ಪಾಟ್ನಾ: ಬಿಹಾರದಲ್ಲಿ ಮಹಿಳೆಯರ ಮೇಲಿನ ಸಾರ್ವಜನಿಕ ದೌರ್ಜನ್ಯದ ಸರಣಿ ಪ್ರಕರಣಗಳು ಮುಂದುವರಿದಿದ್ದು, ಜಮುಯಿ ಮತ್ತು ಸಮಸ್ತಿಪುರದ ಘಟನೆಗಳ ಬೆನ್ನಲ್ಲೇ ಬಂಕಾ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ‘ಮಂದಾರ್ ಹಿಲ್’ನಲ್ಲಿ ಯುವತಿಯೊಬ್ಬಳಿಗೆ ಯುವಕರ ಗುಂಪೊಂದು ಕಿರುಕುಳ ನೀಡಿ, ಆಕೆಯ ಜತೆಗಿದ್ದ ಸ್ನೇಹಿತನ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೆಪ್ಟೆಂಬರ್ 22ರಂದು ಈ ವಿಡಿಯೋ ಪೊಲೀಸರ ಗಮನಕ್ಕೆ ಬಂದಿದ್ದು, ಪರಿಶೀಲನೆ ನಡೆಸಿದ ಬೌನ್ಸಿ ಠಾಣಾ ಪೊಲೀಸರು ಇದು ಮಂದಾರ್ ಹಿಲ್‌ನಲ್ಲಿ ನಡೆದಿರುವ ಘಟನೆ ಎಂಬುದನ್ನು ದೃಢಪಡಿಸಿದ್ದಾರೆ. ವಿಡಿಯೋದಲ್ಲಿ ಯುವತಿಯನ್ನು ಸುತ್ತುವರಿದ ಪುಂಡರ ಗುಂಪು ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸುವುದು, ಓರ್ವ ಯುವಕ ಆಕೆಗೆ ಬೆದರಿಕೆ ಹಾಕುವುದು ಹಾಗೂ ಮತ್ತೊಬ್ಬ ಆಕೆಯ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸುವುದು ದಾಖಲಾಗಿದೆ. ಆರೋಪಿಗಳು ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಬೌನ್ಸಿ ಠಾಣಾಧಿಕಾರಿ ಪಂಕಜ್ ಕುಮಾರ್ ಝಾ ಅವರ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಡಿಯೋದಲ್ಲಿರುವ ಅಪರಿಚಿತ ಆರು ಮಂದಿ ಯುವಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 74, 75, 76, 3(5) ಹಾಗೂ ಐಟಿ ಕಾಯ್ದೆಯ ಸೆಕ್ಷನ್ 66E ಮತ್ತು 67A ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವೈರಲ್ ವಿಡಿಯೋವನ್ನೇ ಸಾಕ್ಷ್ಯವಾಗಿ ಪರಿಗಣಿಸಿರುವ ಪೊಲೀಸರು, ಮಂದಾರ್ ಹಿಲ್ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಅಂಗಡಿಕಾರರ ವಿಚಾರಣೆ ನಡೆಸುತ್ತಿದ್ದು, ಸಂತ್ರಸ್ತ ಯುವತಿ ಮತ್ತು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಬಿಹಾರದಲ್ಲಿ ಒಂದೇ ವಾರದಲ್ಲಿ ನಡೆದಿರುವ ಮೂರನೇ ಇಂತಹ ಘಟನೆ ಇದಾಗಿದೆ. ಇದಕ್ಕೂ ಮೊದಲು ಸಾರ್ವಜನಿಕವಾಗಿ ಯುವತಿ ಮತ್ತು ಆಕೆಯ ಸ್ನೇಹಿತನಿಗೆ ಕಿರುಕುಳ ನೀಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.
ಸೆಪ್ಟೆಂಬರ್ 19ರಂದು ಮವಾರಾ ಹಿಲ್‌ನಿಂದ ದ್ವಿಚಕ್ರ ವಾಹನದಲ್ಲಿ ಹಿಂತಿರುಗುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತನ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆ ನಡೆಸಿದ ಆರೋಪದಡಿ ಐವರನ್ನು ಬಂಧಿಸಲಾಗಿತ್ತು.
ಒಂದಾದ ಮೇಲೊಂದರಂತೆ ನಡೆಯುತ್ತಿರುವ ಈ ಸರಣಿ ಘಟನೆಗಳು ಬಿಹಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸಿದ್ದು, ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆರ್‌ಜೆಡಿ ಸಂಸದ ಮನೋಜ್ ಝಾ ಸರ್ಕಾರದ ಆಡಳಿತ ವೈಖರಿಯನ್ನು ತೀವ್ರವಾಗಿ ಟೀಕಿಸಿದ್ದರೆ, ಸಮಸ್ತಿಪುರ ಸಂಸದೆ ಶಾಂಭವಿ ಚೌಧರಿ ಮಹಿಳೆಯರ ಮೇಲಿನ ಇಂತಹ ದೌರ್ಜನ್ಯಗಳನ್ನು ತೀವ್ರವಾಗಿ ಖಂಡಿಸಿ, ದುರದೃಷ್ಟಕರ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
Banka, Bihar – A video allegedly showing a young woman and a man being subjected to inappropriate behaviour and harassment at the Mandar tourist site in Banka district has surfaced on social media, the woman and the man had reportedly visited Mandar Hill when the alleged incident… pic.twitter.com/KZiphGkVRM
— NextMinute News (@nextminutenews7) September 25, 2026






