ಸೂಕ್ತ ತಂತ್ರಗಾರಿಕೆ ಇಲ್ಲದೆ ಕಾಂಗ್ರೆಸ್ ಹಲವು ಪೆಟ್ಟು ತಿಂದಿದೆ. ಆದರೂ ಬುದ್ದಿ ಕಲಿತಂತೆ ಕಾಣುತ್ತಿಲ್ಲ. ಸರಿಯಾದುದು ಕೂಡ ಕೆಲವೊಮ್ಮೆ ‘ಕಾಲದ’ ಕಾರಣಕ್ಕೆ ತಪ್ಪಾಗುವ ಅಪಾಯ ಇರುತ್ತದೆ. ಯಾವ ವಿಷಯಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕು ಎಂಬುದು ಪ್ರಮುಖವಾಗುತ್ತದೆ. ಯಾವ ವಿಷಯವನ್ನು ಯಾರ ಬಾಯಿಂದ ಹೇಳಿಸಬೇಕು ಎನ್ನುವುದು ಒಂದು ತಂತ್ರವೇ. ಇವೆಲ್ಲವನ್ನೂ ಕಾಂಗ್ರೆಸ್ ಗಣನೆಗೆ ತೆಗೆದುಕೊಂಡೇ ಇಲ್ಲ ಎನ್ನುವುದು ಅದರ ನಡವಳಿಕೆಯಿಂದ ಮನವರಿಕೆಯಾಗುತ್ತದೆ.
ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸುವವರೆಗೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಂದ ಹಿಡಿದು ಯುವ ನಾಯಕ ರಾಹುಲ್ ಗಾಂಧಿವರೆಗೆ ಕಾಂಗ್ರೆಸ್ ಅನುಸರಿಸಿದ ದ್ವಿಮುಖ ನೀತಿ ಆ ಪಕ್ಷಕ್ಕೆ ಮುಳುವಾಗಿದೆ. ಇಂಥ ಅತ್ಯಂತ ಸೂಕ್ಷ್ಮ ವಿಷಯದಲ್ಲೇ ಕಾಂಗ್ರೆಸ್ ಎಡವಿತ್ತು. ಬಹಳ ಒಳ್ಳೆಯ ಉದಾಹರಣೆ ಎಂಬ ಕಾರಣಕ್ಕಷ್ಟೇ ಇಲ್ಲಿ ಅದರ ಉಲ್ಲೇಖ. ಇಂಥವು ಬಹಳಷ್ಟಿವೆ. ಈಗ ಕಳೆದ ಒಂದು ವಾರ ಕಾಂಗ್ರೆಸ್ ನಾಯಕರ ಪತ್ರಿಕಾಗೋಷ್ಟಿ, tweet ಮತ್ತು ಹೇಳಿಕೆಗಳನ್ನು ಗಮನಿಸಿ. ಅವರು ಎರಡು ವಿಷಯಗಳನ್ನು ಹೆಚ್ಚಾಗಿ ಪ್ರಸ್ತಾಪಿಸಿದ್ದಾರೆ. ಒಂದು ಫೇಸ್ ಬುಕ್ ವಿವಾದ. ಇನ್ನೊಂದು ಟಿವಿ ಡಿಬೆಟ್ ವೇಳೆ ಮೃತಪಟ್ಟ ಕಾಂಗ್ರೆಸ್ ವಕ್ತಾರ ರಾಜೀವ್ ತ್ಯಾಗಿ ಸಾವಿನ ಸಂಗತಿ.
Also Read: ಬಿಕ್ಕಟ್ಟಿನ ಹೊತ್ತಲ್ಲಿ ಮತ್ತೆ ಮತ್ತೆ ಕಾಂಗ್ರೆಸ್ ‘ಅಡ್ಡಗೋಡೆ ಮೇಲೆ ದೀಪ’ ಇಡುವುದು ಯಾಕೆ?
ಎರಡೂ ಪ್ರಮುಖ ವಿಷಯಗಳೇ. ಆದರೆ ಇವೆರಡಕ್ಕಿಂತಲೂ ಪ್ರಮುಖ ವಿಷಯಗಳಿವೆ ಎನ್ನುವುದನ್ನು ಕಾಂಗ್ರೆಸ್ ಮರೆತಿದೆ. ಮೊದಲನೆಯದಾಗಿ ‘ಭಾರತದಲ್ಲಿ ಫೇಸ್ಬುಕ್ ಸಂಸ್ಥೆ ಬಿಜೆಪಿಯ ಕೋಮು ಅಜೆಂಡಾಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ದ್ವೇಷ ಭಾಷಣವನ್ನು ತೆಗೆದು ಹಾಕಿಲ್ಲ. Facebook ಮತ್ತು ಬಿಜೆಪಿ ನಡುವೆ ಅಪವಿತ್ರ ಮೈತ್ರಿ ಏರ್ಪಟ್ಟಿದೆ ಎಂದು ಅಮೆರಿಕಾ ಮೂಲದ Wall Street Journal ಮಾಡಿರುವ ವರದಿಯ ಹಿನ್ನೆಲೆಯಲ್ಲಿ’ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಕಾದಾಟಕ್ಕಿಳಿದಿದೆ. ನಿಜ, ಫೇಸ್ಬುಕ್ನ ಅಸಲೀಯತ್ತನ್ನು ಬಯಲು ಮಾಡಬೇಕು. ಹಾಗಂತ ವಾರಪೂರ್ತಿ ಕಾಂಗ್ರೆಸ್ ಅದರಲ್ಲೇ ನಿರತವಾಗಬಾರದು. ಮುಖ್ಯವಾಗಿ ಆ ಕೆಲಸವನ್ನು ಮಾಡಬೇಕಾದುದು ಪಕ್ಷದ ಸೋಷಿಯಲ್ ಮೀಡಿಯಾ ವಿಭಾಗ. ಆದರೆ ಕಾಂಗ್ರೆಸ್ನಲ್ಲಿ ರಾಹುಲ್ ಗಾಂಧಿ ಅವರಿಂದ ಹಿಡಿದು ಇಡೀ AICC ತೊಡಗಿಸಿಕೊಂಡಿದೆ.

ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ‘ಗೋಲಿ ಮಾರೋ ಸಾಲೋಂಕೋ’ ಹಾಗೂ ಕಪಿಲ್ ಮಿಶ್ರಾ ಮತ್ತು ರಾಜಾ ಸಿಂಗ್ ಅವರ ಕೋಮು ಪ್ರಚೋದನಾ ಹೇಳಿಕೆಗಳನ್ನು delete ಮಾಡಬೇಕೆಂಬ ದೂರುಗಳು ಬಂದಿದ್ದವು. ಆದರೆ ಫೇಸ್ಬುಕ್ ಕಂಪನಿಯ ಭಾರತದ ಮುಖ್ಯಸ್ಥೆ ಅಂಕಿತಾ ದಾಸ್ ಬಿಜೆಪಿ ನಾಯಕರೊಂದಿಗೆ ಶಾಮೀಲಾಗಿ ಅ ಹೇಳಿಕೆಗಳು ಡಿಲೀಟ್ ಆಗದಂತೆ ನೋಡಿಕೊಂಡಿದ್ದಾರೆ. ಅಂಕಿತಾ ದಾಸ್ ಅವರನ್ನು ತಕ್ಷಣವೇ ಫೇಸ್ಬುಕ್ ವಜಾ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ. ಫೇಸ್ಬುಕ್ ಕಂಪನಿ ವಿರುದ್ಧ ಕಿಡಿಕಾರುತ್ತಾ ಅದೇ ಕಂಪನಿಯ ನೌಕರರ ವಜಾಕ್ಕೆ ಆಗ್ರಹಿಸಿದರೆ ಉದ್ದೇಶ ಈಡೇರುವುದೇ? ಕಾಂಗ್ರೆಸ್ ಅಂಕಿತಾ ದಾಸ್ ಕುಕೃತ್ಯದ ಬಗ್ಗೆ ಮಾಹಿತಿ-ದಾಖಲೆ ಸಂಗ್ರಹಿಸಿ ದೂರು ನೀಡಿ ಒತ್ತಾಯ ಮಾಡಬೇಕಿತ್ತು.
Also Read: ಬಯಲಾಯ್ತು ಮೋದಿ ಬಿಜೆಪಿ- ಫೇಸ್ ಬುಕ್ ನಡುವಿನ ಅಪವಿತ್ರ ಮೈತ್ರಿ!
ಇನ್ನೊಂದೆಡೆ ತಮ್ಮ ಪಕ್ಷದ ರಾಷ್ಟ್ರೀಯ ವಕ್ತಾರ ರಾಜೀವ್ ತ್ಯಾಗಿ ಟಿವಿ ಡಿಬೆಟ್ ವೇಳೆ ಉದ್ವೇಗಕ್ಕೆ ಒಳಗಾಗಿ ಕಡೆಗೆ ಹೃದಯಾಘಾತವಾಗಿ ಮೃತಪಟ್ಟರು. ಹೀಗೆ ರಾಜೀವ್ ತ್ಯಾಗಿ ಅವರನ್ನು ಉದ್ವೇಗಗೊಳಿಸಿದವರು ಬಿಜೆಪಿ ವಕ್ತಾರ ಸಂಬೀತ್ ಪಾತ್ರ. ಕಾಂಗ್ರೆಸ್ ಪಕ್ಷದ ಘಟಾನುಘಟಿ ವಕೀಲರು ಸಂಬೀತ್ ಪಾತ್ರ ವಿರುದ್ದ ಕಾನೂನು ಸಮರ ಸಾರಬೇಕಿತ್ತು. ಅದು ಬಿಟ್ಟು ಮಾಧ್ಯಮಗಳ ಧೋರಣೆಯನ್ನು ಖಂಡಿಸುತ್ತಾ, ಕೇವಲ ಬೆದರಿಸುತ್ತಾ ಕಾಲ ಕಳೆಯುತ್ತಿದೆ.
ಫೇಸ್ಬುಕ್ ಮತ್ತು ರಾಜೀವ್ ತ್ಯಾಗಿ ಪ್ರಕರಣದಲ್ಲಿ ಮಾಧ್ಯಮವನ್ನು ಅನಾವಶ್ಯಕವಾಗಿ ಕಾಂಗ್ರೆಸ್ ಎದುರು ಹಾಕಿಕೊಂಡಿದೆ. ಮೊದಲೇ ಮಾಧ್ಯಮ ‘ಬಿಜೆಪಿಗೆ ಮಾರಾಟವಾಗಿದೆ’ ಎನ್ನುವ ಅಭಿಪ್ರಾಯವಿದೆ. ಈ ರೀತಿ ಇನ್ನಷ್ಟು ಕಂದಕ ಸೃಷ್ಟಿಸಿಕೊಂಡರೆ ಅದರಿಂದ ನಷ್ಟ ಅನುಭವಿಸಬೇಕಾಗಿರುವುದು ಕಾಂಗ್ರೆಸ್ ಪಕ್ಷವೇ. ಫೇಸ್ ಬುಕ್ ವಿಚಾರದಲ್ಲಿ ಕೂಡ ಕಾಂಗ್ರೆಸ್ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಮುಖ್ಯವಾಹಿನಿ ಮಾಧ್ಯಮ ಈಗ ಬಿಜೆಪಿ ಮಯವಾಗಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಸೋಷಿಯಲ್ ಮೀಡಿಯಾವೇ ಅನಿವಾರ್ಯ. ಹಿಂದೆ ಕೂಡ ಹಲವರು ಇದೇ ಫೇಸ್ಬುಕ್ ಮೂಲಕ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ. ಮುಂದೆಯೂ ಬೆಂಲಿಸುತ್ತಾರೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಇನ್ನಷ್ಟು ಸಕ್ರೀಯವಾಗಬೇಕೆ ಹೊರತು ‘ಇದನ್ನೇ’ ದೊಡ್ಡದು ಮಾಡಿಕೊಂಡು ಪ್ರಯೋಜನವಿಲ್ಲ.
