ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ದಾಖಲೆಯ ಜಯ ಸಾಧಿಸಿದೆ. ಭಾನುವಾರ ಘೋಷಣೆಯಾದ ಚುನಾವಣಾ ಫಲಿತಾಂಶ ಎಲ್ಲರಿಗೂ ಅಚ್ಚರಿ ಹುಟ್ಟಿಸಿದ್ದು, ಮಂಡಲ ಪರಿಷತ್ ಹಾಗೂ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಸುಮಾರು 90%ರಷ್ಟು ಸ್ಥಾನಗಳನ್ನು ವೈಎಸ್ಆರ್ ಕಾಂಗ್ರೆಸ್ ಗೆದ್ದುಕೊಂಡಿದೆ.
ಏಪ್ರಿಲ್ 8ರಂದು 515 ಜಿಲ್ಲಾ ಪರಿಷತ್ ಹಾಗೂ 7,220 ಮಂಡಲ ಪರಿಷತ್’ಗಳಿಗೆ ಚುನಾವಣೆ ನಡೆದಿತ್ತು. ಏಪ್ರಿಲ್ 10ರಂದು ಘೋಷಣೆಯಾಗಬೇಕಿದ್ದ ಫಲಿತಾಂಶವು ನ್ಯಾಯಾಲಯದಲ್ಲಿ ಬಿಜೆಪಿ ಹಾಗೂ ಟಿಡಿಪಿ ತಕರಾರು ಅರ್ಜಿ ಸಲ್ಲಿಸಿದ್ದರಿಂದ ಮುಂದೂಡಲ್ಪಟ್ಟಿತ್ತು. ಚುನಾವಣಾ ದಿನಾಂಕ ನಿಗದಿಯಾದ ಬಳಿಕ ಅಗತ್ಯವಿರುವ ಚುನಾವಣಾ ನೀತಿ ಸಂಹಿತೆಯನ್ನು ಜಾರಿಗೊಳಿಸಿಲ್ಲ ಎಂದು ವಿಪಕ್ಷಗಳು ಆರೋಪಿಸಿದ್ದವು.
ಐದು ತಿಂಗಳು ವಿಚಾರಣೆ ನಡೆಸಿದ ಬಳಿಕ ಕಳೆದ ಗುರುವಾರ ಹೈಕೋರ್ಟ್’ನ ವಿಭಾಗೀಯ ಪೀಠವು ಮತ ಎಣಿಕೆಗೆ ಅನುಮತಿ ನೀಡಿತ್ತು.
ಭಾನುವಾರ ಸಂಜೆಯ ವೇಳಗೆ ಘೋಷಣೆಯಾದ ಫಲಿತಾಂಶದ ಪ್ರಕಾರ 553 ZPTCಗಳಲ್ಲಿ ವೈಎಸ್ಆರ್ ಕಾಂಗ್ರೆಸ್ 547 ZPTCಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.8,083MPTC ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ 7,284 ಸ್ಥಾನಗಳನ್ನು ವೈಎಸ್ಆರ್ ಕಾಂಗ್ರೆಸ್ ಗೆದ್ದುಕೊಂಡಿದೆ.
ಕೇವಲ ಒಂದು ದಶಕದ ಹಿಂದೆ ಸ್ಥಾಪಿತವಾದ ಈ ಪಕ್ಷವು,75 ಮುನ್ಸಿಪಾಲಿಟಿ ಹಾಗೂ ನಗರಸಭೆಗಳಲ್ಲಿ 74ಅನ್ನು ಗೆದ್ದು ಬೀಗಿದೆ. ಮಿಗಿಲಾಗಿ, ಎಲ್ಲಾ 12 ನಗರ ಪಾಲಿಕೆಗಳನ್ನು ಕೂಡಾ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.
2019ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 175ರಲ್ಲಿ 151 ಕ್ಷೇತ್ರಗಳನ್ನು ವೈಎಸ್ಆರ್ ಕಾಂಗ್ರೆಸ್ ಗೆದ್ದುಕೊಂಡಿತ್ತು. ಇದೇ ವೇಳೆ ನಡೆದಂತಹ ಲೋಕಸಭಾ ಚುನಾವಣೆಯಲ್ಲಿ 25ರಲ್ಲಿ 22 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಚುನಾವಣೆಯಲ್ಲಿ ಸತತ ಗೆಲುವುಗಳನ್ನು ದಾಖಲಿಸುತ್ತಿರುವ ವೈಎಸ್ಆರ್ ಕಾಂಗ್ರೆಸ್’ಗೆ ಈಗ ಪ್ರಬಲ ಪ್ರತಿಸ್ಪರ್ಧಿಯೇ ಇಲ್ಲದಂತಾಗಿದೆ.
ಪ್ರಮುಖ ವಿರೋಧ ಪಕ್ಷವಾದ ತೆಲುಗು ದೇಸಂ ಪಾರ್ಟಿ (ಟಿಡಿಪಿ)ಯು ಮೂರು ZPTCಗಳಲ್ಲಿ ಹಾಗೂ 675MPTC ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿಯ ಪಾಲಿಗೆ ಕೇವಲ 23MPTC ಸ್ಥಾನಗಳು ಲಭಿಸಿದ್ದು ZPTCಯಲ್ಲಿ ಬಿಜೆಪಿಯದ್ದು ಶೂನ್ಯ ಸಾಧನೆ.
ರಾಜ್ಯದಲ್ಲಿ ಒಟ್ಟು 660ZPTC ಹಾಗೂ 10,047MPTC ಕ್ಷೇತ್ರಗಳಿವೆ. ಅವುಗಳಲ್ಲಿ ಸುಮಾರು 126ZPTC ಹಾಗೂ 2,371MPTC ಸ್ಥಾನಗಳಿಗೆ ಮಾರ್ಚ್ 2020ರಲ್ಲಿ ಅವಿರೋಧ ಆಯ್ಕೆ ನಡೆದಿತ್ತು.
ರಾಜ್ಯದಲ್ಲಿ ಮಹಿಳೆಯರಿಗೆ, ಹಿಂದುಳಿದ ಸಮುದಾಯಗಳಿಗೆ ಹಾಗೂ ಅಲ್ಪಸಂಖ್ಯಾತರ ಅಭಿವೃದ್ದಿಗೆ ರಾಜ್ಯ ಸರ್ಕಾರ ರೂಪಿಸಿದ ಯೋಜನೆಗಳೇ ಈ ಗೆಲುವಿಗೆ ಕಾರಣ ಎಂದು ವೈಎಸ್ಆರ್ ಕಾಂಗ್ರೆಸ್ ಹೇಳಿದೆ.