ಲೋಕಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ತನ್ನೆಲ್ಲಾ ಶಕ್ತಿ ಮೀರಿ ಪ್ರಯತ್ನ ಮಾಡ್ತಿದೆ. ಅದರ ಭಾಗವಾಗಿಯೇ ಯುವ ನ್ಯಾಯ ಸಮಾವೇಶ ಆಯೋಜನೆ ಮಾಡಲಾಗಿದೆ. ಸಮಾವೇಶದಲ್ಲಿ ಭಾಗಿಯಾಗಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಯುವಜನಾಂಗದ ಪಾತ್ರ ಮತ್ತು ಪರಿಶ್ರಮದ ಬಗ್ಗೆ ಮಾತನಾಡಿ ಹುರಿದುಂಬಿಸುವ ಕೆಲಸ ಮಾಡಿದ್ದಾರೆ.
ಕೆಪಿಪಿಸಿ ಕಚೇರಿಯಲ್ಲಿ ನಡೆದ ಯುವ ನ್ಯಾಯ ಗ್ಯಾರಂಟಿ ಸಮಾವೇಶದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿದ್ದು, ಕಾಂಗ್ರೆಸ್ ಪಕ್ಷ, ದೇಶದಲ್ಲಿ ದೊಡ್ಡ ಇತಿಹಾಸ ಇರುವ ಒಂದು ರಾಜಕೀಯ ಪಕ್ಷ. 21 ವಯಸ್ಸಿಗೆ ಮೊದಲು ಮತದಾನದ ಹಕ್ಕಿತ್ತು, ರಾಜೀವ್ ಗಾಂಧಿ ಅವರಿಗೆ ಯುವ ಜನರ ಮೇಲೆ ಅಪಾರ ಕಾಳಜಿ ಇತ್ತು. ಹಾಗಾಗಿ ಪಾರ್ಲಿಮೆಂಟ್ನಲ್ಲಿ ಬಿಲ್ ತಂದು ಮತದಾನದ ಹಕ್ಕನ್ನು 18ಕ್ಕೆ ಇಳಿಸಿದರು. ಆಗ ದೇಶದ ಎಲ್ಲಾ ಪಕ್ಷದ ನಾಯಕರು ಆಡೋ ಹುಡುಗರಿಗೆ ಮತದಾನ ಹಕ್ಕು ಕೊಟ್ಟರು ಅಂತ ಟೀಕೆಯನ್ನೂ ಮಾಡಿದ್ರು ಎಂದು ನೆನಪು ಮಾಡಿಕೊಂಡಿದ್ದಾರೆ.ಆಗ ರಾಜೀವ್ ಗಾಂಧಿ ಭಾರತ ಒಂದು ಹಳೆಯ ದೇಶ, ಆದರೆ ಯಂಗ್ ಇಂಡಿಯಾ ಎಂದು ಸಂಸತ್ತಿನಲ್ಲಿ ಭಾಷಣ ಮಾಡಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಯ್ತಿಯಿಂದ ಪಾರ್ಲಿಮೆಂಟ್ ತನಕ ನಾಯಕರ ಆಯ್ಕೆ ಮಾಡಬೇಕು. ಆ ಆಯ್ಕೆ ಹಕ್ಕನ್ನು ನಮ್ಮ ದೇಶದ ಯುವಕರಿಗೆ ಕೊಡದಿದ್ದರೆ ಹೇಗೆ ಎಂದು ಪ್ರಶ್ನೆ ಕೇಳಿದ್ದರು. ನಾನು, ವಿನಯ್ ಕುಮಾರ್ ಸೊರಕೆ, ರಿಜ್ವಾನ್ ಅರ್ಷದ್, ದಿನೇಶ್ ಗುಂಡೂರಾವ್ ಎಲ್ಲಾ ವಿದ್ಯಾರ್ಥಿ ದೆಸೆಯಿಂದಲೇ ಯುವ ಜನಾಂದೋಲನ ಮಾಡಿದವರು. ನಾವು ಈ ಬಾರಿ ಎಂಪಿ ಟಿಕೆಟ್ ಅನ್ನು 14 ಯುವ ಜನರಿಗೆ ಕೊಟ್ಟಿದ್ದೇವೆ ಎಂದು ಯುವಕರಿಗೆ ತಿಳಿಸಿದ್ರು.
