ದೊಡ್ಮನೆಯ ಕುಡಿ, ರಾಘವೇಂದ್ರ ರಾಜ್ಕುಮಾರ್ ಅವರ ಕಿರಿಯ ಪುತ್ರ, ನಟ ಯುವರಾಜ್ಕುಮಾರ್ ಇಂದು ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ.

ಯುವರಾಜ್ಕುಮಾರ್ ಬರ್ತ್ಡೇಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಹಾರೈಸುತ್ತಿದ್ದಾರೆ. ಇಂದು ಬೆಂಗಳೂರಿನ ಸದಾಶಿವನಗರದಲ್ಲಿ ಅಭಿಮಾನಿಗಳ ಜೊತೆ ಯುವರಾಜ್ಕುಮಾರ್ ತಮ್ಮ ಜನ್ಮದಿನವನ್ನ ಆಚರಿಸಿಕೊಂಡಿದ್ದು, ಈ ವೇಳೆ ಯುವ ಹಾಗೂ ರಾಘವೇಂದ್ರ ರಾಜ್ಕುಮಾರ್ ಅಭಿಮಾನಿಗಳ ಆರಾಧ್ಯದೈವ, ಪುನೀತ್ ರಾಜ್ಕುಮಾರ್ ಅವರನ್ನ ನೆನೆದು ಭಾವುಕರಾದರು.

ರಾಜ್ಯದ ಬೇರೆ ಬೇರೆ ಕಡೆಯಿಂದ ಬಂದು ಯುವ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಅಭಿಮಾನಿಗಳು ಮತ್ತು ಕುಟುಂಬದ ಜೊತೆಯಲ್ಲಿ ಯುವ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಈ ವೇಳೆ ಅಪ್ಪುನ ನೆನೆದು ಮಗ ಯುವನಿಗೆ ರಾಘವೇಂದ್ರ ರಾಜ್ಕುಮಾರ್ ಸಲಹೆ ನೀಡಿದ್ದಾರೆ. ಹ್ಯಾಪಿ ಬರ್ತ್ಡೇ ಮಗನೆ. ಅಭಿಮಾನಿಗಳ ಆಶೀರ್ವಾದ ನಿನ್ನ ಮೇಲೆ ಸದಾ ಇರಲಿ. ಅವರನ್ನು ಚೆನ್ನಾಗಿ ನೋಡಿಕೋ ಎಂದು ಪುತ್ರನಿಗೆ ರಾಘವೇಂದ್ರ ರಾಜ್ಕುಮಾರ್ ಹೇಳಿದ್ರು. ಪ್ರೀತಿ ಸಿಗುತ್ತಿರುವುದು ಪುನೀತ್ ರಾಜ್ಕುಮಾರ್ ಅವರಿಂದ ಎಂದು ಕೂಡ ರಾಘಣ್ಣ ಹೇಳಿದರು.

ಹುಟ್ಟುಹಬ್ಬದ ಸಂಭ್ರಮದ ನಡುವೆ ಯುವ ರಾಜ್ಕುಮಾರ್ ಮಾತನಾಡಿ, ಅಭಿಮಾನಿಗಳ ಪ್ರೀತಿಗೆ ಚಿರಋಣಿ, ಈ ಪ್ರೀತಿಗೆ ಮಾತಿಲ್ಲ. ಯುವ ಸಿನಿಮಾ ನಡೆಯುತ್ತಿದೆ. ಡಿಸೆಂಬರ್ಗೆ ಸಿನಿಮಾ ರಿಲೀಸ್ ಆಗುತ್ತದೆ. ಸಿಕ್ಕಾಪಟ್ಟೆ ಖುಷಿಯಾಗುತ್ತಿದೆ. ಎಲ್ಲಾ ಕಡೆಯಿಂದ ಅಭಿಮಾನಿಗಳು ಬರುತ್ತಿದ್ದಾರೆ. ಪುನೀತ್ ಚಿಕ್ಕಪ್ಪನ ಬಗ್ಗೆ ಹೇಳೋಕೆ ಮಾತಿಲ್ಲ. ಕಂಠೀರವ ಸ್ಟುಡಿಯೋಗೆ ಹೋಗುತ್ತೇನೆ. ಅವರನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂತ ಹೇಳಿದ್ರು.