ಬೆಂಗಳೂರು : ಸಿಎಂ ಕಪ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಗುರುತಿಸಿಕೊಂಡಿರುವ ಇನ್ನೊಂದು ತಂಡ ಟೆಲಿಕಾಂ ಸ್ಕೈ ಸ್ಟ್ರೈಕರ್ಸ್. ಈ ಟೀಂನ ಮಾಲೀಕರಾಗಿರುವ ಡಾ. ಎನ್.ನರಸಿಂಹಮೂರ್ತಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಟೆಲಿಕಾಂ ಎಂಪ್ಲಾಯೀಸ್ ಮತ್ತು ಅದರ್ಸ್ ಹೌಸಿಂಗ್ ವೆಲ್ಫೇರ್ ಟ್ರಸ್ಟ್‌ನ ಸಂಸ್ಥಾಪಕರು ಮತ್ತು ಅಧ್ಯಕ್ಷರಾಗಿದ್ದಾರೆ. ಚಿತ್ರೋದ್ಯಮದಲ್ಲಿಯೂ ಛಾಪು ಮೂಡಿಸಿರುವ ಇವರು ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ನಟರಾಗಿಯೂ ಬಣ್ಣದ ಲೋಕದಲ್ಲಿಯೂ ಹೆಸರು ಮಾಡಿದ್ದಾರೆ.

ಡಾ. ಎನ್.ನರಸಿಂಹಮೂರ್ತಿ ಸರಳ ಜೀವನ, ಅಚಲ ಪರಿಶ್ರಮ ಮತ್ತು ಸಮಾಜಮುಖಿ ಚಿಂತನೆಯ ಪ್ರತಿರೂಪ. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಬಡತನ ಹಾಗೂ ಅನೇಕ ಸಂಕಷ್ಟಗಳನ್ನು ಎದುರಿಸಿ, ಸಂಜೆ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪೂರೈಸಿದವರು. ನಂತರ ಬಿಎಸ್‍ಎನ್‍ಎಲ್‍ನಲ್ಲಿನಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿ ತಮ್ಮ ಜೀವನ ರೂಪಿಸಿಕೊಂಡ ಅಪರೂಪದ ಸಾಧಕ.
ಕಾಲೇಜು ದಿನಗಳಿಂದಲೂ ಸಂಘಟನೆಯತ್ತ ಹೆಚ್ಚಿನ ಒಲವು ಹೊಂದಿದ್ದ ಡಾ.ನರಸಿಂಹಮೂರ್ತಿ ಅವರು ಬಿಎಸ್‍ಎನ್‍ಎಲ್ ಬೆಂಗಳೂರು ಜಿಲ್ಲಾ ಒಕ್ಕೂಟದ ಕಾರ್ಯದರ್ಶಿಯಾಗಿ ಸಮಾಜಮುಖಿ ಕಾರ್ಯವನ್ನು ಆರಂಭಿಸಿದರು. ಕರ್ನಾಟಕ ಸರ್ಕಲ್ ಯೂನಿಯನ್ ಲೀಡರ್ ಆಗಿ ಕಾರ್ಮಿಕರ ಹಿತರಕ್ಷಣೆಗೆ ಶ್ರಮಿಸಿದವರು.
ಇದನ್ನೂ ಓದಿ : CM CUP : ನೊಂದವರ ಪಾಲಿನ ಆಶಾಕಿರಣ ರೂಪಾ ಶೇಖರ್- ಎಸ್ಥೆಟೆಕ್ ಅಟ್ಯಾಕರ್ಸ್ ತಂಡದ ಒಡತಿ..!
ಬಡ ಮತ್ತು ಮಧ್ಯಮ ವರ್ಗದ ಜನರು ಸ್ವಂತ ಸೂರು ಹೊಂದಬೇಕು ಎಂಬ ಉದ್ದೇಶದೊಂದಿಗೆ 2017ರಲ್ಲಿ ಟೆಲಿಕಾಂ ಎಂಪ್ಲಾಯೀಸ್ & ಅದರ್ಸ್ ಹೌಸಿಂಗ್ ವೆಲ್ಫೇರ್ ಟ್ರಸ್ಟ್ ಸಂಸ್ಥೆಯನ್ನು ಸ್ಥಾಪಿಸಿದರು. ಸದುದ್ದೇಶದೊಂದಿಗೆ ಆರಂಭಿಸಿದ ಟ್ರಸ್ಟ್ ಮೂಲಕ ಬೆಂಗಳೂರು, ಮೈಸೂರು, ತುಮಕೂರು ಸೇರಿದಂತೆ 10ಕ್ಕೂ ಹೆಚ್ಚಿನ ಯಶಸ್ವಿ ಗೃಹ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ.
ಟೆಲಿಕಾಂ ಎಂಪ್ಲಾಯೀಸ್ ಮತ್ತು ಅದರ್ಸ್ ಹೌಸಿಂಗ್ ವೆಲ್ಫೇರ್ ಟ್ರಸ್ಟ್ ಸದ್ಯ ಆರು ಕಚೇರಿಗಳನ್ನು ಹೊಂದಿದ್ದು, 150ಕ್ಕೂ ಹೆಚ್ಚಿನ ಜನರಿಗೆ ಖಾಯಂ ಮತ್ತು 100ಕ್ಕೂ ಹೆಚ್ಚು ಜನರಿಗೆ ಫ್ರೀಲಾನ್ಸ್ ಉದ್ಯೋಗಾವಕಾಶವನ್ನು ಕಲ್ಪಿಸಿದ್ದಾರೆ. ಕೇವಲ ಮನೆ ಅಥವಾ ನಿವೇಶನ ಹಂಚಿಕೆಗೆ ಮಾತ್ರ ತಮ್ಮ ಸಮಾಜಮುಖಿ ಕಾರ್ಯಗಳನ್ನು ಸೀಮಿತವಾಗಿಸದ ಡಾ. ನರಸಿಂಹಮೂರ್ತಿ ಅವರು, ಟ್ರಸ್ಟ್‌ನ ಬಂದ ಲಾಭಾಂಶದಲ್ಲಿ ಶಾಲೆಗಳು, ಅನಾಥಾಶ್ರಮ ಅಭಿವೃದ್ಧಿಗೆ ಕೊಡುಗೆಯಾಗಿ ನೀಡಿದ್ದಾರೆ. ಜತೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಪರಿಕರಗಳನ್ನು ವಿತರಣೆ ಮಾಡಿ, ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನೂ ಕೂಡ ನೀಡುತ್ತಿದ್ದಾರೆ.

.
ಇವರ ಸಮಾಜಮುಖಿ ಸೇವೆಗಾಗಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳು ಲಭಿಸಿವೆ. ಇಂಡಿಯಾ ಇಂಟರ್ ನ್ಯಾಷನಲ್ ಐಕಾನಿಕ್ ಅವಾರ್ಡ್, ಗ್ಲೋಬಲ್ ಸ್ಟಾರ್ ಅವಾರ್ಡ್, ರಿಯಲ್ ಎಸ್ಟೇಟ್ ಎಕ್ಸಲೆನ್ಸ್ ಅವಾರ್ಡ್, ಇಂಟರ್‍ನ್ಯಾಷನಲ್ ಐಕಾನಿಕ್ ಅವಾರ್ಡ್, ಯುವರತ್ನ ಅಪ್ಪು ಅವಾರ್ಡ್ ಹೀಗೆ ಹತ್ತು ಹಲವು ಪ್ರಶಸ್ತಿಗಳು ಡಾ. ನರಸಿಂಹಮೂರ್ತಿ ಅವರ ಸಾಧನೆಯ ಮುಕುಟಕ್ಕೆ ಗರಿಗಳಾಗಿವೆ.
ಜತೆಗೆ ಕೊಯಮತ್ತೂರಿನ ಏಷಿಯಾ ಇಂಟರ್‍ನ್ಯಾಷನಲ್ ಕಲ್ಚರಲ್ ರಿಸರ್ಚ್ ಯೂನಿವರ್ಸಿಟಿಯು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಮೂಲತಃ ರಂಗಭೂಮಿ ಕಲಾವಿದರಾದ ಡಾ. ನರಸಿಂಹಮೂರ್ತಿ ಅವರಿಗೆ ಚಲನಚಿತ್ರದ ನಂಟು ಕೂಡ ಇದೆ. ಚಲನಚಿತ್ರ ನಿರ್ಮಾಣಕರಾಗಿ, ನಿರ್ದೇಶಕರಾಗಿ, ಸಂಭಾಷಣೆ, ಬರಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಜತೆಗೆ ಹಿರಿತೆರೆಯಲ್ಲಿ ಅಭಿನಯಿಸುವ ಮೂಲಕ ತಾವೊಬ್ಬ ಉತ್ತಮ ನಟ ಎಂದೆನಿಸಿಕೊಂಡಿದ್ದಾರೆ. ಇದೀಗ ಡಾ.ಎನ್. ನರಸಿಂಹ ಮೂರ್ತಿಯವರು ಟೆಲಿಕಾಂ ಸ್ಕೈ ಸ್ಟ್ರೈಕರ್ಸ್ ತಂಡದ ಮಾಲೀಕರಾಗಿ ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಜೊತೆಯಾಗಿರುವುದು ಅವರ ಕ್ರೀಡಾ ಪ್ರೇಮ ಹಾಗೂ ಕ್ರೀಡೆಗಳ ಮೇಲಿನ ಒಲವನ್ನು ತೋರಿಸುತ್ತದೆ.