ನನಗೆ ಯುವಕರ ಬಗ್ಗೆ ಮಹಿಳೆಯರ ಬಗ್ಗೆ ನನಗೆ ಅಪಾರ ನಂಬಿಕೆ ಇದೆ. ಮಹಿಳೆಯರಿಗೆ ಗೃಹಲಕ್ಷ್ಮಿ, ಶಕ್ತಿ ಯೋಜನೆ ಗ್ಯಾರಂಟಿ ಕೊಟ್ಟಿದ್ದೇವೆ. ಯುವಜನರಿಗೆ ಯುವನಿಧಿ ಯೋಜನೆ ಜಾರಿ ಮಾಡಿದ್ದೇವೆ. ಪ್ರಧಾನಿ ಮೋದಿ ಯುವಜನರಿಗೆ ಪಕೋಡ ಮಾರಿ ಅಂತ ಹೇಳಿದ್ರು. ಆದರೆ ನಾವು ಅದರ ವಿರುದ್ಧ ದೇಶವ್ಯಾಪಿ ಹೋರಾಟ ಮಾಡಿದ್ದೇವೆ. ಈಗ ನಾವು ಯುವಜನರಿಗೆ 1,500 ಇಂದ 3000 ರೂಪಾಯಿ ಕೊಡ್ತಿದ್ದೇವೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ನಾವು ಅಧಿಕಾರಕ್ಕೆ ಬಂದ್ರೆ ತಡೆಯುತ್ತೇವೆ ಅನ್ನೋದು ರಾಹುಲ್ ಗಾಂಧಿ ಮಾತು. ಯುವಜನರಿಗೆ ಯುವ ಬೆಳಕು ಅನ್ನೋ ಯೋಜನೆ ಜಾರಿ ಮಾಡುತ್ತೇವೆ ಎಂದಿದ್ದಾರೆ ಎಂದು ಯುವಕರನ್ನು ಸೆಳೆಯುವ ಮಾತನಾಡಿದ್ದಾರೆ.ಪ್ರತಿಯೊಂದು ಬೂತ್ ನಲ್ಲಿ ಐದೈದು ಯುವಕರು ಸೇರಿ ಮನೆ ಮನೆಗೆ ಹೋಗಿ ಕಾಂಗ್ರೆಸ್ ಸರ್ಕಾರ ಯೋಜನೆಯನ್ನು ಜನರಿಗೆ ಮುಟ್ಟಿಸಬೇಕು. ಹೀಗಾದರೆ ಮಾತ್ರ ನಾವು ಅಧಿಕಾರಕ್ಕೆ ಬರೋದಕ್ಕೆ ಸಾಧ್ಯ. ಯುವಕರು ವ್ಯಕ್ತಿ ಪೂಜೆ ಬಿಟ್ಟು ಪಕ್ಷದ ಪೂಜೆ ಮಾಡಿ, ನೀವೂ ನಾಯಕರಾಗಬಹುದು ಎಂದು ಯುವಕರಿಗೆ ಗೆಲುವಿನ ಸೂತ್ರ ಹೇಳಿಕೊಟ್ಟಿದ್ದಾರೆ. ಯೂತ್ ಕಾಂಗ್ರೆಸ್ಗೆ ಅತಿ ಹೆಚ್ಚು ಮೆಂಬರ್ ಶಿಪ್ ಮಾಡಿಸಬೇಕು. ಯೂತ್ ಕಾಂಗ್ರೆಸ್ ಬ್ಲಡ್ ತಿಕ್ಕರ್ ದ್ಯಾನ್ ವಾಟರ್ (Youth Congress blood, Thicker than water) ಅನ್ನೋದನ್ನು ನೀವು ಮರೆಯಬಾರದು. ಯವಜನರು ಬಹಳ ಗಟ್ಟಿಯಾಗಿ ಬೆಳೆಯಬೇಕು ಎಂದು ಸಲಹೆ ನೀಡಿದ್ದಾರೆ.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನ ನೂತನ ಕಾರ್ಯಾಧ್ಯಕ್ಷರಾಗಿ ಹೆಚ್.ಎಸ್ ಮಂಜುನಾಥ ಗೌಡ ಅವರು ಇಂದು ಅಧಿಕಾರ ಸ್ವೀಕರಿಸಿದರು. ಎರಡು ಬಾರಿ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆ ಎನ್ಎಸ್ ಯುಐನ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಮಂಜುನಾಥ್ ಗೌಡ ಅವರು ಈಗ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.ಈ ವೇಳೆ ಮಾತನಾಡಿದ ಮಂಜುನಾಥ ಗೌಡ ಅವರು, “ಯಾರು ಇರಲಿ, ಇಲ್ಲದಿರಲಿ ಪಕ್ಷ ಮುನ್ನಡೆಯುತ್ತದೆ. ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ಕೆಪಿಸಿಸಿ ಅಧ್ಯಕ್ಷರು ಯಾವಾಗಲೂ ಹೇಳುತ್ತಾರೆ. ಅವರ ಮಾತು ನಿಜ. ನಾವೆಲ್ಲ ಅವರ ಕೈ ಬಲಪಡಿಸೋಣ. ಪಕ್ಷವನ್ನು ಸಂಘಟಿಸೋಣ. ನಾನು ಈ ಮಟ್ಟಕ್ಕೆ ಬೆಳೆಯಲು ಶಿವಕುಮಾರ್ ಅವರ ಆಶೀರ್ವಾದ ಕಾರಣವಾಗಿದೆ” ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ್ ಭಂಡಾರಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಶಾಸಕ ರಿಜ್ವಾನ್ ಅರ್ಷದ್, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ಹ್ಯಾರಿಸ್ ನಲಪಾಡ್, ಯುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಬಂಟಿ ಶೆಲ್ಕೆ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಗೌತಮ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಮುಳಗುಂದ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.











