ತವೆ.
ಈ ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿ ತಮ್ಮ ಅಪ್ಪನದೆಂದು ತಿಳಿದಿದ್ದಾರೆಯೇ? ಅದು ತೆರಿಗೆದಾರರ ಆಸ್ತಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರತಿಭಟನಾಕಾರರು ಎಷ್ಟೇ ಹಾನಿ ಮಾಡಿದ್ದರೂ ದೀದಿ ಪ್ರಶ್ನಿಸುವುದೇ ಇಲ್ಲ. ಏಕೆಂದರೆ ಅವರೆಲ್ಲಾ ದೀದಿಯ ಮತದಾರರು ಎಂದಿದ್ದಾರೆ ಘೋಷ್.
ಇನ್ನೂ ಮುಂದುವರಿದು ನಾಲಗೆಯನ್ನು ಎಗ್ಗಿಲ್ಲದೇ ಹರಿಯ ಬಿಟ್ಟಿರುವ ಘೋಷ್, ಅಸ್ಸಾಂ ಮತ್ತು ಉತ್ತರ ಪ್ರದೇಶದಲ್ಲಿ ನಮ್ಮ (ಬಿಜೆಪಿ) ಸರ್ಕಾರ ಇಂತಹ ಜನರನ್ನು ನಾಯಿಗೆ ಹೊಡೆದಂತೆ ಹೊಡೆದಿದೆ. ಉತ್ತರಪ್ರದೇಶ, ಅಸ್ಸಾಂ ಮತ್ತು ಕರ್ನಾಟಕದಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆ ವೇಳೆ ರಾಷ್ಟ್ರದ್ರೋಹಿ ಶಕ್ತಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಇದು ಎಲ್ಲರಿಗೂ ಎಚ್ಚರಿಕೆಯಾಗಲಿ ಎಂದು ಪ್ರತಿಭಟನಾಕಾರರಿಗೆ ಧಮಕಿ ಹಾಕಿದ್ದಾರೆ.
ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿಗೊಳಿಸುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬುದನ್ನು ಹೇಳುವ ಮೂಲಕ ದಿಲೀಪ್ ಘೋಷ್ ಕರ್ನಾಟಕ ಮತ್ತು ಉತ್ತರಪ್ರದೇಶದಲ್ಲಿ ಸರ್ಕಾರವೇ ಮುಂದೆ ನಿಂತು ಪ್ರತಿಭಟನಾಕರರ ಮೇಲೆ ಗುಂಡು ಹಾರಿಸುವಂತೆ ಮಾಡಿದೆ ಎಂಬುದನ್ನು ಸಾಕ್ಷೀಕರಿಸಿದ್ದಾರೆ.
ಈ ನುಸುಳುಕೋರರು ಸಾರ್ವಜನಿಕ ಆಸ್ತಿಗೆ ಹಾನಿಯನ್ನುಂಟು ಮಾಡುತ್ತಿದ್ದಾರೆ. ಅವರನ್ನು ಏನು ಮಾಡಬೇಕು. ಅವರಿಗೆ ದೇವರ ಪ್ರಸಾದ ನೀಡಬೇಕೇ? ಎಂದು ಪ್ರಶ್ನಿಸಿದ್ದಾರೆ.
ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಮುಸ್ಲಿಂರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಹೇಳುತ್ತಾರೆ. ಮತ್ತೊಂದೆಡೆ ದ್ವೇಷವನ್ನೇ ಕಾರುವ, ಕೋಮುವಾದವನ್ನೇ ಉಸಿರಾಡುತ್ತಿರುವಂತಹ ಕೆಲವು ಬಿಜೆಪಿ ನಾಯಕರು ಮುಸ್ಲಿಂರ ವಿರುದ್ಧ ನೇರವಾಗಿ ಯುದ್ಧವನ್ನು ಸಾರುತ್ತಿದ್ದಾರೆ. ಅವರನ್ನು ದೇಶದಿಂದಲೇ ಹೊರಹಾಕುತ್ತೇವೆ ಎಂದು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ. ಮೊದಲು ಇಂತಹ ಕ್ರಿಮಿಗಳಿಗೆ ತಕ್ಕ ಶಾಸ್ತಿಯಾಗಬೇಕು. ನಂತರ ಅಕ್ರಮ ನಿವಾಸಿಗಳ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕಿದೆ.