ಕೋವಿಡ್ 19 ಸಾಂಕ್ರಾಮಿಕ ರೋಗ ಉಲ್ಬಣಿಸುತ್ತಿದ್ದಂತೆ, ಕೇರಳ-ಕರ್ನಾಟಕದ ನಡುವಿನ ಗಡಿ ಕಾಳಗ ಕೂಡಾ ತಾರಕಕ್ಕೇರಿದೆ. ಎರಡೂ ಗುಂಪಿನವರೂ ತಮ್ಮದೇ ಆದ ತರ್ಕ-ಕುತರ್ಕಗಳನ್ನು ಮುಂದಿಡುತ್ತಿದ್ದಾರೆ. ದುರಂತವೆಂದರೆ ಈ ತರ್ಕ-ಕುತರ್ಕಗಳ ಮಧ್ಯೆ ಸತ್ಯ ಅದೆಲ್ಲೋ ಅನಾಥವಾಗಿದೆ. ಏಕೆಂದರೆ ಕೇರಳ ಸರಕಾದ ಬಡವರ ಜತೆಗಿದೆ. ರೂಪಾಯಿ 20 ಸಾವಿರ ಕೋಟಿ ಕೋವಿಡ್-19 ವಿಶೇಷ ಪ್ಯಾಕೇಜ್ ಮೀಸಲಿಟ್ಟಿರುವ ಅಲ್ಲಿನ ಸರಕಾರದ ಘೋಷಣೆಯ ನಡುವೆ ಅಲ್ಲಿಂದ ಬರುತ್ತಿರುವ ವರದಿಗಳು ಎಲ್ಲರ ಆತಂಕ್ಕೆ ಕಾರಣವಾಗಿದೆ.
ಈ ವರದಿಗಳನ್ನೇ ಗಮನಿಸೋಣ. ಕರ್ನಾಟಕದ ವಿಜಯಪುರ ಜಿಲ್ಲೆಯ ಗರ್ಭಿಣಿಯೊಬ್ಬರು ಕೇರಳದ ಕಣ್ಣೂರಿನಿಂದ ಬರೋಬ್ಬರಿ 142 ಕಿಲೋ ಮೀಟರ್ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಲುಪಿದ್ದಾರೆ. ʼಜೀವಪರತೆʼ, ʼಎಡಪಂಥʼ, ʼಕಾರ್ಮಿಕರಿಗೆ ನ್ಯಾಯʼ ಇಂತಹ ಶಬ್ದಗಳ ಬಳಕೆಗೆ ಖ್ಯಾತಿ ಪಡೆದಿರುವ ಕೇರಳದಲ್ಲಿ ಗರ್ಭಿಣಿಯೊಬ್ಬರು ಇಷ್ಟು ಕಿಲೋಮೀಟರ್ ಕ್ರಮಿಸಿದ್ದು ಯಾರ ಗಮನಕ್ಕೂ ಬರಲಿಲ್ಲವೇ?
ಕರ್ನಾಟಕದ ಮಾಧ್ಯಮ ವರದಿಗಳ ಪ್ರಕಾರ ಕೆಲ ದಿನ ಆಕೆ ಹಸಿವಿನಿಂದಲೇ ನಡೆಯಬೇಕಾದ ಪರಿಸ್ಥಿತಿ ಉದ್ಭವಿಸಿತ್ತು.
ಇಲ್ಲಿ ಪ್ರಶ್ನೆಗಳಿರುವುದು ಅಲ್ಲಿನ ಸರಕಾರದ ಸಮರ್ಥಕರಿಗೆ. 142 ಕಿಲೋ ಮೀಟರ್ ನಡೆದು ಬರುವಾಗಲೂ ಯಾವುದೇ ಎಡಪಂಥೀಯ ಹೋರಾಟಗಾರರಿಗೆ ಇವರ ಸಂಕಷ್ಟ ಅರಿವಾಗಲಿಲ್ಲವೇ? ಇಂತಹ ಕಾರ್ಮಿಕರಿಗೆ ಸಾರ್ವಜನಿಕ ಆಹಾರ- ನೆಲೆ ಒದಗಿಸುವ ಪ್ರಯತ್ನ ನಡೆದಿಲ್ಲವೇ? ಇದರ ಜತೆಗೆ ಇನ್ನೊಂದೆಡೆ ಚಾಮರಾಜನಗರ ಹಾಗೂ ಕೊಡುಗು ಜಿಲ್ಲೆಯ ನೂರಾರು ಜೇನು ಕುರುಬ ಕುಟುಂಬಗಳು ಲಾಕ್‍ಡೌನ್ ಘೋಷಣೆ ಬಳಿಕ, ಕೇರಳದಿಂದ ಕರ್ನಾಟಕಕ್ಕೆ ಮರಳಿದ್ದಾರೆ. ಇನ್ನು ಕೇರಳದ ಹಲವೆಡೆ ಕಾರ್ಮಿಕರು ಮುಖ್ಯವಾಗಿ ಕಟ್ಟಡ ಕಾರ್ಮಿಕರು ಸರಕಾರದ ವಿರುದ್ಧ ಪ್ರತಿಭಟಿಸಿದ ವರದಿಗಳು ಅಲ್ಲಿಂದಲೇ ವರದಿಯಾಗುತ್ತಿವೆ. ಹಾಗಾದರೆ ಕೇರಳದಲ್ಲಿ ನಿಜಕ್ಕೂ ಏನಾಗುತ್ತಿದೆ?

ಕೇರಳದ ಎಡಪಂಥೀಯರ ಬಹುದೊಡ್ಡ ಸಮಸ್ಯೆ ಇದೇ. ಇಂದಿಗೂ ಆತ್ಮವಿಮರ್ಶೆ ಎಂಬ ಶಬ್ದ ಅವರಿಗೆ ಒಗ್ಗದು. ಉಳಿದವರಲ್ಲೇ ತಪ್ಪು ಕಂಡು ಹುಡುಕುವ ಪ್ರಯತ್ನ ಅಲ್ಲಿ ಸಾಗುತ್ತದೆ. ಉಳಿದ ರಾಜ್ಯಗಳಿಗೆ ಹೋಲಿಸಿದರೆ, ಕೇರಳ ಮಾನವ ಅಭಿವೃದ್ಧಿಯ ಸೂಚ್ಯಂಕದಲ್ಲಿ ಎತ್ತರದಲ್ಲಿರಬಹುದು. ಆದರೆ ಅದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಆರ್ಥಿಕತೆಯ ಪ್ರಶ್ನೆ ಎದುರಾದಾಗಲೆಲ್ಲ, ಕೇರಳ ಇತರರತ್ತ ಬೆಟ್ಟು ಮಾಡುವುದೇ ಹೆಚ್ಚು.
ಕರ್ನಾಟಕದ ಯಾವುದೇ ಮೂಲೆಗೆ ತೆರಳಲಿ; ಅಲ್ಲಿ ಕೇರಳದ ವಿದ್ಯಾರ್ಥಿಗಳ ದೊಡ್ಡ ದಂಡೇ ಸಿಗುತ್ತದೆ. ಈ ವಿದ್ಯಾರ್ಥಿಗಳನ್ನು ಮಾತಿಗೆಳೆದರೆ ಸಿಗುವ ಉತ್ತರ ನಮ್ಮಲ್ಲಿ ಹೆಚ್ಚಿನ ಶಿಕ್ಷಣ ಸಂಸ್ಥೆಗಳಿಲ್ಲ. ಉದ್ಯೋಗ ಕ್ಷೇತ್ರದಲ್ಲೂ ಅಷ್ಟೇ….ಹೆಚ್ಚಿನ ಉದ್ಯೋಗ ಅಲ್ಲಿ ಸೃಷ್ಟಿಯಾಗುತ್ತಿಲ್ಲ ಎನ್ನುವ ಆರೋಪ. ಐಟಿ, ವೈದ್ಯಕೀಯ ರಂಗದಲ್ಲಿ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಕೇರಳದ ವಲಸಿಗರು ಕಾಣಸಿಗುತ್ತಾರೆ.
ದುರಂತವೆಂದರೆ, ಹೀಗೆ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ಇಲ್ಲಿಗೆ ವಲಸೆ ಬರುವ ಬಹುತೇಕರು ತಮ್ಮ ತವರು ರಾಜ್ಯದ ಮಾದರಿಯನ್ನು ಹೊಗಳುತ್ತಾರೆ. ಹಾಗಾದರೆ ಕರ್ನಾಟಕ ಮಾದರಿಯ ಶಿಕ್ಷಣ-ಉದ್ಯೋಗವನ್ನು ಅಲ್ಲಿ ಸೃಷ್ಟಿಸಲು ಅಲ್ಲಿನ ಸಂಸ್ಥೆಗಳಿಗೆ, ಉದ್ಯಮಿಗಳಿಗೆ, ಸರಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ?
ಕರ್ನಾಟಕದ ಮೇಲೆ ಒತ್ತಡ:
ಕೇರಳದ ಎಲ್ಲಾ ಒತ್ತಡ ರಾಜಕೀಯಗಳಿಗೆ ಈಗ ಪೆಟ್ಟು ತಿನ್ನುತ್ತಿರುವುದು ದಕ್ಷಿಣ ಕರ್ನಾಟಕ. ಕೊಡಗಿನಲ್ಲಿ ಈಗಾಗಲೆ ಮಲಯಾಳಂ ಅಧಿಕೃತ ಭಾಷೆಯಾಗಿ ಪರಿಣಮಿಸಿದೆಯೆ ಎನ್ನುವ ರೀತಿಯಲ್ಲಿ ಸಾರ್ವಜನಿಕವಾಗಿ ಬಳಕೆಯಾಗುತ್ತಿದೆ. ಕೇರಳದಲ್ಲಿ ಜಮೀನಿಲ್ಲ, ಉದ್ಯೋಗವಿಲ್ಲ ಎಂದು ಎಲ್ಲೆಡೆಯಿಂದ ಮಂಗಳೂರು, ಉಡುಪಿ, ಬೆಂಗಳೂರು, ಮೈಸೂರಿಗೆ ದೊಡ್ಡ ಪ್ರಮಾಣದಲ್ಲಿ ಮಲೆಯಾಳಿಗಳ ವಲಸೆ ಆರಂಭವಾಗಿದೆ. ವಲಸೆ ತಪ್ಪಲ್ಲ. ಕರ್ನಾಟಕದಿಂದ ಕೂಡಾ ದೊಡ್ಡ ಮಟ್ಟದಲ್ಲಿ ವಲಸೆ ನಡೆಯುತ್ತಿದೆ. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿಲ್ಲ. ತನಗೆ ನಷ್ಟವಾಗುತ್ತಿದೆ ಎಂಬ ಕಾರಣಕ್ಕಾಗಿಯೇ ಬಂಡೀಪುರ ರಸ್ತೆಯನ್ನು ರಾತ್ರಿ ತೆರೆದಿಡಬೇಕು ಎಂದು ಕೇರಳ ಒತ್ತಾಯಿಸುತ್ತಿದೆ. ಜತೆಗೆ ತಲಶೈರಿ ರೈಲ್ವೆ ಮಾರ್ಗದ ಕಥೆ. ಹಾಗಾದರೆ ಈಗ ದೇಶಾದ್ಯಂತ ಪಸರಿಸಲಾಗುತ್ತಿರುವ ಕೇರಳ ಮಾದರಿಗೂ ವಾಸ್ತವಕ್ಕೂ ಏನಾದರೂ ವ್ಯತ್ಯಾಸಗಳಿವೆಯೇ?
ಪ್ರಗತಿಪರ ಧೋರಣೆಗಳು ನಮ್ಮ ಬದುಕಿನ ಮೂಲಮಂತ್ರವಾಗಬೇಕು ನಿಜ. ಆದರೆ ಅದನ್ನೆ ಮುಂದಿಟ್ಟುಕೊಂಡು ವಾಸ್ತವ ಮರೆಮಾಚುವುದು ಸರಿಯಲ್ಲ. ಇಲ್ಲವಾದರೆ ಕೇರಳ ಮಾದರಿ, ಗುಜರಾತ್ ಮಾದರಿಯಲ್ಲೇ ವ್ಯಂಗ್ಯದ ವಸ್ತುವಾಗುವುದು ಖಚಿತ.