Also Read: ಗಾಂಧಿ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ಕೊಡುವ ಬಗ್ಗೆ ಚರ್ಚೆ
ಉಳಿದಂತೆ ಕಾಂಗ್ರೆಸ್ ಸದ್ಯ ಚರ್ಚೆ ಮಾಡಲೇಬೇಕಾದ ವಿಷಯಗಳೆಂದರೆ ದೇಶದ ಗಂಭೀರ ಸಮಸ್ಯೆಯಾಗಿರುವ ನಿರುದ್ಯೋಗದ ಬಗ್ಗೆ. ದೇಶದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ. ಇವೆರಡು ಇಂದಿನ ಅನಿವಾರ್ಯ ವಿಷಯಗಳು. ಇದೇ ವಿಷಯಗಳ ಮೂಲಕ ಜನರನ್ನು ತಲುಪಲು ಸಾಧ್ಯವಿದೆ. ನಿರುದ್ಯೋಗ ಮತ್ತು ಆರ್ಥಿಕ ಬಿಕ್ಕಟ್ಟುಗಳು ದೇಶದಲ್ಲಿ ಹಲವು ಬಗೆಯಾಗಿ ಸಂಚಲನ ಮೂಡಿಸಿವೆ. ಕಾಂಗ್ರೆಸ್ ಆ ಸಮಸ್ಯೆಗಳ ಬಗ್ಗೆ ಮಾತನಾಡಸಬೇಕು. ಪಕ್ಷ ಕಟ್ಟಿ ಅಥವಾ ಬಿಡಿ. ನಿಮ್ಮ ಕೇಡರ್ ಅನ್ನು ಕಟ್ಟಿ ಅಥವಾ ಬಿಡಿ. ಆದರೆ ದೇಶದ ಜನರ ಭಾವನೆಗಳಿಗೆ ಸ್ಪಂದಿಸುವಂತಾಗಬೇಕು. ಸದ್ಯ ಗ್ಯಾಸ್ ಬೆಲೆ ಗಗನಮುಖಿಯಾಗಿದೆ. ಜನ ಕರೋನಾ ಮತ್ತು ಲಾಕ್ಡೌನ್ ಎಂಬ ಕಡುಕಷ್ಟಕ್ಕೆ ಸಿಲುಕಿದ್ದಾರೆ ಎಂಬುದನ್ನೂ ಲೆಕ್ಕಿಸದೆ ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೊಲ್ ಮತ್ತು ಡೀಸೆಲ್ ಬೆಲೆ ಏರಿಸುತ್ತಿದೆ. ಕಳೆದ 5 ದಿನಗಳಲ್ಲೇ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 76 ಪೈಸೆ ಹೆಚ್ಚಾಗಿದೆ. ಈ ಬಗ್ಗೆ ಕಾಂಗ್ರೆಸ್ ಮಾತನಾಡಬೇಕು. ಜನರಿಗಾಗಿ ಬೀದಿಗಿಳಿಯಬೇಕು. ಆಗ ಜನ ಕೂಡ ಕಾಂಗ್ರೆಸ್ ಕೈ ಹಿಡಿಯುತ್ತಾರೆ. ಇದು ಕಾಂಗ್ರೆಸ್ ಹೈಕಮಾಂಡಿಗೆ ಅರ್ಥ ಆಗಬೇಕಿದೆ.
